ಪ್ರಮುಖ ವರದಿಗಳು

ನಿಮಗೆ ಗೊತ್ತಿಲ್ಲದ ಪತ್ರಕರ್ತರ ಸಮಸ್ಯೆಗಳು

Pinterest LinkedIn Tumblr

journalisam

ಪತ್ರಕರ್ತರ ಎಲ್ಲ ಕಷ್ಟಗಳನ್ನೂ ಬರೆದರೆ ಓದುವವರಿಗೆ ಬಹಳ ಕಷ್ಟವಾಗುತ್ತದೆ. ಕೆಲ ಘನಗಂಭೀರ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜವಾಬ್ದಾರಿಯನ್ನು ಭಾರತೀಯ ಪತ್ರಿಕಾ ಮಂಡಳಿಗೆ ಬೇಷರತ್ತಾಗಿ ಬಿಡಲಾಗಿದೆ. ಆ ಮಂಡಳಿ ಬೇರೇನನ್ನೂಮಾಡುವುದಿಲ್ಲವಾದ್ದರಿಂದ ಈ ಕೆಲಸವನ್ನಾದರೂ ಮಾಡಲಿ ಎಂದು ಮನಃಪೂರ್ತಿಯಾಗಿ ಹಾರೈಸೋಣ. ಸದ್ಯಕ್ಕೆ, ಜನರಿಗೆ ತಿಳಿದಿಲ್ಲದ, ಆದರೆ ಪತ್ರಕರ್ತರಿಗೆ ನಿಜಕ್ಕೂ ದೊಡ್ಡ ಸಮಸ್ಯೆಯಾಗಿರುವ ಕೆಲಸಂಗತಿಗಳನ್ನು ಇಲ್ಲಿ ನೋಡೋಣ. ಅವು ನಿಮಗೆ ತಮಾಷೆ ಅನ್ನಿಸಿದರೆ ಕಷ್ಟದಲ್ಲಿರುವವರನ್ನು ನೋಡಿ ನಕ್ಕ ಪಾಪ ಬರುತ್ತದೆ, ಹುಷಾರು!

ಜಗತ್ತಿನ ಎಲ್ಲರ ಕಷ್ಟಗಳ ಬಗ್ಗೆ ರೀಮುಗಟ್ಟಲೆ ಬರೆಯುವ ಪತ್ರಕರ್ತರ ಕಷ್ಟಗಳು ಮಾತ್ರ ಹೊರಜಗತ್ತಿಗೆ ಸುಲಭಕ್ಕೆ ಗೊತ್ತಾಗುವುದಿಲ್ಲ. ಪತ್ರಕರ್ತರೇ ಅದನ್ನು ಬರೆದುಕೊಂಡರೆ ಸ್ವಹಸ್ತ ಕುಚಮರ್ದನ ಎನ್ನುತ್ತಾರೆ. ಇದರ ಜೊತೆಗೆ, ಪತ್ರಕರ್ತರಿಗೂ ತಾವು ಎಲ್ಲರಂತಲ್ಲ ಎಂಬ ಕೊಂಬು ಇರುವುದರಿಂದ ತಮ್ಮ ವೃತ್ತಿಯ ಬಗ್ಗೆ ಕೆಟ್ಟ ಪ್ರಚಾರ ಕೊಟ್ಟುಕೊಳ್ಳುವ ಗೋಜಿಗೆ ಅವರೂ ಹೋಗುವುದಿಲ್ಲ. ಹಾಗಾಗಿ ಅವರ ನಿಜವಾದ ಹಕೀಕತ್ತೇನು ಎಂಬುದು ಜನರಿಗೆ ತಿಳಿಯುವುದು ಸರ್ಕಾರದ ಸಚಿವ ಸಂಪುಟ ಸಭೆಯ ಸುದ್ದಿ ಜನರಿಗೆ ಎಷ್ಟು ತಿಳಿಯುತ್ತದೆಯೋ ಅಷ್ಟೇ.

ಪತ್ರಕರ್ತರ ಕಷ್ಟಗಳು ಅಂದಾಕ್ಷಣ ಜನರ ಕಣ್ಣಿಗೆ ಬರುವುದು ಯುದ್ಧಭೂಮಿಯಲ್ಲಿ ವರದಿ ಮಾಡುವುದು, ಅಂಡರ್‌ವರ್ಲ್ಡ್ ಬಗ್ಗೆ ಬರೆದುಬೆದರಿಕೆ ಎದುರಿಸುವುದು, ಪ್ರಭಾವಿ ಕುಳಗಳನ್ನು ಎದುರು ಹಾಕಿಕೊಳ್ಳುವುದು, ಹಗರಣ ಬಯಲಿಗೆಳೆದು ಅಪಾಯ ತಂದುಕೊಳ್ಳುವುದು, ಸ್ವಾಮೀಜಿಗಳ ಸೆಕ್ಸ್‌ಸ್ಕ್ಯಾಂಂಡಲ್‌ಹೊರಗೆಡವಿ ನಾಲ್ಕಾರು ದಿನ ತಲೆಮರೆಸಿಕೊಳ್ಳುವುದು ಇಂತಹ ಫ್ಯಾಂಟಸಿಗಳೇ. ವಾಸ್ತವವಾಗಿ ಈ ಕಷ್ಟಗಳು ಬರುವುದು ನೂರರಲ್ಲಿ ಅಥವಾ ಸಾವಿರದಲ್ಲಿ ಒಬ್ಬ ಪತ್ರಕರ್ತನಿಗೆ ಮಾತ್ರ. ಇನ್ನುಳಿದ ಶೇ.99 ಮಂದಿಯ ಕಷ್ಟಗಳು ಬೇರೆಯೇ ಇವೆ. ಅವುಗಳನ್ನು ಕೇಳಿದರೆ ಜನಸಾಮಾನ್ಯರಿಗೆ ನಗು ಬಂದುಬಿಡಬಹುದು.

ಪತ್ರಕರ್ತರಾಗುವುದು ಈಗಿನ ಹುಡುಗರಿಗೆ ಒಂಥರಾ ಫ್ಯಾಷನ್ನು. ಜರ್ನಲಿಸಂ ಓದಲು ಹೋಗುವ ಉತ್ಸಾಹಿಗಳು ಏನೇನೋ ರಮ್ಯ ಅವಾಸ್ತವ ಕಲ್ಪನೆಗಳನ್ನು ಇಟ್ಟುಕೊಂಡು ಹೋಗಿರುತ್ತಾರೆ. ಓದು ಮುಗಿಸುವವರೆಗೂ ಅವರ ತಲೆಯಲ್ಲಿ ನಾನು ದೇಶ ಉದ್ಧಾರ ಮಾಡುತ್ತೇನೆ, ಸಮಾಜ ಬದಲಿಸುತ್ತೇನೆ ಎಂಬಂತಹ ಭಯಂಕರ ಯೋಚನೆಗಳಿರುತ್ತವೆ. ಕೆಲಸಕ್ಕೆ ಸೇರಿದ ಮೇಲೆ ಇವತ್ತು ರಾತ್ರಿ ಮನೆಗೆ ಹೋಗೋದು ಹೇಗೆ, ನಾಡಿದ್ದು ಹೆಂಡತಿಯನ್ನು ಚೆಕಪ್‌ಗೆ ಕರೆದುಕೊಂಡು ಹೋಗಲು ರಜೆ ಇಲ್ಲ ಏನ್ಮಾಡೋದು ಎಂಬಂತಹ ಜಾಗತಿಕ ಸಮಸ್ಯೆಗಳು ಎದುರಾಗಿ ಅವರ ಜೀವ ಒದ್ದಾಡಿಬಿಡುತ್ತದೆ. ಸಮಾಜ ಬದಲಿಸುವುದು ಹಾಗಿರಲಿ, ಬಾಡಿಗೆ ಮನೆ ಬದಲಿಸುವುದಕ್ಕೂ ಮೇಲೆ ಕೆಳಗೆ ನೋಡುವ ಪರಿಸ್ಥಿತಿ. ಈ ಭಾಗ್ಯಕ್ಕೆ ನಾನು ಜರ್ನಲಿಸ್ಟ್ ಆಗಬೇಕಾಗಿತ್ತಾ ಎಂದು ಜೀವನದಲ್ಲಿ ಕನಿಷ್ಠ ಎಪ್ಪತ್ತೆಂಟು ಸಲವಾದರೂ ಅವರಿಗೆ ಯೋಚನೆ ಬರಲಿಲ್ಲ ಎಂದಾದರೆ ಅವರು ನಿಜವಾಗಿಯೂ ಪತ್ರಕರ್ತರಾಗಿಯೇ ಇಲ್ಲ ಮತ್ತುಅವರು ಮಾಡಿದ್ದು ಜರ್ನಲಿಸಮ್ಮೂ ಅಲ್ಲ!

