ಇತ್ತೀಚಿನ ದಿನಗಳಲ್ಲಿ ರೋಗಗಳಿಂದ ರಕ್ಷಿಸಿಕೊಳ್ಳಲು ನೀವು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಪೌಷ್ಟಿಕ ಆಹಾರಗಳ ಸೇವನೆ ಮತ್ತು ವ್ಯಾಯಾಮ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಘನೀಕೃತ ಆಹಾರಗಳು ಸಮಯ, ಹಣ ಮತ್ತು ಮನೆಯಲ್ಲಿ ತಯಾರಿಸುವ ಶ್ರಮವನ್ನು ಉಳಿಸುತ್ತವೆ ನಿಜ,ಆದರೆ ಅವು ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯನ್ನೂ ಉಂಟು ಮಾಡಬಲ್ಲವು. ಇಂತಹ ಆಹಾರಗಳು ಇಡೀ ಜೀರ್ಣಾಂಗ ವ್ಯವಸ್ಥೆ ಮತ್ತು ಚಯಾಪಚಯವನ್ನು ವ್ಯತ್ಯಯಗೊಳಿಸುತ್ತವೆ.
ಮಕ್ಕಳಲ್ಲಿ ಫ್ರೋಝನ್ ಫುಡ್ ಅಥವಾ ಘನೀಕೃತ ಆಹಾರ ಸೇವನೆಯ ಗೀಳು ಹೆಚ್ಚಾಗುತ್ತಿದೆ. ಮಕ್ಕಳು ಮಾತ್ರವಲ್ಲ,ವಯಸ್ಕರೂ ಸಹ ಇದು ಸುಲಭದ್ದಾಗಿರುವುದರಿಂದ ಇಷ್ಟಪಡುತ್ತಾರೆ. ವಿಶೇಷವಾಗಿ ಸಲಾಮಿ,ಸಾಸೇಜ್ ಮತ್ತು ಕಬಾಬ್‌ನಂತಹ ಘನೀಕೃತ ಆಹಾರಗಳನ್ನು ಮಾರುಕಟ್ಟೆಯಿಂದ ತಂದು ಸ್ವಲ್ಪ ಬಿಸಿ ಮಾಡಿ ಸೇವಿಸಲಾಗುತ್ತದೆ. ಜನರು ತಮ್ಮ ಅನುಕೂಲವನ್ನು ನೋಡುತ್ತಾರೆ ಮತ್ತು ಘನೀಕೃತ ಆಹಾರಗಳ ಖರೀದಿಯೇ ಸುಲಭ ಎಂದು ಅವರಿಗೆ ಅನ್ನಿಸುತ್ತದೆ.
ಘನೀಕೃತ ಆಹಾರಗಳು ನಮ್ಮ ಶರೀರವು ತನಗೆ ಅಗತ್ಯವಾದ ಹಲವಾರು ಪ್ರಮುಖ ಪೋಷಕಾಂಶಗಳನ್ನು ಕಳೆದುಕೊಳ್ಳುವಂತೆ ಮಾಡುತ್ತವೆ. ಒಮ್ಮೆ ಈ ಘನೀಕೃತ ಆಹಾರಗಳನ್ನು ಸೇವಿಸುವ ಗೀಳಿಗೆ ಅಂಟಿಕೊಂಡರೆ ಅದರಿಂದ ಕಳಚಿಕೊಳ್ಳುವುದು ತುಂಬ ಕಷ್ಟವಾಗುತ್ತದೆ. ವಾಸ್ತವದಲ್ಲಿ ಘನೀಕೃತ ಆಹಾರಗಳ ತಯಾರಿಕೆಯಲ್ಲಿ ಬಳಸಲಾಗುವ ಘಟಕಗಳಿಗೂ ತಾಜಾ ಆಹಾರದಲ್ಲಿಯ ಘಟಕಗಳಿಗೂ ವ್ಯತ್ಯಾಸಗಳಿವೆ. ಘನೀಕೃತ ಆಹಾರಗಳಿಗೆ ಹಲವಾರು ಪ್ರಿಸರ್ವೇಟಿವ್ ಅಥವಾ ಸಂರಕ್ಷಕಗಳನ್ನು ಬಳಸಲಾಗುತ್ತದೆ ಮತ್ತು ಇವು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.
ಘನೀಕೃತ ಆಹಾರ ಸೇವನೆಯಿಂದ ಕೆಲವು ಲಾಭಗಳು ಇರಬಹುದಾದರೂ ಕೆಡುಕುಗಳೂ ಇವೆ. ಅದು ನಾವು ಊಹಿಸಿಯೂ ಇರದ ರೀತಿಯಲ್ಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಹೃದ್ರೋಗಗಳಿಂದ ಹಿಡಿದು ಕ್ಯಾನ್ಸರ್‌ವರೆಗೂ ಹಲವಾರು ಅಪಾಯಗಳನ್ನು ಘನೀಕೃತ ಆಹಾರಗಳು ಒಡ್ಡುತ್ತವೆ. ಅದು ಸಲಾಡ್ ಅಥವಾ ಬರ್ಗರ್ ಆಗಿರಲಿ,ಘನೀಕೃತ ಆಹಾರಗಳ ಸೇವನೆ ಒಂದು ಗೀಳು ಆಗಿ ಪರಿಣಮಿಸಬಾರದು.
