International

ಗುಂಡೇಟಿನಿಂದ ಗಾಯಗೊಂಡಿದ್ದ ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೇ ನಿಧನ

Pinterest LinkedIn Tumblr

ಟೋಕಿಯೊ: ಜಪಾನ್ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ನಿಧನರಾಗಿದ್ದಾರೆ. ಅವರ ಮೇಲೆ ಇಂದು ಶುಕ್ರವಾರ ಬೆಳಗ್ಗೆ ಪೂರ್ವ ಜಪಾನಿನ ನಾರಾ ನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿತ್ತು.

ಕುತ್ತಿಗೆ, ಎದೆಭಾಗ ಸೇರಿದಂತೆ ಭೀಕರವಾಗಿ ದಾಳಿಗೀಡಾಗಿ ರಕ್ತಸ್ರಾವವಾಗಿ ಹೃದಯ ಸ್ತಂಭನಕ್ಕೊಳಗಾಗಿದ್ದ ಶಿಂಜೊ ಅಬೆಯವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಮಧ್ಯಾಹ್ನ ಅಧಿಕೃತವಾಗಿ ಘೋಷಿಸಲಾಗಿದೆ. ಶಿಂಜೊ ಅಬೆಯವರ ನಿಧನಕ್ಕೆ ವಿಶ್ವದ ಗಣ್ಯಾತಿಗಣ್ಯರು ಕಂಬನಿ ಮಿಡಿದಿದ್ದಾರೆ.

ಕ್ಯೋಟೋ ಸಮೀಪದ ನಾರಾ ನಗರದಲ್ಲಿ ಶುಕ್ರವಾರ ಭಾಷಣ ಮಾಡುವಾಗ ಶಿಂಜೋ ಅಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಮಾಜಿ ಪ್ರಧಾನಿ ಗುಂಡು ತಗುಲಿ ನೆಲಕ್ಕೆ ಕುಸಿಯುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದವು.

ಲಿಬರಲ್ ಡೆಮಾಕ್ರಟಿಕ್ ಪಕ್ಷದ ಮೂಲಗಳೂ ಶಿಂಜೋ ಅಬೆ ಸಾವನ್ನು ದೃಢಪಡಿಸಿವೆ. ಜಪಾನ್‌ನ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ ಅಬೆ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ 2020 ರಲ್ಲಿ ರಾಜೀನಾಮೆ ನೀಡಿದ್ದರು. ಅವರು 2006-7 ಮತ್ತು 2012-20 ರವರೆಗೆ ಎರಡು ಬಾರಿ ಜಪಾನ್‌ನ ಪ್ರಧಾನಿಯಾಗಿದ್ದರು. ಅವರ ನಂತರ ಯೋಶಿಹಿಡೆ ಸುಗಾ ಮತ್ತು ನಂತರ ಫ್ಯೂಮಿಯೊ ಕಿಶಿಡಾ ಅವರು ಅಧಿಕಾರ ವಹಿಸಿಕೊಂಡರು.

ಜಪಾನ್‌ನ ಸಂಸತ್ತಿನ ಮೇಲ್ಮನೆಗೆ ಭಾನುವಾರದ ಚುನಾವಣೆಗೆ ಮುನ್ನ ಪಶ್ಚಿಮ ಜಪಾನಿನ ನಗರವಾದ ನಾರಾದಲ್ಲಿ ಪ್ರಚಾರ ಭಾಷಣದ ವೇಳೆ ಇಂದು ಬೆಳಿಗ್ಗೆ 11.30 ಕ್ಕೆ (ಜಪಾನ್ ಕಾಲಮಾನ) ಗುಂಡೇಟಿನಿಂದ ಕುಸಿದು ಬಿದ್ದ 67 ವರ್ಷದ ಅಬೆ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

Comments are closed.