ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಫ್ಯಾಷನ್ ಕೂಡ ಒಂದು. ಆ ಕ್ಷೇತ್ರಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಹೊಸಬರು ಅತ್ತ ವಾಲುತ್ತಿದ್ದಾರೆ. ಉದ್ಯಾನ ನಗರಿಯ ಜನರು ಕೂಡ ತಾವೇನೂ ಹಿಂದೆ ಇಲ್ಲ ಎನ್ನುವಂತೆ ಅದಕ್ಕೆ ಲಗ್ಗೆ ಇಡುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ನಗರದ ಐಐಎಫ್‌ಟಿಯ ಫ್ಯಾಷನ್ ಮ್ಯಾನೇಜ್‌ಮೆಂಟ್ ಕೋರ್ಸ್‌ನ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಫ್ಯಾಷನ್ ಡಿಸೈನಿಂಗ್ ಹಾಗೂ ಬೂಟಿಕ್ ವಿದ್ಯಾರ್ಥಿಗಳು.
ಇತ್ತೀಚಿಗೆ ಇವರು ಫ್ರಾನ್ಸ್‌ನಲ್ಲಿ ನಡೆದ ‘ಪ್ಯಾರಿಸ್ ಫ್ಯಾಷನ್ ವೀಕ್’ನಲ್ಲಿ ಪಾಲ್ಗೊಂಡು ಫ್ಯಾಷನ್ ಜಗತ್ತಿನ ಆಳ ಅಗಲವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
‘ಅಂತರರಾಷ್ಟ್ರೀಯ ಖ್ಯಾತಿಯ ಮಾರ್ಟಿನ್ ಮೇಸನ್ ಮಾರ್ಗೆಲ್ಲ ಅವರೊಂದಿಗೆ ಕೆಲಸ ಮಾಡುವ ಸದವಕಾಶ ಈ ಫ್ಯಾಷನ್ ವೀಕ್‌ನಲ್ಲಿ ಸಿಕ್ಕಿತ್ತು. ನಿಜಕ್ಕೂ ಇದೊಂದು ಒಳ್ಳೆಯ ಛಾನ್ಸ್’ ಎಂದು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಫ್ಯಾಷನ್ ಟೂರ್ ಅನುಭವವನ್ನು ಹೇಳಿಕೊಳ್ಳುತ್ತಾರೆ. ಇಷ್ಟೇ ಅಲ್ಲದೆ, ಐಐಎಫ್‌ಟಿ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಖ್ಯಾತಿಯ ವಿನ್ಯಾಸಕ ಎಲೀ ಸಾಬ್ ಅವರ ಫ್ಯಾಷನ್ ಷೋನಲ್ಲಿಯೂ ಭಾಗವಹಿಸಿದ್ದರು.
ಫ್ಯಾಷನ್ ಕ್ಷೇತ್ರದಲ್ಲಿ ವಿಶೇಷ ಅನುಭವವುಳ್ಳ ಸೋಫಿ ಹಾಗೂ ಆಡಮಿ ಅವರಿಂದಲೂ ಹಲವು ವಿಷಯಗಳನ್ನು ತಿಳಿದುಕೊಂಡು ಬಂದಿರುವ ಅವರು, ಈಗ ನಗರದ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಶುಕ್ರವಾರ ತಮ್ಮ ವಿನ್ಯಾಸದ ಉಡುಗೆಗಳನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
*ಇಂದಿನ ಷೋಗಾಗಿ ಕ್ರಿಸ್ಟಲೈನ್ ಸ್ಪೇಸ್ ಎಂಬ ತ್ರಿಡಿ ಡೈಮೆನ್‌ಷನ್ ಇರುವ ವಿನ್ಯಾಸ ಮಾಡಿದ್ದೇನೆ. ಈ ವಿನ್ಯಾಸ ನೋಡುಗರ ಮನ ಸೆಳೆಯಲಿದೆ
ಜಿ.ರಂಜಿತಾ, ವಸ್ತ್ರ ವಿನ್ಯಾಸಕಿ
‘ವಿದ್ಯಾರ್ಥಿಗಳು ವಿನ್ಯಾಸಗೊಳಿಸಿರುವ 184 ಉಡುಗೆಗಳನ್ನು ಕಾಲೇಜಿನ 93 ವಿದ್ಯಾರ್ಥಿಗಳು ಧರಿಸಿ ರ್‌್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ’ ಎಂದು ಕಾಲೇಜಿನ ನಿರ್ದೇಶಕ ಬಿ.ವೇದಗಿರಿ ತಿಳಿಸಿದ್ದಾರೆ.
ದೇಶೀಯ ವಿನ್ಯಾಸದ ಜೊತೆಗೆ ವಿದೇಶಿ ವಸ್ತ್ರ ವಿನ್ಯಾಸದಲ್ಲಿ ರೂಪದರ್ಶಿಯರು ಮಿಂಚಲಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳೇ ಎಲ್ಲ ರೂಪದರ್ಶಿಗಳಿಗೆ ವಸ್ತ್ರವಿನ್ಯಾಸ ಮಾಡಿಲಿರುವುದು ವಿಶೇಷ.
ಕಾಲೇಜಿನ ವಿದ್ಯಾರ್ಥಿಗಳಾದ ಜಿ.ರಂಜಿತಾ, ಎಸ್.ಪೂಜಾಶ್ರೀ, ಜಿ.ಪಾವನಾ ಜಾನಕಿ, ರೂಪೇಶ್ ಕುಮಾರ್, ಆರ್.ಎಲ್.ಬೃಂದಾ, ಮೇಘಾ ಭರಣಿ ಸೇರಿದಂತೆ ಮತ್ತಿತರ ವಿದ್ಯಾರ್ಥಿಗಳು ವಿನ್ಯಾಸ ಮಾಡಿರುವ ಉಡುಗೆಗಳನ್ನು ಧರಿಸಿ ರ್‌್ಯಾಂಪ್ ಮೇಲೆ ಹೆಜ್ಜೆ ಹಾಕಲಿದ್ದಾರೆ.
ಎಲ್ಲಿ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್.
ಯಾವಾಗ: ಸಂಜೆ 4.