ಮನೋರಂಜನೆ

ಹರ್ಷಲ್ ಗಿಬ್ಸ್ ಬಂಧನ

Pinterest LinkedIn Tumblr

gibs

ಜೋಹಾನ್ಸ್‌ಬರ್ಗ್, ಡಿ.2: ಪಾನಮತ್ತನಾಗಿ ವಾಹನ ಚಲಾಯಿಸಿ ಅಪಘಾತ ನಡೆಸಿದ ಆರೋಪದಲ್ಲಿ ದಕ್ಷಿಣ ಆಫ್ರಿಕದ ಮಾಜಿ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್‌ರನ್ನು ರವಿವಾರ ಪೊಲೀಸರು ಬಂಧಿಸಿದ್ದಾರೆ.

ರವಿವಾರ ಸಂಜೆ ಕ್ಯಾಂಪ್ಸ್ ಬೇನಲ್ಲಿ ಅತ್ಯಂತ ವೇಗದಲ್ಲಿ ಅಜಾಗರೂ ಕತೆಯಿಂದ ಕಾರನ್ನು ಚಲಾಯಿಸಿದ ಗಿಬ್ಸ್ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದರು. ಘಟನೆಯಿಂದ ಯಾವುದೇ ಸಾವು-ನೋವಾಗಿಲ್ಲ ಎಂದು ಸ್ಪೋರ್ಟ್ 24 ವರದಿ ಮಾಡಿದೆ.

ಕುಡಿದು ವಾಹನ ಚಲಾಯಿಸಿದ ಪ್ರಕರಣ ತನಿಖೆಯಾಗುತ್ತಿದೆ. 40ರ ಹರೆಯದ ಗಿಬ್ಸ್‌ರನ್ನು ರವಿವಾರ ಬಂಧಿಸಲಾಗಿದೆ. ನವೆಂಬರ್ 25, 2015ರಂದು ಕೇಪ್‌ಟೌನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಗಿಬ್ಸ್‌ರನ್ನು ಹಾಜರುಪಡಿಸಲಾಗುವುದು ಎಂದು ವೆಸ್ಟರ್ನ್ ಕೇಪ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಗಿಬ್ಸ್ ಕುಡಿದು ವಾಹನ ಚಲಾಯಿಸಿದ್ದು ಇದೇ ಮೊದಲ ಬಾರಿಯಲ್ಲ. ಗಿಬ್ಸ್ 2008ರ ಮಾರ್ಚ್‌ನಲ್ಲಿ ಕೇಪ್‌ಟೌನ್‌ನಲ್ಲಿ ನಿರ್ಲಕ್ಷಿತ ಚಾಲನೆ ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. ಆ ನಂತರ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿತ್ತು. 2009ರಲ್ಲಿ ಗಿಬ್ಸ್ ಡ್ರಗ್ ಹಾಗೂ ಆಲ್ಕೋಹಾಲ್ ಚಟದಿಂದ ಮುಕ್ತಿ ಪಡೆಯಲು ಪುನಶ್ಚೇತನ ಶಿಬಿರಕ್ಕೆ ಹಾಜರಾಗಿದ್ದರು.

ಮಾಜಿ ಬಲಗೈ ಬ್ಯಾಟ್ಸ್‌ಮನ್ ಗಿಬ್ಸ್ 2010ರಲ್ಲಿ ಆಫ್ರಿಕದ ಪರ ಕೊನೆಯ ಬಾರಿ ಆಡಿದ್ದು, 90 ಟೆಸ್ಟ್, 248 ಏಕದಿನ ಹಾಗೂ 23 ಟ್ವೆಂಟಿ-20 ಪಂದ್ಯಗಳಲ್ಲಿ 14,000 ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಏಕದಿನ ಪಂದ್ಯವೊಂದರಲ್ಲಿ ಓವರ್‌ವೊಂದರಲ್ಲಿ ಆರು ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರು.

2001ರಲ್ಲಿ ವೆಸ್ಟ್‌ಇಂಡೀಸ್ ಪ್ರವಾಸದ ವೇಳೆ ಸಹ ಆಟಗಾರರೊಂದಿಗೆ ಮಾದಕ ದ್ರವ್ಯ ಸೇವಿಸಿದ ಆರೋಪಕ್ಕೆ ಒಳಗಾಗಿದ್ದರು. ಗಿಬ್ಸ್ ತಮ್ಮದೇ ದೇಶದ ಮಾಜಿ ನಾಯಕ ಹ್ಯಾನ್ಸಿ ಕ್ರೋನಿಯೆ ಅವರೊಂದಿಗೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿ 6 ತಿಂಗಳು ನಿಷೇಧ ಎದುರಿಸಿದ್ದರು. ದಿಲ್ಲಿ ಪೊಲೀಸರ ಬಂಧನದ ಭೀತಿಯಲ್ಲಿ ಭಾರತ ಪ್ರವಾಸ ಕೈಗೊಳ್ಳಲು ಹಿಂಜರಿದಿದ್ದ ಗಿಬ್ಸ್ ಈ ಕುರಿತು ಭಾರತದ ಪೊಲೀಸರ ವಿಚಾರಣೆ ಎದುರಿಸಲು ಹೆದರುತ್ತಿದ್ದರು.

Write A Comment