ಮನೋರಂಜನೆ

ಬೌನ್ಸರ್ ನಿಷೇಧ ಸಲ್ಲದು: ಸೆಹ್ವಾಗ್

Pinterest LinkedIn Tumblr

sehwag__

ಮುಂಬೈ, ಡಿ.2: ‘‘ಆಸ್ಟ್ರೇಲಿಯದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ದಾರುಣ ಸಾವಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಬೌನ್ಸರ್ ಎಸೆತವನ್ನು ನಿಷೇಧಿಸುವ ನಿರ್ಧಾರಕ್ಕೆ ಬರಬಾರದು. ಬೌನ್ಸರ್ ನಿಷೇಧಿಸಿದರೆ ಕ್ರಿಕೆಟ್‌ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ’’ ಎಂದು ಭಾರತದ ಔಟ್ ಆಫ್ ಫೇವರ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

‘‘ಫಿಲಿಪ್ ಹ್ಯೂಸ್ ಬೌನ್ಸರ್ ಎಸೆತದಿಂದ ದಾರುಣ ಸಾವನ್ನಪ್ಪಿರುವುದು ಬೇಸರದ ವಿಷಯ. ಆದರೆ, ಇದು ಕ್ರಿಕೆಟ್ ಜೀವನದ ಒಂದು ಭಾಗ. ನಾವು ಯಾವುದೇ ಕ್ರೀಡೆಯನ್ನು ಆಡಿದರೂ ಗಾಯದ ಸಮಸ್ಯೆ ನಮ್ಮ ಬೆನ್ನಿಗಿರುತ್ತದೆ. ಗಾಯದ ಬದಲಿಗೆ ಕೆಲವೊಮ್ಮೆ ಸಾವೂ ಸಂಭವಿಸಬಹುದು. ಬೌನ್ಸರನ್ನು ಅಪಾಯರಹಿತವಾಗಿ ಎದುರಿಸುವುದು ದಾಂಡಿಗನ ಚಾಣಾಕ್ಷತನವನ್ನು ಅವಲಂಭಿಸಿರುತ್ತದೆ’’ ಎಂದು ಭಾರತದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಹೇಳಿದ್ದಾರೆ.

‘‘ಒಂದು ವೇಳೆ ಬೌನ್ಸರನ್ನು ನಿಷೇಧಿಸಲು ಮುಂದಾದರೆ ಕ್ರಿಕೆಟ್‌ನಲ್ಲಿ ಯಾವುದೇ ಮಜ ಇರುವುದಿಲ್ಲ. ಕ್ರಿಕೆಟ್ ಒಂದು ಬ್ಯಾಟ್ಸ್‌ಮನ್ ಪ್ರಧಾನ ಪಂದ್ಯವಾಗಿರುವ ಕಾರಣ ಐಸಿಸಿ ಬೌನ್ಸರನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿಲ್ಲ’’ ಎಂದು ಐಸಿಸಿ ವಿಶ್ವಕಪ್ ಟ್ರೋಫಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೆಹ್ವಾಗ್ ನುಡಿದರು.

‘‘ನನ್ನ ಹೆಲ್ಮೆಟ್‌ಗೆ ಹಲವಾರು ಬಾರಿ ಬೌನ್ಸರ್ ಎಸೆತ ತಾಗಿತ್ತು. ಬೌನ್ಸರನ್ನು ನಿಷೇಧಿಸಿದರೆ ಬೌಲರ್‌ಗಳ ಪ್ರಮುಖ ಅಸ್ತ್ರವೊಂದು ಇಲ್ಲದಂತಾಗುತ್ತದೆ. ಕ್ರಿಕೆಟ್‌ನಲ್ಲೂ ಆಸಕ್ತಿ ಕಡಿಮೆಯಾಗುತ್ತದೆ’’ಎಂದು ದಿಲ್ಲಿಯ ಬ್ಯಾಟ್ಸ್‌ಮನ್ ಸೆಹ್ವಾಗ್ ಹೇಳಿದ್ದಾರೆ.

Write A Comment