ಆರೋಗ್ಯ

ಆಧುನಿಕ ಸುಸಜ್ಜಿತ ಉಡುಪಿ ಜಿಲ್ಲಾಸ್ಪತ್ರೆ ಕಾಮಗಾರಿ ಶೀಘ್ರದಲ್ಲಿ: ಶಾಸಕ ರಘುಪತಿ ಭಟ್

Pinterest LinkedIn Tumblr

ಉಡುಪಿ: ಆಧುನಿಕ ಸುಸಜ್ಜಿತವಾದ ಅಗತ್ಯ ಎಲ್ಲಾ ಮೂಲಸೌಲಭ್ಯವನ್ನೊಳಗೊಂಡ ಜಿಲ್ಲಾಸ್ಪತ್ರೆಯ ಕಟ್ಟಡವನ್ನು ಮುಂದಿನ ದಿನಗಳಲ್ಲಿ ಮೆಡಿಕಲ್ ಕಾಲೇಜ್ ಗೆ ಪೂರಕವಾಗಿರುವಂತೆ ನಿರ್ಮಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ , ಜಿಲ್ಲಾಸ್ಪತ್ರೆ ನಿರ್ಮಾಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಜನಸಾಮಾನ್ಯರು ಸರಳವಾಗಿ ಆರೋಗ್ಯ ಸೇವೆಯನ್ನು ಪಡೆಯುವ ರೀತಿಯಲ್ಲಿ ಕಟ್ಟಡದ ನೀಲನಕ್ಷೆಯನ್ನು ತಯಾರಿಸಬೇಕು , ತುರ್ತು ಚಕಿತ್ಸಾ ಘಟಕ, ಹೊರರೋಗಿ ವಿಭಾಗ, ಶಸ್ತ್ರಚಿಕಿತ್ಸಾ ಕೊಠಡಿ, ಪ್ರಯೋಗಶಾಲೆ, ಡಯಾಲಿಸಿಸ್ ಕೇಂದ್ರ, ಐ.ಸಿ.ಯು ಕೇಂದ್ರಗಳು ನೆಲ ಮಹಡಿಯಲ್ಲೇ ನಿರ್ಮಿಸುವುದರಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಹೆಚ್ಚು ಅನುಕೂಲವಾಗಲಿದ್ದು ಇದಕ್ಕೆ ಆದ್ಯತೆ ನೀಡುವಂತೆ ಹೇಳಿದರು.

250 ಹಾಸಿಗೆ ಸಾಮರ್ಥ್ಯದ ಜಿಲ್ಲಾ ಆಸ್ಪತ್ರೆ ಕಟ್ಟಡ ಹಾಗೂ ಸಿಬ್ಬಂದಿಗಳ ವಸತಿಗೃಹವನ್ನು 115 ಕೋಟಿ ರೂ ವೆಚ್ಚದಲ್ಲಿ 27375 ಚದುರ ಮೀ ವಿಸ್ತೀರ್ಣದಲ್ಲಿ ಕರಾವಳಿ ಭಾಗದ ಹವಾಮಾನಕ್ಕನುಗುಣವಾಗಿ ಸುಸಜ್ಜಿತ ಕಟ್ಟಡವನ್ನು ಶೀಘ್ರದಲ್ಲಿ ಪ್ರಾರಂಭಿಸಿ ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದರು.
ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ಜನರ ಹಾಗೂ ವೈದ್ಯಕೀಯ ಸಿಬ್ಬಂದಿ ವರ್ಗದವರ ವಾಹನಗಳ ನಿಲುಗಡೆಗೆ ಕಟ್ಟಡದ ನೆಲ ಮಾಳಿಗೆಯಲ್ಲಿ ಅವಕಾಶ ಮಾಡಿಕೊಡುವ ರೀತಿಯಲ್ಲಿ ನಿರ್ಮಾಣ ಮಾಡಬೇಕು ಎಂದರು.ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ಜಾಗದ ಲಭ್ಯತೆ ಸೇರಿದಂತೆ ಮತ್ತಿತರ ಪರಿಶೀಲನೆಯನ್ನು ಅಧಿಕಾರಿಗಳು ಹಾಗೂ ಕಟ್ಟಡ ನಿರ್ಮಾಣ ಸಮಾಲೋಚಕರು ಮಾಡಿ ಸಾದಕ ಬಾಧಕಗಳನ್ನು ಚರ್ಚಿಸಿ ನೀಲ ನಕ್ಷೆಯನ್ನು ಸಿದ್ದಪಡಿಸಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ನೂತನ ಕಟ್ಟಡ ನಿರ್ಮಾಣವನ್ನು, ಹಾಲಿ ಇರುವ ಹಳೆಯ ಆಸ್ಪತ್ರೆಯ ಕಟ್ಟಡವನ್ನು ಉಳಿಸಿಕೊಂಡು , ಆಸ್ಪತ್ರೆ ಹಿಂಭಾಗ ಖಾಲಿ ಇರುವ ಜಾಗವನ್ನು ಬಳಿಸಿಕೊಂಡು ಮಾಡುವುದರಿಂದ , ಹಾಲಿ ಆಸ್ಪತ್ರೆಯಲ್ಲಿನ ರೋಗಿಗಳ ಚಿಕಿತ್ಸೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ, ಆ ಕಟ್ಟಡವು ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುತ್ತದೆ ಎಂದರು.  ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನವು ಆಸ್ಪತ್ರೆಯ ಆವರಣದಲ್ಲಿ ಲಭ್ಯವಿದೆ, ಸಣ್ಣಪುಟ್ಟ ಕಟ್ಟಡಗಳನ್ನು ತೆರವು ಮಾಡುವುದರಿಂದ ಮತ್ತಷ್ಟು ನಿವೇಶನ ಲಭ್ಯವಾಗುತ್ತದೆ , ಹೊಸ ಕಟ್ಟಡಕ್ಕೆ ಅಗತ್ಯವಿರುವ ರಸ್ತೆ ಕಾಮಾಗಾರಿ ಮಾತ್ರ ಹೆಚ್ಚುವರಿಯಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಡಾ.ಮಧುಸೂಧನ್ ನಾಯಕ್, ಡಿಹೆಚ್‌ಓ ಡಾ.ಸುಧೀರ್ ಚಂದ್ರ ಸೂಡಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

 

Comments are closed.