ಹಿಂದೆಲ್ಲ ನಾನು ಪತ್ರಕರ್ತ ಅಂದರೆ ‘ಜೀವನಕ್ಕೇನ್ಮಾಡ್ತೀಯಾ’ ಎಂದು ಬೇರೆಯವರು ಕೇಳುವ ಪರಿಸ್ಥಿತಿಯಿತ್ತು. ಇಂದು ಪತ್ರಿಕೋದ್ಯಮ ಬದಲಾಗಿದೆ. ಪತ್ರಕರ್ತರಿಗೆ ಪರವಾಗಿಲ್ಲ ಎಂಬಂತಹ ಸಂಬಳ ಸಿಗುತ್ತಿದೆ. ಆದರೆ, ಜೀವನಕ್ಕೇನ್ಮಾಡ್ತೀಯಾ ಎಂಬ ಪ್ರಶ್ನೆ ಹಾಗೇ ಉಳಿದಿದೆ. ಏಕೆಂದರೆ, ಎಲ್ಲರಂತೆ ಗೃಹಸ್ಥಾಶ್ರಮ ಕಳೆದು ಮೋಕ್ಷ ಪಡೆಯುವ ದೃಶ್ಯವನ್ನುಅವರ ಜೀವನದಿಂದ ಡಿಲೀಟ್ ಮಾಡಲಾಗಿದೆ. ಆಗಾಗ ಮನೆಗೆ ಬರುವ ಪತ್ರಕರ್ತ ಅಪ್ಪನನ್ನು ನೋಡಿ ಮಕ್ಕಳು ಅಮ್ಮನ ಬಳಿ ‘ಯಾರಿದು, ಮೊನ್ನೆ ಟೀವಿಯಲ್ಲಿ ಮೈಕ್ ಹಿಡಕೊಂಡು ಮಾತಾಡ್ತಿದ್ದ’ ಎಂದು ಕೇಳುವುದು ಕೇವಲ ಜೋಕ್ ಅಲ್ಲ. ಸಂಜೆ ಹೊತ್ತು ಹೆಂಡತಿ-ಮಕ್ಕಳ ಕೈ ಹಿಡಿದುಕೊಂಡು ಪಾರ್ಕ್‌ಗೆ ಹೋಗುವುದು, ವರ್ಷಕ್ಕೆ ಒಂದೆರಡು ಸಲ ಫ್ಯಾಮಿಲಿ ಟೂರ್ ಹೋಗುವುದು, ಹೆಂಡತಿಯ ತಂಗಿಯ ಮದುವೆಗೆ ಒಂದು ವಾರ ರಜೆ ಹಾಕಿ ಊರಿಗೆ ಹೋಗುವ ಸೀನ್‌ಗಳೆಲ್ಲ ಪತ್ರಕರ್ತರ ಬದುಕಿನಲ್ಲಿ ಹೆಂಡತಿಯ ಜೊತೆ ಜಗಳ ಆಡುವಾಗ ಮಾತ್ರ ರಪ್ಪನೆ ಬಂದು ಹೋಗುತ್ತವೆ. ಇನ್ನುಳಿದ ಸಮಯದಲ್ಲಿ ಸಿದ್ದರಾಮಯ್ಯ, ಯಡಿಯೂರಪ್ಪ, ನರೇಂದ್ರ ಮೋದಿ, ಹಾಲಪ್ಪ, ಗೂಳಿಹಟ್ಟಿ ಶೇಖರ್, ಬೆಲೆಯೇರಿಕೆ, ಚುನಾವಣೆ, ಬಜೆಟ್, ರೈಲ್ವೆ ಆ್ಯಕ್ಸಿಡೆಂಟ್, ಸಂಪುಟ ವಿಸ್ತರಣೆ, ಪ್ರವಾಹ, ಆಲಿಕಲ್ಲು ಮಳೆಗಳೇ ಅವರ ತಲೆಯಲ್ಲಿ ಧಾರಾಕಾರ ಸುರಿಯುತ್ತಿರುತ್ತವೆ.

ಪತ್ರಕರ್ತರ ಬದುಕು ಅವರಿಗೆ ಯಾವಾಗಲಾದರೂ ಅಪ್ಪಿತಪ್ಪಿ ಟೈಮ್ ಸಿಕ್ಕಾಗ ಏಕಾಂಗಿಯಾಗಿ ಕುಳಿತು ಯೋಚನೆ ಮಾಡಿದರೆ ‘ಕಾಮಿಡಿ ಆಫ್ ಎರರ್ಸ್.’ ‘ಕಾಮಿಡಿ’ ಅವರ ಬಗ್ಗೆ ಬೇರೆಯವರು ಮಾಡುವುದು, ‘ಎರರ್ಸ್‌’ ಅವರ ಪತ್ರಿಕೆಯಲ್ಲಿ ಅಚ್ಚಾದ ತಪ್ಪು ಫೋಟೋಗಳು ಮತ್ತು ಕಾಗುಣಿತ ದೋಷಗಳು. ‘ಆಧುನಿಕೋತ್ತರ ಭಾರತದಲ್ಲಿ ಪತ್ರಕರ್ತರ ಭವಿಷ್ಯ, ಸವಾಲು, ಕೊರತೆಗಳು ಮತ್ತು ಕಷ್ಟಗಳ ತೌಲನಿಕ ಅಧ್ಯಯನ’ ಎಂಬ ಪಿಎಚ್‌ಡಿ ಪ್ರಬಂಧವನ್ನು ಯಾರಾದರೂ ಮಂಡಿಸಿದರೆ ಅದು ಇಲ್ಲಿಯವರೆಗೆ ಬಂದಿರುವ ಜೋಕ್ ಪುಸ್ತಕಗಳಲ್ಲಿ ನಂ.1 ಬೆಸ್ಟ್ ಸೆಲ್ಲರ್ ಆಗುವ ಎಲ್ಲ ಅಪಾಯಗಳಿವೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಂದು ಗಾಂಧೀಜಿಯವರು ಪತ್ರಿಕೋದ್ಯಮವನ್ನು ಅಸ್ತ್ರವಾಗಿ ಬಳಸಿದ್ದರು. ಇಂದು ಪತ್ರಕರ್ತರು ತಮ್ಮದೇ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಪರಿಸ್ಥಿತಿಯಿದೆ. ಮಜಾ ಏನು ಅಂದರೆ ಇವರ ಕೈಲಿಅಸ್ತ್ರಗಳೇ ಇಲ್ಲ. ಸಿಗರೇಟ್ ಮತ್ತು ಕೀಬೋರ್ಡ್ ಮಾತ್ರ ಇದೆ. ಅಸ್ತ್ರಗಳನ್ನೆಲ್ಲ ಗಂಟು ಕಟ್ಟಿ ಟೀವಿ ಚಾನಲ್ ಅಥವಾ ಪತ್ರಿಕೆಯ ಮಾಲಿಕರ ಕೈಗೆ ಇವರು ಕೆಲಸಕ್ಕೆ ಸೇರುವಾಗಲೇ ಕೊಟ್ಟಾಗಿದೆ. ರಿಟೈರ್ ಆದಮೇಲೂ ಅವು ವಾಪಸ್ ಸಿಗುವುದಿಲ್ಲ ಎಂಬುದು ಬಹಳ ಪತ್ರಕರ್ತರಿಗೆ ಗೊತ್ತಿಲ್ಲ. ರಿಟೈರಾದ ಮೇಲೆ ಇವರಿಗೆ ಅದರ ಅಗತ್ಯವೂ ಬೀಳುವುದಿಲ್ಲ. ಏಕೆಂದರೆ ಮೂವತ್ತಕ್ಕೇ ಬೀಪಿ, ಶುಗರ್ ಅಂಟಿಸಿಕೊಳ್ಳುವ ಪತ್ರಕರ್ತರು ರಿಟೈರಾಗುವತನಕ ಉಳಿಯುವುದು 21ನೇ ಶತಮಾನದಲ್ಲಿ ಅಪರೂಪ!

ಪತ್ರಕರ್ತರ ಎಲ್ಲ ಕಷ್ಟಗಳನ್ನೂ ಬರೆದರೆ ಓದುವವರಿಗೆ ಬಹಳ ಕಷ್ಟವಾಗುತ್ತದೆ. ಕೆಲಘನಗಂಭೀರ ಕಷ್ಟಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಜವಾಬ್ದಾರಿಯನ್ನು ಭಾರತೀಯ ಪತ್ರಿಕಾ ಮಂಡಳಿಗೆ ಬೇಷರತ್ತಾಗಿ ಬಿಡಲಾಗಿದೆ. ಆ ಮಂಡಳಿ ಬೇರೇನನ್ನೂ ಮಾಡುವುದಿಲ್ಲವಾದ್ದರಿಂದ ಈ ಕೆಲಸವನ್ನಾದರೂ ಮಾಡಲಿ ಎಂದು ಮನಃಪೂರ್ತಿಯಾಗಿ ಹಾರೈಸೋಣ. ಸದ್ಯಕ್ಕೆ, ಜನರಿಗೆ ತಿಳಿದಿಲ್ಲದ, ಆದರೆ ಪತ್ರಕರ್ತರಿಗೆ ನಿಜಕ್ಕೂ ದೊಡ್ಡ ಸಮಸ್ಯೆಯಾಗಿರುವ ಕೆಲ ಸಂಗತಿಗಳನ್ನು ಇಲ್ಲಿ ನೋಡೋಣ. ಅವು ನಿಮಗೆ ತಮಾಷೆ ಅನ್ನಿಸಿದರೆ ಕಷ್ಟದಲ್ಲಿರುವವರನ್ನು ನೋಡಿ ನಕ್ಕ ಪಾಪಬರುತ್ತದೆ, ಹುಷಾರು!

