ಕರ್ನಾಟಕ

‘ಹೀಗಿದ್ದರು ನಮ್ಮ ತಂದೆ’ ಅನಂತಮೂರ್ತಿ; ಅಪ್ಪನಿಗೆ ರಾಜಕೀಯ ಅಭಿಲಾಷೆ ಇತ್ತು: ಪುತ್ರಿ ಅನುರಾಧಾ

Pinterest LinkedIn Tumblr

pvec1decsURA-4

ಬೆಂಗಳೂರು: ‘ಜನರೊಂದಿಗೆ ಬೆರೆ­ಯಲು ರಾಜಕೀಯ ಕ್ಷೇತ್ರಕ್ಕಿಳಿಯುವ ಅಭಿಲಾಷೆ­ಯನ್ನು ತಂದೆಯವರು ಹೊಂದಿ­ದ್ದರು. ರಾಜ್ಯಸಭಾ ಸದಸ್ಯ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಆದರೆ, ರಾಜಕೀಯ­ದಲ್ಲಿನ ಹಣದ ಹರಿದಾಟದ ಬಗ್ಗೆ ಅವರಿಗೆ ಬೇಸರವಿತ್ತು’
–ತಂದೆ ಯು.ಆರ್‌.ಅನಂತಮೂರ್ತಿ ಅವರ ರಾಜಕೀಯ ಅಭಿಲಾಷೆ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಪುತ್ರಿ ಡಾ.ಅನುರಾಧಾ ವಿವೇಕ್‌.

ನಗರದಲ್ಲಿ ಭಾನುವಾರ ಸಂವಾದ ಟ್ರಸ್ಟ್‌ ಮತ್ತು ಜಯರಾಮ ಸೇವಾ ಮಂಡಳಿ­ಯು ಆಯೋಜಿಸಿದ್ದ ‘ಹೀಗಿ­ದ್ದರು ನಮ್ಮ ತಂದೆ’ ಉಪನ್ಯಾಸ ಮಾಲಿ­ಕೆ­ಯಲ್ಲಿ ಅವರು ಮಾತನಾಡಿದರು.

‘ರಾಮಕೃಷ್ಣ ಹೆಗಡೆ, ಜೆ.ಎಚ್‌.­ಪಟೇಲ್‌, ಜಾರ್ಜ್‌ ಫರ್ನಾಂಡಿಸ್‌ ಸೇರಿದಂತೆ ರಾಜಕೀಯ ವ್ಯಕ್ತಿಗಳೊಂದಿಗೆ ತಂದೆಯವರು ಉತ್ತಮ ಒಡನಾಟ ಹೊಂದಿದ್ದರು. ಅದೇ ಕಾರಣಕ್ಕಾಗಿ ತುಂಬಾ ಜನ  ವರ್ಗಾವಣೆ ಸೇರಿದಂತೆ ಇತರೆ ಕೆಲಸ ಮಾಡಿಸಿಕೊಳ್ಳಲು ಮನೆಗೆ ಬರುತ್ತಿದ್ದರು. ತೊಂದರೆಯಲ್ಲಿದ್ದವರ ಸಮಸ್ಯೆಗೆ ಸ್ಪಂದಿಸುತ್ತಿದ್ದರು ಕೂಡ. ಅದಕ್ಕಾಗಿ ಒಂದಿಬ್ಬರು ಹಣ ನೀಡಲು ಬಂದಿದ್ದರು. ಆಗ ಅಪ್ಪ ರೇಗಾಡಿದ್ದರು’ ಎಂದು ನೆನಪಿಸಿಕೊಂಡರು.

ಪ್ರೀತಿ ತೋರಿದವರೇ ಹೆಚ್ಚು: ‘ತಂದೆಯ­ವರನ್ನು ವಿರೋಧಿಸಿದ­ವರಿಗಿಂತ ಪ್ರೀತಿ ತೋರಿಸಿ­ದವರೇ ಹೆಚ್ಚು. ಅವರ ವಿಚಾರ­ಗಳಿಗೆ ಗೌರವ ನೀಡುತ್ತಿದ್ದರು. ಆ ಖುಷಿಯಲ್ಲಿ ಯುಆರ್‌ಎ, ತಮ್ಮನ್ನು ಟೀಕಿಸಿದ­ವರನ್ನು ಹಾಗೂ ವಿರೋಧಿಸಿದ­ವರನ್ನು ಮರೆಯುತ್ತಿದ್ದರು’ ಎಂದರು.

‘ಅಪ್ಪ ಅಪ್ಪಿ ತಪ್ಪಿಯೂ ಒಣ ಹರಟೆ­­ಯಲ್ಲಿ ದಿನ ಕಳೆಯುತ್ತಿರಲಿಲ್ಲ. ಯಾವಾ­ಗಲೂ ಒಂದು ಒಳ್ಳೆಯ ವಿಚಾರ ಎತ್ತಿ­ಕೊಂಡು ಚರ್ಚಿ­ಸುತ್ತಿದ್ದರು. ‘ತುಂಬಾ ಹತ್ತಿರ­ದ­ವರು ಮನಸ್ಸು ನೋಯಿಸಿದರೆ ಬೇಸರ ಮಾಡಿಕೊಳ್ಳುತ್ತಿ­ದ್ದರು. ಮನಸ್ಸು ನೋಯಿ­­ಸಿದರು ಎಂದಲ್ಲ. ಬದಲಾಗಿ ಇಷ್ಟು ಹತ್ತಿರವಾ­ಗಿದ್ದ­ವರು ಹೀಗೆ ಮಾಡಿ­ದ­ರಲ್ಲ ಎಂದು. ಆದರೆ, ಬೆಳಿಗ್ಗೆ ಎದ್ದು ಆ ವ್ಯಕ್ತಿಯ ಪುಸ್ತಕ ಬಿಡುಗಡೆಗೆ ಹೋಗುತ್ತಿ­ದ್ದರು. ಜನ ಬದಲಾಗುತ್ತಾರೆ ಎಂಬ ನಂಬಿಕೆ ಅವರಲ್ಲಿತ್ತು’ ಎಂದು ಅನಂತ­­ಮೂರ್ತಿ ವ್ಯಕ್ತಿತ್ವವನ್ನು ಬಿಚ್ಚಿಟ್ಟರು.

