ದುಬೈ: ದುಬೈಯ ಯಕ್ಷಗಾನದ ಮಾತೃ ಸಂಸ್ಥೆಯಾದ ಯಕ್ಷಮಿತ್ರರು ದುಬೈಯ 21ನೇ ವರ್ಷದ ಯಕ್ಷ ಸಂಭ್ರಮ-2024 ರ ಪ್ರಯುಕ್ತ ಹಮ್ಮಿಕೊಂಡಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಎಂಬ ಭಕ್ತಿ ಪ್ರಧಾನ ಯಕ್ಷಗಾನ ಪ್ರಸಂಗವು ಯಕ್ಷ ಗುರು ಕಿಶೋರ್ ಗಟ್ಟಿ ಉಚ್ಚಿಲ ಇವರ ದಕ್ಷ ನಿರ್ದೇಶನದಲ್ಲಿ ಊರಿನ ಹಿರಿಯ ಕಲಾವಿದರು ಹಾಗೂ ಯಕ್ಷಮಿತ್ರರು ದುಬೈಯ ಸದಸ್ಯರ ಕೂಡುವಿಕೆಯಲ್ಲಿ, ದುಬೈಯ ಎಮಿರೇಟ್ಸ್ ಥಿಯೇಟರ್ ನ ಸಭಾಂಗಣದಲ್ಲಿ ನಿರ್ಮಿಸಲಾದ ವಿದ್ಯುತ್ ದೀಪಾಲಂಕೃತವಾದ ಭವ್ಯ ರಂಗ ಮಂಟಪದಲ್ಲಿ ಅದ್ಧೂರಿಯಾಗಿ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಾಸುದೇವ ಭಟ್ ಪುತ್ತಿಗೆ, ಜೇಮ್ಸ್ ಮೆಂಡೋನ್ಸ , ಅಬ್ದುಲ್ ಲತೀಫ್ ಮೂಲ್ಕಿ, ಹಾಗೂ ತಾಯ್ನಾಡಿನಿಂದ
ಪ್ರಾಯೋಜಕರಾಗಿ ಬಂದ ವಿಠ್ಠಲ್ ಕುಲಾಲ್, ಸಂದೇಶ್ ಶೆಟ್ಟಿ, ದಿನೇಶ್ ಶೆಟ್ಟಿ, ಯಜ್ಞೇಶ್.ಸಿ. ಸುವರ್ಣ ರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉದ್ಯಮಿಗಳಾದ ಹರೀಶ್ ಶೇರಿಗಾರ್, ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ದಿವಾಕರ್ ಶೆಟ್ಟಿ, ಹರೀಶ್ ಬಂಗೇರ, ಸತೀಶ್ ಪೂಜಾರಿ, ಗುಣಶೀಲ್ ಶೆಟ್ಟಿ, ಶಾಮ್ ಭಟ್, ಸದನ್ ದಾಸ್, ನಾಗರಾಜ್ ರಾವ್ ಪದ್ಮರಾಜ್ ಎಕ್ಕಾರ್ ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತಾಯ್ನಾಡಿನಿಂದ ಬಂದ ಹಿರಿಯ ಕಲಾವಿದರುಗಳಾದ ಗಣೇಶ್ ಭಟ್ ಹೊಸಮೂಲೆ, ಲೋಕೇಶ್ ಕಟೀಲು, ಡಾ. ಮಹೇಶ್ ಕುಮಾರ್ ಸಾಣೂರು, ಮತ್ತು ಪ್ರಾಯೋಜಕರಾಗಿ ಬಂದ ವಿಠ್ಠಲ್ ಕುಲಾಲ್ ಇವರುಗಳನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಯಕ್ಷಮಿತ್ರರು ತಂಡದ ರೂವಾರಿಯಾದ ಚಿದಾನಂದ ಪೂಜಾರಿ ಹಿರಿಯ ಸದಸ್ಯರುಗಳಾದ ಸತೀಶ್ ಶೆಟ್ಟಿ , ದಯಾ ಕಿರೋಡಿಯನ್, ಜಯಂತ್ ಶೆಟ್ಟಿ, ಅಶೋಕ್ ತೋನ್ಸೆ, ದಿನ್ ರಾಜ್ ಶೆಟ್ಟಿ , ನೋಯಲ್ ಡಿ ಅಲ್ಮೆಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಪ್ರಾಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಆರತಿ ಅಡಿಗ ಹಾಗೂ ರಿತೇಶ್ ಅಂಚನ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೇವರ ಚೌಕಿ ಪೂಜೆಯೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು ಪೂರ್ವರಂಗದ ಬಾಲ ಗೋಪಾಲರು ,ದುಬೈಯಲ್ಲಿ ಪ್ರಪ್ರಥಮ ಬಾರಿಗೆ ಬ್ಯಾಂಡ್ ವಾದ್ಯಗಳ ಸದ್ಧಿನೊಂದಿಗೆ,ಏಳು ಜಲ ದುರ್ಗೆಯರ ವಿಭಿನ್ನ ಶೈಲಿಯಲ್ಲಿ ಪ್ರತ್ಯಕ್ಷ , ಗುಳಿಗ ಹಾಗೂ ವರಾಹನ ಅಬ್ಬರದ ರಂಗ ಪ್ರವೇಶ ಹೀಗೆ ಹಲವು ವೈವಿದ್ಯತೆಗಳಿಂದ ಸಂಪನ್ನ ಗೊಂಡ ಪ್ರಸಂಗವು ಸಭಾಂಗಣದಲ್ಲಿ ಕಿಕ್ಕಿರಿದು ಸೇರಿದ ಯಕ್ಷ ಕಲಾಭಿಮಾನಿಗಳ ಮನಸೂರೆ ಗೊಳಿಸಿತು.ಯಕ್ಷಗಾನದ ಕೊನೆಯವರೆಗೂ ಎಲ್ಲಾ ಪ್ರೇಕ್ಷಕರು ಕೂತಲ್ಲಿಂದ ಏಳದೆ, ಮೂಕವಿಸ್ಮಿತಾರಾಗಿ ಸಂಪೂರ್ಣ ಯಕ್ಷಗಾನವನ್ನು ನೋಡಿ ಕಲಾವಿದರನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.ಯಕ್ಷಮಿತ್ರರು ದುಬೈಯ ಸರ್ವ ಸದಸ್ಯರು ಹಾಗೂ ಕಾರ್ಯಕರ್ತರ ಕಠಿಣ ಪರಿಶ್ರಮದಿಂದ ಕಾರ್ಯಕ್ರಮವು ಚೊಕ್ಕವಾಗಿ ಯಶಸ್ವಿಯಾಗಿ ಮೂಡಿಬಂದಿತು.
Comments are closed.