ಕರ್ನಾಟಕ

ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭ; ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸಿ: ರಾಜ್ಯಪಾಲ

Pinterest LinkedIn Tumblr

padaka__

ಬೆಂಗಳೂರು, ನ. 26: ತಮ್ಮ ಕೆಲಸಕ್ಕೆ ಫಲಾಪೇಕ್ಷೆ ನಿರೀಕ್ಷಿಸದೆ ಸಾರ್ವಜನಿಕರ ಸೇವೆಯನ್ನು ಸೇವಾ ಮನೋಭಾವದಿಂದ ನಿರ್ವಹಿಸಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ರಾಜ್ಯದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇಂದಿಲ್ಲಿ ಕರೆ ನೀಡಿದ್ದಾರೆ.
ಬುಧವಾದ ರಾಜಭವನದ ಗಾಜಿನ ಮನೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಏರ್ಪಡಿಸಿದ್ದ 2014ನೆ ಸಾಲಿನ ರಾಷ್ಟ್ರಪತಿ ಪದಕ ಪ್ರದಾನ ಸಮಾರಂಭದಲ್ಲಿ 47ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಪದಕ ನೀಡಿ ಗೌರವಿಸಿ ಅವರು ಮಾತನಾಡಿದರು.
ನಾವು ಮಾಡುವ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ನಿಸ್ವಾರ್ಥವಾಗಿ ನಿರ್ವಹಿಸುವ ಜೊತೆಗೆ ಕೆಲಸಕ್ಕೆ ಸಮಯ ನಿಗದಿಪಡಿಸಿಕೊಳ್ಳದೆ ಸೇವಾ ಮನೋಭಾವದಿಂದ ಸಾರ್ವಜನಿಕ ಸೇವೆಯನ್ನು ಮಾಡಬೇಕು. ಫಲಾಪೇಕ್ಷೆಯನ್ನು ಬಯಸುವವರು ತಮ್ಮ ಕರ್ತವ್ಯವನ್ನು ಉತ್ತಮವಾಗಿ ನಿಭಾಯಿಸಲಾರರು ಎಂದು ಅವರು ತಿಳಿಸಿದರು.
ಕೆಲ ರಾಜ್ಯಗಳಲ್ಲಿ ರಾತ್ರಿ 10 ಗಂಟೆಯ ನಂತರ ಒಬ್ಬರೇ ಓಡಾಡಲು ಹೆದರುವ ಸ್ಥಿತಿ ಇದ್ದರೆ, ಮತ್ತೆ ಕೆಲವು ರಾಜ್ಯಗಳಲ್ಲಿ ರಾತ್ರಿ 12 ಗಂಟೆಯ ನಂತರವೂ ಒಬ್ಬರೇ ಧೈರ್ಯವಾಗಿ ಓಡಾಡಬಹುದಾಗಿದೆ. ಅಂತಹ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಬೇಕಾದರೆ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಪಾತ್ರ ಮಹತ್ವದ್ದು. ತಮ್ಮ ಪ್ರಾಣವನ್ನು ಲಕ್ಷಿಸದೇ ಶೌರ್ಯ ಪ್ರದರ್ಶಿಸಿ ಪದಕ ಪಡೆದವರಲ್ಲಿ ಕರ್ನಾಟಕದವರ ಪಾಲು ಹೆಚ್ಚಿರುವುದು ಹೆಮ್ಮೆಯ ಸಂಗತಿಯೆಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕಾನೂನಿನಲ್ಲಿ ಎಲ್ಲರೂ ಸಮಾನರು. ಕಾನೂನು ಉಲ್ಲಂಘನೆ ಮಾಡುವವರು ಯಾವುದೇ ವರ್ಗಕ್ಕೆ ಸೇರಿದ್ದರೂ ಕಾನೂನು ಮಾತ್ರ ಎಲ್ಲರಿಗೂ ಒಂದೇ. ಆದುದರಿಂದ ಪೊಲೀಸರು ಜಾತ್ಯತೀತ ಮನೋಭಾವದಿಂದ ಕಾರ್ಯನಿರ್ವಹಿಸುವ ಮೂಲಕ ಕಾನೂನು ಕೈಗೆತ್ತಿಕೊಳ್ಳುವವರು ಎಷ್ಟೇ ಶಕ್ತಿಶಾಲಿಯಾಗಿದ್ದು, ಹಣ ಬಲ ಹೊಂದಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಸೂಚಿಸಿದರು.
