ರಾಷ್ಟ್ರೀಯ

ಡಿಸೆಂಬರ್ 31 ರೊಳಗೆ ಕೇಂದ್ರ ಸರ್ಕಾರಿ ನೌಕರರು ಆಸ್ತಿ ವಿವರ ಸಲ್ಲಿಸಬೇಕು

Pinterest LinkedIn Tumblr

Property

ನವದೆಹಲಿ: ಲೋಕಪಾಲ್ ನೀತಿಯ ಪ್ರಕಾರ ಡಿಸೆಂಬರ್ ೩೧ರೊಳಗೆ ಕೇಂದ್ರ ಸರ್ಕಾರದ ಎಲ್ಲ ನೌಕರರು ತಮ್ಮ, ತಮ್ಮ ಸಂಗಾತಿ ಮತ್ತು ಮಕ್ಕಳ ಆಸ್ತಿ ವಿವರಗಳನ್ನು ಸಲ್ಲಿಸಬೇಕೆಂದು ಲೋಕಸಭೆಗೆ ಬುಧವಾರ ತಿಳಿಸಲಾಗಿದೆ.

ಲೋಕಪಾಲ್ ನೀತಿಯ ಪ್ರಕಾರ ಜುಲೈನಲ್ಲಿ ತಿಳಿಸಲಾಗಿರುವ ಸೂಚನೆಗಳ ಪ್ರಕಾರ ಈಗಾಗಲೇ ವಿವರಗಳನ್ನು ಸಲ್ಲಿಸಿರುವ ಸರ್ಕಾರಿ ಸೇವಕರು ಕೂಡ ಸೆಪ್ಟಂಬರ್ ೧೫ ರೊಳಗೆ ನವೀಕರಿಸಿದ ವಿವರಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸೂಚಿಸಿತ್ತು. ಈ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವುದರಿಂದ ಆಸ್ತಿ ವಿವರ ಸಲ್ಲಿಸುವುದಕ್ಕೆ ಡಿಸೆಂಬರ್ ೩೧ ರವರೆಗೆ ಗಡವು ವಿಸ್ತರಿಸಲಾಗಿದೆ ಎಂದು ವೈಯಕ್ತಿಕ ಮತ್ತು ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಈಗ ನೌಕರರು ತಮ್ಮ ಸೇವೆಯ ನಿಯಮಗಳಿಗೆ ಸಲ್ಲಿಸಿರುವ ವಿವರಗಳಲ್ಲದೆ, ಲೋಕಪಾಲ್ ನೀತಿಯಡಿ ಕೂಡ ಹೊಸದಾಗಿ ವಿವರಗಳನ್ನು ಸಲ್ಲಿಸಬೇಕಿದೆ.

ಗ್ರೂಪ್ ಎ, ಬಿ ಮತ್ತು ಸಿ ನೌಕರರು ಈ ಹೊಸ ನೀತಿಯಡಿ ಆಸ್ತಿ ವಿವರ ಸಲ್ಲಿಸಬೇಕಿದೆ. ಸರ್ಕಾರದ ದಾಖಲೆಗಳ ಪ್ರಕಾರ ಈ ವಿಭಾಗಗಳಲ್ಲಿ ೨೬ಲಕ್ಷ ನೌಕರರಿದ್ದಾರೆ. ವೈಯಕ್ತಿಕ ಮತ್ತು ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಲಯ ವಿವರಗಳನ್ನು ಸಲ್ಲಿಸಲು ಹೊಸ ಅರ್ಜಿಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ತಮ್ಮ ಕೈನಲ್ಲಿರುವ ನಗದು, ಬ್ಯಾಂಕ್ ನಲ್ಲಿರುವ ನಗದು, ಬಾಂಡ್ ಗಳಲ್ಲಿ ಹೂಡಿಕೆ, ಶೇರು ಹೂಡಿಕೆ, ಮ್ಯೂಚುಯಲ್ ಫಂಡ್ ನಲ್ಲಿನ ಹೂಡಿಕೆ, ಇನ್ಶುರೆನ್ಸ್ ಪಾಲಿಸಿಗಳು, ವೈಯಕ್ತಿಕ ಸಾಲ, ಪ್ರಾವಿಡೆಂಟ್ ಫಂಡ್ ಮುಂತಾದವುಗಳನ್ನು ಈ ಅರ್ಜಿಯಲ್ಲಿ ತುಂಬಬೇಕಿದೆ. ಅಲ್ಲದೆ ನೌಕರರು ತಾವು, ತಮ್ಮ ಸಂಗಾತಿ ಮತ್ತು ಮಕ್ಕಳು ಹೊಂದಿರುವ ಮೋಟಾರು ವಾಹನಗಳು, ಏರ್ ಕ್ರಾಫ್ಟ್, ಹಡಗುಗಳು, ಚಿನ್ನ, ಬೆಳ್ಳಿ ಮುಂತಾದ ಬೆಲೆ ಬಾಳುವ ವಸ್ತುಗಳ ವಿವರಗಳನ್ನೂ ಸಲ್ಲಿಸಬೇಕಿದೆ.

Write A Comment