*ಕಟೀಲು ಕ್ಷೇತ್ರ ಪಾರಂಪರಿಕವಾಗಿ ವಿಶ್ವವನ್ನೇ ಆಕರ್ಷಿಸುತ್ತಿದೆ: ಸಚಿವ ಯು.ಟಿ. ಖಾದರ್*
(ಚಿತ್ರ, ವರದಿ: ಯೋಗೀಶ್ ಕುಂಭಾಸಿ)
ಮಂಗಳೂರು: ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ, (ಯುಎಇ) ಇವರ ವತಿಯಿಂದ ಆಗಸ್ಟ್ 8 ಶನಿವಾರದಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಜರುಗಿತು.


ಆರೋಗ್ಯ ಸಚಿವ ಯು.ಟಿ. ಖಾದರ್ ಫರೀದ್ ಅವರು ಮಾತನಾಡಿ, ಧಾರ್ಮಿಕ ಕ್ಷೇತ್ರಕ್ಕೆ ಕರಾವಳಿ ಪರಂಪರೆಗೆ ಆಸ್ರಣ್ಣ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಪರಿಚಯಿಸುವ ಕಾರ್ಯ ಇಂದಿಗೂ ಚಿರಸ್ಥಾಯಿ. ಆಸ್ರಣ್ಣರು ತಮ್ಮ ಜೀವಿತಾವಧಿಯಲ್ಲಿ ಮಾಡಿದ ಸೇವಾ ಕಾರ್ಯ ಎಲ್ಲರಿಗೂ ಮಾದರಿ ಹಾಗೂ ಆದರ್ಶಪ್ರಾಯ. ಸಂಸ್ಕೃತಿ, ಯಕ್ಷಗಾನ ಕಲೆಗೆ ಅವರು ನೀಡಿದ ಕೊಡುಗೆ ಅಪಾರ. ಮುಂದಿನ ಪೀಳಿಗೆಗೆ ಅದು ತಲುಪುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಸಂಸ್ಮರಣೆ ಕಾರ್ಯಕ್ರಮ ಸ್ತುತ್ಯರ್ಹ. ಕಟೀಲು ಕ್ಷೇತ್ರ ಪಾರಂಪರಿಕವಾಗಿ ವಿಶ್ವವನ್ನೇ ಆಕರ್ಷಿಸುತ್ತಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸರಕಾರ ಮಟ್ಟದಲ್ಲಿ ಅಗತ್ಯ ಸಹಕಾರ ನೀಡಲು ಕ್ರಮವಹಿಸಲಾಗುತ್ತದೆ ಎಂದರು.

ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ, ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಲಾ ಪೋಷಕರನ್ನು, ಕಲಾವಿದರನ್ನು ಸನ್ಮಾನಿಸುವುದು ಒಂದು ಮಹತ್ವದ ಕಾರ್ಯ ಎಂದು ನಾವು ನಂಬಿದ್ದೇವೆ. ಯಕ್ಷಗಾನ ದೇವರಿಗೆ ಪ್ರಿಯವಾದ ಸೇವೆ ಎಂದರು.

ಮೂಡಬಿದಿರೆ ಆಳ್ವಾಸ್ ಪ್ರತಿಷ್ಟಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸಿ ಮಾತನಾಡಿ, ಗೋಪಾಲಕೃಷ್ಣ ಅಸ್ರಣ್ಣರವರ ಕೆಲಸಕಾರ್ಯಗಳು ಚಿರಸ್ಥಾಯಿ ಹಾಗೂ ಮಾದರಿ. ಪದ್ಮನಾಭ ಕಟೀಲು, ಲಕ್ಷ್ಮೀನಾರಾಯಣ ಅಸ್ರಣ್ಣ, ಕಲಾವಿದರು ಸಂಸ್ಮರಣೆ ಮಾಡುತ್ತಿದ್ದಾರೆ. ಆಸ್ರಣ್ಣರು ಧಾರ್ಮಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ವಿಶೇಷ ಗುಣಗಳನ್ನು ಹೊಂದಿದವರು. ಗುತ್ತಿನ ಜೊತೆಗೆ ಅಮೂಲ್ಯ ಸಂಬಂಧಗಳನ್ನು ಇಟ್ಟುಕೊಂಡವರು. ಈ ಕ್ಷೇತ್ರದ ಧಾರ್ಮಿಕ ವಿಧಿಗಳ ಜೊತೆ, ಊರಪರವೂರ ಭಕ್ತರ ಜೊತೆಗೆ ಮುಂಬಯಿ ಹಾಗೂ ಕಟೀಲಿನ ನಡುವೆ ಕೊಂಡಿ ನಿರ್ಮಿಸಿ ಬಹುಮುಖಿಯಾಗಿ ಕೆಲಸ ಮಾಡಿದವರು. ಧಾರ್ಮಿಕ, ಅನ್ನದಾನ ಹಲವು ವಿಚಾರದಲ್ಲಿ ಕಟೀಲು ರಾಜ್ಯದಲ್ಲಿ ವಿಶೇಷ ಸ್ಥಾನ ಹೊಂದಿದೆ. ಕಟೀಲು ಕ್ಷೇತ್ರದ ಬೆಳವಣಿಗೆಗೆ ಅಹರ್ನಿಶಿ ದುಡಿದವರು. ಫಲಾಪೇಕ್ಷೆ ಇಲ್ಲದೆ ಹಣ ಸಂಪಾದನೆಯ ಮಾರ್ಗಕ್ಕೆ ಹೋಗದೆ ಬಡವರ ಕಷ್ಟಕ್ಕೆ ಸ್ಪಂದಿಸಿದ ಜನಾನುರಾಗಿಯಾಗಿದ್ದರು. ನಾಟಿ ವೈದ್ಯರಾಗಿಯೂ ಅವರ ಸೇವೆ ಅಪಾರ. ಸಹೋದರರ ಜೊತೆ ಸೇರಿ ದೇವರ ಪೂಜೆ ನಡೆಸುತ್ತಿದ್ದರು. ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಅನುರಾಗ ಹೊಂದಿದ್ದು ಕಟೀಲು ಮೇಳಗಳ ಪ್ರಾರಂಭದ ಪಂಚಾಂಗ ಹಾಕಿದ್ದರು. ಕಟೀಲಿನ ಆಸ್ರಣ್ಣ ಅವರು ಶುಭ ಕಾರ್ಯಕ್ಕೆ ಬರಲೇಬೇಕೆಂಬಷ್ಟರ ಮಟ್ಟಿಗೆ ಜನರಿಗೆ ಹತ್ತಿರವಾಗಿದ್ದರು. ಗೋಪಾಲಕೃಷ್ಣ ಆಸ್ರಣ್ಣ ಅಂದರೆ ಆಸರೆಯ ಅಣ್ಣ ಎಂದವರು ತಿಳಿಸಿದರು.