ಕಾನೂನನ್ನು ಎಲ್ಲರೂ ಗೌರವಿಸಬೇಕು. ಕಾನೂನಿಗೆ ಅಗೌರವ ತೋರಿಸುವವರಿಗೆ ಶಿಕ್ಷೆಯನ್ನು ವಿಧಿಸಿದರೆ ಮಾತ್ರ ಸಮಾಜದಲ್ಲಿ ಶಾಂತಿ ನೆಮ್ಮದಿಯನ್ನು ಕಾಣಲು ಸಾಧ್ಯ. ಇತ್ತೀಚೆಗೆ ಶಾಲಾ ಮಕ್ಕಳು ಮತ್ತು ಪುಟ್ಟ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವವರು ವಿಕೃತ ಮನಸ್ಸಿನವರಾಗಿರುತ್ತಾರೆ. ಇಂಥ ಹೇಯಕೃತ್ಯ ಪುನರಾವರ್ತನೆಯಾಗುವುದನ್ನು ತಡೆಯಬೇಕಾದರೆ ಅಪರಾಧಿಗಳಿಗೆ ಕಠಿಣ ಶಿಕ್ಷೆಯನ್ನು ನೀಡಿದರೆ ಮಾತ್ರ ಸಾಧ್ಯವೆಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಸಾರ್ವಜನಿಕರು ಶಾಂತಿ ನೆಮ್ಮದಿಯಿಂದ ಬದುಕಲು ಪೊಲೀಸ್ ಇಲಾಖೆಯ ಪಾತ್ರ ಮಹತ್ವದ್ದು. ಆದುದರಿಂದ ಇವರ ಸೇವೆಯ ಪ್ರಾಮುಖ್ಯತೆಯನ್ನು ಮನಗಂಡಿರುವ ಸರಕಾರ 94 ಸಾವಿರ ಹುದ್ದೆಗಳ ಭರ್ತಿಮಾಡಿದೆ. ರಾಜ್ಯದ ಆರೂವರೆ ಕೋಟಿ ಜನರು ನೆಮ್ಮದಿಯಿಂದ, ಭೀತಿಯಿಲ್ಲದೆ ಬದುಕುವಂತಹ ವ್ಯವಸ್ಥೆ ನಿರ್ಮಾಣ ಮಾಡುವ ಜವಾಬ್ದಾರಿ ಪೊಲೀಸ್ ಇಲಾಖೆಯ ಮೇಲಿದೆ ಎಂದು ಸಿದ್ದರಾಮಯ್ಯನವರು ಎಚ್ಚರಿಸಿದರು.
ಪೊಲೀಸರು ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಹಾಗೂ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಅವರು ತಮ್ಮ ಪ್ರಾಣದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅಂತಹ ಶೌರ್ಯ ಪ್ರದರ್ಶಿಸಿದ ಅಧಿಕಾರಿ ಸಿಬ್ಬಂದಿಯನ್ನು ಗುರುತಿಸುವುದು ಪೊಲೀಸ್ ಇಲಾಖೆ ಮಾತ್ರವಲ್ಲ ಸರಕಾರ ಹಾಗೂ ಸಮಾಜದ ಕೆಲಸವೂ ಹೌದು ಎಂದು ಸಿದ್ದರಾಮಯ್ಯ ನುಡಿದರು.
ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರೂ ಸೇವಾ ಅವಧಿಯಲ್ಲಿ ತಾರತಮ್ಯ ಮಾಡದೆ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದೇನೆಂಬ ತೃಪ್ತಿ ನಿವೃತ್ತಿಯ ನಂತರ ತಮಗೆ ಬಂದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ ಇಲ್ಲ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದರು.
ಗೃಹ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿರುವ ಅಧಿಕಾರಿ ಸಿಬ್ಬಂದಿಯವರನ್ನೆ ಶೌರ್ಯ ಪ್ರಶಸ್ತಿಗೆ ಸರಕಾರ ಶಿಫಾರಸು ಮಾಡಿದೆಯಲ್ಲದೆ, ಅವರ ಸೌಲಭ್ಯಕ್ಕಾಗಿ 1,800 ಕೋಟಿ ರೂ.ವೆಚ್ಚದಲ್ಲಿ 2 ವರ್ಷದಲ್ಲಿ 11 ಸಾವಿರ ಮನೆಗಳನ್ನು, 6 ವಸತಿ ಶಾಲೆ ಗಳನ್ನು ನಿರ್ಮಿಸಲಾಗುವುದು. ಅಂತಾರಾಷ್ಟ್ರೀಯ ಕ್ರೀಡೆಯಲ್ಲಿ ಪಾಲ್ಗೊಳ್ಳುವವರಿಗೆ ಪ್ರೋತ್ಸಾಹ ನೀಡುವ ಜೊತೆಗೆ ಎಲ್ಲರಿಗೂ ಆರೋಗ್ಯ ಯೋಜನೆ ಅಳವಡಿಸಲಾಗುವುದೆಂದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರೊಖುಮಾ ಪಚಾವೋ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Write A Comment