ಧರ್ಮದ ಬಗ್ಗೆ ಗೌರವವಿತ್ತು: ‘ಯುಆರ್‌ಎಗೆ ಧರ್ಮ ಗುರುಗಳನ್ನು ಕಂಡರೆ ಆಗುತ್ತಿರಲಿಲ್ಲ. ಧರ್ಮದ ಆಚ­­­ರಣೆಯಲ್ಲಿ ನಂಬಿಕೆ ಇರಲಿಲ್ಲ. ಆದರೆ, ಧರ್ಮದ ಬಗ್ಗೆ ಗೌರವವಿತ್ತು’ ಎಂದರು.

‘ತುಂಬಾ ಚೆನ್ನಾಗಿ ಬೈಬಲ್‌ ಓದಿ­ಕೊಂಡಿ­ದ್ದರು, ಪದೇ ಪದೇ ಬೈಬಲ್‌ ಖರೀದಿ­ಸುತ್ತಿದ್ದರು’ ಎಂದು ತಿಳಿಸಿದರು.

ಅಪ್ಪನಿಗೆ ತುಂಬಾ ಕೋಪ: ‘ಅಪ್ಪನಿಗೆ ಕೋಪ ಜಾಸ್ತಿ. ತಪ್ಪು ನಡೆದಿದ್ದು ಕಂಡರೆ ರೇಗಾಡುತ್ತಿದ್ದರು. ಜಗಳಕ್ಕೆ ಮುಂದಾಗು­ತ್ತಿದ್ದರು. ನಮಗಾಗಿಯೂ ಅವರು ಬೇರೆ­ಯವರ ಜೊತೆ ಜಗಳವಾಡಿದ್ದುಂಟು. ಗಂಗೋತ್ರಿಯಲ್ಲಿ ಶಾಲೆಯಲ್ಲಿ ನನಗೆ ಪ್ರವೇಶಾತಿ ನೀಡ­ಲಿಲ್ಲ­ವೆಂದು ಶಿಕ್ಷಕ­ರೊಂದಿಗೆ ಜಗಳವಾಡಿ­ದ್ದರು’ ಎಂದು ಆ ಕ್ಷಣಗಳನ್ನು ಮತ್ತೆ ನೆನಪಿಸಿಕೊಂಡರು.

‘ಒಮ್ಮೆ ರೈಲಿನಲ್ಲಿ ಒಬ್ಬರು ಅಪ್ಪನಿಗೆ ಹೊಡೆದಿದ್ದರು. ಇದನ್ನು ನಾವೆಲ್ಲಾ ನೆನಪಿಸಿಕೊಂಡು ಪದೇ ಪದೇ ರೇಗಿಸುತ್ತಿ­ದ್ದೆವು. ಸ್ನೇಹಿತ ಶಂಕರನಾರಾಯಣ ಭಟ್ಟ­ರೊಂದಿಗೆ ರೈಲಿನಲ್ಲಿ ಹೋಗುತ್ತಿ­ದ್ದಾಗ ಅಧಿಕಾರಿಯೊಬ್ಬರು ಅಪ್ಪನ ಸೂಟ್‌­ಕೇಸ್‌ ಬಿಚ್ಚಲು ಹೇಳಿದ್ದರು. ಒಳಗೆ ಏನೂ ಸಿಗಲಿಲ್ಲ. ಇದರಿಂದ ಸಿಟ್ಟಾದ ಅಪ್ಪ, ‘ಮೊದಲು ಸೂಟ್‌­ಕೇಸ್‌ ಮುಚ್ಚು’ ಎಂದು ಅಧಿಕಾರಿಗೆ ಹೊಡೆ­ಯಲು ಹೋಗಿದ್ದರು. ಆಗ ಭಟ್ಟರು ‘ಈತ ನನ್ನ ಅಣ್ಣ. ಕೊಂಚ ಬುದ್ಧಿ ಭ್ರಮಣೆಯಾಗಿದೆ’ ಎಂದು ಆ ಅಧಿಕಾರಿಯನ್ನು ಸಮಾಧಾನ­ಪಡಿಸಿದ್ದರು’ ಎಂದಾಗ ಸಭಾಂಗಣದಲ್ಲಿ ನಗುವಿನ ಅಲೆ.

ಕುಟುಂಬದ ನಿರ್ಧಾರ
‘ಅನಂತಮೂರ್ತಿ ಅವರ ಅಂತಿಮ ಸಂಸ್ಕಾರದ ವಿಧಿವಿಧಾನ ವೈಖರಿ ಸಂಪೂರ್ಣ ಕುಟುಂಬದ ನಿರ್ಧಾರ. ಈ ಬಗ್ಗೆ ಅಪ್ಪ ಯಾವುದೇ ಅಭಿಲಾಷೆ ಹೊಂದಿರಲಿಲ್ಲ. ಹೀಗೇ ಮಾಡಬೇಕು ಎಂದು ಹೇಳಿರಲಿಲ್ಲ. ಆದರೆ, ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯ­ಸಂಸ್ಕಾ­ರದ ಬಗ್ಗೆ ಅವರಿಗೆ ವಿರೋಧ­ವಿತ್ತು’ ಎಂದರು ಅನುರಾಧಾ.

Write A Comment