ಕರ್ನಾಟಕ

ಮೂತ್ರ ಮಾಡೋಕೂ ಪರದಾಡಿದೆವು ಕಣ್ರೀ!: ಲೇಡಿ ಜರ್ನಲಿಸ್ಟ್ ಸಂಕಟ

Pinterest LinkedIn Tumblr

ಸುನೇತ್ರಾ ಚೌಧರಿ

journalisam1

ಆವತ್ತು ಬೆಳಿಗ್ಗೆ ಗೋವಾದಿಂದ ಹೊನ್ನಾವರಕ್ಕೆ ಹೋಗಿಳಿದೆವು. ಮೊಬೈಲ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹೊನ್ನಾವರದ ಬಗ್ಗೆ ನಮಗೇನೂ ಗೊತ್ತಿರಲಿಲ್ಲ. ಅದೊಂದು ಬಂದರು ಊರು ಹಾಗೂ ಆ ಊರಿನುದ್ದಕ್ಕೂ ಹೈವೇ ಇದೆ ಎಂಬುದಷ್ಟೇ ನಮಗಿದ್ದ ಮಾಹಿತಿ.

ಇಂಟರ್ನೆಟ್ ಇಲ್ಲದಿದ್ದರೇನಂತೆ, ಜನರಿಲ್ಲವೇ? ನಮ್ಮ ಬಸ್ ನೋಡಿ ಕುತೂಹಲದಿಂದ ಇಣುಕತೊಡಗಿದ ಜನರ ಜೊತೆ ಮಾತಿಗಿಳಿದೆವು. ಇಲ್ಲಿರುವ ಶರಾವತಿ ಸೇತುವೆ ಕರ್ನಾಟಕದಲ್ಲೇ ಅತಿ ಉದ್ದದ್ದು ಎಂದರು. ಆ ಬ್ರಿಜ್ ಬಳಿ ನಿಂತೇ ನಮ್ಮ ಚುನಾವಣೆ ಎಕ್ಸ್‌ಪ್ರೆಸ್‌ನ 5000ನೇ ಕಿ.ಮೀ. ಶೋ ನಡೆಸಿದೆವು. ಆ ಶೋ ಹೇಗಿತ್ತೋ ದೇವರಿಗೇ ಗೊತ್ತು. ಏಕೆಂದರೆ ಹೊನ್ನಾವರದ ಸಮಸ್ಯೆಗಳನ್ನು ಸರಿಯಾಗಿ ತೋರಿಸಲು ನಮಗೆ ಸಾಧ್ಯವಾಗಲಿಲ್ಲ. ಕಾರಣ,ಅಲ್ಲಿ ಯಾರೂ ಇಂಗ್ಲಿಷ್ ಅಥವಾ ಹಿಂದಿ ಮಾತನಾಡುತ್ತಿರಲಿಲ್ಲ. ಅಲ್ಲಿ ಇಲ್ಲಿ ಶೂಟ್ ಮಾಡುತ್ತ ನಾನೇ ಮಾತನಾಡಿದೆ. ನಮಗೆ ಜನರನ್ನು ಮಾತನಾಡಿಸಬೇಕು ಎಂಬ ಆಸೆಯಿತ್ತು. ಅಷ್ಟೇ ಕುತೂಹಲ ಹೊನ್ನಾವರದ ಜನರಿಗೆ ನಮ್ಮ ಟೀಮ್ ಬಗ್ಗೆ ಇತ್ತು. ಸಮಸ್ಯೆ ಏನಾಗಿತ್ತು ಅಂದರೆ, ನನಗೂ ನಗ್ಮಾಳಿಗೂ ಅರ್ಜೆಂಟಾಗಿ ಒಂದಕ್ಕೆ ಹೋಗಬೇಕಾಗಿತ್ತು. ಎಲ್ಲಿಗೆ ಹೋಗುವುದು?

