ಕರ್ನಾಟಕ

ಭೂಮಿ ಮಾರಿದರೆ ರೂ 50 ಲಕ್ಷ ಬೆಳೆದರೆ ರೂ. 5 ಸಾವಿರ: ಆತಂಕ

Pinterest LinkedIn Tumblr

pvec1decsSamajavadi-2

ಬೆಂಗಳೂರು: ‘ನಗರದ ಹೊರಭಾಗ­ದಲ್ಲಿ ಒಂದು ಎಕರೆ ಕೃಷಿ ಭೂಮಿಯ ಬೆಲೆ ರೂ. 50 ಲಕ್ಷದ ವರೆಗೆ ಇದೆ. ಅಲ್ಲಿ ಕೃಷಿ ಮಾಡಿದರೆ ಸಿಗುವುದು ರೂ. 5 ಸಾವಿರ ಮಾತ್ರ. ಇದು ಈಗಿನ ವೈರುಧ್ಯ’ ಎಂದು ರಾಜ್ಯ ಕೃಷಿ ಬೆಲೆ ಆಯೋ­ಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಬೇಸರ ವ್ಯಕ್ತಪಡಿಸಿದರು.

ಗಣಪತಿಯಪ್ಪ ನೆನಪಿನಲ್ಲಿ ಸಮಾಜ­ವಾದಿ ಅಧ್ಯಯನ ಕೇಂದ್ರ ಹಾಗೂ ಸಮ ಸಮಾಜ ವೇದಿಕೆಯ ವತಿಯಿಂದ ನಗರದ ಕುರುಬರ ಸಂಘದ ಸಭಾಂಗಣ­ದಲ್ಲಿ ಭಾನುವಾರ ನಡೆದ ‘ಕರ್ನಾಟಕ­ದಲ್ಲಿ ಭೂಚಳವಳಿಗಳು–ಹಿಂದೆ–ಮುಂದೆ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಭೂಮಿಯ ಬೆಲೆ ಗಗನಕ್ಕೆ ಏರಿದೆ. ಅದೇ ಭೂಮಿಯಲ್ಲಿ ರಾಗಿ ಬೆಳೆದರೆ 2–3 ಕ್ವಿಂಟಲ್‌ ರಾಗಿ ಇಳುವರಿ ಬರು­ತ್ತದೆ. ಭೂಮಿಗೆ ಸಂಬಂಧಪಟ್ಟ ವಿಷಯ­ಗಳು ಈಗ ವಿಚಿತ್ರ ತಿರುವು ಪಡೆಯುತ್ತಿವೆ’ ಎಂದರು.

‘ಯುಪಿಎ ನೇತೃತ್ವದ ಸರ್ಕಾರ ಭೂ­ಸ್ವಾಧೀನ ಹಾಗೂ ಪರಿಹಾರ ಮಸೂದೆ ಮಂಡಿಸಿತ್ತು. ಇದಕ್ಕೆ ಬಿಜೆಪಿಯೂ ಬೆಂಬಲ ಸೂಚಿಸಿತ್ತು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಿಂದಾಗಿ ಈ ಮಸೂದೆ ಕಾಯ್ದೆ ಆಗಲಿಲ್ಲ. ಒಂದು ವೇಳೆ ಈ ಕಾಯ್ದೆ ಜಾರಿಗೆ ಬಂದರೆ ಭೂಮಿಯನ್ನು  ಇಟ್ಟುಕೊಳ್ಳುವುದಕ್ಕಿಂತ ಮಾರಾಟ ಮಾಡುವುದೇ ಲಾಭ­ದಾಯಕ ಆಗುತ್ತದೆ’ ಎಂದರು.

ಅಂಕೋಲದ ಸಮಾಜವಾದಿ ಚಿಂತಕ ವಿಷ್ಣು ನಾಯಕ್‌ ಮಾತನಾಡಿ, ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 83 ಅರಣ್ಯ ಪ್ರದೇಶ ಇತ್ತು. ದಿನಕರ ದೇಸಾಯಿ ಅವರು ಕನಿಷ್ಠ 5 ಲಕ್ಷ ಎಕರೆಯನ್ನು ರೈತ­ರಿಗೆ ಮಂಜೂರು ಮಾಡಬೇಕು ಎಂದು ಹೋರಾಟ ಮಾಡಿದ್ದರು. ಇದರ ಫಲ­ವಾಗಿ ರಾಜ್ಯ ಸರ್ಕಾರ 65 ಸಾವಿರ ಎಕರೆ­ಯನ್ನು ರೈತರಿಗೆ ಹಂಚಿತ್ತು. ಆದರೆ, ಈ ವರೆಗೂ ಅವರಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಬ್ಯಾಂಕ್‌ಗಳು ಸಾಲ ನೀಡು­ತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯದ ಭೂಪ್ರದೇಶದ ಶೇ 30 ಕಾಡು ಇರಬೇಕು. ಉತ್ತರ ಕನ್ನಡ ಜಿಲ್ಲೆಯ ಜೊಯಿಡಾದಲ್ಲಿ ಶೇ 87 ಕಾಡು ಇದೆ. ಕೆಲವು ಕಡೆಗಳಲ್ಲಿ ಕನಿಷ್ಠ ಕಾಡು ಇಲ್ಲ. ಇಂತಹ ಪ್ರದೇಶಗಳಲ್ಲಿ ಕಾಡು ಬೆಳೆಸುವ ಕೆಲಸ ಆಗಬೇಕು. ಕಾಡು ಜಾಸ್ತಿ ಇರುವ ಭಾಗಗಳಲ್ಲಿ ಕೃಷಿ ಯೋಗ್ಯ ಭೂಮಿಯನ್ನು ಜನರಿಗೆ ಹಂಚಿಕೆ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ‘ರಾಜ್ಯದಲ್ಲಿ ಶೇ 40 ಭೂಮಿ ಬೇನಾಮಿ ಗೇಣಿದಾರರ ಕೈಯಲ್ಲಿ ಇದೆ. ಇದನ್ನು ಗೇಣಿದಾರರಿಗೆ ಹಂಚಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಉಪನ್ಯಾಸಕಿ ಅಂಬಿಕಾ, ಸಮಾಜವಾದಿ ಅಧ್ಯಯನ ಕೇಂದ್ರದ ಅಲಿಬಾಬಾ, ಸಮ ಸಮಾಜ ವೇದಿಕೆಯ ಕಾಸಿಮ್ ಸಾಬ್‌ ಉಪಸ್ಥಿತರಿದ್ದರು.

Write A Comment