ಮನೆಯಲ್ಲಿ ಬೈಸಿಕೊಳ್ಳುವುದು

ಪತ್ರಕರ್ತನಾದವನು ದೇಶದ ಬಗ್ಗೆ ಯೋಚಿಸಬೇಕು, ಮನೆಯ ಬಗ್ಗೆ ಯೋಚಿಸಬಾರದು ಎಂದು ಜರ್ನಲಿಸಂ ಡಿಗ್ರಿಯ ಮೊದಲ ನಾಲ್ಕೈದು ತರಗತಿಗಳಲ್ಲೇ ಹೇಳಲಾಗಿರುತ್ತದೆ. ಆದರೆ ಎಲ್ಲರಿಗೂ ಇರುವ ಗೃಹಸಂಬಂಧಿ ಸಮಸ್ಯೆಗಳು ಇವರಿಗೂ ಇರುತ್ತವೆ. ಉದಾಹರಣೆಗೆ ಹೆಂಡತಿ. ಪತ್ರಿಕಾಗೋಷ್ಠಿಯಲ್ಲಿಮಂತ್ರಿಗಳಿಗೇ ವಯಲೆಂಟಾಗಿ ಆವಾಜ್ ಬಿಡುವ ಕೆಲವು ಪತ್ರಕರ್ತರು ಮನೆಗೆ ಬಂದ ಮೇಲೆ ರಿಸ್ಕ್ ಯಾಕೆ ಎಂದು ಸೈಲೆಂಟ್ ಆಗಿಬಿಡುತ್ತಾರೆ. ಒಂದು ಸಿನಿಮಾಕ್ಕೆ ಕರೆದುಕೊಂಡು ಹೋಗೋದಿಲ್ಲ, ರಾತ್ರಿ ಯಾವಾಗ್ಲೋ ಬರ್ತೀರಿ, ಆಫೀಸಿನಿಂದ ಫೋನ್ ಬಂತು ಅಂತ ಯಾವ್ಯಾವಾಗ್ಲೋ ಹೋಗ್ತೀರಿ, ಪ್ರೈಮ್‌ಮಿನಿಸ್ಟ್ರಿಗೂ ಕೆಲಸಕ್ಕೆ ಅಂತ ಒಂದು ಟೈಮ್ ಇರುತ್ತೆ, ಆದ್ರೆ ನಿಮ್ದು ಮಾತ್ರ ಜೀವನಪೂರ್ತಿ ಇದೇ ಗೋಳು, ಸಂಬಂಧ ಸಾರಿಗೆ ಒಂದೂ ಬೇಡ ನಿಮಗೆ, ಮನೆಯಲ್ಲಿ ಇದ್ದಷ್ಟೂ ಹೊತ್ತು ಪೇಪರ್ ಹಿಡ್ಕೊಂಡು ರದ್ದಿ ಅಂಗಡಿಯವರ ಥರ ಇರ್ತೀರಿ, ಅದನ್ನು ಮಡಚಿಟ್ಟರೆ ಫೋನ್ ಹಿಡಕೊಳ್ತೀರಿ, ಇದೂ ಒಂದು ಬದುಕಾ ಎಂದು ಪತ್ರಕರ್ತರ ಮನೆಯಲ್ಲಿ ಆಗಾಗ ಪುಕ್ಕಟೆ ಅರ್ಚನೆಗಳು ನಡೆಯುತ್ತಿರುತ್ತವೆ. ಮನೆಯ ಬಗ್ಗೆ ಯೋಚಿಸಬಾರದು ಎಂದು ಮೇಷ್ಟ್ರು ಬಹಳ ಹಿಂದೆಯೇ ಅವರಿಗೆ ಪಾಠ ಮಾಡಿರುವುದರಿಂದ ಪತ್ರಕರ್ತರು ಇವುಗಳನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಐದು ವರ್ಷಕ್ಕೊಮ್ಮೆ ಚುನಾವಣೆಯಲ್ಲಿ ಸೋತಾಗ ರಾಜಕೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವಂತೆ ಇವರೂ ಯಾವಾಗಲಾದರೊಮ್ಮೆ ಅಕಸ್ಮಾತ್ ಆತ್ಮಾವಲೋಕನ ಮಾಡಿಕೊಂಡರೆ ಎದೆಯಲ್ಲಿ ಅಟ್ಲಕಾಯಿ ಕುಟ್ಟಿದಂತಾಗುತ್ತದೆ. ಅನಿವಾರ್ಯ, ಅದನ್ನು ಅನುಭವಿಸಲೇಬೇಕು.

ವಿಟಮಿನ್ ಡಿ ಕೊರತೆ

ಇಲ್ಲಿಯವರೆಗೆ ಯಾವುದೇ ವೈದ್ಯಕೀಯ ಅಧ್ಯಯನಗಳು ಇದನ್ನು ಹೇಳಿಲ್ಲವಾದರೂ ಪತ್ರಕರ್ತರಿಗೆ ಸೂರ್ಯನ ಬೆಳಕಿನಿಂದ ಸಿಗುವ ವಿಟಮಿನ್ ಡಿ ಕೊರತೆ ಇದ್ದೇ ಇರುತ್ತದೆ. ಏಕೆಂದರೆ ಅವರು ಸೂರ್ಯನ ಬೆಳಕು ನೋಡುವುದು ಕಡಿಮೆ. ಡೆಸ್ಕ್‌ನಲ್ಲಿ ಕೆಲಸ ಮಾಡುವ ಪತ್ರಕರ್ತರು ಹೆಲ್ಮೆಟ್ ಹಾಕಿಕೊಂಡು ಮಧ್ಯಾಹ್ನ ಆಫೀಸಿಗೆ ಹೋದರೆ ಮತ್ತೆ ಹೆಲ್ಮೆಟ್ ಹಾಕಿಕೊಂಡು ಮನೆಗೆ ಬರುವಾಗ ಮಧ್ಯರಾತ್ರಿ ದಾಟಿರುತ್ತದೆ. ಊಟ ಮಾಡಿ ಮಲಗಿದರೆ ಏಳುವುದು ಸೂರ್ಯ ನೆತ್ತಿಗೇರುವಾಗಲೇ. ಆಗ ಹೊರಗೆ ಹೋಗಲು ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಪತ್ರಕರ್ತರು ಸೂರ್ಯೋದಯವನ್ನೂ ಸೂರ್ಯಾಸ್ತವನ್ನೂ ನೋಡುವ ಅದೃಷ್ಟ ಮಾಡಿರುವುದಿಲ್ಲ. ‘ನಾನು ಜಗತ್ತಿನ ಸೆವೆನ್‌ವಂಡರ್ಸ್ ನೋಡಿದ್ದೇನೆ, ಆದ್ರೆ ಸನ್‌ರೈಸ್ ನೋಡಿಲ್ಲ’ ಎಂದು ಯಾವುದೋ ಸಿನಿಮಾದಲ್ಲಿ ಪುನೀತ್ ಹೇಳುವ ಡೈಲಾಗು ಪತ್ರಕರ್ತರಿಗೆಲ್ಲ ಅನ್ವಯಿಸುತ್ತದೆ. ರಿಪೋರ್ಟರ್‌ಗಳಿಗೆ ಸೂರ್ಯೋದಯ ನೋಡುವ ಅವಕಾಶ ಇದೆಯಾದರೂ ಅವರು ರಾತ್ರಿ ಒಂಭತ್ತು-ಹತ್ತಕ್ಕೆ ಆಫೀಸು ಬಿಟ್ಟ ಮೇಲೆ ಸಾಮಾನ್ಯವಾಗಿ ಪ್ರೆಸ್‌ಕ್ಲಬ್ಬಿಗೆ ಹೋಗಿ ಗುಂಡು ಹಾಕುತ್ತ ಕೂರುವುದರಿಂದ ಮನೆಗೆ ಬರುವಾಗ ಮಧ್ಯರಾತ್ರಿಯೇ ಆಗಿರುತ್ತದೆ. ಹಾಗಾಗಿ ಬೆಳಿಗ್ಗೆ ಏಳಲು ಆಗುವುದಿಲ್ಲ. ‘ಬ್ಯುಸಿ ಓಲ್ಡ್ ಫೂಲ್ ಅನ್‌ರೂಲಿ ಸನ್‌’ ಎಂದು ವಿಲಿಯಂ ಬ್ಲೇಕ್ ಹೇಳಿದ್ದು ಸೂರ್ಯನಿಗಿಂತ ಚೆನ್ನಾಗಿ ಪತ್ರಕರ್ತರಿಗೇ ಹೊಂದುತ್ತದೆ ಸನ್ ಎಂಬುದನ್ನು ಮಗ ಎಂಬರ್ಥದಲ್ಲಿ ತೆಗೆದುಕೊಂಡರೆ.

