ಆರೋಗ್ಯ

ಭಾರತದಲ್ಲಿ ಕೊರೋನಾ ಲಸಿಕೆ: ಅಹ್ಮದಾಬಾದ್‌, ಪುಣೆ, ಹೈದರಬಾದ್ ಸಂಸ್ಥೆಗಿಂದು ಮೋದಿ ಭೇಟಿ

Pinterest LinkedIn Tumblr

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ಲಸಿಕೆ ಸಿದ್ಧಪಡಿಸುತ್ತಿರುವ ಮೂರು ಪ್ರಮುಖ ಸಂಸ್ಥೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿ ನೀಡಲಿದ್ದಾರೆ.

ಅಹ್ಮದಾಬಾದ್‌ನ ಝೈಡಸ್‌ ಕ್ಯಾಡಿಲಾ, ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ ಸಂಸ್ಥೆಗಳಿಗೆ ಮೋದಿ ಭೇಟಿ ನೀಡಿ, ಲಸಿಕೆ ಅಭಿವೃದ್ಧಿಯ ಪ್ರಗತಿಯನ್ನು ವೀಕ್ಷಿಸಲಿದ್ದಾರೆ. ಲಸಿಕೆ ಸಂಸ್ಕರಣೆ, ಸರಬರಾಜು ಕುರಿತು ಸಂಸ್ಥೆಯ ತಜ್ಞರೊಂದಿಗೆ ಚರ್ಚಿಸಲಿದ್ದಾರೆ.

ಪ್ರಧಾನಿ ಶನಿವಾರ ಬೆಳಗ್ಗೆ 9.30ಕ್ಕೆ ಅಹ್ಮದಾಬಾದ್‌ಗೆ ತಲುಪಲಿದ್ದು, ಅಲ್ಲಿಂದ ಚಾಂಗೋದರ್‌ ಕೈಗಾರಿಕಾ ಪ್ರದೇಶದ ಝೈಡಸ್‌ ಕ್ಯಾಡಿಲಾ ಸಂಸ್ಥೆಗೆ ಮೊದಲು ಭೇಟಿ ನೀಡಲಿದ್ದಾರೆ. ಸಂಸ್ಥೆಯು ಝೈಕೋವಿ-ಡಿ ಲಸಿಕೆ ಶೋಧಿಸುತ್ತಿದ್ದು, ಇದರ 2ನೇ ಹಂತದ ಪ್ರಯೋಗ ಈಗಾಗಲೇ ಪ್ರಗತಿಯಲ್ಲಿದೆ. ಮಧ್ಯಾಹ್ನ 12.30ರ ಸುಮಾರಿಗೆ ಪುಣೆ ತಲುಪಲಿದ್ದಾರೆ. ಜಾಗತಿಕ ಫಾರ್ಮಾ ದೈತ್ಯ ಅಸ್ಟ್ರಾ ಜೆನೆಕಾ ಮತ್ತು ಆಕ್ಸ್‌ಫ‌ರ್ಡ್‌ ವಿ.ವಿ. ಸಹಭಾಗಿತ್ವದಲ್ಲಿ ಭಾರತದಲ್ಲಿ ಲಸಿಕೆ ಸಿದ್ಧಪಡಿಸುತ್ತಿರುವ ಸೀರಮ್‌ ಇನ್‌ಸ್ಟಿಟ್ಯೂಟ್‌ಗೆ ಭೇಟಿ ನೀಡಲಿದ್ದಾರೆ. ಈ ಲಸಿಕೆ ಪ್ರಯೋಗ 3ನೇ ಹಂತದಲ್ಲಿದೆ.

ಸಂಜೆಯ ಸುಮಾರಿಗೆ ಪ್ರಧಾನಿ ಯವರು ಹೈದರಾಬಾದ್‌ನ ಹಕೀಮ್‌ಪೇಟ್‌ ಏರ್‌ಫೋರ್ಸ್‌ ಸ್ಟೇಷನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ 50 ಕಿ.ಮೀ. ದೂರದ ಜಿನೋಮ್‌ ವ್ಯಾಲಿಯಲ್ಲಿರುವ ಭಾರತ್‌ ಬಯೋಟೆಕ್‌ಗೆ ಭೇಟಿ ನೀಡಿ, ಕೊವ್ಯಾಕ್ಸಿನ್‌ ಲಸಿಕೆಯ ಪ್ರಗತಿ ವೀಕ್ಷಿಸಲಿದ್ದಾರೆ. ಈ ಲಸಿಕೆ ಪ್ರಯೋಗ 3ನೇ ಹಂತದಲ್ಲಿದೆ.

Comments are closed.