ಕರಾವಳಿ

ಹಿರಿಯ ಮೀನುಗಾರರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ | ರಾಜ್ಯದಲ್ಲೇ ಮಾದರಿ ಕಾರ್ಯಕ್ಕೆ ಸಾಕ್ಷಿಯಾದ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಮಹಾಸಭೆ

Pinterest LinkedIn Tumblr

ಕುಂದಾಪುರ: ಮೀನುಗಾರರ ಹಿತ ಕಾಯುವ ದೃಷ್ಟಿಯಿಂದ ಬೀಜಾಡಿ ಮೀನುಗಾರರ ಸಹಕಾರಿ ಸಂಘವನ್ನು ಮಾರಿಬಲೆ ಕಾಲದಲ್ಲಿ ಕರಾವಳಿ ಭಾಗದ ಮೀನುಗಾರ ಬಂಧುಗಳು ಕಟ್ಟಿ ಬೆಳೆಸಿದ್ದು ಹಂತಹಂತವಾಗಿ ಬೆಳೆದು ಇದೀಗಾ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಥೆ ಈ ವರ್ಷ 1 ಕೋಟಿ 50 ಲಕ್ಷ ಲಾಭದಲ್ಲಿದೆ. ಸದಸ್ಯರಿಗೆ 15% ಡಿವಿಡೆಂಡ್ ಘೋಷಿಸಲಾಗಿದೆ ಎಂದು ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ  ಅಶೋಕ್ ಪೂಜಾರಿ ಬೀಜಾಡಿ ಹೇಳಿದರು.

ಕೋಟೇಶ್ವರದ ಕಮಲಮ್ಮ ಸರ್ವೋತ್ತಮ ಬುದ್ಧ ಕಲ್ಯಾಣಮಂದಿರದಲ್ಲಿ ಶನಿವಾರ ನಡೆದ ಬೀಜಾಡಿ ಮೀನುಗಾರರ ಸಹಕಾರಿ ಸಂಘ (ನಿ.) ಇದರ ವಾರ್ಷಿಕ ಮಹಾಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಹಿರಿಯ ಮೀನುಗಾರರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು‌.

ಸಂಸ್ಥೆಯಲ್ಲಿ ಸುಮಾರು 14,905 ಎ ತರಗತಿ ಸದಸ್ಯರು, 2566 ಮಂದಿ ಸಿ ತರಗತಿ ಸದಸ್ಯರಿದ್ದು ಉಡುಪಿ ಜಿಲ್ಲೆಯಲ್ಲಿಯೇ ಮೀನುಗಾರಿಕಾ ಸಂಸ್ಥೆಯಲ್ಲಿ ಅತೀ ಹೆಚ್ಚಿನ ಸದಸ್ಯರಿರುವುದು ಬೀಜಾಡಿ ಸೊಸೈಟಿಯಾಗಿದೆ. 1 ಕೋಟಿ 83 ಲಕ್ಷ ಪಾಲು ಬಂಡವಾಳ, ವರ್ಷದಾಂತ್ಯಕ್ಕೆ ಠೇವಣಾತಿಗಳು 73 ಕೋಟಿ, 75.25 ಕೋಟಿ ಹೊರಬಾಕಿ, ದುಡಿಯುವ ಬಂಡವಾಳ 85 ಕೋಟಿ 92 ಲಕ್ಷ, 743 ಸ್ವಸಹಾಯ ಸಂಘಗಳಿದ್ದು ಒಟ್ಟು 7430 ಸದಸ್ಯರಿದ್ದಾರೆ. 35 ಕೋಟಿ 55 ಲಕ್ಷ ಸಾಲ ನೀಡಿದ್ದು 1 ಕೋಟಿ 82 ಲಕ್ಷ ಬಡ್ಡಿ ಸಹಾಯಧನ ಬಾಕಿಯಿದೆ. ಕುಂದಾಪುರ ತಾಲೂಕಿನಲ್ಲಿ 160 ಮೀನುಗಾರಿಕಾ ಮನೆ ಅರ್ಜಿಗಳಿದೆ. ಉಳಿತಾಯ ಪರಿಹಾರ ಯೋಜನೆಯಲ್ಲಿ 2573 ಫಲಾನುಭವಿಗಳಿದ್ದು 886 ಮಂದಿಗೆ ರೂ.3000 ದಂತೆ 26,5800 ರೂ. ಸದಸ್ಯರ ಖಾತೆಗೆ ಜಮಾ ಆಗಿದ್ದು ಉಳಿದವರ ಖಾತೆಗೆ ಸೆಪ್ಟಂಬರ್ ಪ್ರಥಮ ವಾರದಲ್ಲಿ ಖಾತೆಗೆ ಜಮಾ ಆಗಲಿದೆ ಎಂದು ಮಾಹಿತಿ ನೀಡಿದರು.

