ಆರೋಗ್ಯ

ಕುಂದಾಪುರ | ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಸಾವಯವ ತರಕಾರಿ ಬೆಳೆಯುವ ವಿದ್ಯಾರ್ಥಿಗಳು!

Pinterest LinkedIn Tumblr

(ವಿಶೇಷ ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ಈ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಹೋದರೆ ಎಲ್ಲೆಲ್ಲೂ ಹಸಿರು ಸುಂದರ ಪರಿಸರ ಕಣ್ಣಿಗೆ ಮುದ ನೀಡುತ್ತದೆ. ಬೆಳೆದ ತರಹೇವಾರಿ ತರಕಾರಿಗಳು ಕಾಣಸಿಗುತ್ತದೆ.

ಕುಂದಾಪುರ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ 7 ಮೆಟ್ರಿಕ್ ಪೂರ್ವ ಹಾಗೂ 8 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ ಕೈತೋಟ ಅವರಲ್ಲಿ ಆತ್ಮವಿಶ್ವಾಸ, ಸಹಕಾರ ಮನೋಭಾವ ಹಾಗೂ ಸ್ವಾವಲಂಬನೆ ಬೆಳೆಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳಲ್ಲಿ ಮಣ್ಣಿನ ಕೆಲಸ, ಕೃಷಿಯ ಮೌಲ್ಯ, ಶ್ರಮ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ನೈಜ ಅನುಭವ ಸಿಗುತ್ತಿದೆ.

ಕೈ ತೋಟ ನಿರ್ವಹಣೆ: ವಸತಿ ನಿಲಯದಲ್ಲಿ ಕೈ ತೋಟ ನಿರ್ವಹಣೆಯ ಮೂಲಕ ಮಕ್ಕಳು ಸಣ್ಣ ಜಮೀನಿನಲ್ಲಿ ತರಕಾರಿ, ಹೂಗಿಡಗಳು ಮತ್ತು ಔಷಧೀಯ ಗಿಡಗಳನ್ನು ನೆಟ್ಟು ಪ್ರತಿದಿನ ನೀರಾವರಿ ಮತ್ತು ಆರೈಕೆ ಮಾಡಲಾಗುತ್ತಿದೆ.  ಕೈ ತೋಟದಲ್ಲಿ ಬೆಳೆಯುವ ತರಕಾರಿಗಳನ್ನು ಅಡುಗೆ ಗೃಹದಲ್ಲಿ ಬಳಸುವುದರಿಂದ ಮಕ್ಕಳಿಗೆ ತಾಜಾ, ಪೌಷ್ಟಿಕ ಆಹಾರ ದೊರಕುವುದರ ಜೊತೆಗೆ ‘ನಾವೇ ಬೆಳೆಸಿ, ನಾವೇ ತಿನ್ನುವ’ ಸಂತೋಷದ ಅನುಭವ ಲಭಿಸುತ್ತಿದೆ ಎಂದು ವಿದ್ಯಾರ್ಥಿನಿ ನಿಸರ್ಗ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೈ ತೋಟದಲ್ಲಿ ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸರ್ಕಾರಿ ಶಾಲೆಗಳ ಬಿಸಿಊಟ ಹಾಗೂ ಅಂಗನವಾಡಿಗಳಿಗೆ ಹಂಚಲಾಗುತ್ತದೆ. ಅಲ್ಲಿನ ಮಕ್ಕಳಿಗೆ ಪೌಷ್ಟಿಕ ಆಹಾರ, ಸಾವಯವ ಕೃಷಿ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ಸಾರುತ್ತೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸಂಘಟಿತ ಯತ್ನ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿಯ ಜಿಲ್ಲಾ ಅಧಿಕಾರಿ ಹಾಕಪ್ಪ ಆರ್. ಲಮಾಣಿಯವರ ಮಾರ್ಗದರ್ಶನದಲ್ಲಿ, ತಾಲೂಕು ಕಲ್ಯಾಣಾಧಿಕಾರಿ, ವಿವಿಧ ಹಾಸ್ಟೆಲ್‌ಗಳ ನಿಲಯ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿಗಳ ಸಮನ್ವಯತೆಯಲ್ಲಿ ಆಹಾರ ಸಮಿತಿ, ಶೈಕ್ಷಣಿಕ ಸಮಿತಿ, ಕೈತೋಟ ಸಮಿತಿ, ಸ್ವಚ್ಚತಾ ಸಮಿತಿ, ರಚಿಸಿ ಪ್ರತಿ ಸಮಿತಿಯ ಮೇಲುಸ್ತುವಾರಿಯನ್ನು ವಿದ್ಯಾರ್ಥಿಗಳೇ ವಹಿಸಿಕೊಂಡು ವಿದ್ಯಾರ್ಥಿನಿಲಯಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸುವುದರ ಜೊತೆಗೆ ‘ನಮ್ಮ ನಿಲಯ ಸ್ವಚ್ಚ ನಿಲಯ, ನಮ್ಮ ನಿಲಯ ಹಸಿರು ನಿಲಯ’ ಧ್ಯೇಯದಲ್ಲಿ ಉತ್ತಮ ಆರೋಗ್ಯಕರ ವಾತಾವರಣ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಲು ಕಠಿಬದ್ಧರಾಗಿದ್ದಾರೆ.

