ಆರೋಗ್ಯ

ಅರ್ಹ ಪ್ರತಿಯೊಬ್ಬರು ಲಸಿಕೆ‌ ಪಡೆಯಿರಿ: 15-18 ವರ್ಷದ ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಸಿಎಂ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ರಾಜ್ಯಾದ್ಯಂತ 15 ರಿಂದ 18 ವರ್ಷದ ಮಕ್ಕಳ ಕೊರೋನಾ ಲಸಿಕೆ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಸೋಮವಾರ ಚಾಲನೆ ನೀಡಿದ್ದಾರೆ.

ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರ ಶಾಲೆಯಲ್ಲಿ ಸಿಎಂ ಬೊಮ್ಮಾಯಿ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್, ವಸತಿ ಖಾತೆ ಸಚಿವ ವಿ ಸೋಮಣ್ಣ, ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲರಿಗೂ ಸುರಕ್ಷಿತವಾದ ಆರೋಗ್ಯ ಸಿಗಬೇಕೆಂಬುದು ಅಭಿಯಾನದ ಉದ್ದೇಶವಾಗಿದೆ. ಕೊರೋನಾ ವೈರಸ್ ಎರಡೂ ಅಲೆಯ ಸಂದರ್ಭದಲ್ಲಿ ಸಮರ್ಥವಾಗಿ ಎದುರಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಉತ್ತಮ ನಿರ್ಣಯಗಳನ್ನು ತೆಗೆದುಕೊಂಡು ಜನತೆಗೆ ಸಹಾಯ ಮಾಡಿದ್ದಾರೆ. ಕೋವಿಡ್ ಲಸಿಕೆ ನೀಡಿಕೆಯಲ್ಲಿ ಭಾರತ ದೇಶ ವಿಶ್ವಕ್ಕೆ ಮಾದರಿಯಾಗಿದೆ ಎಂದರು.

ಕರ್ನಾಟಕ ಸೇರಿದಂತೆ ಭಾರತವನ್ನು ಸುರಕ್ಷಿತ ಮಾಡುವಲ್ಲಿ, ಯುವಜನತೆಯನ್ನು ಕಾಪಾಡುವಲ್ಲಿ ಲಸಿಕೆ ಅಭಿಯಾನ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಅರ್ಹ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಿ. ಜನರು ಸಹಕರಿಸಿದರೆ, ಕೋವಿಡ್ ನಿಯಮಗಳನ್ನು, ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸಿಕೊಂಡು ಹೋದರೆ ಸೋಂಕು ನಿಯಂತ್ರಣ ಮಾಡಲು ಖಂಡಿತಾ ಸಾಧ್ಯವಿದೆ ಎಂದರು. ಕರ್ನಾಟಕದಲ್ಲಿ ಕೊರೋನಾ ಮೂರನೇ ಅಲೆ ಬಿಂಬಿತವಾಗಿದೆ. ಹೀಗಾಗಿ 3ನೇ ಅಲೆ ತಡೆಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಕಠಿಣ ಕ್ರಮದ ಸುಳಿವನ್ನು ಸಿಎಂ ಬೊಮ್ಮಾಯಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ಇಡೀ ವಿಶ್ವದಲ್ಲಿ ಭಾರತ ಕೋವಿಡ್ ಲಸಿಕೆ ಅಭಿಯಾನದಲ್ಲಿ ದೊಡ್ಡ ಸಾಧನೆ ಮಾಡಿದೆ. ಕೋವಿಡ್ ನಿಯಂತ್ರಣದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿದೆ. ಹಿಂದಿನ ಕೋವಿಡ್ ಎರಡೂ ಅಲೆಗಳು ರಾಜ್ಯಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ನಾವು ಸಮರ್ಥವಾಗಿ ನಿಭಾಯಿಸಿದ್ದೇವೆ. ಈ ಬಾರಿ ಕೂಡ ಕೋವಿಡ್ ಸಂಕಷ್ಟದಿಂದ ಹೊರಬರುವ ವಿಶ್ವಾಸವಿದೆ. ಕೊರೋನಾ ಎಂಬ ಮಹಾಮಾರಿ ವೈರಸ್ ನ್ನು ಶೀಘ್ರ ಹೊಡೆದೋಡಿಸುವ, ಅದನ್ನು ಗೆಲ್ಲುವ ಗುರಿ ನಮ್ಮ ಮುಂದಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪಣತೊಡೋಣ ಎಂದರು.

Comments are closed.