ಕಟೀಲು ಮೇಳದ ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರು ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆ ಮಾಡಿ ಸರ್ವತ್ಯಾಗದ ಪರಿಪೂರ್ಣತೆಯ ಮನಸ್ಥಿತಿಯನ್ನು ಹೊಂದಿದ್ದ ಆಸ್ರಣ್ಣರು ಆದರ್ಶಪ್ರಾಯರು ಎಂದರು.
ಶ್ರೀ ಚಾಮುಂಡೇಶ್ವರಿ ಅರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ, ಆಸ್ರಣ್ಣರು ಉತ್ತಮ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಹರೀಶ್ ಶೇರಿಗಾರ್ ಅವರಿಗೆ ‘ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಕಲಾಪೋಷಕ ಪ್ರಶಸ್ತಿ’: ಈ ಬಾರಿಯ ಪ್ರತಿಷ್ಠಿತ ‘ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಕಲಾಪೋಷಕ ಪ್ರಶಸ್ತಿ’ಯನ್ನು ದುಬೈನ ‘ಆಕ್ಮೆ’ ಬಿಲ್ಡಿಂಗ್ ಮೆಟಿರಿಯಲ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ, ಮಂಗಳೂರು ಮೂಲದ ಹರೀಶ್ ಶೇರಿಗಾರ್ ಅವರಿಗೆ ಪ್ರದಾನಿಸಲಾಯಿತು. ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.
ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಕಲಾವಿದ ಪ್ರಶಸ್ತಿಯನ್ನು ಕಟೀಲು ಮೇಳದ ಅನುಭವಿ ವೇಷಧಾರಿ ನಾರಾಯಣ ಕುಲಾಲ್ ಅವರಿಗೆ ನೀಡಲಾಯಿತು.
ಮೂವರಿಗೆ ಸ್ಮೃತಿಗೌರವ ಪ್ರಶಸ್ತಿ: ದಾರ್ಶನಿಕ ಯಜಮಾನ ಕಲ್ಲಾಡಿ ವಿಠಲ ಶೆಟ್ಟಿ ಸ್ಮೃತಿಗೌರವ ಪ್ರಶಸ್ತಿಯನ್ನು ಬೊಳ್ನಾಡು ಗುತ್ತಿನ ಚಂದ್ರಹಾಸ್ ಎಂ. ರೈ ಬೊಲ್ಲಾಳು, ಅಗರಿ ಶ್ರೀನಿವಾಸ ಭಾಗವತರ ನೆನಪಿನಲ್ಲಿ ಸ್ಮೃತಿಗೌರವ ಹಾಸ್ಯ ಕಲಾವಿದ ರವಿಶಂಕರ್ ವಳಕುಂಜ, ಚಂಡೆಯ ಗುರಿಕಾರ ನೆಡ್ಲೆ ನರಸಿಂಹ ಭಟ್ ಸ್ಮೃತಿಗೌರವ ಪ್ರಶಸ್ತಿಯನ್ನು ಚೆಂಡೆ ಕಲಾವಿದ ಮೋಹನ್ ಶೆಟ್ಟಿಗಾರ್ ಅವರಿಗೆ ಪ್ರದಾನಿಸಲಾಯಿತು.