ಎಲ್ಲೆಲ್ಲಿ ಕೈತೋಟ: ಶ್ರೀ. ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಂಗಳೂರು, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕುಂದಾಪುರ ಮೂಲ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕುಂದಾಪುರ ವಿಭಜಿತ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಕೋಟೇಶ್ವರ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಶಂಕರನಾರಾಯಣ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಕುಂದಾಪುರ ಟೌನ್, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಕೆದೂರು, ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಅಮಾಸೆಬೈಲು, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯ ಬಸ್ರೂರು ಉತ್ತಮ ಕೈತೋಟ ನಿರ್ವಹಣೆಗೆ ಸಾಕ್ಷಿಯಾಗಿದೆ.

ಹಾಸ್ಟೆಲ್‌ಗಳ ವಿಶೇಷತೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ನಿಟ್ಟಿನಲ್ಲಿ ಓದು ಕರ್ನಾಟಕ, ಒಂದು ಮಗು ಒಂದು ಪುಸ್ತಕ, ಯೋಗ ಮತ್ತು ಧ್ಯಾನ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ, ಅಂಶಕಾಲಿಕ ಶಿಕ್ಷಕರಿಂದ ಬೋಧನೆ, ರುಚಿ ಪುಸ್ತಕ, ಹೆಲ್ತ್‌ ಡೈರಿ ನಿರ್ವಹಣೆ, ವ್ಯಕ್ತಿತ್ವ ವಿಕಸನ ಕಾರ್ಯಾಗಾರ, ಮಕ್ಕಳ ಕ್ಲಬ್, ವಿದ್ಯಾರ್ಥಿ ಸಂಸತ್, ವೃತ್ತಿ ಮಾರ್ಗದರ್ಶನ ತರಬೇತಿ, ಆರೋಗ್ಯ ಜಾಗೃತಿ, ಬೀದಿ ನಾಟಕಗಳು, ‘ನಮ್ಮ ನಿಲಯ, ನಮ್ಮ ಹೆಮ್ಮೆ’ ಎಂಬ ಧ್ಯೇಯ ವಾಕ್ಯದಡಿ ಗೋಡೆ ಮೇಲೆ ಸಂದೇಶ ಸಾರುವ ಚಿತ್ತಾರ ಬಿಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಉತ್ತಮ ಗೃಂಥಾಲಯ ವ್ಯವಸ್ಥೆಯ ಜೊತೆಗೆ ಡಿಜಿಟಲ್ ಲೈಬ್ರರಿಗಳ ವ್ಯವಸ್ಥೆಯನ್ನು ಸಹ ವಿದ್ಯಾರ್ಥಿಗಳಿಗೆ ಕಲ್ಪಿಸಲಾಗಿದೆ.

ಪೈಪ್ ಕಾಂಪೋಸ್ಟಿಂಗ್ ಅಳವಡಿಕೆ: ವಸತಿ ನಿಲಯದಲ್ಲಿ ಪೈಪ್ ಕಾಂಪೋಸ್ಟಿಂಗ್ ಅಳವಡಿಕೆಯ ಮೂಲಕ ಅಡುಗೆ ಗೃಹದಲ್ಲಿ ಬರುತ್ತಿರುವ ತರಕಾರಿ ತ್ಯಾಜ್ಯ, ಆಹಾರ ಅವಶೇಷಗಳನ್ನು ಪೈಪಿನೊಳಗೆ ತುಂಬಿ ಸಹಜವಾಗಿ ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತದೆ. ಇದರ ಮೂಲಕ ಕಸದ ಪ್ರಮಾಣ ಕಡಿಮೆಯಾಗುವುದು, ದುರ್ಗಂಧ ನಿಯಂತ್ರಣವಾಗುವುದು ಮತ್ತು ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಸಾಧ್ಯವಾಗುತ್ತದೆ. ಪೈಪ್ ಕಾಂಪೋಸ್ಟ್ ಮೂಲಕ ಸಿಗುವ ಸಾವಯವ ಗೊಬ್ಬರವನ್ನು ಕೈ ತೋಟದಲ್ಲಿ ಬಳಸುವುದರಿಂದ ಉತ್ತಮ ಬೆಳೆ, ಹಸಿರು ಪರಿಸರದ ಜೊತೆಗೆ ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸುವ ಸಾಮಾಜಿಕ ಹೊಣೆಗಾರಿಕೆಯ ಅರಿವು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿದೆ.

