ಆರೋಗ್ಯ

ವೀಕೆಂಡ್ ಕರ್ಫ್ಯೂಗೆ ಕುಂದಾಪುರದಲ್ಲಿ ಉತ್ತಮ ರೆಸ್ಫಾನ್ಸ್ (Video)

Pinterest LinkedIn Tumblr

ಕುಂದಾಪುರ: ಕೊರೋನಾ ನಿಯಂತ್ರಣದ ಹಿನ್ನೆಲೆ ಶನಿವಾರ, ಭಾನುವಾರ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಮಾಡಿದ ಆದೇಶಕ್ಕೆ ಕುಂದಾಪುರ ಜನರಿಂದ ಉತ್ತಮ ರೆಸ್ಫಾನ್ಸ್ ಲಭಿಸಿದೆ.

ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕರ್ಫ್ಯೂ ಜಾರಿಗೆ ಬಂದಿತ್ತು. ಶನಿವಾರ 6 ಗಂಟೆಯಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದ ಕಾರಣ ಜನರು ಖರೀದಿಗೆ ಆಗಮಿಸಿದ್ದರು. ಖಾಸಗಿ ಬಸ್ ಸಂಚಾರ ಇರಲಿಲ್ಲ, ಬೆರಳೆಣಿಕೆಯ ಸರ್ಕಾರಿ ಬಸ್ಸುಗಳು ಇತ್ತು. ಆಟೋ ಸಂಚಾರ ಇತ್ತು.

ವೀಕೆಂಡ್ ಕರ್ಫ್ಯೂ ಹಿನ್ನೆಲೆ ಕುಂದಾಪುರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಅಗತ್ಯ ವಸ್ತು ಖರೀದಿಗೆ ಆಗಮಿಸಿದ ಬೆರಳೆಣಿಕೆಯಷ್ಟು ಮಂದಿ 10 ಗಂಟೆಯೊಳಗೆ ವಾಪಾಸ್ಸಾದರು. 10 ಗಂಟೆಗೆ ಅಗತ್ಯ ವಸ್ತುಗಳಾದ ತರಕಾರಿ, ಮಾಂಸ, ಹಣ್ಣಿನಂಗಡಿಗಳು ಬಂದ್ ಆದವು. ಕರ್ಫ್ಯೂ ಆದೇಶವಿದ್ದರಿಂದ ಸ್ವಯಂಪ್ರೇರಿತರಾಗಿ ಅಂಗಡಿ ಮುಚ್ಚಿದ ವರ್ತಕರು ಮನೆಯತ್ತ ತೆರಳಿದರು.

ವಾರದ ಸಂತೆಯಿರಲಿಲ್ಲ….
ಕರ್ಫ್ಯೂ ಹಿನ್ನೆಲೆ ಕುಂದಾಪುರದ ವಾರದ ಸಂತೆಯೂ ರದ್ದು ಮಾಡಲಾಗಿತ್ತು. ಕುಂದಾಪುರ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುವ ವಾರದ ಸಂತೆ ನಿಷೇಧವಾದ್ದರಿಂದ ಹಣ್ಣು ಹಾಗೂ ತರಕಾರಿ ಕೆಲ ಅಂಗಡಿಯವರು ರ್ಸತೆಯಲ್ಲಿಯೇ ಮಾರಾಟ ಮಾಡುತ್ತಿದ್ದು ಪೊಲೀಸರು ಅವರನ್ನು ವಾಪಾಸ್ ಕಳಿಸಿದ ಘಟನೆ ನಡೆಯಿತು.

ಕುಂದಾಪುರದಲ್ಲಿ ವಾಹನ ತಪಾಸಣೆ…
ಕುಂದಾಪುರ ನಗರ ಸಂಪರ್ಕದ ಒಂದು ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿತ್ತು.‌ ಸಂಗಮ್ ಜಂಕ್ಷನ್ ಬಳಿ ನಗರಕ್ಕೆ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಅಳವಡಿಸಲಾಗಿದ್ದು 10 ಗಂಟೆ ಬಳಿಕ ಬಂದ ಪ್ರತಿ ವಾಹನವನ್ನು ತಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದರು. ಕರ್ಫ್ಯೂ ಬಗ್ಗೆ ಮಾಹಿತಿ‌ ನೀಡಿದ ಪೊಲೀಸರು ಕೆಲವು ವಾಹನಗಳ ನಂಬರ್ ದಾಖಲಿಸಿಕೊಂಡರು.

ಕುಂದಾಪುರ ಎಸಿ‌ ಕೆ. ರಾಜು, ಡಿವೈಎಸ್ಪಿ ಶ್ರೀಕಾಂತ್, ಸಿಪಿಐ ಗೋಪಿಕೃಷ್ಣ, ಪಿಎಸ್ಐ ಸದಾಶಿವ ಗವರೋಜಿ, ಟ್ರಾಫಿಕ್ ಪಿಎಸ್ಐ ಸುದರ್ಶನ್ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

(ವರದಿ- ಯೋಗೀಶ್ ಕುಂಭಾಸಿ)

Comments are closed.