ಅಧಿಕ ರಕ್ತದೊತ್ತಡ
ಘನೀಕೃತ ಆಹಾರಗಳನ್ನು ತಾಜಾ ಆಗಿರಿಸಲು ಅವುಗಳಲ್ಲಿ ಸಂರಕ್ಷಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸಲಾಗಿರುತ್ತದೆ ಮತ್ತು ಅತಿಯಾದ ಸಂರಕ್ಷಕಗಳು ಆರೋಗ್ಯಕ್ಕೆ ಅತಿಯಾದ ಹಾನಿಯನ್ನುಂಟು ಮಾಡುತ್ತವೆ. ಈ ಸಂರಕ್ಷಕಗಳು ನಮ್ಮ ರಕ್ತದೊತ್ತಡ ಮಟ್ಟಗಳಿಗೂ ಅಪಾಯಕಾರಿಯಾಗಿವೆ. ಅವುಗಳಲ್ಲಿ ಸಕ್ಕರೆ ಮತ್ತು ಉಪ್ಪು ಹೆಚ್ಚಿನ ಪ್ರಮಾಣದಲ್ಲಿರುತ್ತವೆ,ಇವು ರಕ್ತದೊತ್ತಡ ಮಟ್ಟಗಳನ್ನು ಹೆಚ್ಚಿಸುತ್ತವೆ. ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಘನೀಕೃತ ಆಹಾರಗಳಿಂದ ದೂರವಿರಬೇಕು.
ಮಧುಮೇಹ
ಘನೀಕೃತ ಆಹಾರಗಳು ಅಧಿಕ ಪ್ರಮಾಣದಲ್ಲಿ ಪಿಷ್ಟವನ್ನು ಒಳಗೊಂಡಿರುತ್ತವೆ. ಪಿಷ್ಟವು ಆಹಾರಕ್ಕೆ ರುಚಿಯನ್ನು ನೀಡುವ ಜೊತೆಗೆ ಅದನ್ನು ತಾಜಾ ಆಗಿರಿಸುತ್ತದೆ. ಆದರೆ ಅದು ಪಾಲಿಮರ್‌ನ ಗ್ಲುಕೋಸ್ ಸರಣಿಯಾಗಿರುತ್ತದೆ ಮತ್ತು ಆಹಾರವು ಜೀರ್ಣಗೊಳ್ಳುವ ಮುನ್ನವೇ ಶರೀರವು ಈ ಗ್ಲುಕೋಸ್‌ನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಹೀಗೆ ಹೆಚ್ಚಾದ ಸಕ್ಕರೆಯ ಪ್ರಮಾಣವು ಮಧುಮೇಹದ ಅಪಾಯವನ್ನು ತಂದೊಡ್ಡಬಹುದು. ಕುಟುಂಬದಲ್ಲಿ ಮಧುಮೇಹದ ಇತಿಹಾಸವನ್ನು ಹೊಂದಿರುವವರು ಘನೀಕೃತ ಆಹಾರಗಳಿಂದ ದೂರವುಳಿಯುವುದು ಒಳ್ಳೆಯದು.
ಹೃದಯ ಸಮಸ್ಯೆಗಳು
ಘನೀಕೃತ ಆಹಾರ ಸೇವನೆಯ ಗೀಳು ಹೃದಯದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಹೃದಯವು ನಮ್ಮ ಶರೀರದಲ್ಲಿಯ ಅತ್ಯಂತ ಮುಖ್ಯವಾದ ಭಾಗವಾಗಿದೆ ಮತ್ತು ಘನೀಕೃತ ಆಹಾರಗಳು ಅದಕ್ಕೆ ಅಪಾಯವನ್ನು ಒಡ್ಡುತ್ತವೆ. ಘನೀಕೃತ ಆಹಾರಗಳಲ್ಲಿ ಸಮೃದ್ಧವಾಗಿರುವ ಟ್ರಾನ್ಸ್ ಫ್ಯಾಟ್ ಮತ್ತು ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ತಡೆಗಳನ್ನು ನಿರ್ಮಾಣ ಮಾಡುತ್ತವೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಘನೀಕೃತ ಆಹಾರಗಳು ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತವೆ.
ಕ್ಯಾನ್ಸರ್
ಘನೀಕೃತ ಆಹಾರಗಳ ಅತಿಯಾದ ಸೇವನೆಯು ಕ್ಯಾನ್ಸರ್‌ಗೆ ಆಹ್ವಾನ ನೀಡಬಲ್ಲದು. ಘನೀಕೃತ ಆಹಾರ ಸೇವನೆಯ ಗೀಳು ಹೊಂದಿರುವವರು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ಗೆ ಸುಲಭದ ಗುರಿಯಾಗುತ್ತಾರೆ ಎನ್ನುವುದನ್ನು ಕೆಲವು ಅಧ್ಯಯನಗಳು ಬೆಟ್ಟು ಮಾಡಿವೆ. ವಾಸ್ತವದಲ್ಲಿ ಎಲ್ಲ ಮಾಂಸಾಹಾರಿಗಳ ಪಾಲಿಗೆ ಘನೀಕೃತ ಮಾಂಸ ಖಾದ್ಯಗಳು ಕ್ಯಾನ್ಸರ್ ಅಪಾಯವನ್ನು ಶೇ.65ರಷ್ಟು ಹೆಚ್ಚಿಸುತ್ತವೆ. ಗ್ಲುಕೋಸ್‌ನಿಂದ ತಯಾರಾಗುವ ಕಾರ್ನ್ ಸಿರಪ್‌ನಂತಹ ಪ್ಯಾಕೇಜ್ಡ್ ಆಹಾರಗಳು ಕ್ಯಾನ್ಸರ್‌ಕಾರಕಗಳನ್ನು ಒಳಗೊಂಡಿರುತ್ತವೆ.