ತರಹೇವಾರಿ ತರಕಾರಿ ಬೆಳೆಗಳು!: ಕೈತೋಟ ನಿರ್ವಹಣೆಯ ಸಮಿತಿಯು ಪ್ರತಿ ನಿಲಯಗಳಲ್ಲಿ ಉತ್ತಮ ಪೌಷ್ಠಿಕ ಕೈತೋಟ ನಿರ್ಮಿಸಲಾಗಿದ್ದು, ಈ ಕೈತೋಟದಲ್ಲಿ ಬಸಳೆಸೊಪ್ಪು, ಹರಿವೆಸೊಪ್ಪು, ಪಾಲಕ್‌ಸೊಪ್ಪು, ಬೆಂಡೆ ಕಾಯಿ, ಹೀರೆಕಾಯಿ, ಬದನೆ ಕಾಯಿ, ಚೌಳಿಕಾಯಿ, ಸೋರೆಕಾಯಿ, ಮೂಲಂಗಿ, ಹಸಿಮೆಣಸು ಸೇರಿದಂತೆ ವಿವಿಧ ತರಕಾರಿಗಳನ್ನು ಬೆಳೆಯುವುದರ ಮೂಲಕ ಪೋಷಕಾಂಶಯುಕ್ತ ಆಹಾರ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಕೈತೋಟಕ್ಕೆ ಗೊಬ್ಬರವಾಗಿ ನಿಲಯದಲ್ಲಿ ಉತ್ಪತ್ತಿಯಾಗುವ ಹಸಿ ಹಾಗೂ ಒಣ ಕಸವನ್ನು ಬಳಸಿ ಪೈಪ್‌ಕಾಂಪೋಸ್ಟ್ ಸಹಾಯದಿಂದ ಗೊಬ್ಬರ ಉತ್ಪಾಧಿಸಿ ಬಳಕೆ ಮಾಡಲಾಗುತ್ತಿದೆ. ಯಾವ ನರ್ಸರಿಗೂ ಕಡಿಮೆ ಇಲ್ಲದಂತೆ ಕೆಲವು ನಿಲಯಗಳ ಕೈತೋಟಗಳು ಗಮನಸೆಳೆಯುತ್ತಿದೆ.

‘ವಿದ್ಯಾರ್ಥಿ ಸ್ನೇಹಿ ಹಾಸ್ಟೆಲ್’ ನಮ್ಮ ಗುರಿಯಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ವಿಷಯದ ಜೊತೆಗೆ ಪತ್ಯೇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ.  ವಿದ್ಯಾರ್ಥಿನಿಲಯಗಳಲ್ಲಿ ಕೈತೋಟ ನಿರ್ವಹಣೆ ವಿದ್ಯಾರ್ಥಿಗಳಿಗೆ ಪೋಷಕಾಂಶಯುಕ್ತ ಆಹಾರ, ಪರಿಸರ ಜಾಗ್ರತೆ, ಕೌಶಲ್ಯ ಅಭಿವೃದ್ಧಿ, ಸ್ವಚ್ಛತೆ ಮತ್ತು ಶಿಸ್ತು ಮಾನಸಿಕ ಆರೋಗ್ಯ, ಒಗ್ಗಟ್ಟು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ವಿದ್ಯಾರ್ಥಿಗಳಲ್ಲಿ ಈ ಕ್ರಿಯಾಶೀಲತೆ ಬೆಳೆಸುವಲ್ಲಿ ವಸತಿ ನಿಲಯ ಮೇಲ್ವಿಚಾರಕರ ಪಾತ್ರವೂ ಶ್ಲಾಘನೀಯ.

-ಹಾಕಪ್ಪ ಆರ್. ಲಮಾಣಿ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿಯ ಜಿಲ್ಲಾ ಅಧಿಕಾರಿ)

Comments are closed.