ಕುಂದಾಪುರ: ಜನಪ್ರತಿನಿಧಿಯಾದವರು ಗುದ್ದಲಿ ಪೂಜೆ ಯಾವತ್ತೂ ಮಾಡಬಹುದು. ಗುದ್ದಲಿ ಪೂಜೆ ಮಾಡಿದರೇ ಮುಳುಗಿ ಹೋಗುವುದು ಏನು ಇಲ್ಲ. ಮುದೂರು ಗ್ರಾಮದಲ್ಲಿ ಡೆಂಘಿ ಆವರಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಧೈರ್ಯ ಹೇಳುವುದು ಗುದ್ದಲಿ ಪೂಜೆಗಿಂತ ಆಧ್ಯತೆಯ ಕೆಲಸ. ಜನಪ್ರತಿನಿಧಿಗಳು ಜನರ ಆರೋಗ್ಯ ಸಮಸ್ಯೆಗೆ ಸ್ಪಂದಿಸದೆ ಇರುವುದು ಸರಿಯಲ್ಲ ಎಂದು ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು.
ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ, ಡೆಂಘಿ ಪೀಡಿತರ ಯೋಗಕ್ಷೇಮ ವಿಚಾರಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಅಭಿವೃದ್ಧಿ ಕೆಲಸ ಎಷ್ಟು ಮುಖ್ಯವೋ ಅಷ್ಟೇ ಜನರ ಆರೋಗ್ಯ ಕೂಡಾ ಮುಖ್ಯವಾಗಿರುತ್ತದೆ. ಡೇಂಘಿ ಪೀಡಿತ ಗ್ರಾಮದ ಸಮೀಪಕ್ಕೆ ಬಂದರೂ ಕೂಡ ಅಲ್ಲಿ ಸ್ಥಳೀಯ ಶಾಸಕರು, ಸಂಸದರು ಬೇರೆ ಕಾರಣಕ್ಕೆ ಸುದ್ದಿಗೋಷ್ಠಿ ನಡೆಸಿ ತಮ್ಮ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ ಹೊರತು ಮುದೂರು ಗ್ರಾಮಸ್ಥರ ಆರೋಗ್ಯ ಸಮಸ್ಯೆಗೆ ಸ್ಪಂದಿಸುವ ಬಗ್ಗೆ ಸ್ವಲ್ಪವೂ ಗಮನಹರಿಸಿಲ್ಲ, ಆ ಬಗ್ಗೆ ಮಾತನಾಡಿಲ್ಲ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅವರು ಡೆಂಘಿ ಪೀಡಿತ ಪ್ರದೇಶಕ್ಕೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾದ ಡೆಂಘಿ ಭಾದಿತರ ಆರೋಗ್ಯ ವಿಚಾರಿಸಬೇಕಿತ್ತು. ಸ್ಥಳೀಯ ಜನಪ್ರತಿನಿಧಿಗಳು ಸಚಿವರಿಗೆ ಸಮಸ್ಯೆ ಗಂಭೀರತೆಯ ಮನದಟ್ಟು ಮಾಡಲು ವಿಫಲವಾಗಿರುವುದರಿಂದ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ ಎಂದು ಅರಿವಾಗುತ್ತಿದೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರ ಡೆಂಘಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ದಾಖಲಾದವರು ಯೋಗಕ್ಷೇಮ ವಿಚಾರಿಬೇಕು ಎಂದು ಒತ್ತಾಯಿಸಿದರು.
ಡೆಂಘಿ ಪೀಡಿತರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಪೀಡಿತರು ಹಣ ಕಟ್ಟಬೇಕಾಗುತ್ತದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸುವಂತೆ ಒತ್ತಾಯಿಸಿದ ಅವರು, ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗಭೂಷಣ ಉಡುಪ ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಡೆಂಘಿ ಕರೋನಾದಂತೆ ಹರಡಲು ಬಿಡದೆ ನಿಯಂತ್ರಣಕ್ಕೆ ಎಲ್ಲಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಕುಂದಾಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ ಅವರು ಈವರೆಗೆ ಆಸ್ಪತ್ರೆಗೆ ದಾಖಲಾದ ಡೆಂಘಿ ಪೀಡಿತರ ಹಾಗೂ ಬಿಡುಗಡೆ ಆದವರ ಮಾಹಿತಿ ನೀಡಿ, ಡೆಂಘಿ ಬಾಧಿತರ ಚಿಕಿತ್ಸೆಗೆ ಮಾಡುಕೊಂಡ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆಯ ಸೌಕರ್ಯಗಳ ಬಗ್ಗೆ ಮಾಜಿ ಶಾಸಕರು ಈ ಸಂದರ್ಭ ಮೆಚ್ವುಗೆ ವ್ಯಕ್ತಪಡಿಸಿದರು.