ಪೊಲೀಸ್ ಎಫ್‌ಐಆರ್ ಓದುವುದು

ನೀವು ಕ್ರೈಂ ರಿಪೋರ್ಟರ್ ಆಗಿದ್ದರೆ ದಿನಕ್ಕೆ ಮೂರ್ನಾಲ್ಕಾದರೂ ಪೊಲೀಸ್ ಎಫ್‌ಐಆರ್ ಓದಬೇಕಾಗುತ್ತದೆ. ಜಗತ್ತಿನಲ್ಲಿ ಡಾಕ್ಟರ್ ಪ್ರಿಸ್ಕ್ರಿಪ್ಷನ್ ಹಾಗೂ ಬ್ರಹ್ಮಲಿಪಿಗಿಂತ ಭಯಾನಕವಾದದ್ದು ಯಾವುದಾದರೂ ಇದ್ದರೆ ಅದು ಪೊಲೀಸ್ ಎಫ್‌ಐಆರ್. ಅದರಲ್ಲಿ ಫುಲ್‌ಸ್ಟಾಪುಗಳೇ ಇರುವುದಿಲ್ಲ. ಪೊಲೀಸ್ ರೈಟರುಗಳು ಒಮ್ಮೆ ಪೆನ್ನನ್ನು ಪೇಪರ್ ಮೇಲಿಟ್ಟರೆ ಮುಗಿಯಿತು, ಪುಟದ ಕೊನೆಗೇ ಅದನ್ನು ಮೇಲೆತ್ತುತ್ತಾರೆ. ಪೊಲೀಸ್ ಭಾಷೆ ಎಂಬುದು ಜನರಿಗೆ ಕೇಳಿ ಮಾತ್ರ ಗೊತ್ತಿರುತ್ತದೆ. ಆದರೆ, ಅವರಿಗೊಂದು ಲಿಖಿತ ಭಾಷೆಯೂ ಇದೆ ಮತ್ತು ಅದು ಅವರಾಡುವ ಭಾಷೆಗಿಂತ ಭಯಾನಕವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಎಫ್‌ಐಆರ್ ಓದಬೇಕು. ಪಾರ್ಕಿನಲ್ಲಿ ಬೆಳಿಗ್ಗೆ ಒಂಟಿಯಾಗಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ಕಾದು ಹಿಡಿದ ಆರೋಪಿಯು ಅವಳಿಗೆ ಬಾಯಿಗೆ ಮೊದಲು ಬಟ್ಟೆ ತುರುಕಿ ನಂತರ ಎರಡೂ ಕೈಗಳನ್ನೂ ಹಿಂದಕ್ಕೆ ಕಟ್ಟಿ ಹಿಡಿದು ತನ್ನ ಒಂದು ಕೈನಿಂದ ಚಾಕುವನ್ನುಅವಳ ಬೆನ್ನಿಗೆ ಚುಚ್ಚಿ ಹೊರತೆಗೆದು ಮತ್ತೊಮ್ಮೆ ಚುಚ್ಚಿ ಹೊರತೆಗೆದು ಆಗಲೂ ಆಕೆ ಒದ್ದಾಡುತ್ತಲೇ ಇರುವುದನ್ನು ಗಮನಿಸಿದ್ದು ಇನ್ನೂ ನಾಲ್ಕೈದು ಸಲ ಚುಚ್ಚಿ ಚುಚ್ಚಿ ಹೊರತೆಗೆದು ಕೊನೆಗೆ ಅಲ್ಲಿ ಯಾರೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಅಲ್ಲಿಂದ ಓಡಿಹೋಗಿ ಚಾಕುವನ್ನು ಬುಲ್‌ಟೆಂಪಲ್ ರಸ್ತೆಯ ನಾಲ್ಕನೇ ಮೇನ್ ಪಕ್ಕ ಇರುವ ಖಾಲಿ ಸೈಟಿನಲ್ಲಿ ಎಸೆದು ಪರಾರಿಯಾಗಿದ್ದು ಇದರ ಬಗ್ಗೆ ಕೊಲೆಯಾದ ಮಹಿಳೆಯ ಮೊಮ್ಮಗ ಠಾಣೆಗೆ ದೂರು ನೀಡಿದ ಮೇಲೆ ಮಹಜರು ಮಾಡಿದ ಪೊಲೀಸರಿಗೆ ಇದು ಮೇಲ್ನೋಟಕ್ಕೆ ಕೊಲೆಯೆಂಬುದು ದೃಢವಾಗಿದ್ದು ಆರೋಪಿಯ ಪತ್ತೆಗೆ ಬಲೆ ಬೀಸಲಾಗಿ ಆತ ತಮಿಳುನಾಡಿಗೆ ಪರಾರಿಯಾಗಿರಬಹುದು ಎಂದು ದೂರುದಾರರು ಕೊಟ್ಟ ಸುಳಿವಿನ ಮೇಲೆ…. ಇನ್ನೂ ಮುಗಿದಿಲ್ಲ, ಇದು ಎಫ್‌ಐಆರ್‌ನ ಮೊದಲ ಪುಟದ ಅರ್ಧಭಾಗ ಮಾತ್ರ. ಇನ್ನೂ ಮೂರು ಪುಟಗಳಿರುತ್ತವೆ. ಇಂತಹ ಎಫ್‌ಐಆರ್‌ಗಳನ್ನು ಓದಿ ಓದಿ ಕ್ರೈಂ ರಿಪೋರ್ಟರ್‌ಗಳ ಕನ್ನಡ ಕೂಡ ಅಧ್ವಾನವಾಗುವುದರಿಂದ ಯಾವಾಗಲೂ ತಾವು ಬರೆಯುವ ವರದಿಗಾಗಿ ಅವರು ಆಫೀಸಿನಲ್ಲಿ ಬೈಸಿಕೊಳ್ಳುತ್ತಾರೆ.

ಭಾಷಣ ಕೇಳುವುದು

ಅಪರೂಪಕ್ಕೊಮ್ಮೆ ಸಾಹಿತಿಗಳು ಅಥವಾ ರಾಜಕಾರಣಿಗಳ ಭಾಷಣ ಕೇಳುವ ಜನಸಾಮಾನ್ಯರೇ ನಾರ್ಮಲ್ ಸ್ಥ್ಥಿತಿಗೆ ಬರಲು ಸ್ವಲ್ಪ ಟೈಂ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಸಭಾಕಾರ್ಯಕ್ರಮಗಳ ವರದಿಗೆ ಹೋಗುವ ಪತ್ರಕರ್ತರು ದಿನಕ್ಕೆ ಐದಾರು ಜನರದ್ದಾದರೂ ಭಾಷಣ ಕೇಳಬೇಕಾಗುತ್ತದೆ. ಭಾಷಣ ಕೇಳುವುದು ಪತ್ರಕರ್ತರ ಆಜನ್ಮಸಿದ್ಧ ಕರ್ತವ್ಯ. ಹೊಸತಾಗಿ ಕೆಲಸಕ್ಕೆ ಸೇರಿದ ಪತ್ರಕರ್ತರನ್ನು ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳಿಗೆ ಅಥವಾ ಪ್ರಸ್‌ಕ್ಲಬ್ ಬೀಟ್‌ಗೆ ಹಾಕಲಾಗುತ್ತದೆ. ಪ್ರೆಸ್‌ಕ್ಲಬ್ಬಿಗೆ ಬೆಳಿಗ್ಗೆ ಹೋದರೆ ಸಂಜೆ ಅಲ್ಲಿಂದ ಆಫೀಸಿಗೆ ಬರುವ ಹೊತ್ತಿಗೆ ಕಡಿಮೆಯೆಂದರೂ ಅವರು ನಾಲ್ಕು ಪತ್ರಿಕಾಗೋಷ್ಠಿ ಕವರ್ ಮಾಡಬೇಕಾಗುತ್ತದೆ. ಪ್ರೆಸ್‌ಕ್ಲಬ್ಬಿನಲ್ಲಿ ಪತ್ರಿಕಾಗೋಷ್ಠಿ ನಡೆಸುವವರೆಲ್ಲ ಸಾಮಾನ್ಯವಾಗಿ ತಮ್ಮ ಗೋಳು ಹೇಳಿಕೊಳ್ಳುವವರೇ ಆಗಿರುತ್ತಾರೆ. ಇಂತಹ ಗೋಳಿನ ಹಾಗೂ ಸಾಹಿತಿಗಳು ಮಾಡುವ ಗೋಳು ಹೊಯ್ದುಕೊಳ್ಳುವ ಭಾಷಣಗಳನ್ನು ಕೇಳಿ ಕೇಳಿ ರಿಪೋರ್ಟರ್‌ಗಳಿಗೆ ಅವರು ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ತಮ್ಮ ಕೆಲಸದ ಮೇಲೂ ಜೀವನದ ಮೇಲೂ ಜಿಗುಪ್ಸೆ ಬರುವ ಸಾಧ್ಯತೆಗಳಿರುತ್ತವೆ. ಕೆಲವು ಸಾಹಿತಿಗಳು ಹಾಗೂ ರಾಜಕಾರಣಿಗಳು ಒಂದೂಮುಕ್ಕಾಲು ತಾಸು ಭಾಷಣ ಕುಟ್ಟಿದ ಮೇಲೆಅಲ್ಲಿದ್ದ ಪತ್ರಕರ್ತರಿಗೆ ಫೋನ್‌ಮಾಡಿ ನನ್ನ ಭಾಷಣ ಹೇಗಿತ್ತು ಎಂದು ಬೇರೆ ಕೇಳುತ್ತಾರೆ. ಆಗ ಸುಳ್ಳು ಹೇಳದೆ ವಿಧಿಯಿಲ್ಲ. ಹೀಗೆ ಅಭ್ಯಾಸವಾಗುವ ಸುಳ್ಳುಗಳು ಪತ್ರಕರ್ತರ ಜೀವನದುದ್ದಕ್ಕೂ ಕೈಹಿಡಿದು ಮುನ್ನಡೆಸುತ್ತವೆ. ಭಾಷಣ ಕೇಳಿ ಕೇಳಿ ವರದಿಗಾರರ ಸ್ಥಿತಿ ಕೊನೆಗೆ ಹೇಗಾಗುತ್ತದೆ ಎಂದರೆ, ಇಂಥಾ ವ್ಯಕ್ತಿ ಹೀಗೆ ಭಾಷಣ ಶುರುಮಾಡಿದ ಎಂದರೆ ಮುಂದೆ ಹೀಗೇ ಹೇಳುತ್ತಾನೆ ಎಂಬುದು ಇವರಿಗೆ ಗೊತ್ತಾಗಿಬಿಡುತ್ತದೆ. ಆ ಅಂದಾಜಿನಲ್ಲೇ ವರದಿ ಬರೆದು ಬಿಸಾಕಿದರೆ ಇವರ ಗ್ರಹಚಾರಕ್ಕೆ ಆವತ್ತೇ ಭಾಷಣಕಾರ ಬೇರೆ ಏನೋ ಹೇಳಿರುತ್ತಾನೆ. ಮಾರನೆ ದಿನ ಜಗಳವಾಗುತ್ತದೆ.

