India

ರಾಜ್ಯದ ಸಮಸ್ಯೆಗಳ ಕುರಿತು ಮಾಸಾಂತ್ಯಕ್ಕೆ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ

Pinterest LinkedIn Tumblr

siddaramayaaaaaaa

ಬೆಂಗಳೂರು, ಏ.21-ಪ್ರಸ್ತುತ ರಾಜ್ಯದ ಸಮಸ್ಯೆಗಳಾದ ಮೇಕೆದಾಟು ಕುಡಿಯುವ ನೀರು ಯೋಜನೆ ಹಾಗೂ ಭಾಷಾ ಮಾಧ್ಯಮ ಸಮಸ್ಯೆಗಳ ಪರಿಹಾರಕ್ಕೆ  ಮಧ್ಯಪ್ರವೇಶ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ಬಹುತೇಕ ಈ ತಿಂಗಳ ಅಂತ್ಯದಲ್ಲಿ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳುವ ಕಾರ್ಯಕ್ರಮವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಬಸವ ಜಯಂತಿಯ ಅಂಗವಾಗಿನ ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಭಾರೀ ಪ್ರತಿಭಟನೆಗಳು ನಡೆದಿವೆ. ಕರ್ನಾಟಕ ಬಂದ್ ಕೂಡ ಆಚರಿಸಲಾಗಿದೆ. ಕುಡಿಯುವ ನೀರೊದಗಿಸುವ ಈ ಯೋಜನೆ ಜಾರಿ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿ ಯೋಜನೆ ಜಾರಿಗೆ  ಹಾದಿ ಸುಗಮಗೊಳಿಸುವಂತೆ  ಪ್ರಧಾನಿಯವರಲ್ಲಿ  ಮನವಿ ಮಾಡಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಇಂತಹ ವಿವಾದಗಳಿಂದ ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಇದನ್ನು ಕೇಂದ್ರ ಸರ್ಕಾರ ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳ ಸಂಸದರು, ಶಾಸಕರುಗಳನ್ನೊಳಗೊಂಡ ನಿಯೋಗದ ಭೇಟಿಗೆ ಸಿದ್ಧತೆ ನಡೆದಿದೆ. ಬಹುಪಾಲು ಈ ತಿಂಗಳ 27 ರಿಂದ 30ರ ಒಳಗೆ  ಭೇಟಿಗೆ ಸಮಯ ನಿಗದಿಯಾಗಲಿದೆ ಎಂದರು. ಭಾಷಾಮಾಧ್ಯಮ: ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಇರಬೇಕೆಂಬುದು  ಎಲ್ಲರ ಒತ್ತಾಯವಾಗಿದೆ. ಆದರೆ ನ್ಯಾಯಾಲಯ ಭಾಷಾ ಮಾಧ್ಯಮದ ಆಯ್ಕೆ ಪೋಷಕರಿಗೆ ಬಿಟ್ಟ ವಿಚಾರ ಎಂದು ಹೇಳಿರುವುದರಿಂದ ತೊಡಕಾಗಿದೆ. ಈ ವಿಷಯದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.  ಈಗಾಗಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಈ ಕುರಿತಂತೆ ಪತ್ರ ಬರೆದಿದ್ದು, ಇದೊಂದು ಸಾಮುದಾಯಿಕ ಹೋರಾಟವಾಗಿರುವುದರಿಂದ ಪ್ರಧಾನಿಯವರ ಬಳಿಗೆ ಸರ್ವಪಕ್ಷ ನಿಯೋಗದೊಂದಿಗೆ ತೆರಳಿ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು ಎಂದು ಅವರು ಹೇಳಿದರು.

ವರ್ಗ-ವರ್ಣ ವಿರೋಧಿಸಿದ ಶರಣರು:

ಬಸವಾದಿ ಶರಣರು ವರ್ಗ, ವರ್ಣ ರಹಿತ ಸಮಾಜದ ಕನಸು ಕಂಡರು. ಅದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಈ ಸಮಾಜಕ್ಕೆ ದಾರಿ ದೀಪಗಳಾದರು ಎಂದು ಸ್ಮರಿಸಿದ ಸಿದ್ದರಾಮಯ್ಯ, ಅವರ ಹಾದಿಯಲ್ಲಿ ನಡೆಯಲು ಸರ್ಕಾರಗಳು ಪ್ರಯತ್ನಿಸಬೇಕು ಎಂದರು.
ಜಾತಿ, ಕುಲ, ವರ್ಗ, ವರ್ಣ ಭೇದಗಳು ಸಾವಿರಾರು ವರ್ಷಗಳಿಂದಲೂ ಈ ಸಮಾಜವನ್ನು ಹರಿದು ಮುಕ್ಕುತ್ತಾ ಬಂದಿವೆ. ಇದನ್ನು ತೊಡೆದು ಹಾಕಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ. ಈ ಎಲ್ಲ ಚಳವಳಿಗಳಿಗೆ ಮೂಲ ಕಾರಣರಾದವರು  ವಿಶ್ವಗುರು ಬಸವಣ್ಣನವರು, ಇಂದು ನಾವೆಲ್ಲ ಅವರನ್ನು ಸ್ಮರಿಸಬೇಕು ಎಂದರು.

Write A Comment