ಕರ್ನಾಟಕ

ಡಿಸೆಂಬರ್ ಅಂತಿಮ ವಾರದಲ್ಲಿ ಜಾತಿವಾರು ಜನಗಣತಿಗೆ ಚಾಲನೆ: ಸಚಿವ ಆಂಜನೇಯ

Pinterest LinkedIn Tumblr

anjaneya___________________

ಬೆಂಗಳೂರು, ನ.26: ರಾಜ್ಯ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಜಾತಿವಾರು ಜನಗಣತಿಗೆ ಡಿಸೆಂಬರ್ ಅಂತಿಮ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, 1930-31ರ ಬಳಿಕ ದೇಶದಲ್ಲಿ ಜಾತಿವಾರು ಜನಗಣತಿ ನಡೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಟ್ಟಿನಲ್ಲಿ ಆಸಕ್ತಿಯನ್ನು ಹೊಂದಿದ್ದು, ಎಲ್ಲ ಜಾತಿ, ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಜಾತಿವಾರು ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಲು ತೀರ್ಮಾನಿಸಿದ್ದಾರೆ ಎಂದರು.
ಜಾತಿವಾರು ಜನಗಣತಿ ಕಾರ್ಯಕ್ಕೆ 1.25 ಲಕ್ಷ ಸಿಬ್ಬಂದಿಯ ಅಗತ್ಯವಿದ್ದು, ಸರಕಾರದ ಎಲ್ಲ ಇಲಾಖೆಗಳ ಸಿಬ್ಬಂದಿಯನ್ನು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ನಿವೃತ್ತ ನೌಕರರು, ಸಂಘ-ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.
ಜಾತಿವಾರು ಜನಗಣತಿಯನ್ನು ನಡೆಸುವ ಸಂಬಂಧ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುವುದು. ಅಲ್ಲದೆ, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರ ಪಾಲಿಕೆಗಳ ಆಯುಕ್ತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಆಂಜನೇಯ ತಿಳಿಸಿದರು.
ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗ ನೀಡುವ ಸೂಚನೆಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸಲಾಗುತ್ತದೊ, ಅದೇ ಮಾದರಿಯಲ್ಲಿ ಈ ಸಮೀಕ್ಷೆ ಕಾರ್ಯವನ್ನು ಪರಿಗಣಿಸುವಂತೆ ಸೂಚನೆ ನೀಡಲಾಗಿದೆ. ಶೀಘ್ರದಲ್ಲೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ನಗರ ಪಾಲಿಕೆಗಳ ಆಯುಕ್ತರಿಗೆ ಈ ಸಂಬಂಧ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಸ್ವಾತಂತ್ರ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಜಾತಿವಾರು ಜನಗಣತಿ ಸಮೀಕ್ಷೆ ನಡೆಸಲಾಗುತ್ತಿದ್ದು, ಬೇರೆ ರಾಜ್ಯಗಳಿಗೂ ಈ ಸಮೀಕ್ಷೆ ಮಾದರಿಯಾಗಲಿದೆ. ಸಮೀಕ್ಷೆಗೆ ಮುಖ್ಯಮಂತ್ರಿ 117 ಕೋಟಿ ರೂ.ಗಳನ್ನು ಒದಗಿಸಿದ್ದು, ಈಗಾಗಲೇ 35 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 1.28 ಕೋಟಿ ಮನೆಗಳಿದ್ದು, ಎರಡು ತಿಂಗಳೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. 120ರಿಂದ 150 ಮನೆಗಳಿಗೆ ಒಂದು ಬ್ಲಾಕ್ ಎಂದು ಗುರುತಿಸಲಾಗಿದ್ದು, ಒಟ್ಟು 1.26 ಲಕ್ಷ ಬ್ಲಾಕ್‌ಗಳಿವೆ. ಪ್ರತಿಯೊಂದು ಬ್ಲಾಕ್ ಸಮೀಕ್ಷೆಗೆ 5,500 ರೂ.ಗಳನ್ನು ನೀಡಲಾಗುವುದು. ಎರಡು ತಿಂಗಳೊಳಗೆ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಲಿದೆ. ಬಿಇಎಲ್ ಕಂಪೆನಿ ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ತಯಾರಿಸಿದೆ ಎಂದು ಆಂಜನೇಯ ವಿವರಿಸಿದರು.
ನಾಮಫಲಕ, ರೇಡಿಯೋ, ಗೋಡೆ ಬರಹ, ಮಾಧ್ಯಮಗಳಲ್ಲಿ ಜಾಹೀರಾತು ಮೂಲಕ ಜನರಲ್ಲಿ ಅರಿವು ಮೂಡಿಸಲಾಗುವುದು. ಅಲ್ಲದೆ, ಸಾರ್ವಜನಿಕರ ಸ್ಪಂದನೆಯನ್ನು ಹೆಚ್ಚಿಸಲು ಚಲನಚಿತ್ರ ನಟರು, ಕ್ರೀಡಾಪಟುಗಳು ಸೇರಿದಂತೆ ಇನ್ನಿತರರನ್ನು ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜ್ ಮಾತನಾಡಿ, ಸುಪ್ರೀಂಕೋರ್ಟ್ ಕಳೆದ ಸೆ.25ರಂದು ನೀಡಿರುವ ತೀರ್ಪಿನಲ್ಲಿ ಜಾತಿವಾರು ಜನಗಣತಿ ಮಾಡಬಾರದು ಎಂದು ತಿಳಿಸಿಲ್ಲ. ಈ ವಿಚಾರ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸೇರಿರುವುದರಿಂದ ಅವರೇ ತೀರ್ಮಾನ ಕೈಗೊಳ್ಳಬಹುದೆಂದು ಸೂಚಿಸಿದೆ ಎಂದರು.

Write A Comment