ಬೆಂಗಳೂರು: ತಮ್ಮ ದೂರು ದುಮ್ಮಾನಗಳನ್ನು ಪಾಲಿಕೆಗೆ ತಲುಪಿಸಲು ಪರದಾಡುತ್ತಿದ್ದ ನಾಗರಿಕರಿಗೆ ಸ್ಪಂದಿಸಲು ಬಿಬಿಎಂಪಿ ನೂತನ ಮೊಬೈಲ್ ಆಪ್ ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪಾಲಿಕೆ ವ್ಯಾಪ್ತಿಯ 20 ಇಲಾಖೆಗಳು ಅಧಿಕಾರಿಗಳಿಗೆ ಮೊಬೈಲ್ ನಿಂದಲೇ ದೂರು ಸಲ್ಲಿಸಬಹುದು.
ನೂತನ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಷನ್ ಗಳಾದ ಬಿಬಿಎಂಪಿ ಸಹಾಯ ಹಾಗೂ ಟ್ರೀ ಕಟಿಂಗ್ ಆಪ್ ಗಳಿಗೆ ಪಾಲಿಕೆ ಕಚೇರಿಯಲ್ಲಿ ಜ.22 ರಂದು ಚಾಲನೆ ನೀಡಿ ಮಾತನಾಡಿದ ಮೇಯರ್ ಬಿಎನ್ ಮಂಜುನಾಥರೆಡ್ಡಿ, ರಾಜ್ಯದಲ್ಲಿ ಮೊಬಲ ಬಾರಿ ಮಹಾನಗರ ಪಾಲಿಕೆಯಿಂದ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಮೂಲ ಸೌಕರ್ಯ, ರಸ್ತೆ, ತ್ಯಾಜ್ಯ ನಿರ್ವಹಣೆ, ಕಟ್ಟಡ ಯೋಜನೆಗಳು, ಆಸ್ತಿ ತೆರಿಗೆ, ಆರೋಗ್ಯ, ಸಾರ್ವಜನಿಕ ಸುರಕ್ಷತೆ, ಕಲ್ಯಾಣ, ಪರಿಸರ, ಮರಗಳ ಕಟಾವು ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಆಪ್ ಮೂಲಕ ಸಲ್ಲಿಸಬಹುದು ಎಂದರು.
ಈ ಆಪ್ ಶುಕ್ರವಾರದಿಂದಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸುಲಭ ಹಾಗೂ ಬಳಕೆದಾರ ಸ್ನೇಹಿ ನಾಗರಿಕರ ಆಪ್ ಇದಾಗಿದೆ. ಇದರೊಂದಿಗೆ ದಿನದ 24 ಗಂಟೆ ಕಾಲ್ ಸೆಂಟರ್ ಕಾರ್ಯನಿರ್ವಹಿಸಲಿದ್ದು, ನಾಗರಿಕರು ಯಾವುದೇ ಸಮಯದಲ್ಲಿ ತಮ್ಮ ಅಹವಾಲು ಸಲ್ಲಿಸಬಹುದು.