ಹೊರನಾಡ ಕನ್ನಡಿಗರಿಗೆ ಗೌರವ: ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ನೆನಪಿನಲ್ಲಿ ಹೊರನಾಡ ಸಂಘಟನಾ ಗೌರವವನ್ನು ದುಬೈ ಬಿಲ್ಲವಾಸ್ ಅಧ್ಯಕ್ಷ ದೀಪಕ್ ಎಸ್.ಪಿ., ದುಬೈ ಯಕ್ಷ ಮಿತ್ರರು ಸ್ಥಾಪಕ ಸದಸ್ಯ ದಯಾನಂದ ಕಿರೋಡಿಯನ್, ಹೊರನಾಡ ಸಮಾಜ ಸೇವಕ ಗೌರವವನ್ನು ಸುದರ್ಶನ ಹೆಗ್ಡೆ ಕಾರ್ಕಳ ಅವರಿಗೆ ನೀಡಲಾಯಿತು.
ಅರುಣೋಧರ್ ರೈ, ಬಾಬು ಶೆಟ್ಟಿ ಪೆರಾರೆ, ಸಸಹಿತ್ಲು ಕ್ಷೇತ್ರದ ಚಂದ್ರಶೇಖರ್ ಬೆಳ್ಚಡ ಅವರನ್ನು ಸನ್ಮಾನಿಸಲಾಯಿತು. ಹಾಗೆಯೇ ಸುವರ್ಣ ಪ್ರತಿಷ್ಠಾನದ ವತಿಯಿಂದ ಕಟೀಲು ಮೇಳದ ಯಕ್ಷಗಾನ ಕಲಾವಿದರನ್ನು ಸನ್ಮಾನಿಸಲಾಯಿತು. 100ನೇ ಆಟ (ಯಕ್ಷಗಾನ) ಮಾಡಿಸಿದ ಪದ್ಮನಾಭ ಕಟೀಲು ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉದ್ಯಮಿ ಹರೀಶ್ ಶೇರಿಗಾರ್ ಅವರು, ಕಟೀಲು ಕ್ಷೇತ್ರದಲ್ಲಿ ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಹೆಸರಿನಲ್ಲಿ ಪಡೆಯುತ್ತಿರುವ ಪ್ರಶಸ್ತಿಯು ಇನ್ನಷ್ಟು ಸಾಮಾಜಿಕ ಜವಬ್ದಾರಿಯನ್ನು ಹೆಚ್ಚಿಸಿದೆ ಎಂದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಟೀಲು ಕ್ಷೇತ್ರವೆಂದರೆ ಆಸ್ರಣ್ಣರು ಎಂಬ ಸ್ಮರಣೆಯಿದೆ. ಎಲ್ಲರೂ ಸೇರಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಯುವಜನಾಂಗಕ್ಕೆ ಆಸ್ರಣ್ಣರು ನಡೆದುಬಂದ ಹಾದಿಯನ್ನು ತಿಳಿಸಲು ಸಹಕಾರಿ ಎಂದರು.
ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಹಿರಿಯರಾದ ಹರಿಕೃಷ್ಣ ಪುನರೂರು, ಸುವರ್ಣ ಪ್ರತಿಷ್ಠಾನದ ಪ್ರಭಾಕರ ಸುವರ್ಣ, ಉದ್ಯಮಿ ಶ್ರೀಪತಿ ಭಟ್ ಮೂಡಬಿದಿರೆ, ಶ್ರೀಕಾಂತ್ ಶೆಟ್ಟಿ, ಅಗರಿ ರಾಘವೇಂದ್ರ ರಾವ್, ಪದ್ಮಶಾಲಿ ಸಂಘದ ರವಿ ಶೆಟ್ಟಿಗಾರ್ ಕಾರ್ಕಳ, ಸಂದೀಪ್ ಬಿ.ಕೆ., ಡಾ. ಅರಣ್ ರೈ, ನಿಡ್ಲೆ ರಾಮ ಭಟ್, ಪ್ರಮೋದ್ ಭಟ್, ಉದ್ಯಮಿ ಶ್ರೀಕಾಂತ್ ಶೆಟ್ಟಿ, ಪ್ರೇಮಾನಂದ ಕುಲಾಲ್, ಮುರಳೀಧರ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.
ಡಾ. ವಾದಿರಾಜ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶ್ರೀ ಗೋಪಾಲಕೃಷ್ಣ ಆಸ್ರಣ್ಣರ ಸಂಸ್ಮರಣೆಯ ಅಂಗವಾಗಿ ಪದ್ಮನಾಭ ಕಟೀಲು ಅವರ ಸಂಘಟನೆಯಲ್ಲಿ ಶ್ರೀಕ್ಷೇತ್ರ ಕಟೀಲಿನ 7 ಮೇಳಗಳ ಆಯ್ದ ಕಲಾವಿದರಿಂದ ‘ದೇವಸಂಕಲ್ಪ’ ಯಕ್ಷಗಾನ ಪ್ರದರ್ಶನ ನಡೆಯಿತು.
Comments are closed.