ಆರೋಗ್ಯ

ಹೊಸ ವರ್ಷದ ತುರ್ತು ಪ್ರತಿಸ್ಪಂದನೆಗೆ ಸಜ್ಜಾದ `108 ಆರೋಗ್ಯ ಕವಚ’

Pinterest LinkedIn Tumblr

ಉಡುಪಿ: ಹೊಸ ವರ್ಷಾಚಾರಣೆಯ ವೇಳೆ ಸಂಭವಿಸಬಹುದಾದ ರಸ್ತೆ ಅಪಘಾತಗಳಿಂದ ಉಂಟಾಗುವ ಜೀವ ಹಾನಿಯನ್ನು ತಡೆಯುವ ದೃಷ್ಟಿಯಿಂದ 108 ಆರೋಗ್ಯ ಕವಚ ಅಂಬುಲೆನ್ಸ್ ಕರ್ನಾಟಕ ರಾಜ್ಯಾದ್ಯಂತ ಸುಸಜ್ಜಿತಗೊಂಡಿದೆ.

ಸಾಮಾನ್ಯ ದಿನಗಳಿಗಿಂತ ಹೊಸ ವರ್ಷದ ಆಚರಣೆಗಳಲ್ಲಿ ಶೇ. 30ರಿಂದ 35 ಅಪಘಾತ ಪ್ರಕರಣಗಳು ವರದಿಯಾಗುತ್ತಿದೆ. ಹೀಗಾಗಿ ಹೆಚ್ಚಿನ ತುರ್ತುಪರಿಸ್ಥಿತಿಯನ್ನು ನಿರೀಕ್ಷಿಸುವ ಪ್ರದೇಶಗಳಲ್ಲಿ ಹೆಚ್ಚುವರಿ ಆರೋಗ್ಯ ಕವಚ 108 ಅಂಬುಲೆನ್ಸ್‌ನ್ನು ನಿಯೋಜಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ 8 ಆರೋಗ್ಯ ಕವಚ 108 ಅಂಬುಲೆನ್ಸ್‌ಗಳನ್ನು ತಜ್ಞ ಸಿಬ್ಬಂದಿಗಳೊಂದಿಗೆ ನಿಯೋಜಿಸಲಾಗಿದೆ. ಹೆಚ್ಚುವರಿ ಸೇವೆಗಾಗಿ ಆಂಬುಲೆನ್ಸ್ ಸಿಬ್ಬಂದಿಗಳ ಸಾಪ್ತಾಯಿಕ ರಜೆಯನ್ನು ರದ್ದುಗೊಳಿಸಲಾಗಿದೆ. ಮುಂಜಾಗೃತವಾಗಿಯೇ ಎಲ್ಲಾ ಆಂಬುಲೆನ್ಸ್‌ನಲ್ಲಿ ಇಂಧನ, ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ.

108 ಅಂಬುಲೆನ್ಸ್ ಸೇವೆಯು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಹಕಾರವನ್ನು ಹೊಂದಿದ್ದು, ಸಾವು-ನೋವುಗಳು ಅನಾಹುತಗಳ ಮಾಹಿತಿಗಳನ್ನು ಪೊಲೀಸ್, ಅಗ್ನಿಶಾಮಕ ಸೇವೆ ಮತ್ತು ಆರೋಗ್ಯ ಇಲಾಖೆಗಳೊಂದಿಗೆ ಹಂಚಿಕೊಳ್ಳಲಾಗುವುದು. ಹೊಸ ವರ್ಷದ ತುರ್ತು ಪ್ರತಿಸ್ಪಂದನೆಗೆ ಆರೋಗ್ಯ ಕವಚ 108 ಅಂಬುಲೆನ್ಸ್‌ಗಳು ಸಜ್ಜುಗೊಂಡಿದ್ದು, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ 108 ಡಯಲ್ ಮಾಡಿ ಉಚಿತ ಸೇವೆಯ ಸದುಪಯೋಗಪಡೆದುಕೊಳ್ಳಬಹುದು ಎಂದು ಜಿಲ್ಲಾ ವ್ಯವಸ್ಥಾಪಕ ಮಹಾಬಲ ತಿಳಿಸಿದ್ದಾರೆ.

 

 

Comments are closed.