ಆರೋಗ್ಯ

ಕೋವಿಡ್ ನಿಯಂತ್ರಣದ ಬಗ್ಗೆ ಉಡುಪಿ ಟಿಎಂಎಪೈ ವೈದ್ಯ ಡಾ.ಶಶಿಕಿರಣ್ ಜೊತೆ ಸಿಎಂ ಯಡಿಯೂರಪ್ಪ ಸಂವಾದ

Pinterest LinkedIn Tumblr

ಉಡುಪಿ: ರಾಜ್ಯದಲ್ಲಿ ಕೋವಿಡ್ ಎರಡನೆ ಅಲೆ ನಿಯಂತ್ರಣ ಕುರಿತಂತೆ ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಕೋವಿಡ್ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುವ ಕುರಿತಂತೆ ರಾಜ್ಯದ ವಿವಿಧ ಜಿಲ್ಲೆಗಳ 11 ಮಂದಿ ಪರಿಣಿತ ವೈದ್ಯರಿಂದ ಇಂದು ವೀಡಿಯೋ ಸಂವಾದದ ಮೂಲಕ ಸಲಹೆ ಸೂಚನೆ ಆಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉಡುಪಿಯ ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಶಿಕಿರಣ್ ಅವರಿಂದ ಸಲಹೆಗಳನ್ನು ಕೋರಿದರು.

ಭಾರತದಲ್ಲಿ ಪ್ರಪ್ರಥಮ ಖಾಸಗಿ ಕೋವಿಡ್ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸಿದ ಡಾ. ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ಆರಂಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿಗಳು, ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಕೋವಿಡ್ ನಿಯಂತ್ರಣ ಕುರಿತಂತೆ ಡಾ.ಶಶಿಕಿರಣ್ ಅವರು ನೀಡಿದ ಸಲಹೆಗಳು ಮತ್ತು ತರಬೇತಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.

ಜಿಲ್ಲೆಯಲ್ಲಿ ಕೋವಿಡ್ ಆರಂಭದಲ್ಲಿ ಈ ರೋಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ಕೂಡ ವಿವಿದೆಡೆಗಳಿಂದ ಮಾಹಿತಿ ಸಂಗ್ರಹಿಸಿ ಚಿಕಿತ್ಸೆಯ ಬಗ್ಗೆ ಅರಿತು, ಕೆ.ಪಿ.ಎಂ.ಇ ಅಡಿ ಬರುವ ಎಲ್ಲಾ ಆಸ್ಪತ್ರೆಗಳ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸರ್ ಬಳಕೆ ಬಗ್ಗೆ ತರಬೇತಿ ನೀಡಲಾಯಿತು. ಪಿಪಿಇ ಕಿಟ್ ಗಳ ಬಳಕೆ ಬಗ್ಗೆ ಸಹ ವೀಡಿಯೋ ತಯಾರಿಸಿ ಎಲ್ಲಾ ವೈದ್ಯರಿಗೆ ಕಳುಹಿಸಲಾಯಿತು. ಸೋಂಕು ಹರದಡಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಸ್ಪತ್ರೆಯ ಪ್ರತಿಯೊಂದು ಸಿಬ್ಬಂದಿಯೂ ಸಹ ಯಾವ ರೀತಿಯ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಆನ್‌ಲೈನ್‌ನಲ್ಲಿ ಹಾಗೂ ಆಸ್ಪತ್ರೆಗಳಿಗೆ ತೆರಳಿ ತರಬೇತಿ ನೀಡಲಾಯಿತು ಎಂದು ಡಾ.ಶಶಿಕಿರಣ್ ತಿಳಿಸಿದರು.