ರಾಜಕಾರಣಿಗಳಿಂದ ಕೊರೆಸಿಕೊಳ್ಳುವುದು

ಪತ್ರಕರ್ತರಿಗೂ ರಾಜಕಾರಣಿಗಳಿಗೂ ಗಳಸ್ಯ ಕಂಠಸ್ಯ. ರಾಜಕಾರಣಿಗಳು ಕಂಠದಲ್ಲಿ ಹೇಳಿದ್ದನ್ನು ಇವರು ಗಳದಲ್ಲಿ ಇಳಿಸಿಕೊಳ್ಳಬೇಕು. ಆಗಾಗ ಅವರು ಕಂಠಕ್ಕೆ ಹೊಯ್ದಿದ್ದನ್ನು ಗಳಗಳ ಇಳಿಸಿಕೊಳ್ಳುವ ಪತ್ರಕರ್ತರೂ ಇದ್ದಾರೆ ಹಾಗೆ ಉಪಕೃತರಾದ ಮೇಲೆ ಅವರು ಕೊರೆದರೆ ಕೊರೆಸಿಕೊಳ್ಳುವ ಗುರುತರ ಜವಾಬ್ದಾರಿಯೂ ಇವರ ಮೇಲಿರುತ್ತದೆ. ಅಧಿಕಾರದಲ್ಲಿಲ್ಲದ ರಾಜಕಾರಣಿಗಳಿಗೆ ಸಾಮಾನ್ಯವಾಗಿ ಮಾಡಲು ಏನೂ ಕೆಲಸವಿರುವುದಿಲ್ಲ. ರಾಜಕಾರಣಿಗಳು ಸಾವಿರಾರಿರುವುದರಿಂದ ಮತ್ತು ಅಧಿಕಾರ ಕೆಲವೇ ಇರುವುದರಿಂದ ಕೆಲಸವಿಲ್ಲದ ರಾಜಕಾರಣಿಗಳೇ ಎಲ್ಲ ಕಾಲ ದೇಶದಲ್ಲೂ ಹೆಚ್ಚಿರುತ್ತಾರೆ ಎಂಬುದು ಪರಮಸತ್ಯ. ಇಂತಹ ರಾಜಕಾರಣಿಗಳಿಗೆ ಅಪ್ಪಿತಪ್ಪಿ ಪತ್ರಕರ್ತರು ಫೋನ್ ಮಾಡಿಬಿಟ್ಟರೆ ಅವರು ಮುಕ್ಕಾಲು ತಾಸಿಗಿಂತ ಮುಂಚೆ ಯಾವತ್ತೂ ಕೆಳಗಿಡುವುದಿಲ್ಲ. ಕೆಲವು ರಾಜಕಾರಣಿಗಳು ಹೀಗೆ ಫೋನ್‌ನಲ್ಲಿ ನಾಟಾ ಕೊಯ್ಯುವುದಕ್ಕೆ ಫೇಮಸ್ಸು. ಉದಾಹರಣೆಗೆ, ಕಾಂಗ್ರೆಸ್ ಪಕ್ಷದಲ್ಲಿ ಏನೋ ಬೆಳವಣಿಗೆಯಾಯಿತು ಎಂದಿಟ್ಟುಕೊಳ್ಳಿ. ಆಗ ಅದಕ್ಕೆ ಆ ಪಕ್ಷದ ಯಾರಾದರೊಬ್ಬರು ಪ್ರಮುಖರಿಂದ ರಿಯಾಕ್ಷನ್ ಬೇಕಾಗುತ್ತದೆ. ಅದನ್ನು ಕೇಳಲು ಫೋನ್ ಮಾಡಿದರೆ ಇವರು ಕೇಳಿದ್ದನ್ನೊಂದು ಬಿಟ್ಟು ಬೇರೆಲ್ಲವನ್ನೂ ಅವರು ಅಚ್ಚುಕಟ್ಟಾಗಿ ಹೇಳುತ್ತ ಹೋಗುತ್ತಾರೆ. ಅರ್ಧಕ್ಕೆ ಫೋನ್‌ಕಟ್ ಮಾಡುವುದು ಸೌಜನ್ಯವಲ್ಲ. ಹಾಗಾಗಿ ಪೂರ್ತಿ ಕೇಳಲೇಬೇಕು. ಆಫೀಸಿನಲ್ಲಿ ಡೆಡ್‌ಲೈನ್ ಮೀರುತ್ತಿರುತ್ತದೆ. ಯಾರಾದರೂ ಪ್ರಮುಖರು ರಾತ್ರಿ ಒಂಭತ್ತು ಗಂಟೆಗೆ ಸತ್ತರು ಎಂದಿಟ್ಟುಕೊಳ್ಳಿ. ಹತ್ತೂವರೆಗೆ ಪತ್ರಿಕೆ ಮುದ್ರಣಕ್ಕೆ ಹೋಗಬೇಕು. ಅದಕ್ಕೂ ಮುಂಚೆ ಸತ್ತವರ ಏಳೆಂಟು ಆಪ್ತರ ಪ್ರತಿಕ್ರಿಯೆಯನ್ನಾದರೂ ತೆಗೆದುಕೊಳ್ಳಬೇಕು. ಅದನ್ನು ಕೇಳಲು ಫೋನ್ ಮಾಡಿದರೆ, ಒಬ್ಬೊಬ್ಬರೂ ಮುಕ್ಕಾಲು ಗಂಟೆ ಮಾತನಾಡಿದರೆ ಈ ಕಡೆ ಕಿವಿಗೆ ಫೋನ್ ಹಚ್ಚಿಕೊಂಡಿರುವ ರಿಪೋರ್ಟರ್ ಕತೆ ಏನಾದೀತು!

ಸರ್ವಜ್ಞ ಎನ್ನಿಸಿಕೊಳ್ಳುವುದು

ರೈಲು ಅಥವಾ ಬಸ್ಸಿನಲ್ಲಿ ಒಬ್ಬ ಪತ್ರಕರ್ತ ಕುಳಿತಿದ್ದಾನೆ. ಅವನ ಪಕ್ಕಕೊಬ್ಬ ಅಂಕಲ್ ಬಂದು ಪ್ರತಿಷ್ಠಾಪನೆಯಾಗುತ್ತಾನೆ. ಆ ಪುಣ್ಯಾತ್ಮ ಅರ್ಧ ತಾಸು ಹಾಗೂ ಹೀಗೂ ಕಂಟ್ರೋಲ್ ಮಾಡಿಕೊಂಡು ಕೊನೆಗೆ ತಡೆಯಲಾರದೆ ಪತ್ರಕರ್ತನನ್ನು ಮಾತನಾಡಿಸುತ್ತಾನೆ. ‘ಏನ್ಮಾಡ್ತೀರಿ ತಾವು?’ ಇವನೇನಾದರೂ ಗ್ರಹಚಾರ ಕೆಟ್ಟು ತಾನು ಪತ್ರಕರ್ತ ಎಂದು ಹೇಳಿಕೊಂಡನೋ, ಮುಗಿಯಿತು. ‘ಓ, ಹೌದಾ? ಹೆಂಗೆ ಸಿದ್ದರಾಮಯ್ಯ? ಗೌರ್ಮೆಂಟು ಐದು ವರ್ಷ ಉಳೀತದಾ?’ ಎಂಬ ಮೊದಲ ಪ್ರಶ್ನೆ ಬರುತ್ತದೆ. ದಿನದಿನಕ್ಕೂ ಏನೇನೋ ತಿರುವು ಪಡೆಯುವ ರಾಜಕೀಯದಲ್ಲಿ ಸರ್ಕಾರ ಐದು ವರ್ಷ ಇರುತ್ತೋ ಇಲ್ಲವೋ ಎಂಬುದು ಸಿದ್ದರಾಮಯ್ಯಗೇ ಗ್ಯಾರಂಟಿಯಿರುವುದಿಲ್ಲ. ಹಾಗಿರುವಾಗ ಅದನ್ನು ಹೇಳಲು ಪತ್ರಕರ್ತನೇನು ದೇವರೇ? ಏನೋ ಒಂದು ಕತೆ ಹೇಳುತ್ತಾನೆ. ಮಧ್ಯದಲ್ಲಿ ಯಾವುದೋ ಊರು ಬರುತ್ತದೆ. ಇದು ಯಾವ ಊರು ಎಂದು ಪತ್ರಕರ್ತ ಕೇಳಿದರೆ, ‘ಜರ್ನಲಿಸ್ಟು ಅಂತೀರಾ, ಈ ಊರು ಗೊತ್ತಿಲ್ವಾ? ಎಂದು ಕೇಳುತ್ತಾನೆ ಅಂಕಲ್ಲು. ಪತ್ರಕರ್ತರಿಗೆ ಜಗತ್ತಿನ ಎಲ್ಲದರ ಬಗ್ಗೆಯೂ ಗೊತ್ತಿರಬೇಕು ಅಥವಾ ಗೊತ್ತಿರುತ್ತದೆ ಎಂಬ ತಪ್ಪು ಕಲ್ಪನೆಯ ಪರಿಣಾಮವಿದು. ಇದು ಒಮ್ಮೊಮ್ಮೆ ತುಂಬಾ ಕಷ್ಟ ಕೊಡುತ್ತದೆ. ಪತ್ರಕರ್ತರು ಅಂದಾಕ್ಷಣಸಿದ್ದರಾಮಯ್ಯ, ಮೋದಿ, ಯಡಿಯೂರಪ್ಪ ಎಂದು ಮಾತನಾಡುವವರು ನೆನಪಿಡಿ: ಪತ್ರಕರ್ತರೆಲ್ಲ ರಾಜಕೀಯ ವರದಿಗಾರರಲ್ಲ. ಅವರಲ್ಲಿ ಸಿನಿಮಾ, ಕ್ರೀಡೆ, ಕೋರ್ಟು, ಶಿಕ್ಷಣ ಹೀಗೆ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ಆ ಕ್ಷೇತ್ರದ ಬಗ್ಗೆ ಮಾತ್ರ ತಿಳಿದುಕೊಂಡಿರುವಪತ್ರಕರ್ತರಿರುತ್ತಾರೆ. ಸಿನಿಮಾದವನ ಬಳಿ ಸಿದ್ದರಾಮಯ್ಯನ ಸರ್ಕಾರದ ಬಗ್ಗೆ ಕೇಳಿದರೆ ಏನು ಹೇಳುತ್ತಾನೆ? ಕೋರ್ಟ್ ವರದಿಗಾರಿಕೆ ಮಾಡುವವನ ಬಳಿ ಕ್ರಿಕೆಟ್ ಮ್ಯಾಚ್ ಬಗ್ಗೆ ಕೇಳಿದರೆ ಅವನೇನು ತೀರ್ಪು ಕೊಡುತ್ತಾನೆ?

