ಆರೋಗ್ಯ

15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ಅಭಿಯಾನ ಇಂದು ಆರಂಭ..!

Pinterest LinkedIn Tumblr

ಬೆಂಗಳೂರು: ಕೋವಿಡ್ -19 ಲಸಿಕೆಯ ಮತ್ತೊಂದು ಮಹತ್ತರ ಅಭಿಯಾನಕ್ಕೆ ದೇಶಾದ್ಯಂತ ಇಂದು (ಜ.3ಸೋಮವಾರ) ಚಾಲನೆ ಸಿಗಲಿದೆ. 15ರಿಂದ 18 ವರ್ಷದ ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಇಂದು ಆರಂಭವಾಗುತ್ತಿದೆ.

ಇಂದು ಬೆಂಗಳೂರಿನ ಬಿಬಿಎಂಪಿ ವಲಯದ ಮೂಡಲಪಾಳ್ಯದ ಭೈರವೇಶ್ವರ ಶಾಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮಕ್ಕಳು ಆಧಾರ್ ಕಾರ್ಡ್ ಅಥವಾ ಶಾಲೆಯ ಗುರುತು ಪತ್ರ ನೀಡಿದರೆ ಸಾಕು ಲಸಿಕೆ ಸಿಗುತ್ತದೆ.

ಮಕ್ಕಳಿಗೆ ಇಂದು ಲಸಿಕೆ ನೀಡಿದ ನಂತರ ಅರ್ಧ ಗಂಟೆ ಕಾಲ ಅವರನ್ನು ನಿಗಾವಹಿಸಲು ಇರಿಸಿಕೊಂಡು ನಂತರ ಯಾವುದೇ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರದಿದ್ದರೆ ಕಳುಹಿಸಲಾಗುತ್ತದೆ.

ದೇಶಾದ್ಯಂತ 15 ವರ್ಷದ ನಂತರದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಕಳೆದ ಡಿಸೆಂಬರ್ 25ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಇನ್ನೊಂದೆಡೆ ಕೋವಿಡ್ ಮುಂಚೂಣಿ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ, ಆರೋಗ್ಯ ವಲಯ ಸೇವಕರಿಗೆ ಆರಂಭಿಕ ಹಂತದಲ್ಲಿ ಮೂರನೇ ಡೋಸ್ ನೀಡುವ ಕಾರ್ಯಕ್ರಮ ಜನವರಿ 10ರಿಂದ ಆರಂಭವಾಗಲಿದೆ.

15ರಿಂದ 18 ವರ್ಷದವರೆಗಿನವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದೆ. ಇದಕ್ಕೆ ಈಗಾಗಲೇ ಮೊನ್ನೆ ಹೊಸ ವರ್ಷ ಆರಂಭ ದಿನ ಕೋವಿನ್ (C0-WIN) ಪೋರ್ಟಲ್ ನಲ್ಲಿ ದಾಖಲಾತಿ ಆರಂಭವಾಗಿದೆ. ಇಂದು ಲಸಿಕೆ ಆರಂಭಗೊಂಡ ನಂತರ ಸ್ಥಳದಲ್ಲಿಯೇ ಬಂದು ದಾಖಲಾತಿ ಕೂಡ ಮಾಡಿಕೊಳ್ಳಬಹುದಾಗಿದೆ.

Comments are closed.