ಕರಾವಳಿ

ನ.29: ಯಕ್ಷಾಂಗಣದಿಂದ ಹಿರಿಯ ಕಲಾವಿದರ ಸಂಸ್ಮರಣೆ – ಪ್ರಶಸ್ತಿ ಪ್ರದಾನ -ತಾಳಮದ್ದಳೆ : ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ

Pinterest LinkedIn Tumblr

ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರ ಆಶ್ರಯದಲ್ಲಿ ಇದೇ ನವಂಬರ್ 29 ಆದಿತ್ಯವಾರ ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ನೂತನ ಪಾರಿಜಾತ ಸಭಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಪರ್ವ’ ಎಂಟನೇ ವರ್ಷದ ನುಡಿಹಬ್ಬದಲ್ಲಿ ಅಗಲಿದ ಹಿರಿಯ ಕಲಾವಿದರ ಸಂಸ್ಮರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಯಕ್ಷಗಾನ ಹಾಸ್ಯ ಪಟು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಜ್ಞಾನ-ವಿಜ್ಞಾನ ಪ್ರಶಸ್ತಿ ಪುರಸ್ಕೃತರಾದ ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಹಿರಿಯ ಯಕ್ಷಗಾನ ಅರ್ಥಧಾರಿ ದಿ.ಎ.ಕೆ. ನಾರಾಯಣಶೆಟ್ಟಿ, ಅರ್ಥಧಾರಿ – ಸಂಘಟಕ ಎ.ಕೆ. ಮಹಾಬಲ ಶೆಟ್ಟಿ ಅವರನ್ನು ಸ್ಮರಿಸಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಲಾಗುವುದು.

ತಾಳಮದ್ದಳೆ : ಇದೇ ಸಂದರ್ಭದಲ್ಲಿ ಅಪರಾಹ್ನ ಗಂ.3 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ ‘ಶ್ರೀಕೃಷ್ಣ ತಂತ್ರ – ಮಾರುತಿ ಪ್ರತಾಪ’ ಯಕ್ಷಗಾನ ತಾಳಮದ್ದಳೆ ಜರಗಲಿದೆ. ಡಾ.ಎಂ.ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಅಶೋಕ ಭಟ್ ಉಜಿರೆ, ಕದ್ರಿ ನವನೀತ ಶೆಟ್ಟಿ, ರವಿ ಅಲೆವೂರಾಯ ವರ್ಕಾಡಿ, ಉಮೇಶ ಗೇರುಕಟ್ಟೆ ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಅರ್ಥಧಾರಿಗಳಾಗಿ ರುವರು. ಹರೀಶ್ ಶೆಟ್ಟಿ ಸೂಡಾ ಮತ್ತು ಪ್ರಶಾಂತ ರೈ ಪುತ್ತೂರು ಭಾಗವತರಾಗಿದ್ದು ರೋಹಿತ್ ಉಚ್ಚಿಲ್ ಮತ್ತು ಮಯೂರ್ ನಾಯಗ ಹಿಮ್ಮೇಳದಲ್ಲಿ ಸಹಕರಿಸುವರು.

ಪ್ರಶಸ್ತಿ ಪ್ರದಾನ:  ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರಿಗೆ ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ ಮತ್ತು ಪ್ರಸಿದ್ಧ ಯಕ್ಷಗಾನ ಕಲಾವಿದ ಕೆ.ಎಚ್.ದಾಸಪ್ಪ ರೈ ಪುತ್ತೂರು ಅವರಿಗೆ 2019-20 ನೇ ಸಾಲಿನ ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಲ್ಲದೆ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೊರನಾಡ ಕನ್ನಡಿಗ, ಉದ್ಯಮಿ ಮತ್ತು ಸಮಾಜ ಸೇವಕ ಕೆ.ಡಿ. ಶೆಟ್ಟಿ ಮುಂಬೈ ಅವರ ಅಭಿನಂದನಾ ಕಾರ್ಯಕ್ರಮವೂ ಜರಗಲಿದೆ.

ಶಕ್ತಿನಗರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳ್ತೆ ಮೊಕ್ತೇಸರ ಡಾ.ಕೆ.ಸಿ.ನಾಯ್ಕ್ ಸಮಾರಂಭವನ್ನು ಉದ್ಘಾಟಿಸುವರು. ಕದ್ರಿ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು , ಶಾಸಕ ವೇದವ್ಯಾಸ ಕಾಮತ್ ಮತ್ತು ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಮಹಾಪ್ರಬಂಧಕರಾದ ಸುಜಯ ಯು.ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿರುವರು.

ಮೇಯರ್ ದಿವಾಕರ ಪಾಂಡೇಶ್ವರ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ,ಹಿರಿಯ ಲೆಕ್ಕ ಪರಿಶೋಧಕ ಎಸ್.ಎಸ್.ನಾಯಕ್, ಉದ್ಯಮಿ ಎ.ಕೆ.ಜಯರಾಮ ಶೇಖ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಮಾತಾ ಡೆವಲಪರ್ಸ್ ನ ಎನ್.ಸಂತೋಷ್ ಕುಮಾರ್ ಶೆಟ್ಟಿ , ತುಳು ಅಕಾಡೆಮಿ ಸದಸ್ಯ ಲೀಲಾಕ್ಷ ಬಿ.ಕರ್ಕೇರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

Comments are closed.