ಕರಾವಳಿ

ಮುದರಂಗಡಿ ಡೇವಿಡ್ ಶೂಟೌಟ್ ಕೇಸ್: ಉತ್ತರಭಾರತ ಮೂಲದ ಮೂವರು ಸೂಫಾರಿ ಹಂತಕರು ಅಂದರ್!

Pinterest LinkedIn Tumblr

ಉಡುಪಿ: ಮುದರಂಗಡಿ ಪೇಟೆಯಲ್ಲಿ ಆ.7 ಶುಕ್ರವಾರ ಹಾಡಹಗಲೇ ನಡೆದ ಕೊಲೆ ಪ್ರಕರಣದಲ್ಲಿ ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದು ಘಟನೆ ನಡೆದು ಕೆಲವೇ ಗಂಟೆಯೊಳಗೆ ಪೊಲೀಸರ ತಂಡವು ಮೂವರು ಸುಪಾರಿ ಹಂತಕರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಉತ್ತರ ಪ್ರದೇಶದ ರಾಜು (42), ಉತ್ತರಾಖಂಡ ರಾಜ್ಯದ ಅಜಯ್ ರಸ್ತೋಗಿ ಯಾನೆ ಅನ್ಮೋಲ್ (23) ಮತ್ತು ಬಿಹಾರ ರಾಜ್ಯದ ಜಿಯಾಹುಲ್ ವಜೂಲ್ ಶೇಖ್ ಅಲಿಯಾಸ್ ದೀಪಕ್ (38) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಕಾಪು ತಾಲೂಕು ಮುದರಂಗಡಿಯ ಸೆಂಟ್ ಕ್ಷೇವಿಯರ್ ಚರ್ಚ್‌ನ ಕಾಂಪ್ಲೆಕ್ಸ್‌ನಲ್ಲಿ ಡೇವಿಡ್ ಡಿಸೋಜಾ (55) ಎಂಬವರು ಪ್ರಿನ್ಸ್ ಎಂಟರ್‌ಪ್ರೈಸಸ್‌ ಎಂಬ ಹೆಸರಿನ ಉದ್ಯಮದ ಕಚೇರಿ ಹೊಂದಿದ್ದರು. ಶುಕ್ರವಾರ ಕಚೇರಿಗೆ ಬಂದು ಬಳಿಕ ತನ್ನ ಥಾರ್ ವಾಹನದ ಬಳಿ ಹೋದಾಗ ದುಷ್ಕರ್ಮಿಯೊಬ್ಬ ಪಿಸ್ತೂಲ್ ನಿಂದ ತಲೆಗೆ ಗುಂಡು ಹಾರಿಸಿದ್ದು ಬಳಿಕ ಆರೋಪಿಗಳು ಪರಾರಿಯಾಗಿದ್ದರು.

