ಕರ್ನಾಟಕ

ಅರಮನೆ ನೋಡಲು ಬಂದವನು ಅಂಗರಕ್ಷಕನಾದ…

Pinterest LinkedIn Tumblr

pvec1decsswamy

ಬೆಂಗಳೂರು: ‘ಮೈಸೂರಿನ ಅರಮನೆ ನೋಡಲು ಬಂದಿದ್ದ ನನಗೆ ಬೆಂಗಳೂರಿನ ಮೇಯರ್‌ ಅವರ ಅಂಗರಕ್ಷಕನಾಗಿ ಕೆಲಸ ಮಾಡುವ ಅವಕಾಶ ಆಕಸ್ಮಿಕ­ವಾಗಿ ಒಲಿದುಬಂತು’
–ನಗರದ 23 ಮೇಯರ್‌ಗಳಿಗೆ ಅಂಗರಕ್ಷಕನಾಗಿ ಸೇವೆ ಸಲ್ಲಿಸಿ ಶನಿವಾರ­ವಷ್ಟೇ ನಿವೃತ್ತರಾದ ಕೆ.ಬಿ. ಸ್ವಾಮಿ, ತಾವು 36 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ ದಿನವನ್ನು ಹೀಗೆ ಸ್ಮರಿಸುತ್ತಾರೆ.

‘ಪಿರಿಯಾಪಟ್ಟಣ ತಾಲ್ಲೂಕಿನ ರಾವಂ­ದೂರು ನಮ್ಮೂರು. ನಮ್ಮ ಅಣ್ಣ ಮರಿಸ್ವಾಮಿ ನ್ಯಾಯಾಂಗ ಇಲಾಖೆ­ಯಲ್ಲಿ ಕೆಲಸ ಮಾಡುತ್ತಿದ್ದರು. 1978­ರಲ್ಲಿ ನಾನು ಮೈಸೂರು ನೋಡಲು ಬಂದಿದ್ದೆ. ಐಎಎಸ್‌ ಅಧಿಕಾರಿ­ಯಾಗಿದ್ದ ಆರ್‌. ಸುರೇಶ್‌ ಅವರ ಮನೆಯ ಹತ್ತಿರವೇ ನಮ್ಮ ಅಣ್ಣನ ಮನೆಯಿತ್ತು. ಸುರೇಶ್‌ ಅವರು ನನ್ನನ್ನು ಬೆಂಗಳೂರಿಗೆ ಕರೆ­ತಂದು ಪಾಲಿಕೆಯಲ್ಲಿ ನೌಕರಿ ಕೊಡಿ­ಸಿ­ದರು’ ಎಂದು ಮೆಲುಕು ಹಾಕುತ್ತಾರೆ.

‘ಮೊದಲು ‘ಡಿ’ ಗುಂಪಿನ ನೌಕರ­ನಾಗಿದ್ದೆ. ಆಗ ನನಗೆ ಮಾಸಿಕ ₨ 250 ಸಂಬಳ ಇತ್ತು. ತಿಂಗಳ ಖರ್ಚಿಗೆ ಅಷ್ಟು ಸಂಬಳ ಸಾಕಾಗುತ್ತಿತ್ತು. ಶೇಷಾದ್ರಿ ಅವರು 1987–88ರಲ್ಲಿ ಮೇಯರ್‌ ಆಗಿ­ದ್ದಾಗ ಅವರ ಅಂಗರಕ್ಷಕನಾಗಿ ನೇಮ­ಕ­ಗೊಂಡೆ. ಐದು ವರ್ಷಗಳಲ್ಲಿ ಅದೇ ಹುದ್ದೆ ಕಾಯಂಗೊಂಡಿತು’ ಎನ್ನುತ್ತಾರೆ.

‘ಮೇಯರ್‌ ಅವರ ಮನೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೋಗಿ ವರದಿ ಮಾಡಿ­ಕೊಳ್ಳು­ತ್ತಿದ್ದೆ. ಅವರು ರಾತ್ರಿ ಮನೆ ಸೇರಿದ ಮೇಲೆ ನನ್ನ ಮನೆಗೆ ಹೋಗು­ತ್ತಿದ್ದೆ. ಸತತ 26 ವರ್ಷ ಅಂಗರಕ್ಷಕ­ನಾ­ಗಿಯೇ ದುಡಿದಿದ್ದೇನೆ. ಕೆಲಸ ಎಂದಿಗೂ ಬೇಸರ ತರಿಸಿಲ್ಲ’ ಎಂದು ವಿವರಿಸುತ್ತಾರೆ.