ಸಂಸ್ಥೆ ಬೆಳೆದು ದೊಡ್ಡದಾದಾಗ ಮೀನುಗಾರರಿಗೆ ಅನುಕೂಲವಾಗಬೇಕೆಂಬ ದೂರದೃಷ್ಟಿಯಿಂದ ಮೀನುಗಾರರ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ಯೋಜನೆ ರೂಪಿಸಲಾಗಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಸಹಕಾರ ನೀಡಲಾಗುತ್ತಿದೆ. ವಯೋವೃದ್ಧ ಮೀನುಗಾರ ಮಹಿಳೆಯರನ್ನು ಸನ್ಮಾನಿಸಿದಾಗ ಅವರ ಆನಂದಬಾಷ್ಪ ಕಂಡು ಮನಸ್ಸಿಗೆ ಸಂತಸವಾಯಿತು. ಎಲ್ಲರ ಪರಿಶ್ರಮ ಹಾಗೂ ಸಹಕಾರದಿಂದ ಸಂಸ್ಥೆಯು ದೊಡ್ಡಮಟ್ಟಕ್ಕೆ ಬೆಳೆದಿದೆ ಎಂದರು.

ಈ ಸಂದರ್ಭದಲ್ಲಿ ಬೀಜಾಡಿ ಮೀನುಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ನಾಗೇಶ ಬೀಜಾಡಿ, ನಿರ್ದೇಶಕರಾದ ಬಿ. ಮಂಜುನಾಥ ಕುಂದರ್, ಬಿ. ಶಿವರಾಮ ಅಮೀನ್ ಬೀಜಾಡಿ, ರಾಜು ತೋಟದಬೆಟ್ಟು, ಬಿ. ಶೇಖರ್ ಮೊಗವೀರ ಅಂಕದಕಟ್ಟೆ, ದಿನೇಶ್ ಮೆಂಡನ್ ಗೋಪಾಡಿ, ಶ್ರೀನಿವಾಸ ಮರಕಾಲ ಗೋಪಾಡಿ, ಅಣ್ಣಯ್ಯ ಪುತ್ರನ್ ಕುಂಭಾಶಿ, ಜಾನಕಿ ಬಿಲ್ಲವ ಹಳೆಅಳಿವೆ, ಅನುಷಾ ಕೊರವಡಿ, ಜ್ಯೋತಿ ಡಿಮೆಲ್ಲೋ, ಸಹನಿರ್ದೇಶಕರಾದ ವೆಂಕಟೇಶ ಕುಮಾರ್ ಬೀಜಾಡಿ, ಸುನೀಲ್ ಜಿ. ನಾಯ್ಕ್ ಚಾತ್ರಬೆಟ್ಟು ಮೊದಲಾದವರಿದ್ದರು.

ಸಂಘದ ಮಾಜಿ ಅಧ್ಯಕ್ಷ ಮಂಜುನಾಥ ಕುಂದರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್ ನಿರೂಪಿಸಿದರು. ಹಿರಿಯ ನಿರ್ದೇಶಕ ಅಣ್ಣಯ್ಯ ಪುತ್ರನ್ ವಂದಿಸಿದರು.

ಸನ್ಮಾನ, ಪ್ರತಿಭಾ ಪುರಸ್ಕಾರ: 50 ವರ್ಷದ ಹಿಂದೆ ಮಾರಿಬಲೆ ಕಾಲದಲ್ಲಿ ಕನಿಷ್ಟ ಕೂಲಿಯಲ್ಲಿ ಮೀನು ಹೊತ್ತು ಜೀವನ ಸಾಗಿಸಿದ ಹಿರಿಯ ಮಹಿಳೆಯರು, ಮಾರಿಬಲೆ ಕೆಲಸ ಮಾಡಿದ ಹಿರಿಯ ಮೀನುಗಾರರು, ಬುಟ್ಟಿಯಲ್ಲಿ ಮೀನುಹೊತ್ತು ವ್ಯಾಪಾರ ಮಾಡಿದ್ದ ಮೀನುಗಾರ ಮಹಿಳೆಯರಿಗೆ ಸನ್ಮಾನಿಸಲಾಯಿತು. 250ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಸ್ವತಃ ಮೀನುಗಾರ ಕುಟುಂಬದಿಂದ ಬಂದಿದ್ದು ಮೀನುಗಾರರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದನ್ನು ಮತ್ತು ಎಲ್ಲ ಹಿರಿಯ ಮೀನುಗಾರರನ್ನು ಗುರುತಿಸಿ ಗೌರವಿಸಿದ ಬಗ್ಗೆ ಸಂಸ್ಥೆಯ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿಯವರಿಗೆ ಮತ್ತು ಸಂಘದ ನಿರ್ದೇಶಕರ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Comments are closed.