ಡಾ.ಟಿ.ಎಂ.ಎ ಪೈ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಎಲ್ಲಾ ಸಹಾಯಕ ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡಿ, ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು. ಅಲ್ಲದೇ ಅಗಿಂದಾಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುತ್ತಿದ್ದ ಮಾರ್ಗಸೂಚಿಗಳು, ಸಲಹೆಗಳು, ಜಿಲ್ಲಾಡಳಿತ ಮತ್ತು ಅರೋಗ್ಯ ಇಲಾಖೆ ನೀಡಿದ ಸಹಕಾರದಿಂದ ಉತ್ತಮ ಸೇವೆ ನೀಡಲು ಸಾಧ್ಯವಾಯಿತು. ಆಸ್ಪತ್ರೆಯಲ್ಲಿ ಇದುವರೆಗೆ ಒಟ್ಟು 1800 ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಿದ್ದು, ಅರಂಭದಲ್ಲಿ ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗಿದ್ದು, ನಂತರ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನೀಡಲಾಗಿದೆ ಎಂದರು.

ಜಿಲ್ಲೆಗೆ ರೆಮಿಡಿಸಿವರ್ ಮತ್ತು ಅಕ್ಸಿಜಿನ್ ಸರಬರಾಜು ಕುರಿತಂತೆ ಮುಖ್ಯಮಂತ್ರಿಗಳು ಕೇಳಿದ ಮಾಹಿತಿಗೆ ಉತ್ತರಿಸಿದ ಡಾ.ಶಶಿಕಿರಣ್, ಏಪ್ರಿಲ್ ಹಾಗೂ ಮೇ ಆರಂಭದಲ್ಲಿ ಸ್ವಲ್ಪ ವ್ಯತ್ಯಯವಾಗಿದ್ದು, ಪ್ರಸ್ತುತ ಪರಿಸ್ಥಿತಿ ಸುಧಾರಣೆಯಾಗಿದ್ದು, ಸದ್ಯಕ್ಕೆ ಜಿಲ್ಲೆಗೆ ನಿಯಮಿತವಾಗಿ ರೆಮಿಡಿಸಿವರ್ ಸಾಕಷ್ಟು ಸರಬರಾಜು ಆಗುತ್ತಿದೆ. ಆಕ್ಸಿಜಿನ್ ಬಳಕೆ ಕುರಿತಂತೆ, ಆಕ್ಸಿಜನ್‌ನ್ನು ಹೆಚ್ಚು ಕಾಳಜಿಯಿಂದ ಬಳಸಲಾಗುತ್ತಿದ್ದು, ಆಕ್ಸಿಜನ್ ಅಡಿಟ್ ಮತ್ತು ಆಕ್ಸಿಜನ್ ರೌಂಡ್ಸ್ ನಡೆಸಲಾಗುತ್ತಿದೆ. ಅನಗತ್ಯ ಪೋಲಾಗದಂತೆ ಎಚ್ಚರವಹಿಸಲಾಗಿದೆ, ಉಡುಪಿ ಜಿಲ್ಲೆಗೆ ಸಹ ಇತರ ಜಿಲ್ಲೆಗಳಂತೆ ಆಕ್ಸಿಜನ್ ನಿರಂತರವಾಗಿ ಸರಬರಾಜು ಮಾಡುವಂತೆ ಕೋರಿದರು.

ಕೋವಿಡ್ ಚಿಕಿತ್ಸೆಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಬಗ್ಗೆ ಅಭಿಪ್ರಾಯ ನೀಡುವಂತೆ ಮುಖ್ಯಮಂತ್ರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಶಶಿಕಿರಣ್, ಪ್ರಸ್ತುತ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯ ಸಿಬ್ಬಂದಿಯ ಕೊರತೆಯಿದ್ದು, ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಉತ್ತಮ ಕೆಲಸ. ಆದರೆ ಈ ವಿದ್ಯಾರ್ಥಿಗಳಿಗೆ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಿ, ಅಗತ್ಯ ತರಬೇತಿಯನ್ನು ನೀಡುವುದರ ಮೂಲಕ, ಹಿರಿಯ ವೈದ್ಯರ ನಿಗಾವಣೆ ಅಡಿ ಬಳಸಿಕೊಳ್ಳಬಹುದು ಎಂದರು. ಈ ಸಲಹೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

Comments are closed.