‘ಕಾಮಗಾರಿ ಪರಿಶೀಲನೆ, ಸಭೆ–ಸಮಾರಂಭಗಳಲ್ಲಿ ಪಾಲ್ಗೊಳ್ಳುವಿಕೆ, ಶಿಷ್ಟಾ­­ಚಾರ ಪಾಲನೆ ಸೇರಿ ಮೇಯರ್‌ ನಿತ್ಯ ಹಲವು ಕಾರ್ಯ­ಕ್ರಮ­ಗ­ಳಲ್ಲಿ ಭಾಗಿಯಾಗು­ತ್ತಾರೆ. ಅವರ ದಿನಚರಿ ವಿವಿಧ ಕಾರ್ಯಕ್ರಮಗಳಿಂದ ಕಿಕ್ಕಿರಿದು ತುಂಬಿರುತ್ತದೆ’ ಎಂದು ಹೇಳುತ್ತಾರೆ.

‘ಎಲ್ಲ ಮೇಯರ್‌ಗಳೂ ಒಳ್ಳೆಯ­ವರು. ಯಾರಿಂದಲೂ ನನಗೆ ತೊಂದರೆ ಆಗಿಲ್ಲ. ಆದರೆ, ಕುಪ್ಪಸ್ವಾಮಿ ಅವರು ಮೇಯರ್‌ ಆಗಿದ್ದಾಗ ಪ್ರತಿದಿನ ಮಧ್ಯ­ರಾತ್ರಿ­ವರೆಗೆ ಕೆಲಸ ಮಾಡುತ್ತಿ­ದ್ದರು. ದಿಢೀರ್‌ ಪರಿಶೀಲನೆ ಅಂತೆಲ್ಲ ರಾತ್ರಿಯೂ ಓಡಾಡುತ್ತಿದ್ದರು. ಆಗ ಮಧ್ಯರಾತ್ರಿ ಕಳೆದ ಬಳಿಕವೇ ಮನೆಗೆ ಹೋಗಬೇಕಿತ್ತು’ ಎಂದು ನೆನೆಯುತ್ತಾರೆ.

‘ಪಿ.ವಿ. ನರಸಿಂಹರಾವ್‌ ಅವರು ಪ್ರಧಾನಿಯಾಗಿದ್ದಾಗ ಬೆಂಗಳೂರಿಗೆ ಬಂದಿ­ದ್ದರು. ಅವರನ್ನು ಸ್ವಾಗತಿಸಲು ಶಿಷ್ಟಾ­ಚಾರದ ಪ್ರಕಾರ ಮೇಯರ್‌ ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಆದರೆ, ಆಗ ಡಿಸಿಪಿಯಾಗಿದ್ದ ಕೆಂಪಯ್ಯ ಅವರು ಮೇಯರ್‌ ವಾಹನವನ್ನು ಬೇಗ ಒಳಗೆ ಬಿಡಲಿಲ್ಲ. ಬಿರುಸಿನ ವಾಗ್ವಾದ ನಡೆದಿತ್ತು. ಬೆನ್ನಹಿಂದೆ ರಾಜ್ಯಪಾಲರ ವಾಹನ ಬಂದಿದ್ದರಿಂದ ವಿವಾದ ಬೇಗ ಬಗೆಹರಿದು ನಮ್ಮನ್ನು ಒಳಗೆ ಬಿಡಲಾಯಿತು’ ಎಂದು ವಿವರಿಸುತ್ತಾರೆ.

‘ಶಿಷ್ಟಾಚಾರ ಪಾಲನೆಯಲ್ಲಿ ರಾಜ್ಯ­ಪಾಲರು, ಮುಖ್ಯಮಂತ್ರಿಗಳ ನಂತರದ ಸ್ಥಾನ ಮೇಯರ್‌ಗೆ ಇತ್ತು. ಈಗ ಅಷ್ಟು ಮಹತ್ವ ನೀಡಲಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಮೇಯರ್‌ ಎನ್‌.ಶಾಂತಕುಮಾರಿ ಹಾಗೂ ಬಿ.ಎಸ್‌. ಸತ್ಯನಾರಾಯಣ ಸೇರಿದಂತೆ ಹಲವು ಜನ ಮಾಜಿ ಮೇಯರ್‌ಗಳು ಸ್ವಾಮಿ ಅವರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸು­ತ್ತಾರೆ. ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಅವ­ರಿಗೆ ಸನ್ಮಾನಿಸಿ, ಬೀಳ್ಕೊಡ­ಲಾಯಿತು.

Write A Comment