ರಜೆಯಿಲ್ಲದೆ ಒದ್ದಾಡುವುದು

ಪತ್ರಕರ್ತರಿಗೂ ರಜೆಗೂ ಯಡಿಯೂರಪ್ಪ-ಅನಂತಕುಮಾರ್ ಸಂಬಂಧ. ಇಬ್ಬರ ಹೆಸರು ಹೇಳಿ ಅನ್ನಕ್ಕಿಟ್ಟರೆ ಹೊಯ್ದ ಅಕ್ಕಿ ಬೇಯುವುದಿಲ್ಲ. ವಾರದ ರಜೆ ತೆಗೆದುಕೊಳ್ಳುವುದಕ್ಕೇ ಎಷ್ಟೋ ಪತ್ರಕರ್ತರು ಒದ್ದಾಡುತ್ತಾರೆ. ಇನ್ನು ಸಿಎಲ್, ಸಿಕ್ ಲೀವ್, ಸ್ಪೆಷಲ್ ಲೀವ್‌ಗಳೆಲ್ಲ ಖರ್ಚೇ ಆಗದೆ ವ್ಯರ್ಥವಾಗುವ ಸ್ವಪ್ನಸ್ಖಲನವಿದ್ದಂತೆ. ಸಾಫ್ಟ್‌ವೇರ್‌ನವರು ವಾರಕ್ಕೆರಡು ರಜೆ ತೆಗೆದುಕೊಳ್ಳುವುದನ್ನೂ, ಆಮೇಲೆ ಬೇಕುಬೇಕೆಂದಾಗಲೆಲ್ಲ ವಾರಗಟ್ಟಲೆ ರಜೆ ಹಾಕುವುದನ್ನೂ ನೋಡುವ ಪತ್ರಕರ್ತರ ಹೆಂಡತಿಯರು ಈ ವಿಷಯಕ್ಕೆ ಗಂಡನ ಜೊತೆ ಯಾವಾಗಲೂ ಜಗಳವಾಡುತ್ತಾರೆ. ಇನ್ನು, ಏನೋ ಕಸರತ್ತು ಮಾಡಿ ಒಂದು ರಜೆ ತೆಗೆದುಕೊಂಡು ಹೆಂಡತಿ-ಮಕ್ಕಳ ಜೊತೆ ಹೊರಗೆ ಹೋದರೆ ಆವತ್ತೇ ಅದೃಷ್ಟ ಕೆಟ್ಟು ಮಾಜಿ ಪ್ರಧಾನಿಯೋ, ಯಾವುದಾದರೂ ರಾಜ್ಯದ ಮುಖ್ಯಮಂತ್ರಿಯೋ ಟಿಕೆಟ್ ತೆಗೆದುಕೊಳ್ಳುತ್ತಾರೆ ಅಥವಾ ಮುಂಬೈನಲ್ಲಿ ಬಾಂಬ್ ಸ್ಫೋಟವಾಗುತ್ತದೆ. ಎಲ್ಲಿದ್ದರೂ ಆಫೀಸಿಗೆ ಬರುವಂತೆ ಫೋನ್ ಬರುತ್ತದೆ. ರಜೆ ಖಲಾಸ್. ಇಲ್ಲೊಂದು ಸೂಕ್ಷ್ಮವಿದೆ. ಎಲ್ಲ ಟೀವಿ ಚಾನಲ್ಲು ಹಾಗೂ ಪತ್ರಿಕಾ ಕಚೇರಿಗಳಲ್ಲೂ ಎರಡು ವಿಧದ ಪತ್ರಕರ್ತರಿರುತ್ತಾರೆ. ಆ್ಯವರೇಜ್ ಪತ್ರಕರ್ತರು ಮತ್ತು ಕೋರ್ ಟೀಮ್‌ನವರು. ಈ ಕೋರ್ ಟೀಮ್‌ನ ಪತ್ರಕರ್ತರಿಗೆ ರಜೆ ಸಿಗುವುದು ಬಹಳ ಕಷ್ಟ. ಏಕೆಂದರೆ ಇವರು ಇಲ್ಲದಿದ್ದರೆ ಕೆಲಸ ಸುಸೂತ್ರವಾಗಿ ನಡೆಯುವುದಿಲ್ಲ. ಇವರನ್ನು ಕಂಡರೆ ಸಂಪಾದಕರಿಗೆ ಪ್ರೀತಿ, ಆದರೆ ಇವರಿಗೆ ರಜೆ ಕೊಡುವುದರ ಮೇಲೆ ಅಖಂಡ ದ್ವೇಷ. ನನಗೆ ವರ್ಷಕ್ಕೆ ಇಷ್ಟು ರಜೆಯಿದೆ ಎಂದು ಲೆಕ್ಕಾಚಾರ ಹಾಕಿ ರಜೆ ತೆಗೆದುಕೊಳ್ಳುವುದೆಲ್ಲ ಪತ್ರಕರ್ತರ ಹಣೆಯಲ್ಲಿ ಬರೆದಿಲ್ಲ. ಮುಂಚೆ ಬರೆದಿದ್ದರೂ ಈಗ ಅಳಿಸಿಹೋಗಿದೆ. ಅನಿವಾರ್ಯವಿದ್ದಾಗ ಮಾತ್ರ ರಜೆ ಸಿಗುತ್ತದೆ, ಅದಕ್ಕೂ ಷರತ್ತುಗಳು ಅನ್ವಯಿಸುತ್ತವೆ.

