ಆರೋಗ್ಯ

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಘಟಕ ಉದ್ಘಾಟನೆ

Pinterest LinkedIn Tumblr

ಕುಂದಾಪುರ: ಕರೋನಾ ಎರಡನೇ ಅಲೆ ಸಂದರ್ಭ ಅಕ್ಸಿಜನ್ ಕೊರತೆ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿದ್ದು, ಅದರ ಪರಿಣಾಮ ಜನರಲ್ಲಿ ಮಾನಸಿಕ ಅಲ್ಲೋಲಕಲ್ಲೋಲ, ಉದ್ವೇಗಕ್ಕೂ ಕಾರಣವಾಗಿತ್ತು. ಕರೋನಾ ಪೀಡಿತರಿಗೆ ಆಕ್ಸಿಜನ್ ಕೊರತೆ ಕಾಡಲಿದೆಯಾ ಎನ್ನುವ ಪ್ರಶ್ನೆ ಎಲ್ಲರಲ್ಲೂ ಉದ್ಬವವಾಗಿದ್ದು, ಈವತ್ತು ವೈದ್ಯಕೀಯ ಆಮ್ಲಜನಕ ಘಟಕ ವಿದ್ಯುಕ್ತವಾಗಿ ಆರಂಭವಾಗುವ ಮೂಲಕ ದೊಡ್ಡದೊಂದು ಭಾರ ಇಳಿದಂತಾಗಿದೆ ಎಂದು ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯಿತಿ, ಆರೋಗ್ಯ ರಕ್ಷಾ ಸಮಿತಿ ತಾಲೂಕು ಆಸ್ಪತ್ರೆ ಆಶ್ರಯದಲ್ಲಿ ತಾಲೂಕು ಆಸ್ಪತ್ರೆ ವಠಾದಲ್ಲಿ ಸಿದ್ದಪಡಿಸಿದ ವೈದ್ಯಕೀಯ ಆಮ್ಲಜನಕ ಘಟಕ ಗುರುವಾರ ಉದ್ಘಾಟಿಸಿ, ಘಟಕದಿಂದ ಮೂರು ಜಿಲ್ಲೆ ಜನರಿಗೆ ಪ್ರಯೋಜನ ಸಿಗಲಿದ್ದು, ಘಟಕ ಸ್ಥಾಪನೆಗೆ 3 ಲಕ್ಷ ಅನುದಾನ ನೀಡಿದ ಸಚಿವ ಶೋಭಾ ಕರಂದ್ಲಾಜೆ, ಸ್ಥಳೀಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾಡಳಿತ, ಅಧಿಕಾರಿವರ್ಗಕ್ಕೆ ಸಾರ್ವಜನಿಕರು ಅಭಾರಿಯಾಗಿದ್ದಾರೆ ಎಂದರು.

ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ.ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಪ್ರಾಣವಾಯು ಸಮಸ್ಯೆ ನಮ್ಮ ದೇಹದ ಆಮ್ಲಜನಕ ಮಟ್ಟ ಕುಗ್ಗಿಸಿದ್ದು, ಆಮ್ಲಜನಕ ವ್ಯವಸ್ಥೆ ಮಾಡುವಲ್ಲಿ ಹೈರಾಣಾಗಬೇಕಾಯಿತು. ಕುಂದಾಪುರ ದಾನಿಗಳ ನಾಡಾಗಿದ್ದು, ಘಟಕಕ್ಕೆ ಸಹಾಯ ಮಾಡುವ ಜೊತೆ ಸಾರ್ವಜನಕರು ಕರೋನಾ ಆಸ್ಪತ್ರೆಗೆ ಸಾಕಷ್ಟು ವ್ಯವಸ್ಥೆಗಳನ್ನು ದಾನಿಗಳ ನೀಡಿದ್ದು, ಎಲ್ಲರ ಸಹಕಾರದಲ್ಲಿ ಘಟಕ ಆರಂಭವಾಗಿ ಆಮ್ಲಜನಕ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿದೆ ಎಂದರು.

ಕುಂದಾಪುರ ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಪ್ರಾಧಿಕಾರ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಸ್ಥಳೀಯ ವಾರ್ಡ್ ಸದಸ್ಯೆ ದೇವಕಿ ಪಿ.ಸಣ್ಣಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ರಾಜೇಶ್ವರಿ, ಕೋಟೇಶ್ವರ ಲಯನ್ಸ್ ಅಧ್ಯಕ್ಷ ಏಕನಾಥ ಬೋಳಾರ್, ಗೇಲ್ ಇಂಡಿಯಾ ಜನರಲ್ ಮೆನೇಜರ್ ವಿಜಯಾನಂದ ಇದ್ದರು.

ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ ಸ್ವಾಗತಿಸಿದರು. ಆಸ್ಪತ್ರೆ ಸಿಬ್ಬಂದಿ ನಯನಾ, ಶೋಭಾ ಪ್ರಾರ್ಥಿಸಿದರು. ಆಸ್ಪತ್ರೆ ಸ್ಟಾಪ್ ನರ್ಸ್ ವೀಣಾ ಶಶಿಕಿರಣ್ ನಿರೂಪಿಸಿ, ವಂದಿಸಿದರು.

Comments are closed.