‘ನಗ್ಮಾ! ನಾನು ಹೋಗ್ಲೇಬೇಕು. ಇಲ್ಲಾ ಅಂದ್ರೆ ಶೋ ನಡೆಸೋಕೆ ಸಾಧ್ಯವೇ ಇಲ್ಲ’ ನಮ್ಮ ಸುತ್ತ ಇದ್ದ ಜನರ ನಡುವೆಯೇ ಅವಳ ಕಿವಿಯಲ್ಲಿ ಉಸುರಿದೆ. ‘ನಡಿ ಹೋಗೋಣ’ ಎಂದಳು.

ಪಾಪ, ಅಲ್ಲಿನ ಜನ ನಮ್ಮಂತೆ ಆಡಂಬರ ಮಾಡಿಕೊಂಡು ಶೂಟಿಂಗ್ ನಡೆಸಲು ಬಂದ ಟೀವಿ ಚಾನಲ್ಲಿನವರನ್ನು ನೋಡಿರಲಿಲ್ಲ. ಹಾಗಾಗಿ ಒಂದು ಕ್ಷಣವೂ ನಮ್ಮನ್ನು ಬಿಟ್ಟಿರಲು ಸಿದ್ಧವಿರಲಿಲ್ಲ. ನಾನು ಮತ್ತು ನಗ್ಮಾ ಟಾಯ್ಲೆಟ್ ಹುಡುಕಿಕೊಂಡು ಹೊರಟರೆ ನಾವೆಲ್ಲೋ ಶೂಟಿಂಗ್ ಮಾಡಲು ಹೋಗುತ್ತಿದ್ದೇವೆಂದು ನಮ್ಮ ಹಿಂದೆಯೇ ಬಂದರು! ಅವರಿಗೆ ಕಿರುಬೆರಳು ತೋರಿಸಿದರೆ ನಮ್ಮ ಇಮೇಜ್ ಏನಾಗಬೇಡ. ದಿಲ್ಲಿಯಿಂದ ಬಂದ ಇಬ್ಬರು ಲೇಡಿ ಜರ್ನಲಿಸ್ಟ್‌ಗಳು ಹೊನ್ನಾವರದಲ್ಲಿ ಸೂಸು ಮಾಡಿ ಹೋದರು ಎಂದು ಊರ ತುಂಬಾ ಹೇಳಿಕೊಂಡು ಓಡಾಡಿಯಾರು.

‘ಒಂದು ಕೆಲಸ ಮಾಡೋಣ. ಆ ಕಡೆ ಈ ಕಡೆ ನೋಡಿದಂತೆ ಆ್ಯಕ್ಟ್ ಮಾಡ್ತಾ ನದಿ ಕಡೆ ಹೋಗೋಣ’ ಅಂದಳು ನಗ್ಮಾ. ಹಾಗೆ ಹೋಗುತ್ತಿರಬೇಕಾದರೆ ಅದೋ ಅಲ್ಲೊಂದು ಪಬ್ಲಿಕ್ ಟಾಯ್ಲೆಟ್ ಕಾಣಿಸಿಬಿಟ್ಟಿತು. ಮೊದಲೇ ನನಗೆ ಪಬ್ಲಿಕ್ ಟಾಯ್ಲೆಟ್ ಅಂದರೆ ಆಗೋದಿಲ್ಲ. ಒಂದು ಕಿಲೋಮೀಟರ್ ದೂರದಿಂದಲೇ ಅದರ ವಾಸನೆಗೆ ಮೂಗು ಮುರಿಯುತ್ತೇನೆ.

‘ನನ್ನತ್ರ ಆಗೋಲ್ಲ ನಗ್ಮಾ. ಸತ್ತೇಹೋಗ್ತೀನಿ’ ಅಂದೆ.ಅಷ್ಟು ಹೇಳಿ ಹಿಂತಿರುಗಿ ನೋಡಿದರೆ ನಾಲ್ಕೈದು ಜನಅಲ್ಲಿಗೇ ಬಂದು ನಿಂತಿದ್ದಾರೆ. ಇನ್ನೂಅವರು ನಮ್ಮನ್ನು ಫಾಲೋ ಮಾಡುತ್ತಲೇ ಇದ್ದಾರೆ.