ಮುದರಂಗಡಿಯಿಂದ ಬೈಕ್‌ನಲ್ಲಿ ಪರಾರಿಯಾಗಿದ್ದ ಆರೋಪಿಗಳು ಬೈಕನ್ನು ಎರ್ಮಾಳ್ ನಲ್ಲಿ ಬಿಟ್ಟು ಬಳಿಕ ಬಸ್‌ ನಲ್ಲಿ ಭಟ್ಕಳ ಕಡೆಗೆ ಹೋಗಿದ್ದರು. ಇದರ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಪೊಲೀಸ್‌ ತಂಡವು ಬೈಂದೂರಿನ ಒತ್ತಿನೆಣೆ ಎಂಬಲ್ಲಿ ಬಸ್ ನಿಲ್ಲಿಸಿ ತಪಾಸಣೆ ಮಾಡುವ ಸಮಯದಲ್ಲಿ ಆರೋಪಿಗಳು ಬಸ್‌ನಿಂದ ಇಳಿದು ಓಡಿಹೋಗಿದ್ದಾರೆ. ಅವರನ್ನು ಬೆನ್ನಟ್ಟಿ ಹಿಡಿಯುವ ಸಮಯದಲ್ಲಿ ಪ್ರಮುಖ ಆರೋಪಿ ರಾಜು ಕಾಪು ಪೊಲೀಸ್ ಠಾಣಾ ಪಿ.ಎಸ್.ಐ. ತೇಜಸ್ವಿ ಇವರನ್ನು ದೂಡಿ ಹಾಕಿ, ಆತನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಈ ವೇಳೆ ತೇಜಸ್ವಿ ಅವರು ಆತನ ಕಾಲಿಗೆ ಗುಂಡು ಹೊಡೆದು ಆತನನ್ನು ಮತ್ತು ಆತನ ವಶದಲ್ಲಿದ್ದ ಪಿಸ್ತೂಲನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉತ್ತರ ಪ್ರದೇಶ ಮೂಲದ ರಾಜು ಎಂಬಾತನೇ ಡೇವಿಡ್ ಡಿಸೋಜಾಗೆ ಗುಂಡು ಹಾರಿ ಕೊಲೆ ಮಾಡಿದ ಆರೋಪಿ. ಈತನ ವಿರುದ್ಧ ಪೊಲೀಸರಿಗೆ ಗುಂಡು ಹಾರಿಸಿ ಗಾಯಗೊಳಿಸಿದ ಬಗ್ಗೆ ಕೊಲೆ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರನ್ನು ವಶಕ್ಕೆ ಪಡೆಯುವ ಸಮಯ ಕಾಪು ಪೊಲೀಸ್‌ ಠಾಣಾ ಪಿಎಸ್ಐ ತೇಜಸ್ವಿ ಇವರಿಗೆ ಗಾಯವಾಗಿದ್ದು, ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದು, ಗಾಯಗೊಂಡ ಆರೋಪಿಯು ಕೂಡಾ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿದ್ದಾನೆ. ಆರೋಪಿಗಳು ಕೃತ್ಯ ನಡೆಸಲು ಉಪಯೋಗಿಸಿ, ಎರ್ಮಾಲ್‌ ನಲ್ಲಿ ಬಿಟ್ಟು ಹೋಗಿದ್ದ ಮೋಟಾರು ಬೈಕ್ ಸ್ವಾಧೀನಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಫಾರಿ ಕೊಲೆ: ಈ ಕೃತ್ಯಕ್ಕೆ ಮೃತ ಡೇವಿಡ್‌ ಡಿಸೋಜಾ ಈತನು ನಡೆಸುತ್ತಿದ್ದ ಕಾಮಗಾರಿಗೆ ಸಂಬಂದಿಸಿದಂತೆ ಅನ್ಯ ರಾಜ್ಯದ ಕಂಪೆನಿಯೊಂದಿಗೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಡೇವಿಡ್‌ ಇವರನ್ನು ಕೊಲೆ ಮಾಡಲು ಸುಫಾರಿ ನೀಡಿದ್ದು, ಈ ಕೃತ್ಯಕ್ಕೆ ಸಹಕರಿಸಿದ, ಹಣಕಾಸಿನ ನೆರವನ್ನು ನೀಡಿದ ಮತ್ತು ಆರೋಪಿತರಿಗೆ ಆಶ್ರಯ ನೀಡಿದವರನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ, ಇವರ ನೇತೃತ್ವದಲ್ಲಿ, ಕಾಪು ವೃತ್ತ ನಿರೀಕ್ಷಕ ಅಝ್‌ಮತ್‌ ಆಲಿ ಜಿ., ಡಿ.ಎಸ್.ಬಿ. ವಿಭಾಗದ ಇನ್ಸ್‌ಪೆಕ್ಟರ್ ಹರೀಶ್‌, ಬೈಂದೂರು ವೃತ್ತ ನಿರೀಕ್ಷಕ ಶಿವಕುಮಾರ್‌, ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ, ಬೈಂದೂರು ಪಿಎಸ್ಐ ಮಹೇಶ್‌, ಕಾಪು ಪಿಎಸ್ಐ ತೇಜಸ್ವಿ, ಶಿರ್ವ ಪಿ.ಎಸ್.ಐ ಮಂಜುನಾಥ ಮರಬದ, ಕೊಲ್ಲೂರು ಪಿಎಸ್ಐ ವಿನಯ್‌, ಕಾರ್ಕಳ ಗ್ರಾಮಾಂತರ ಪಿಎಸ್ಐ ಪ್ರಸನ್ನ ಎಂ.ಎಸ್.‌, ಪಡುಬಿದ್ರಿ ಪಿಎಸ್ಐ ಶಕ್ತಿವೇಲು ಹಾಗೂ ಅನಿಲ್‌, ಶಿರ್ವ ಪಿಎಸ್ಐ ಲೋಹಿತ್‌ ಕುಮಾರ್‌, ಪ್ರೊಬೆಷನರಿ ಪಿಎಸ್ಐ ಶಿಫಾಝ್‌, ಹಾಗೂ ಸಿಬ್ಬಂದಿಯವರ ತಂಡ, ಭಟ್ಕಳ ಹಾಗೂ ಕುಮಟಾ ಪೊಲೀಸರು, ಜಿಲ್ಲಾ ಅಪರಾಧ ಪರಿಶೀಲನಾಧಿಕಾರಿಯವರು, ಬೆರಳಚ್ಚು, ಶ್ವಾನದಳ ಹಾಗೂ ಸಿ.ಡಿ.ಆರ್.‌ ಸೆಲ್‌ ಉಡುಪಿ ಇವರು ಯಶಸ್ವಿಯಾಗಿ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Comments are closed.