ಆರೋಗ್ಯ

ನಿಫಾ ವೈರಸ್ ಬಗ್ಗೆ ಆತಂಕ ಬೇಡ ಮುನ್ನೆಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ.

Pinterest LinkedIn Tumblr

ಉಡುಪಿ: ನಿಫಾ ವೈರಸ್ ಬಗ್ಗೆ ಜನರು ಆತಂಕಗೊಳ್ಳದೆ ಆರೋಗ್ಯ ಇಲಾಖೆ ಸೂಚಿಸುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್. ಎಂ ಹೇಳಿದರು.

ಅವರು ತಮ್ಮ ಕಛೇರಿಯ ಸಭಾಂಗಣದಲ್ಲಿ ನಿಫಾ ವೈರಸ್ ನಿಯಂತ್ರಣ ಹಾಗೂ ಜಿಲ್ಲಾ ಮಟ್ಟದ ಕೋವಿಡ್ ನಿಯಂತ್ರಣ ತಜ್ಞರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನೆರೆ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಸೋಂಕು ಕಂಡು ಬಂದಿದ್ದು, ಅಲ್ಲಿನ ಜನರು ನಾನಾ ಕಾರಣಗಳಿಂದ ಜಿಲ್ಲೆಗೆ ಬಂದು ಹೋಗುತ್ತಾರೆ, ಸರ್ಕಾರ ಕೇರಳ ರಾಜ್ಯದಿಂದ ಜನರು ಬರುವುದನ್ನು ಹಾಗೂ ಹೋಗುವುದನ್ನು ನಿರ್ಬಂದಿಸಿದೆ, ಆದರೂ ಸಹ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.ಜ್ವರ, ಕೀಲುನೋವು, ದೇಹದ ಆಯಾಸ, ತಲೆನೋವು, ತಲೆ ಸುತ್ತುವಿಕೆ, ಮಾನಸಿಕ ಗೊಂದಲ, ಜ್ಞಾನ ತಪ್ಪುವುದು, ನಿಫಾ ವೈರಾಣು ಜ್ವರದ ಲಕ್ಷಣಗಳಾಗಿವೆ ಎಂದರು.

ಸಾಮಾನ್ಯವಾಗಿ ಸೋಕಿತ ಬಾವಲಿಗಳ ನೇರ ಸಂಪರ್ಕದಿಂದ ಅಥಾವ ಬಾವಲಿಗಳು ಸೇವಿಸಿ ಬಿಸಾಡಿದ ಹಣ್ಣು-ಹಂಪಲುಗಳನ್ನು ಸೇವಿಸುವುದರಿಂದ ಇತರೆ ಪ್ರಾಣಿಗಳಿಗೂ ಹರಡುವ ಸಾದ್ಯತೆ ಇದೆ ಎಂದರು.

ಸಾರ್ವಜನಿಕರಿಗೆ ನಿಫಾ ಸೋಕಿನ ಹರಡುವಿಕೆ ಮತ್ತು ನಿಯಂತ್ರಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಸಿದರು.
ಕೇರಳದಿಂದ ಬರುವವರಿಗೆ ಕಡ್ಡಾಯವಾಗಿ 72 ಗಂಟೆಯೊಳಗಿನ ಕೋವಿಡ್ ಸೋಂಕಿನ ನೆಗೇಟಿವ್ ವರದಿಯನ್ನು ಹೊಂದಿ ಬಂದತಹ ವ್ಯಕ್ತಿಯನ್ನು ಕಡ್ಡಾಯವಾಗಿ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಬೇಕು, ಅಲ್ಲದೆ ಕೋವಿಡ್ ಪರೀಕ್ಷೆಗೆ ಒಳಪಡಬೇಕು, ಕೊಲ್ಲುರು ದೇವಸ್ಥಾನ ಸೇರಿದಂತೆ ಮತ್ತಿತರ ಧಾರ್ಮಿಕ ಸ್ಥಳಗಳಿಗೆ ಬರುವಂತವರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದರು.

