ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಉಡುಪಿ ಇವುಗಳ ಸಹಯೋಗದೊಂದಿಗೆ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಂಗಳವಾರ ಉಡುಪಿ ಐಎಂಎ ಭವನದಲ್ಲಿ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಭಾರತೀಯ ವೈದ್ಯಕೀಯ ಸಂಘ ಕರಾವಳಿ ಉಡುಪಿ ಅಧ್ಯಕ್ಷ ಡಾ.ಕೆ.ವಿನಾಯಕ ಶೆಣೈ ಮಾತನಾಡಿ, ವೈದ್ಯರು ಮನುಷ್ಯರ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿದರೆ, ಮಾಧ್ಯಮಗಳನ್ನು ಸಾಮಾಜಿಕ ಆರೋಗ್ಯವನ್ನು ಕಾಪಾಡುತ್ತದೆ. ಈ ಎರಡೂ 24ಗಂಟೆಗಳ ಜನರ ಸೇವೆ ಮಾಡುವ ವೃತ್ತಿಯಾಗಿವೆ. ಸ್ವಾತಂತ್ರ ಚಳವಳಿ ಸೇರಿದಂತೆ ದೇಶದ ಅಭಿವೃದ್ಧಿ ಯಲ್ಲಿ ಮಾಧ್ಯಮ ಸಾಕಷ್ಟು ಮುಖ್ಯ ಪಾತ್ರವನ್ನು ವಹಿಸಿದೆ ಎಂದು ತಿಳಿಸಿದರು.
ಮಣಿಪಾಲ ಕೆಎಂಸಿಯ ಹೃದ್ರೋಗ ತಜ್ಞ ಡಾ.ಅಬ್ದುಲ್ ರಝಾಕ್ ಮಾತನಾಡಿ, ರಕ್ತನಾಳದಲ್ಲಿ ಕೊಬ್ಬಿನಾಂಶ ಹೆಚ್ಚಾಗಿ ದಿಢೀರನೇ ಬ್ಲಾಕ್ ಆಗು ವುದುರಿಂದ ಹೃದಯಾಘಾತ ಸಂಭವಿಸುತ್ತದೆ. ಆದುದರಿಂದ ಇದನ್ನು ನಾವು ಅತ್ಯಂತ ಶೀಘ್ರವಾಗಿ ಪತ್ತೆ ಹಚ್ಚಬೇಕು. ಹೃದಯದಲ್ಲಿ ಕಂಡು ಬರುವ ರೋಗ ಗಳನ್ನು ಗ್ಯಾಸ್ಟಿಕ್ ಸಮಸ್ಯೆ ಎಂಬುದಾಗಿ ನಿರ್ಲಕ್ಷ ಮಾಡದೆ ವೈದ್ಯರನ್ನು ಸಂಪರ್ಕಿಸಬೇಕು. ಕಾಲಕಾಲಕ್ಕೆ ಹೃದಯ ಪರೀಕ್ಷೆ ಮಾಡುವುದರಿಂದ ಹೃದಯಾಘಾತ ಗಳನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು.
ಉಡುಪಿ ವಾರ್ತಾಧಿಕಾರಿ ಮಂಜುನಾಥ್, ಭಾರತೀಯ ವೈದ್ಯಕೀಯ ಸಂಘ ಉಡುಪಿ ಪ್ರಧಾನ ಕಾರ್ಯದರ್ಶಿ ಡಾ.ಗಣಪತಿ ಹೆಗಡೆ, ಮಣಿಪಾಲ ಕೆಎಂಸಿಯ ಮಾರ್ಕೆಟಿಂಗ್ ವಿಭಾಗದ ಮುಖ್ಯ ವ್ಯವಸ್ಥಾಪಕ ಸಚಿನ್ ಕಾರಂತ್, ವ್ಯವಸ್ಥಾಪಕ ಮೋಹನ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ಉಡುಪಿ ಪತ್ರಿಕಾ ಭವನದ ಸಂಚಾಲಕ ಸುಭಾಶ್ ಚಂದ್ರ ವಾಗ್ಳೆ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತೆ ಪಲ್ಲವಿ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ಜನರಲ್ ಮೆಡಿಸಿನ್, ಹೃದಯ, ಚರ್ಮ, ನೇತ್ರ, ಮೂಗು, ಕಿವಿ ಗಂಟಲು, ಮೂಳೆ, ರಕ್ತದೊತ್ತಡ, ಮಧುಮೇಹ ಹಾಗೂ ಇಸಿಜಿ ಪರೀಕ್ಷೆ ಗಳನ್ನು ಮಾಡಲಾಯಿತು. ಶಿಬಿರದಲ್ಲಿ ಜಿಲ್ಲೆಯ 90ಕ್ಕೂ ಅಧಿಕ ಪತ್ರಕರ್ತರು ಭಾಗವಹಿಸಿದ್ದರು.
Comments are closed.