ಸುದ್ದಿ ಪ್ಲಾಂಟ್ ಮಾಡುವುದು

ನಾನು ನಿಜವನ್ನೇ ಬರೆಯುತ್ತೇನೆ, ನಿಜವನ್ನಲ್ಲದೆ ಬೇರೇನನ್ನೂ ಬರೆಯುವುದಿಲ್ಲ ಎಂದು ಪತ್ರಕರ್ತರು ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ಮಾಡಿರುವುದಿಲ್ಲ. ಹಾಗಾಗಿ ಪತ್ರಿಕೆಗಳಲ್ಲಿ ಬರುವುದೆಲ್ಲವೂ ನಿಜವಲ್ಲ. ಕೆಲವೊಮ್ಮೆ ಸುಳ್ಳು ಸುದ್ದಿಗಳನ್ನೂ ಬರೆಯಬೇಕಾಗುತ್ತದೆ. ಕೆಲವು ಪತ್ರಕರ್ತರಿಗೆ ಸುಳ್ಳು ಸುದ್ದಿ ಬರೆಯುವುದೆಂದರೆ ಬಹಳ ಖುಷಿ. ಪತ್ರಿಕೋದ್ಯಮವೆಂದರೆ ಪವಿತ್ರ ವೃತ್ತಿ ಎಂದುಕೊಂಡಿರುವ ಪತ್ರಿಕಾ ಕಚೇರಿಯ ಕೆಲವು ಗೋವುಗಳಿಗೆ ಇದು ಆಗಿಬರುವುದಿಲ್ಲ. ಆದರೂ, ಅವರು ಸುಳ್ಳು ಬರೆಯಬೇಕಾಗುತ್ತದೆ. ಅದಕ್ಕೆ ಸುದ್ದಿಯನ್ನು ಪ್ಲಾಂಟ್ ಮಾಡುವುದು ಎನ್ನುತ್ತಾರೆ. ಉದಾಹರಣೆಗೆ, ಬಿಜೆಪಿಯಲ್ಲಿ ಯಾರಿಗೋ ಒಬ್ಬರಿಗೆ ಅಧ್ಯಕ್ಷ ಸ್ಥಾನ ಬೇಕಿರುತ್ತದೆ. ಆತ ಪತ್ರಿಕಾ ಸಂಸ್ಥೆಯ ಮಾಲಿಕರಿಗೆ ಆಪ್ತ, ಅಥವಾ ಅವನು ಪತ್ರಿಕೆಗೆ ತುಂಬಾ ಜಾಹೀರಾತು ಕೊಡುವವನು. ಅವನ ಪರವಾಗಿ ಪತ್ರಕರ್ತರು ಬರೆಯಲೇಬೇಕಾಗುತ್ತದೆ. ಬರೆಯದಿದ್ದರೆ ಕೆಲಸ ಹೋಗುತ್ತದೆ. ಆಗ, ಅವರಿಗೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ಶಾಸಕರೆಲ್ಲ ಬಂಡಾಯ ಏಳಲು ಸಿದ್ಧತೆ ನಡೆಸಿದ್ದಾರೆ ಎಂದು ಸುದ್ದಿ ಬರೆಯುತ್ತಾನೆ. ಅದು ಮರುದಿನ ಪತ್ರಿಕೆಯಲ್ಲಿ ಬರುತ್ತದೆ. ವಾಸ್ತವವಾಗಿ ಪಕ್ಷದೊಳಗೆ ಏನೂ ಆಗಿರುವುದಿಲ್ಲ. ಆದರೆ, ಪತ್ರಿಕೆಯಲ್ಲಿ ಬಂದ ಸುದ್ದಿ ನೋಡಿ ನೋಡಿ ಹೈಕಮಾಂಡ್ ತಲೆಕೆಡಿಸಿಕೊಳ್ಳಬಹುದು. ಇಂತಹದ್ದೇ ನಾಲ್ಕು ಸುದ್ದಿ ಬೇರೆ ಬೇರೆ ಕಡೆ ಬಂದರೆ ಅವನಿಗೆ ಅಧ್ಯಕ್ಷ ಸ್ಥಾನವೂ ಸಿಗಬಹುದು. ಇದರಲ್ಲಿರುವ ಇನ್ನೊಂದು ಅಪಾಯವೆಂದರೆ, ಒಂದು ಪತ್ರಿಕೆಯಲ್ಲಿ ಹೀಗೆ ಬಂದ ಸುದ್ದಿ ಸುಳ್ಳು ಎಂಬುದು ಬೇರೆ ಪತ್ರಿಕೆಗಳ ಬಿಜೆಪಿ ವರದಿಗಾರರಿಗೆ ಗೊತ್ತಿರುತ್ತದೆ. ಅವರೆಲ್ಲ, ಇವನು ದುಡ್ಡು ತೆಗೆದುಕೊಂಡು ಹೀಗೆ ಬರೆದಿದ್ದಾನೆ ಎಂದುಕೊಳ್ಳಬಹುದು. ಪಾಪ, ಇವನು ಕೆಲಸ ಉಳಿಸಿಕೊಳ್ಳಲು ಬರೆದಿರುತ್ತಾನೆ. ಹೀಗೆ ಸುದ್ದಿ ಪ್ಲಾಂಟ್ ಮಾಡುವುದು ಹಾಗೂ ಮಾಡಿಸುವುದು ಬೇರೆ ಬೇರೆ ವಿಷಯಕ್ಕೆ ಪತ್ರಿಕಾ ಕಚೇರಿಯಲ್ಲಿ ಯಾವಾಗಲೂ ನಡೆಯುತ್ತಿರುತ್ತದೆ. ಇದು ತಪ್ಪು ಎಂದುಕೊಳ್ಳುವ ಕೆಲವುಪತ್ರಕರ್ತರು ಒಳಗೊಳಗೇ ಚಡಪಡಿಸುತ್ತಾರೆ.

ಅಚ್ಚರಿ ಕಳೆದುಕೊಳ್ಳುವುದು

ನೀವೊಂದು ಸಂಗತಿ ಗಮನಿಸಿದ್ದೀರಾ? ಪತ್ರಕರ್ತರಿಗೆ ಸಾಮಾನ್ಯವಾಗಿ ಏನು ಹೇಳಿದರೂ ಆಶ್ಚರ್ಯವಾಗುವುದಿಲ್ಲ. ಪಕ್ಕದ ಮನೆಯಲ್ಲೇ ಕೊಲೆಯಾದ ಸುದ್ದಿಯನ್ನು ಯಾರಾದರೂ ಹೇಳಿದರೂ ‘ಯಾವ ಸ್ಟೇಶನ್ ಲಿಮಿಟ್ಸು’ ಎಂದು ಕೇಳಿಕೊಂಡು ಸುದ್ದಿ ಬರೆಯಲು ಕೂರುತ್ತಾರೆ ಅಥವಾ ತಮ್ಮ ಪತ್ರಿಕೆಯ ಕ್ರೈಂ ರಿಪೋರ್ಟರ್‌ಗೆ ಫೋನ್ ಮಾಡುತ್ತಾರೆ. ‘ಇವತ್ತು ಆರ್.ಟಿ.ನಗರಕ್ಕೆ ಹೋಗಿದ್ದಾಗ ಒಂದೂವರೆ ತಾಸು ಟ್ರಾಫಿಕ್ ಜಾಮ್ ಆಗಿತ್ತು’ ಅಂತ ಹೆಂಡತಿ ಫೋನ್‌ನಲ್ಲಿ ಹೇಳಿದರೆ ಇವನಿಂದ ಅದಕ್ಕೆ ತಕ್ಕ ರಿಯಾಕ್ಷನ್ನೇ ಇರುವುದಿಲ್ಲ. ಏಕೆಂದರೆ ಪ್ರತಿದಿನ ಟ್ರಾಫಿಕ್ ಜಾಮ್ ಸುದ್ದಿ ಕೇಳಿ ಕೇಳಿ ಇವನಿಗೆ ಬೋರಾಗಿರುತ್ತದೆ. ಆದರೆ, ಹೆಂಡತಿಗದು ಅಪರೂಪ. ಅವಳು ಇವನಿಂದ ‘ಓಹೋ! ಹೌದಾ? ಆಮೇಲೆ..’ ಇತ್ಯಾದಿಗಳನ್ನು ಬಯಸುತ್ತಿರುತ್ತಾಳೆ. ಇವನಿಂದ ಅದು ಸಿಗದಿದ್ದಾಗ ಬೇಜಾರು ಮಾಡಿಕೊಳ್ಳುತ್ತಾಳೆ. ಸಾಮಾನ್ಯವಾಗಿ ಜಗತ್ತಿನ ಎಲ್ಲ ವಿಷಯಗಳೂ ಪತ್ರಕರ್ತರಿಗೆ ಹಳೆಯವೇ ಆಗಿರುತ್ತವೆ. ಅಥವಾ ಯಾರಾದರೂ ಇದು ಹೊಸ ಸುದ್ದಿ ಎಂಬಂತೆ ಹೇಳಿದಾಗ ಅದರಂತೆ ನಡೆದಿದ್ದ ಇನ್ನೊಂದು ಘಟನೆ ನೆನಪಾಗಿಬಿಡುತ್ತದೆ. ಹಾಗಾಗಿ ಪತ್ರಕರ್ತರಿಗೆ ಆಶ್ಚರ್ಯವಾಗಬೇಕು ಅಂದರೆ ಒಂದೋ,ಸಮಯಕ್ಕೆ ಸರಿಯಾಗಿ ಸಂಬಳವಾಗಬೇಕು. ಅಥವಾ ನಾಲ್ಕು ದಿನ ರಜೆ ಕೇಳಿದರೆ ನಾಲ್ಕೂ ದಿನ ಸಿಕ್ಕಿಬಿಡಬೇಕು. ಇದನ್ನು ಹೊರತುಪಡಿಸಿಅವರು ಅಚ್ಚರಿಯಿಲ್ಲದ ಜಗತ್ತಿನಲ್ಲಿ ಬದುಕುತ್ತಿರುತ್ತಾರೆ. ಪ್ರತಿದಿನ ಸುದ್ದಿಯ ಸುನಾಮಿಯನ್ನೇ ಎದುರಿಸುವ, ಆಫೀಸಿನಲ್ಲಿ ಇದ್ದಷ್ಟೂ ಹೊತ್ತು ನಿಮಿಷಕ್ಕೊಂದು ಹೊಸ ಸುದ್ದಿ ಕೇಳುವ ಪತ್ರಕರ್ತರಿಗೆ ಹೀಗಾಗುವುದು ಅನಿವಾರ್ಯ. ಇದು ಬದುಕನ್ನು ಕ್ರಮೇಣ ನೀರಸವಾಗಿಸುತ್ತದೆ. ಪತ್ರಕರ್ತರ ಈ ಕಷ್ಟ ಯಾರಿಗೂ ಅರ್ಥವಾಗುವಂಥದ್ದಲ್ಲ.