ಜನರು ಹೇಚ್ಚು ಸೇರುವಂತಹ ಮಾರುಕಟ್ಟೆ, ಸಂತೆಗಳಲ್ಲಿ, ಸಭೆ, ಸಮಾರಂಭಗಳಲ್ಲಿಯೂ ಸಹ ಸೋಂಕು ಹೆಚ್ಚು ಹರಡುವ ಸಾಧ್ಯೆತೆ ಇರುವುದರಿಂದ ಅಲ್ಲಿಯೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು-ಹೆಚ್ಚು ಕೈಗೊಳ್ಳಬೇಕು ಎಂದರು.

ಹೊರ ದೇಶ, ಹೊರ ರಾಜ್ಯಗಳಿಂದ ವಿದಾಭ್ಯ್ಯಾಸಕ್ಕೆ ಬಂದು ವಿಧ್ಯಾರ್ಥಿ ನಿಲಯಗಳಲ್ಲಿ ತಂಗುವವರನ್ನು ಕಾಲ-ಕಾಲಕ್ಕೆ ಕೋವಿಡ್ ಪರೀಕ್ಷೆಗೊಳಪಡಿಸಬೇಕು ಎಂದ ಅವರು ಕೋವಿಡ್ ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕಡ್ಡಾಯವಾಗಿ ಗುರುತಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು, ಗ್ರಾಮಗಳಿಗೆ ಹೊರಗಿನಿಂದ ಬಂದವರ ಮಾಹಿತಿಯನ್ನು ನೆರೆ-ಹೊರೆಯವರು ಟಾಸ್ಕ್-ಪೊರ್ಸ್ ಸಮಿತಿಗೆ ನೀಡಬೇಕು ಎಂದರು.
ಪ್ರತಿ ಶಾಲಾ-ಕಾಲೇಜುಗಳಿಗೆ ಒಬ್ಬ ಕೋವಿಡ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿ ಅಲ್ಲಿನ ಕೋವಿಡ್ ಸೋಂಕಿನ ಸ್ಥಿತಿಗತಿಗಳ ಬಗ್ಗೆ ನಿಗಾವಹಿಸುವ ಕಾರ್ಯವಾಗಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ ಮಾತನಾಡಿ ಪ್ರಾಣಿ, ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು, ಬಾವಲಿಗಳು ಹೆಚ್ಚು ಇರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ, ತಾಳೆ ಹಣ್ಣಿನ ರಸವನ್ನು ಸೇವಿಸಬಾರದು. ಹಣ್ಣು ಮತ್ತು ಒಣ ಖರ್ಜೂರವನ್ನು ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ದೀಕರಿಸಿಕೊಳ್ಳಬೇಕು ಎಂದರು.
ಸೋಂಕಿತ ಪ್ರಾಣಿಗಳಿಂದ ಇತರೆ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು, ರಕ್ತ ಹಾಗೂ ನೇರ ಸಂಪರ್ಕದಿಂದ ಸೋಂಕು ಹರಡುವ ಸಾದ್ಯತೆ ಇರುತ್ತದೆ. ಪ್ರತಿಯೊಬ್ಬರೂ ಕೈ-ಗಳನ್ನು ಆಗಿಂದಾಗೆ ಶುದ್ಧೀಕರಿಸಿಕೊಳ್ಳಬೇಕು. ಬಾವಲಿಗಳು ವಾಸವಿರುವ ಬಾವಿಯ ನೀರನ್ನು ಕುದಿಸದೆ ಉಪಯೋಗಿಸಬಾರದು ಎಂದ ಅವರು ಸೋಂಕಿತರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಾಗಭೂಷಣ್ ಉಡುಪ, ಜಿಲ್ಲಾ ಸರ್ಜನ್ ಮಧುಸೂಧನ್ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.