ಮನೋರಂಜನೆ

ಆನ್‌ಲೈನ್ ಸ್ಟಾರ್ ವಾರ್ ಸುದೀಪ್ ಗರಂ

Pinterest LinkedIn Tumblr

sudeepಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ವಾರ್ ಹುಟ್ಟಿಕೊಂಡಿದ್ದು, ನಟರು ಮುಜುಗರಕ್ಕೀಡಾಗುವ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಟರ ಹೆಸರಿನಲ್ಲಿ ಅನಗತ್ಯ ಜಗಳ ಆಡಬೇಡಿರೆಂದು ಅಭಿಮಾನಿಗಳಿಗೆ ಸುದೀಪ್ ಮನವಿ ಮಾಡಿದ್ದಾರೆ.

– ಪದ್ಮಾ ಶಿವಮೊಗ್ಗ
ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳು ಭಾವಾವೇಶದಿಂದ ವರ್ತಿಸುವುದು ಹೊಸದೇನಲ್ಲ. ತಮ್ಮ ಅಭಿಮಾನದ ನಟರಿಗಾಗಿ ಬೀದಿಗೆ ಬಂದ ಉದಾಹರಣೆಗಳು ಬಹಳ ಇವೆ. ಆದರೆ, ಇತ್ತೀಚೆಗೆ ಸ್ಟಾರ್ ನಟರ ಚಿತ್ರಗಳ ನಡುವಿನ ಪೈಪೋಟಿ ಅಭಿಮಾನಿಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ ಮಟ್ಟಕ್ಕೆ ಹೋಗಿದೆ. ಇದು ಹೆಚ್ಚಾಗಲು ಸಾಮಾಜಿಕ ಜಾಲ ತಾಣ ತಕ್ಷಣದ ಪರ-ವಿರೋಧಕ್ಕೆ ವೇದಿಕೆಯಾಗಿರುವುದು ಮುಖ್ಯ ಕಾರಣ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಸುದೀಪ್ ಅಭಿಮಾನಿಗಳಿಗೆ ಜಗಳವಾಡದಂತೆ ಮನವಿ ಮಾಡಿದ್ದಾರೆ.

‘ಸಣ್ಣ ಪುಟ್ಟ ವಿಷಯಗಳಿಗೆಲ್ಲ ಅನಗತ್ಯ ಕಾಮೆಂಟ್‌ಗಳನ್ನು ಫೇಸ್ ಬುಕ್ ಮತ್ತು ಟ್ವಿಟರ್‌ನಲ್ಲಿ ಮಾಡಲಾಗುತ್ತಿದೆ. ನಾವು ನಟರೆಲ್ಲಾ ಒಗ್ಗಟ್ಟಾಗಿದ್ದೇವೆ. ಚೆನ್ನಾಗಿದ್ದೇವೆ. ಆದ್ರೆ, ಅಭಿಮಾನಿಗಳು ಅನಗತ್ಯವಾಗಿ ನಮ್ಮ ಹೆಸರಲ್ಲಿ ಜಗಳವಾಡುತ್ತಿರುವುದು ಒಳ್ಳೆಯದಲ್ಲ. ಇದನ್ನೆಲ್ಲಾ ನಿಲ್ಲಿಸಿಬಿಡಿ’ ಎಂದು ಅವರು ಕೋರಿದ್ದಾರೆ. ಸುದೀಪ್ ಈ ರೀತಿ ಹೇಳಿಕೆ ಕೊಟ್ಟಿರುವುದು ಸ್ವಾಗತಾರ್ಹ.