ಜನರಿಂದ ಬೈಸಿಕೊಳ್ಳುವುದು

ಅವನ್ಯಾರೋ ಅವಳ್ಯಾವಳ ಜೊತೆಗೋ ಓಡಿಹೋದ ಅಂತ ಇಡೀ ದಿನ ಟೀವಿಯಲ್ಲಿ ಡಿಸ್ಕಷನ್ ಮಾಡ್ತಾರಲ್ಲ, ಈ ಪತ್ರಕರ್ತರಿಗೆ ಬುದ್ಧಿಯಿಲ್ವಾ ಎಂದು ಜನರು ಬೈಯುವುದು ಕಾಮನ್ನು. ತಮ್ಮ ಮೂಗಿನ ನೇರಕ್ಕೇ ಎಲ್ಲವನ್ನೂ ಬರೆಯುತ್ತಾರೆ ಎಂಬುದು ಇನ್ನೊಂದು ಆರೋಪ. ಪತ್ರಕರ್ತರು ಅಂದರೆ ಒಂದಕ್ಕೆರಡು ಬರೆದು ಗಲಾಟೆ ಮಾಡಿಸುವವರು ಎಂದು ಬೈಯುವವರೂ ಇದ್ದಾರೆ. ಯಾರ ಜೊತೆ ವ್ಯವಹಾರ ಮಾಡಿದರೂ ಪತ್ರಕರ್ತರ ಜೊತೆ ಮಾತ್ರ ಮಾಡಬಾರದು ಎಂದು ದೂರದಲ್ಲೇ ಕೈಮುಗಿಯುವವರದು ಒಂದು ವರ್ಗ. ಪತ್ರಕರ್ತರು ಅಂದರೆ ಚಟವಾನರು ಎಂದುಕೊಂಡಿರುವ ಜನರಿದ್ದಾರೆ. ರಾಜಕಾರಣಿಗಳಿಗೆ ಕೆಟ್ಟ ಕೆಟ್ಟ ಐಡಿಯಾ ಕೊಡುವವರೇ ಪತ್ರಕರ್ತರು ಎಂದು ಭಾವಿಸಿರುವವರೂ ಇದ್ದಾರೆ. ಜಗತ್ತಿನಲ್ಲಿ ಎಲ್ಲೇ ಭ್ರಷ್ಟಾಚಾರ ನಡೆದರೂ ಅದರ ಬಗ್ಗ್ಗೆವಾರಗಟ್ಟಲೆ ಬರೆಯುವ ಪತ್ರಕರ್ತರೇನು ಸಾಚಾ ಆಗಿರುತ್ತಾರಾ ಎಂದು ಕೆಲವರು ಕೇಳುತ್ತಾರೆ. ಒಟ್ಟಿನಲ್ಲಿ ಪತ್ರಕರ್ತರ ಕೆಲಸದ ಬಗ್ಗೆ ಕೆಲವರಿಗೆ ಎಷ್ಟು ಕುತೂಹಲವಿದೆಯೋ ಅದಕ್ಕಿಂತ ಹೆಚ್ಚು ದ್ವೇಷವೂ ಅವರ ಬಗ್ಗೆ ಇದೆ. ಆದರೆ, ಇಂತಹ ಉಪದ್ವ್ಯಾಪಕ್ಕೆಲ್ಲ ಕೈಹಾಕುವ ಪತ್ರಕರ್ತರ ಸಂಖ್ಯೆ ಬಹಳ ಅಂದರೆ ಬಹಳ ಕಡಿಮೆ. ಈ ಕೆಲವೇ ಕೆಲವರು ಮಾಡುವ ತಪ್ಪಿಗೆ ಇಡೀ ಪತ್ರಕರ್ತರ ಸಮುದಾಯವೇ ಬೈಸಿಕೊಳ್ಳುತ್ತದೆ.

ಸಾಲ ಸಿಗೋದಿಲ್ಲ

ನಿಮಗೆ ಈ ವಿಷಯ ಗೊತ್ತಿರಲಿಕ್ಕಿಲ್ಲ. ಪತ್ರಕರ್ತರಿಗೆ ಯಾವ ಬ್ಯಾಂಕಿನವರೂ ಸಾಲ ಕೊಡುವುದಿಲ್ಲ. ಹಾಗಂತ, ನಿಮಗೆ ಸಾಲ ಕೊಡೋದಿಲ್ಲ ಎಂದು ಯಾವ ಬ್ಯಾಂಕಿನ ಮ್ಯಾನೇಜರೂ ಬಾಯಿಬಿಟ್ಟು ಹೇಳುವುದಿಲ್ಲ. ಬದಲಿಗೆ ಏನಾದರೊಂದು ಸಬೂಬು ಹೇಳಿ ಸಾಗಹಾಕುತ್ತಾರೆ. ಇದಕ್ಕೆ ಕಾರಣ- ಪತ್ರಕರ್ತರ ಬಳಿ ಸಾಲ ವಾಪಸ್‌ಕೇಳಿದರೆ ಗಲಾಟೆ ಮಾಡುತ್ತಾರೆ ಎಂಬ ಅಪನಂಬಿಕೆ. ನನಗೆ ಅವರು ಗೊತ್ತು, ಇವರು ಗೊತ್ತು, ಏನ್ ಮಾಡ್ಕೋತೀಯೋ ಮಾಡ್ಕೋ ಹೋಗು, ನಿನ್ನ ಬಗ್ಗೆ ಪೇಪರ್‌ನಲ್ಲಿ ಬರೆದುಬಿಡ್ತೀನಿ ಎಂದೆಲ್ಲ ಪತ್ರಕರ್ತರು ಹೇಳಬಹುದು ಎಂಬ ಆತಂಕ ಬ್ಯಾಂಕುಗಳದ್ದು. ಪತ್ರಕರ್ತರಿಗಷ್ಟೇ ಅಲ್ಲ, ಪೊಲೀಸರು ಹಾಗೂ ವಕೀಲರಿಗೂ ಬ್ಯಾಂಕುಗಳಲ್ಲಿ ಸಾಲಸಿಗುವುದು ಕಷ್ಟ. ಯಾರ್ಯಾರಿಗೆ ಸಾಲ ನೀಡಬಾರದು ಎಂಬ ಬ್ಯಾಂಕುಗಳ ರಹಸ್ಯ ಪಟ್ಟಿ ಯಲ್ಲಿ ಈ ಮೂವರ ಹೆಸರೂ ಇದೆ. ಬ್ಯಾಂಕಿನಲ್ಲೇ ಸಾಲ ಸಿಗುವುದಿಲ್ಲ ಎಂದಾದ ಮೇಲೆ ಹೊರಗೆ ದುಡ್ಡು ಹುಟ್ಟುತ್ತದೆಯೇ ಪತ್ರಕರ್ತರಿಗೆ ಕಷ್ಟ ಬಂದಾಗ ಇನ್ನೊಬ್ಬ ಪತ್ರಕರ್ತನೇ ಕೈಸಾಲ ಕೊಡಬೇಕು. ಆದರೆ, ಅವನೂ ಕುಚೇಲನವಂಶದವನೇ. ಅವನ ಬಳಿ ಸಾಲ ಕೇಳುವುದು ಚಿತ್ರಾನ್ನ ತಿನ್ನುವವನ ಬಳಿ ಖರ್ಜೂರದ ಉಂಡೆ ಕೇಳಿದಂತೆ.

ಒಂದೇ ತಪ್ಪಿಗೆ ಜೀವನಪರ್ಯಂತ ಕಷ್ಟ

ಪತ್ರಕರ್ತರ ಮೂಲಭೂತ ಸಮಸ್ಯೆಯೇನು ಗೊತ್ತಾ? ಅವರು ಪತ್ರಕರ್ತರಾಗಿರುವುದು. ಎಲ್ಲರಿಗೂ ತಾವು ಮಾಡಿದ ತಪ್ಪು ತಿದ್ದಿಕೊಳ್ಳಲು ಒಂದಲ್ಲಾ ಒಂದುಅವಕಾಶ ಸಿಗುತ್ತದೆ. ಆದರೆ, ಪತ್ರಕರ್ತನಾದವನು ಪತ್ರಿಕೋದ್ಯಮ ವೃತ್ತಿ ಆಯ್ಕೆ ಮಾಡಿಕೊಂಡ ಒಂದೇ ಒಂದು ತಪ್ಪಿಗಾಗಿ ಜೀವಮಾನವಿಡೀ ಫಲ ಉಣ್ಣುತ್ತಾನೆ. ಅವನಿಗೆ ಬರೆಯುವುದು ಬಿಟ್ಟರೆ ಬೇರೆ ಗೊತ್ತಿಲ್ಲ. ಹಾಗಾಗಿ ಬೇರೇನಾದರೂ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತೇನೆ ಎಂಬ ಧೈರ್ಯ ಇರುವುದಿಲ್ಲ. ಯೌವನದ ಉತ್ಸಾಹದಲ್ಲಿ ಏನೇನೋ ಭ್ರಮೆ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಕಾಲಿಟ್ಟವನು ಅಲ್ಲಿಂದ ಹೊರಜಿಗಿಯಲು ಸಾಧ್ಯವಾಗದೆ ಕುಂಟುತ್ತಲೇ ಓಡುತ್ತಿರುತ್ತಾನೆ. ಒನ್ಸ್ ಎ ಜರ್ನಲಿಸ್ಟ್, ಆಲ್ವೇಸ್ ಎ ಜರ್ನಲಿಸ್ಟ್. ಅವನು ಆ ಕೆಲಸ ಬಿಟ್ಟು ಊರಲ್ಲಿ ಗದ್ದೆ ಮಾಡಿಕೊಂಡಿದ್ದರೂ, ‘ಹುಷಾರು, ಅವನು ಪತ್ರಕರ್ತ, ನಿನ್ನ ಬಗ್ಗೆ ಏನಾದರೂ ಕತೆ ಕಟ್ಟಿ ಬರೆದುಬಿಡ್ತಾನೆ’ ಎಂದು ಹೇಳುವವರಿರುತ್ತಾರೆ.

-ಆಲ್ಬರ್ಟ್ ಪಿಂಟೋ

http://www.kannadaprabha.com

Write A Comment