ಅಷ್ಟರಲ್ಲಿ ‘ಓಹ್ ಶಿಟ್! ಇದು ಲಾಕ್ ಆಗಿದೆ’ ಅಂದಳು ನಗ್ಮಾ. ನಾನು ಸ್ಫೋಟಗೊಳ್ಳುವುದೊಂದೇ ಬಾಕಿಯಿತ್ತು. ‘ಡೋಂಟ್ ವರಿ, ನದಿ ಪಕ್ಕ ಸ್ವಲ್ಪ ದೂರ ಹೋಗೋಣ. ಎಲ್ಲಾದ್ರೂ ಜಾಗ ಸಿಗುತ್ತೆ’ ಅಂತ ಸಮಾಧಾನ ಮಾಡಿದಳು.

ಮುಂದೆ ಹೊರಟೆವು. ನಮ್ಮ ಹಿಂದೆ ಬರುತ್ತಿದ್ದವರು ಈಗ ಮೊದಲಿಗಿಂತ ಕೊಂಚ ದೂರದಲ್ಲಿ ಬರತೊಡಗಿದರು. ಒಂದೆರಡು ಸಲ ನಾವು ತಿರುಗಿ ಅವರನ್ನೇ ನೋಡಿದ ಮೇಲೆ ಹಾಗೂ ಪಬ್ಲಿಕ್ ಟಾಯ್ಲೆಟ್ ಬಳಿ ನಿಂತು ಎರಡು ನಿಮಿಷ ಡಿಸ್ಕಸ್ ಮಾಡಿದ್ದನ್ನುಅವರೂ ನೋಡಿದ ಮೇಲೆ ನಾವು ಹೊರಟಿರುವುದು ಎಲ್ಲಿಗೆ ಎಂಬುದು ಅವರಿಗೆ ಗೊತ್ತಾಗಿರಬೇಕು. ಆದರೂ ಪುಣ್ಯಾತ್ಮರು ನಮ್ಮನ್ನುಬಿಡಲೊಲ್ಲರು.

ಎಂಟು-ಹತ್ತು ನಿಮಿಷ ನಡೆದ ಮೇಲೆ ಸ್ವಲ್ಪ ಕುರುಚಲು ಗಿಡದ ಜಾಗ ಕಾಣಿಸಿತು. ಆದರೆ ಅದರ ಮತ್ತೊಂದು ಕಡೆ ಮೈದಾನವಿತ್ತು. ಅಲ್ಲಿ ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಥತ್ ಈ ಜಾಗವೂ ಸರಿಯಿಲ್ಲ ಎಂದು ಮುಂದೆ ಹೋದೆವು. ಆದರೆ, ಮರೆಯಲ್ಲಿ ಕೂರಬಹುದಾದ ಯಾವುದೇ ಜಾಗ ಮುಂದೆ ಇರುವ ಲಕ್ಷಣ ಕಾಣಿಸಲಿಲ್ಲ. ಕ್ರಿಕೆಟ್ ಮೈದಾನದ ಪಕ್ಕದ ಜಾಗವೇ ಗತಿ ಅಂತ ಹಿಂದೆ ಬಂದೆವು.

