ಬೆಂಗಳೂರು: ‘ಬಲಿಜ ಜನಾಂಗವನ್ನು ಸರ್ಕಾರ 2ಎ ವರ್ಗಕ್ಕೆ ಸೇರಿಸುವುದರೊಂದಿಗೆ ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯ ಬಲಿಜ ಸಂಘದ ಅಧ್ಯಕ್ಷ ಟಿ.ವೇಣುಗೋಪಾಲ್ ಆಗ್ರಹಿಸಿದರು.
ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಲಿಜ ಸಂಘಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
‘ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅನವಶ್ಯಕವಾಗಿ 2ಎ ವರ್ಗದ ಪಟ್ಟಿಯಿಂದ ಬಲಿಜ ಜನಾಂಗವನ್ನು ತೆಗೆದು ಹಾಕಿದರು. ಅದನ್ನು ಪುನಃ ಪಟ್ಟಿಗೆ ಸೇರಿಸಬೇಕೆಂದು ಕಳೆದ 18 ವರ್ಷಗಳಿಂದ ಹೋರಾಡುತ್ತ ಬಂದಿದ್ದೇವೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಾಂಗಕ್ಕೆ ಶೈಕ್ಷಣಿಕ ಮೀಸಲಾತಿ ನೀಡಿದರು. ಆದರೆ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಈವರೆಗೆ ಸಿಕ್ಕಿಲ್ಲ. ಸರ್ಕಾರ ಕೂಡಲೇ ಈ ಕುರಿತು ಗಮನ ಹರಿಸಬೇಕು’ ಎಂದರು.
‘ಸರ್ಕಾರ ಜನಾಂಗದ ಹೆಣ್ಣುಮಕ್ಕಳಿಗಾಗಿ ವಸತಿ ನಿಲಯ ನಿರ್ಮಾಣ ಮಾಡಬೇಕು. ಯೋಗಿ ನಾರೇಯಣ ವಿಶ್ವವಿದ್ಯಾಲಯ ನಿರ್ಮಿಸಲು 50 ಎಕರೆ ಜಮೀನು ನೀಡಬೇಕು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯೋಗಿ ನಾರೇಯಣ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಆರಂಭಿಸಬೇಕು. ಜನಾಂಗದ ಗುರುಪೀಠ ಸ್ಥಾಪಿಸಲು ಜಮೀನು ಮಂಜೂರು ಮಾಡಬೇಕು. ಮಂತ್ರಿ ಮಂಡಲದಲ್ಲಿ ಜನಾಂಗದವರಿಗೆ ಆದ್ಯತೆ ನೀಡಬೇಕು’ ಎಂದು ವೇದಿಕೆ ಮೇಲಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೇಡಿಕೆ ಪತ್ರ ಸಲ್ಲಿಸಿದರು.
ರಾಮಲಿಂಗಾರೆಡ್ಡಿ ಅವರು ಮಾತನಾಡಿ, ‘ಬಲಿಜ ಜನಾಂಗದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆ. ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಲಿ ಎನ್ನುವ ಕಾರಣಕ್ಕೆ ಜಾತಿಗಣತಿ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು. ಉದ್ಯಮಿ ಟಪಾಲ್ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.