ದರ್ಶನ್, ಸುದೀಪ್, ಪುನೀತ್, ಯಶ್, ಶಿವರಾಜ್‌ಕುಮಾರ್, ದುನಿಯಾ ವಿಜಯ್ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಮಾತಿನ ಚಕಮಕಿ ನಡೆಸಿದ್ದಾರೆ. ತಮ್ಮ ನೆಚ್ಚಿನ ಸ್ಟಾರ್ ನಟನ ಚಿತ್ರಗಳ ಬಗ್ಗೆ ಹೊಗಳುತ್ತಾ, ಬೇರೆ ನಟರ ಬಗ್ಗೆ ಕೆಟ್ಟದಾಗಿ, ಅಸಭ್ಯವಾಗಿ ಬರೆಯುತ್ತಿದ್ದಾರೆ. ಅಭಿಮಾನಿಗಳ ನಡುವೆ ಭಾರೀ ವಾಗ್ಯುದ್ಧ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ತಮ್ಮ ಮೆಚ್ಚಿನ ನಟನೇ ಸೂಪರ್ ಆ್ಯಕ್ಟರ್ ಎಂದಾಗಬೇಕು, ಅವನ ಚಿತ್ರವೇ ಸೂಪರ್ ಹಿಟ್ ಆಗಬೇಕು ಎಂಬ ಹುಚ್ಚು ಆಕಾಂಕ್ಷೆ ಇಷ್ಟಕ್ಕೆಲ್ಲಾ ಕಾರಣವಾಗಿದೆ. ಇವರು ಉಳಿದವರ ಚಿತ್ರದ ಯಶಸ್ಸನ್ನು ಸಹಿಸದೆ ಕಾಮೆಂಟ್ ಮಾಡಲಾರಂಭಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಮಾರಕ ಎನ್ನಬಹುದು.

ಈ ಅಭಿಮಾನಿಗಳೆನಿಸಿಕೊಂಡವರ ಭಾವನೆಯನ್ನು ಬಂಡವಾಳ ಮಾಡಿಕೊಂಡು ಬೆಂಕಿಗೆ ತುಪ್ಪ ಸುರಿಯಲು ಕೆಲ ಫೇಸ್‌ಬುಕ್ ಖಾತೆಗಳು ನಿರತವಾಗಿವೆ. ಅಂತರ್ಜಾಲ ತಾಣಗಳಲ್ಲಿ ಸ್ಯಾಂಡಲ್‌ವುಡ್ ಹೆಸರಿನಲ್ಲಿ ತಮ್ಮ ಫೇಸ್ ಬುಕ್ ಖಾತೆಯನ್ನು ತೆರೆದಿರುವ ಕೆಲವರು ಜನರನ್ನು ಪ್ರಚೋದಿಸುತ್ತಿದ್ದಾರೆ. ಪುನೀತ್-ದರ್ಶನ್, ಯಶ್-ದರ್ಶನ್, ಹೀಗೆ ಇಬ್ಬರು ಸ್ಟಾರ್ ಪೋಟೋಗಳನ್ನು ಅಪ್‌ಲೋಡ್ ಮಾಡಿ ಅಭಿಮಾನಿಗಳನ್ನು ಕೆಣಕುವಂಥ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇವರಿಬ್ಬರಲ್ಲಿ ಯಾರು ಸೂಪರ್ ಸ್ಟಾರ್? ಸ್ಯಾಂಡಲ್‌ವುಡ್‌ನ ಪ್ರಿನ್ಸ್ ಯಾರು? ಯಾರು ನಿಮ್ಮ ಫೇವರಿಟ್? ಯಾರ ಬಾಡಿ ಹೆಚ್ಚು ಸ್ಟ್ರಾಂಗ್? ಯಾರು ಬಾಕ್ಸ್ ಆಫೀಸ್‌ನ ಹೊಸ ಸುಲ್ತಾನ? ಹೀಗೆ ಪ್ರಶ್ನೆಗಳನ್ನು ಕೇಳಿ ಲೈಕ್ ಮತ್ತು ಕಾಮೆಂಟ್ ಮಾಡುವಂತೆ ಪ್ರಚೋದಿಸಲಾಗುತ್ತಿದೆ. ಹೀಗೆ ಅಭಿಮಾನಿಗಳ ಗುಂಪನ್ನು ಒಡೆಯುವ ಮತ್ತು ಜಗಳಕ್ಕೆಳೆಯುವ ಪ್ರಯತ್ನ ನಡೆದಿದೆ. ಅಭಿಮಾನಿಗಳು ಸಹಜವಾಗಿಯೇ ತಮ್ಮ ನೆಚ್ಚಿನ ನಟರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದು ಇನ್ನೊಬ್ಬ ನಟನ ಅಭಿಮಾನಿಗಳನ್ನು ಕೆರಳಿಸುತ್ತಿದೆ. ಇಂಥ ಪೋಸ್ಟಿಂಗ್‌ಗಳಿಗೆ ನೂರಾರು ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ. ಬಹಳ ಕೀಳಾಗಿ, ಕೆಟ್ಟದಾಗಿ ಇನ್ನೊಬ್ಬ ನಟನನ್ನು ಬೈಯುವುದಕ್ಕೂ ಹಿಂಜರಿಯುತ್ತಿಲ್ಲ. ಇದನ್ನು ಲಕ್ಷಾಂತರ ಮಂದಿ ಓದುತ್ತಿದ್ದಾರೆ. ಬರಬರುತ್ತಾ ಕೋಪ ಮತ್ತು ಹಿಂಸಾತ್ಮಕ ಮನೋಭಾವದಿಂದ ಕಾಮೆಂಟ್ ಹಾಕುತ್ತಿರುವುದು ಅಪಾಯಕಾರಿ ಬೆಳವಣಿಗೆ. ಇಂಥ ಫೇಸ್‌ಬುಕ್ ಖಾತೆಗಳನ್ನು ನಿಷೇಧಿಸುವ ಅಗತ್ಯವಿದೆ.