ಮೂತ್ರಕ್ಕೆಅರ್ಜೆಂಟ್ ಆದಾಗ ನಮ್ಮೆಲ್ಲಾ ಬಿಗುಮಾನಗಳೂ ಮಾಯವಾಗಿಬಿಡುತ್ತವೆ. ಜಾಗವೊಂದು ಸಿಕ್ಕರೆ ಸಾಕು. ನನ್ನ ಕಸಿನ್ ಹೇಳುತ್ತಿದ್ದುದು ನೆನಪಾಯಿತು. ಬಾಂಬೆಯಲ್ಲಿ ಲೋಕಲ್ ಟ್ರೇನ್ ಓಡಾಡುವ ಹಳಿಗಳ ಪಕ್ಕ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಹೆಂಗಸರು ಮುಖದ ಮೇಲೆ ಸೀರೆ ಹಾಕಿಕೊಂಡು ನಿಂತಿರುತ್ತಾರಂತೆ. ಆದರೆ ಕೆಳಗೆ ಕಾಣಿಸುತ್ತಿರುತ್ತದೆಯಂತೆ!ಅವರ ಕತೆ ಕೇಳಿ ನಾವೆಲ್ಲ ಬಿದ್ದು ಬಿದ್ದು ನಕ್ಕಿದ್ದೆವು. ಆದರೆ ಈಗ ನಾನು ಅದೇ ಪರಿಸ್ಥಿತಿಯಲ್ಲಿದ್ದೆ.

‘ನೀನು ಪೊದೆಯ ಹಿಂದೆ ಹೋಗು, ನಾನು ಇಲ್ಲೇ ನಿಂತು ಆ ಜನರು ಮುಂದೆ ಬರದಂತೆ ನೋಡಿಕೊಳ್ಳುತ್ತೇನೆ’  ನಗ್ಮಾ ಹೇಳಿದಳು.

ಆದರೆ, ಪೊದೆಯ ಹಿಂದೆ ಹೋದರೆ ಆ ಕಡೆ ಕ್ರಿಕೆಟ್ ಆಡುವ ಹುಡುಗರು ನೋಡುತ್ತಾರೆ. ನೋಡಿದರೆ ನೋಡಲಿ, ಇನ್ನೇನು ಮಾಡಲು ಸಾಧ್ಯ ಎಂದು ಹೋದೆ. ನಗ್ಮಾ ಎರಡೂ ಸೊಂಟದ ಮೇಲೆ ಕೈಯಿಟ್ಟುಕೊಂಡು ನನ್ನ ಪೊದೆಗೆ ಮರೆಯಾಗಿ ಜನರ ಕಡೆ ತಿರುಗಿ ನಿಂತಳು. ಗ್ರಹಚಾರಕ್ಕೆ ಆ ಪೊದೆಯೂ ದಟ್ಟವಾಗಿರಲಿಲ್ಲ. ಹೆಚ್ಚುಕಮ್ಮಿ ಪಾರದರ್ಶಕವೇ ಆಗಿತ್ತು. ನನಗೆ ಅದನ್ನೆಲ್ಲ ಯೋಚಿಸುವಷ್ಟು ಟೈಂ ಇರಲಿಲ್ಲ.

ಒಂದೆರಡು ನಿಮಿಷದ ನಂತರ ಕೆಲಸ ಮುಗಿಸಿ ಪೊದೆಯಿಂದ ಈಚೆ ಬಂದೆ. ಜನ ಹೊರಟುಹೋಗಿದ್ದರು. ‘ಬಹುಶಃ ಶಾಲೆ ಹುಡುಗರು ನೋಡಬಾರದ್ದನ್ನು ನೋಡಿದರು ಕಣೆ. ಅವರಿಗೀಗ ಕ್ರಿಕೆಟ್ ಆಡೋದಕ್ಕೂ ಕಷ್ಟ ಆಗ್ತಿದೆ’ ಅಂದೆ.

‘ನೋಡ್ತೀನಿ ಇರು’ ಅಂತ ನಗ್ಮಾ ಪೊದೆಯ ಹಿಂದೆ ಹೋದಳು.

(ಸುನೇತ್ರಾ ಚೌಧರಿ ಅವರ ‘ಬ್ರೇಕಿಂಗ್ ನ್ಯೂಸ್‌’ ಪುಸ್ತಕದಿಂದ ಎತ್ತಿದ್ದು)

Write A Comment