ಆರೋಗ್ಯ

ಕೋವಿಡ್ ಲಸಿಕೆ ಪಡೆಯುಲು ಬಾಕಿ ಇರುವವರ ಮನವೊಲಿಸಿ: ಡಿಸಿ ಕೂರ್ಮಾರಾವ್ ಎಂ

Pinterest LinkedIn Tumblr

ಉಡುಪಿ: ಜಿಲ್ಲೆಯಲ್ಲಿ ಪ್ರಥಮ ಡೋಸ್ ಕೋವಿಡ್ ಲಸಿಕೆ ನೀಡುವಲ್ಲಿ ಶೇ.93ರಷ್ಟು ಸಾಧನೆ ಮಾಡಿದ್ದು, ಬಾಕಿ ಉಳಿದ ಶೇ.7 ರಷ್ಟು ಜನರಿಗೆ ಲಸಿಕೆ ಪಡೆಯುವಂತೆ ಎಲ್ಲಾ ಸಮುದಾಯಗಳ ಮುಖಂಡರು ಮತ್ತು ವೈದ್ಯರು ಮನವೊಲಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ, ಜಿಲ್ಲೆಯ ವಿವಿಧ ಸಮುದಾಯಗಳ ಮುಖಂಡರು ಮತ್ತು ವೈದ್ಯರೊಂದಿಗೆ ನಡೆದ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎರಡೂ ಡೋಸ್ ಕೋವಿಡ್ ಲಸಿಕೆ ಪಡೆಯುವುದರಿಂದ ಕೋವಿಡ್‌ನಿಂದ ಗರಿಷ್ಠ ಸುರಕ್ಷೆ ದೊರೆಯಲಿದೆ. ಜಿಲ್ಲೆಯಲ್ಲಿ ಪ್ರಥಮ ಡೋಸ್ ಲಸಿಕೆ ಪಡೆಯಲು ಬಾಕಿ ಇರುವವರು ಮತ್ತು ಈಗಾಗಲೇ ಮೊದಲ ಡೋಸ್ ಪಡೆದು 2 ನೇ ಡೋಸ್ ಪಡೆಯಲು ಅವಧಿ ಮೀರಿದವರು ತಕ್ಷಣವೇ ಲಸಿಕೆಯನ್ನು ಪಡೆಯಬೇಕು. ಲಸಿಕೆ ಪಡೆಯಲು ನಿರಾಸಕ್ತಿ ತೋರುವವರನ್ನು ಸಂಬಂಧಪಟ್ಟ ಸಮುದಾಯಗಳ ಮುಖಂಡರು ಮನವೊಲಿಸಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು ಎಂದರು.

ಜಿಲ್ಲೆಯ ಎಲ್ಲಾ ವೈದ್ಯರು ತಮ್ಮಲ್ಲಿಗೆ ಬರುವ ರೋಗಿಗಳು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪರಿಶೀಲಿಸಬೇಕು. ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ಲಸಿಕೆಯ ಪ್ರಯೋಜನ ಕುರಿತು ಮನವರಿಕೆ ಮಾಡಿಕೊಡಬೇಕು. ರೋಗಿಗಳಿಗೆ ನೀಡುವ ಸಲಹಾ ಚೀಟಿಯಲ್ಲಿ ಲಸಿಕೆ ಪಡೆಯುವ ಕುರಿತಂತೆ ಹಾಗೂ ರೋಗ ಲಕ್ಷಣಗಳಿದ್ದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆಗಳÀನ್ನು ಬರೆದು ಕೊಡಬೇಕು ಎಂದರು.

ಜಿಲ್ಲೆಯಾದ್ಯಂತ ಲಸಿಕೆ ಅಭಿಯಾನದಡಿಯಲ್ಲಿ, ಆಶಾ ಕಾರ್ಯಕರ್ತೆಯರು ಮತದಾರರ ಪಟ್ಟಿಯೊಂದಿಗೆ ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆಯದೇ ಇರುವವರ ಮಾಹಿತಿ ಸೇರಿದಂತೆ, ಲಸಿಕೆ ಪಡೆಯದೇ ಇರುವ ಕಾರಣ ತಿಳಿದು ಅವರುಗಳ ಮನವೊಲಿಸಿ ಲಸಿಕೆ ನೀಡುತ್ತಿದ್ದಾರೆ ಎಂದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳು ಗ್ರಾಮೀಣ ಟಾಸ್ಕ್ಪೋರ್ಸ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾರ್ಡ್ ಮಟ್ಟದಲ್ಲಿ ಟಾಸ್ಕ್ಪೋರ್ಸ್ ಸಮಿತಿ ಸಭೆ ಸೇರಿ, ಲಸಿಕೆ ಪಡೆಯದೇ ಇರುವವರ ಮಾಹಿತಿ ಪಡೆದು, ಅವರುಗಳಿಗೆ ತಿಳಿ ಹೇಳಬೇಕು. ಯಾವುದಾದರೂ ಇತರೆ ಕಾಯಿಲೆಗಳು ಹೊಂದಿದ್ದಲ್ಲಿ ವೈದ್ಯರ ಸಲಹೆ ಪಡೆದು ಲಸಿಕೆ ತೆಗೆದುಕೊಳ್ಳುವಂತೆ ತಿಳಿಸಬೇಕು ಎಂದರು.

ಜಿಲ್ಲೆಗೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವವರಿಗೆ ಕೂಡಾ ಲಸಿಕೆ ನೀಡಲು ಕ್ರಮ ಕೈಗೊಂಡಿದ್ದು, ಕೋವಿಡ್ ಕುರಿತು ಜಾಗೃತಿ ಮೂಡಿಸಲು ಬಸ್ ಸ್ಟಾಂಡ್, ಕಮರ್ಷಿಯಲ್ ಕಾಂಪ್ಲೆಕ್ಸ್ಗಳು ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲೆಡೆ ಮಾಸ್ಕ್ ಡ್ರೆöÊವ್ ಮಾಡಲಾಗುವುದು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯ ನಡೆಯಲಿದ್ದು, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯತ್‌ಗಳಲ್ಲಿ ಈ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿನ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು 2 ಡೋಸ್ ಲಸಿಕೆ ಪಡೆಯುವ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣಪ್ಪ, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಪೌರಾಯುಕ್ತ ಉದಯ ಶೆಟ್ಟಿ, ವಿವಿಧ ಸಮುದಾಯಗಳ ಮುಖಂಡರು, ಐಎಂಎ ಮತ್ತು ಆಯುಷ್ ವೈದ್ಯರು ಮತ್ತಿತರರು ಉಪಸ್ಥಿತರಿದ್ದರು.

Comments are closed.