ಸ್ಟಾರ್ ಅಭಿಮಾನಿಗಳ ನಡುವಿನ ವಾರ್ ಇಂದಿನದಲ್ಲ. ಹಿಂದಿನಿಂದಲೂ ಇದೆ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು ಆಕ್ರೋಶದಿಂದ ಪೈಪೋಟಿಗೆ ಬಿದ್ದು, ಚಿತ್ರರಂಗದಲ್ಲಿ ಒಡಕುಂಟಾಗಿದ್ದು ಸುಳ್ಳಲ್ಲ. ಇನ್ನೊಬ್ಬರ ಮನೆಗೆ ಬೆಂಕಿ ಹಚ್ಚಿಸಿ ತಮ್ಮ ಬೇಳೆ ಬೇಯಿಸಿಕೊಂಡವರು ಬಹಳ ಮಂದಿ. ಆದರೆ, ಅಂದಿಗಿಂತ ಇಂದು ಪರಿಸ್ಥಿತಿ ಹೆಚ್ಚು ಅಗ್ರೆಸಿವ್ ಆಗಿದೆ. ಹೀಗೆ ವೇಗವಾಗಿ ಹರಡಲು ಅಂತರ್ಜಾಲ ತಾಣಗಳು ಕಾರಣವಾಗಿವೆ. ಇದಕ್ಕೆ ಕಡಿವಾಣ ಹಾಕಲು ಎಲ್ಲ ಸ್ಟಾರ್ ನಟರು ತಮ್ಮ ಅಭಿಮಾನಿಗಳಿಗೆ ಈ ರೀತಿ ಮಾಡದಂತೆ ಹೇಳುವ ಅಗತ್ಯವಿದೆ. ಕಲೆ ಜನರನ್ನು ಒಂದು ಮಾಡಬೇಕು, ಮನಸ್ಸಿಗೆ ಮುದ ನೀಡಬೇಕು. ದ್ವೇಷಕ್ಕೆ ಕಾರಣವಾಗಬಾರದು. ಅಭಿಮಾನ ಇನ್ನೊಬ್ಬರನ್ನು ಹೀಗಳೆಯುವಂತಿರಬಾರದು. ಕಲಾವಿದರೆಲ್ಲರನ್ನು ಒಂದೇ ರೀತಿ ಕಾಣುವಂತಾದಾಗ ಚಿತ್ರರಂಗ ಇನ್ನಷ್ಟು ಬೆಳೆಯಲು ಸಹಕಾರಿ.

ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ನಾವೆಲ್ಲ ನಟಿಸುತ್ತ ಬಂದಿದ್ದೇವೆ. ನಾವೆಲ್ಲರೂ ಒಂದೇ. ನಮ್ಮ ನಡುವೆ ಯಾವುದೇ ವೈಷಮ್ಯವಿಲ್ಲ. ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ. ಅಭಿಮಾನಿಗಳು ಮಾತ್ರ ಗುಂಪು ಕಟ್ಟಿಕೊಂಡಿದ್ದಾರೆ. ಅನಗತ್ಯ ಕಾಮೆಂಟ್ ಮಾಡೋದನ್ನು ಬಿಟ್ಟುಬಿಡಿ.
-ಸುದೀಪ್, ನಟ

Write A Comment