(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕಾಲೇಜು ವಿದ್ಯಾಭ್ಯಾಸದ ವೇಳೆ ಹಾಸ್ಟೆಲಿನಲ್ಲಿ ತಂಗಿದ್ದ ಯುವತಿಯನ್ನು ಪ್ರೀತಿಪ್ರೇಮದ ಹೆಸರಿನಲ್ಲಿ ಬಲೆಗೆಬೀಳಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆಕೆಯ ಇಚ್ಚೆ ವಿರುದ್ಧ ಲೈಂಗಿಕ ವಾಗಿ ಬಳಸಿಕೊಂಡು ಗರ್ಭವತಿಯಾಗಲು ಕಾರಣನಾಗಿ ಬಳಿಕ ಮದುವೆಗೆ ನಿರಾಕರಿಸಿದ ವ್ಯಕ್ತಿಯ ಮೇಲಿನ ದೋಷಾರೋಪಣೆ ರುಜುವಾತಾಗಿದ್ದು ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಕುಂದಾಪುರದಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರು ಶುಕ್ರವಾರ ಆದೇಶಿಸಿದ್ದಾರೆ.
ಕೆರಾಡಿ ನಿವಾಸಿ ಗಣೇಶ್ ಶೆಟ್ಟಿ (37) ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದು 2014ರಲ್ಲಿ ಈ ಘಟನೆ ನಡೆದಿತ್ತು. ಈತನಿಗೆ ಅತ್ಯಾಚಾರ ಪ್ರಕರಣದಡಿ 10 ವರ್ಷ ಕಠಿಣ ಶಿಕ್ಷೆ, 10 ಸಾವಿರ ದಂಡ ಹಾಗೂ ನಂಬಿಸಿ ಮೋಸ ಮಾಡಿದ್ದಕ್ಕೆ 1 ವರ್ಷ ಸಜೆ, 5 ಸಾವಿರ ದಂಡ ವಿಧಿಸಿದೆ. ಮತ್ತು ಸಂತಸ್ತೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಒದಗಿಸಲು ಆದೇಶಿಸಿ ತೀರ್ಪು ಪ್ರಕಟಿಸಲಾಗಿದೆ.
ಪ್ರಕರಣದ ಹಿನ್ನೆಲೆ..
ಯುವತಿಯು ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೇಳೆ ಆಕೆ ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದು ಇಲ್ಲಿಗೆ ಸಮೀಪದ ಗಣೇಶನ ಮನೆಗೆ ಗೆಳೆತಿಯರೊಂದಿಗೆ ಟಿವಿ ನೋಡಲು ಬರುತ್ತಿದ್ದಾಗ ಇಬ್ಬರ ನಡುವೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಮದುವೆ ಭರವಸೆ ನೀಡಿದ ಆತ ಸಲುಗೆ ಬೆಳೆಸಿಕೊಂಡಿದ್ದು ಮೊದಲಿಗೆ ಆತನ ಮನೆಗೆ ಕರೆದೊಯ್ದು ಯುವತಿ ಇಚ್ಚೆ ವಿರುದ್ಧ ಲೈಂಗಿಕ ಕ್ರಿಯೆ ನಡೆಸಿದ್ದ. ಬಳಿಕ ಮತ್ತೊಮ್ಮೆ ಈತನ ಮನೆ ಹಾಗೂ ಆಕೆಯ ಮನೆಯಲ್ಲಿಯೂ ಲೈಂಗಿಕ ದೌರ್ಜವೆಸಗಿದ್ದು ಆಕೆ ಗರ್ಭವತಿಯಾದ ವಿಚಾರ ತಿಳಿದಾಗ ಯುವತಿ ನಡತೆ ಮೇಲೆ ಸಂಶಯದ ನೆಪವೊಡ್ಡಿ ಮದುವೆಗೆ ನಿರಾಕರಿಸಿದ್ದಲ್ಲದೆ ಪೋನ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ಯುವತಿ ಗಂಡು ಮಗುವಿಗೆ ಜನ್ಮನೀಡಿದ್ದು ಲೈಂಗಿಕ ದೌರ್ಜನ್ಯದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಅದರಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಡಿ.ಎನ್.ಎ ವರದಿಯಲ್ಲೂ ಈತನೇ ಮಗುವಿನ ತಂದೆಯೆಂದು ದೃಢವಾಗಿತ್ತು. ಸುಧೀರ್ಘ ವಿಚಾರಣೆ ಬಳಿಕ ಆರೋಪಿ ಮೇಲಿನ ದೋಷಾರೋಪಣೆಗಳು ನ್ಯಾಯಾಲಯದಲ್ಲಿ ರುಜುವಾತಾಗಿದೆ.
ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ವಾದಿಸಿದ್ದರು.
Comments are closed.