ಆರೋಗ್ಯ

ಉಡುಪಿ ಜಿಲ್ಲೆಗೆ 100 ಬೆಡ್’ಗಳ ಇಎಸ್ಐ ಆಸ್ಪತ್ರೆ ಮಂಜೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಕೇಂದ್ರ ಕಾರ್ಮಿಕ ಸಚಿವಾಲಯ ದೇಶದಾದ್ಯಂತ 23 ನೂತನ ಇಎಸ್ಐ ಆಸ್ಪತ್ರೆಗಳನ್ನು ಮಂಜೂರು ಮಾಡಿದ್ದು, ಕರ್ನಾಟಕದಲ್ಲಿ ಉಡುಪಿ ಹಾಗೂ ತುಮಕೂರು ಜಿಲ್ಲೆಗಳಿಗೆ 100 ಬೆಡ್ ಸಾಮರ್ಥ್ಯದ ಇಎಸ್ಐ ಆಸ್ಪತ್ರೆಗಳ ನಿರ್ಮಾಣಕ್ಕೆ ತಾತ್ವಿಕ ಅನುಮೋದನೆಯನ್ನು ಕೇಂದ್ರ ಸರ್ಕಾರ ನೀಡಿದೆ.

ಕರಾವಳಿಯ ಜನತೆಯ ಬಹುದಿನಗಳ ಬೇಡಿಕೆಯಾದ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ, ಶೋಭಾ ಕರಂದ್ಲಾಜೆಯವರು ಈ ಹಿಂದೆ ಒತ್ತಾಯಿಸಿದ್ದರು.

ಈ ಕುರಿತು ಕೇಂದ್ರ ಕಾರ್ಮಿಕ ಸಚಿವರಾದ ಭೂಪೆಂದ್ರ ಯಾದವ್ ಅವರನ್ನು ಕೂಡ ಭೇಟಿಯಾಗಿ ಚರ್ಚಿಸಿ, ಉಡುಪಿಗೆ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡುವಂತೆ ವಿನಂತಿಸಿಕೊಂಡಿದ್ದರು. ಇದರ ಪರಿಣಾಮವಾಗಿ, ಇಎಸ್ಐಸಿ ತನ್ನ 188 ನೇ ಸಾಮಾನ್ಯ ಸಭೆಯಲ್ಲಿ ಉಡುಪಿ ಜಿಲ್ಲೆಗೆ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಉಡುಪಿ ಜಿಲ್ಲೆಗೆ ಇಎಸ್ಐ ಆಸ್ಪತ್ರೆಯನ್ನು ಮಂಜೂರು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರಕ್ಕೆ, ಕೇಂದ್ರ ಸಚಿವರಾದ ಭೂಪೇಂದ್ರ ಯಾದವ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಕರಾವಳಿಯ ಸಮಸ್ತ ಶ್ರಮಿಕರ ಪರವಾಗಿ ಧನ್ಯವಾದವನ್ನು ತಿಳಿಸಿದ್ದಾರೆ.

Comments are closed.