ಕರ್ನಾಟಕ

ಹೋರಾಟಕ್ಕೆ ಯೋಜನೆ ರೂಪಿಸುತ್ತೇವೆ: ಸಂಘಟನೆಗಳ ಜೊತೆ ಸಭೆ; ಛಲ ಬಿಡದ ಕಿಸ್‌ ಆಫ್‌ ಲವ್‌ ಸಂಘಟಕರು

Pinterest LinkedIn Tumblr

kiss_14_0_0ಬೆಂಗಳೂರು: ‘ಕಿಸ್‌ ಆಫ್‌ ಲವ್‌ ಆಚರಣೆಯನ್ನು ತಾತ್ಕಾಲಿಕವಾಗಿ ಮುಂದೂ­ಡಿದ್ದೇವೆ ಅಷ್ಟೆ. ಇಷ್ಟಕ್ಕೆ ನಾವು ತಣ್ಣಗಾಗಿದ್ದೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು. ಹೋರಾಟದ ರೂಪು­ರೇಷೆಯನ್ನು ಬದಲಾಯಿಸಿ ಮತ್ತೆ ಬೀದಿಗೆ ಬರಲಿದ್ದೇವೆ’ ಎಂದು ಕಿಸ್‌ ಆಫ್‌ ಲವ್‌ ಸಂಘಟನೆಯ ಸದಸ್ಯ ವಿಜಯನ್‌ ಅವರು ತಿಳಿಸಿದರು.

ಪ್ರತಿಕ್ರಿಯೆ ನೀಡಿದ ಅವರು, ‘ಭಾನುವಾರ ಸಂಜೆ ಪುರಭವನ ಎದುರು ಕಿಸ್‌ ಆಫ್‌ ಲವ್‌ ಆಚರಣೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಸಿದ್ಧರಾಗಿದ್ದರು. ಆದರೆ, ಸದ್ಯಕ್ಕೆ ಬೇಡ ಎಂದು ಅವರಿಗೆಲ್ಲಾ ಮನವಿ ಮಾಡಿ­ಕೊಂಡಿ.ದ್ದೇವೆ. ಪ್ರತಿಭಟನೆಯನ್ನೂ ಕೈಬಿಟ್ಟೆವು’ ಎಂದರು.

‘ನೈತಿಕ ಪೊಲೀಸ್‌ಗಿರಿ ವಿರುದ್ಧ ಹೋರಾಡಲು ನಮ್ಮ ಮುಂದಿರುವ ಆಯುಧ ಕಿಸ್‌ ಆಫ್‌ ಲವ್‌ ಆಚರಣೆ ಮಾತ್ರವಲ್ಲ. ಮಹಿಳೆಯರ ಮೇಲಿನ ದೌರ್ಜನ್ಯ ವಿರುದ್ಧದ ಪ್ರತಿಭಟನೆ ಸೇರಿದಂತೆ ಹಲವು ಸಾಮಾಜಿಕ ವಿಷಯಗಳಿವೆ.

ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಇತರ ಸಂಘಟನೆಗಳೊಂದಿಗೆ ಮುಂದಿನ ವಾರ ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತೇವೆ. ದೊಡ್ಡ ಹೋರಾಟ ಸಂಘಟಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.

ಕಿಸ್‌ ಆಫ್‌ ಲವ್ ಆಂದೋಲನಕ್ಕೆ ಅನುಮತಿ ನಿರಾಕರಣೆ ನಿರ್ಧಾರವನ್ನು ಮರು ಪರಿಶೀಲಿಸುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ವಿವರವಾದ ಪತ್ರ ಕೂಡ ಬರೆದಿದ್ದೇವೆ ಎಂದು ಅವರು ತಿಳಿಸಿದರು.

ಎಂಟು ಪುಟಗಳ ಪತ್ರದಲ್ಲಿ ಸಂಘಟಕರು, ಆಂದೋಲನಕ್ಕೆ ಪೂರಕವಾದ 19 ಅಂಶಗಳನ್ನು ಉಲ್ಲೇಖಿಸಿದ್ದಾರೆ.

‘ನಾವು ಈ ಆಂದೋಲನ ರೂಪಿಸಿರುವುದು ನೈತಿಕ ಪೊಲೀಸ್‌ಗಿರಿಯ ವಿರುದ್ಧ ಒಗ್ಗಟ್ಟು ಪ್ರದರ್ಶಿಸಲು ಅಷ್ಟೆ. ಸಾರ್ವಜನಿಕವಾಗಿ ಮುತ್ತು ನೀಡಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಅಥವಾ ಅಶ್ಲೀಲತೆ ಪ್ರದರ್ಶಿಸುವ ಉದ್ದೇಶ ನಮ್ಮದಲ್ಲ’ ಎಂದಿದ್ದಾರೆ.

‘ಕಿಸ್‌ ಆಫ್‌ ಲವ್‌ ಆಂದೋಲನ ಕಾನೂನು ಬಾಹಿರ ಅಲ್ಲ. ಕಾನೂನಿನಲ್ಲಿ ಈ ಪ್ರಕ್ರಿಯೆಗೆ ಯಾವುದೇ ವಿರೋಧ ಇಲ್ಲ. ಈ ಆಂದೋಲನದ ಮೂಲಕ ಉತ್ತಮ ಸಂದೇಶ ನೀಡುವುದು ನಮ್ಮ ಉದ್ದೇಶ’ ಎಂದು ಪತ್ರದಲ್ಲಿ ಬರೆಯಲಾಗಿದೆ.

ಸಂಘಟಕರ ನಿಲುವಿಗೆ ವಿರೋಧ
ಕಿಸ್‌ ಆಫ್‌ ಲವ್‌ ಸಂಘಟಕರ ಈ ನಿಲುವಿಗೆ ಭಾರಿ ಟೀಕೆಯೂ ವ್ಯಕ್ತವಾಗಿದೆ. ‘ಸಮಾಜದ ಸ್ವಾಸ್ಥ್ಯ ಕೆಡಿಸಲು ಕೆಲ ಶಕ್ತಿಗಳು ಹೂಡಿರುವ ಹುನ್ನಾರವಿದು. ನೈತಿಕ ಪೊಲೀಸ್‌ಗಿರಿಯನ್ನು ಬಗ್ಗುಬಡಿಯುವುದು ಪೊಲೀಸರ ಜವಾಬ್ದಾರಿ. ಬದಲಾಗಿ ಯಾವುದೇ ಸಂಘಟನೆ ಅಥವಾ ಸಮೂಹದ ಕೆಲಸ ಅಲ್ಲ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಟೀಕಾ ಪ್ರಹಾರ ಹರಿಸಿದ್ದಾರೆ.

ಪುರಭವನದ ಬಳಿ ಬಿಗಿ ಬಂದೋಬಸ್ತ್‌
ಕಿಸ್‌ ಆಫ್‌ ಲವ್‌ ಸಂಘಟಕರು ಪ್ರತಿಭಟನೆ ನಡೆಸಬಹುದು ಎಂಬ ಕಾರಣ ಮುಂಜಾಗ್ರತಾ ಕ್ರಮವಾಗಿ ಪುರಭವನದ ಬಳಿ ಶನಿವಾರ ಸಂಜೆಯಿಂದಲೇ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿತ್ತು. ಮಹಿಳಾ ಸಿಬ್ಬಂದಿ ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿ ಭದ್ರತೆ ಒದಗಿಸಿದ್ದರು.

ಜೊತೆಗೆ ಪುರಭವನ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

Write A Comment