ಆರೋಗ್ಯ

ಉಡುಪಿ ಜಿಲ್ಲೆಯಲ್ಲಿ “ನನ್ನ ಕುಟುಂಬ ನನ್ನ ಜವಾಬ್ದಾರಿ”..!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯಲ್ಲಿನ ಪ್ರತಿಯೊಬ್ಬರಿಗೂ ಕೋವಿಡ್-19 ಕುರಿತು ಜಾಗೃತಿ ಮೂಡಿಸಲು “ನನ್ನ ಕುಟುಂಬ ನನ್ನ ಜವಾಬ್ದಾರಿ” ಎಂಬ ಕಾರ್ಯಕ್ರಮ ರೂಪಿಸಿದ್ದು, ಇಂದಿನಿಂದ( ಅಕ್ಟೋ17) ಪ್ರತೀ ಮನೆಗಳಿಗೆ ಭೇಟಿ ನೀಡಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.
ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಕೋವಿಡ್ ಲಾಕ್ ಡೌನ್ ಮುಗಿದು ಅನ್ ಲಾಕ್ 5.0 ಘೋಷಣೆಯಾದ ನಂತರ ಜನ ಜೀವನ ಬಹುತೇಕ ಎಂದಿನಂತೆ ಸಾಮಾನ್ಯವಾಗಿದೆ ಇದರಿಂದ ಕೋವಿಡ್ ಹರಡುವ ಸಂಭವ ಅಧಿಕವಾಗಿರುವುದರಿಂದ , ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ , ಅದಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು, ಬಿ.ಎಲ್. ಓ ಗಳ ಮೂಲಕ ಪ್ರತೀ ಮನೆಗೆ ಭೇಟಿ ನೀಡಿ , ಜಾಗೃತಿ ಕ್ರಮಗಳ ಕುರಿತು ಕರಪತ್ರ ವಿತರಿಸುವ ಜೊತೆಗೆ, ಮನೆಯವರಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವ ಕುರಿತು ಪ್ರತಿಜ್ಞಾ ವಿಧಿ ಭೋದಿಸಿ, ಅವರಿಂದ ಸಹಿ ಪಡೆಯಲಿದ್ದಾರೆ, ಮನೆಯ ಗೋಡೆಗಳ ಮೇಲೆ ಅರಿವು ಮೂಡಿಸುವ ಸ್ಟಿಕರ್ ಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದರೂ ಸಹ, ಪ್ರತಿಯೊಬ್ಬರೂ ತಮ್ಮ ಕುಟುಂಬದ ಬಗ್ಗೆ , ಆತ್ಮೀಯರ ಸಾಕಷ್ಟು ಕಾಳಜಿ ವಹಿಸಬೇಕಾಗಿದ್ದು ಅದರಲ್ಲೂ ಮನೆಯಲ್ಲಿನ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ, ರೋಗ ಲಕ್ಷಣಗಳಿದ್ದಲ್ಲಿ ಶೀಘ್ರದಲ್ಲಿ ಪರೀಕ್ಷೆ ಮಾಡಿಸಿಕೊಂಡಲ್ಲಿ , ತಮ್ಮ ಆತ್ಮೀಯರಿಗೆ ರೋಗ ಹರಡುವುದನು ತಡೆಯವುದರ ಜೊತೆಗೆ ಮರಣವನ್ನು ತಡೆಯಬಹುದಾಗಿದೆ, ಇದೇ ಉದ್ದೇಶದಿಂದ “ನನ್ನ ಕುಟುಂಬ ನನ್ನ ಜವಾಬ್ದಾರಿ” ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಆಶಾ ಕಾರ್ಯಕತೆಯರಿಗೆ ಪಲ್ಸ್ ಆಕ್ಸಿಮೀಟರ್ ಸಾಧನವನ್ನು ವಿತರಿಸಿ, ಪ್ರತಿ ಮನೆಯ ವ್ತಕ್ತಿಗಳಲ್ಲಿನ ಆಕ್ಸಿಜಿನ್ ಪ್ರಮಾಣ ಪರೀಕ್ಷಿಸಿ, ಅವರನ್ನು ಕೋವಿಡ್ ನಿಂದ ರಕ್ಷಿಸುವ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಕಾರ್ಕಳದಲ್ಲಿ ಯೋಜನೆ ಆರಂಭಗೊಂಡಿದ್ದು, ಉಡುಪಿ ಮತ್ತು ಕುಂದಾಪುರದಲ್ಲಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ ಎಂದು ಡಿಸಿ ಹೇಳಿದರು.

ಎಲ್ಲಾ ಇಲಾಖೆಗಳನ್ನು ಒಳಗೊಂಡ ತೀವ್ರತರ ಕೋವಿಡ್ ಜನಾಂದೋಲನ ಕಾರ್ಯಕ್ರಮಗಳನ್ನು ರೂಪಿಸಿದ್ದು, ಎಲ್ಲಾ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರವಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರು ಶನಿವಾರ ಚಾಲನೆ ನೀಡಲಿದ್ದಾರೆ , ಪ್ರಸ್ತುತ ಎಲ್ಲಾ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ನೀಡುತ್ತಿದ್ದು, ವಾರದಲ್ಲಿ ಒಂದು ಆನ್ ಲೈನ್ ತರಗತಿಯ ಪ್ರಾರಂಭದಲ್ಲಿ ಶಿಕ್ಷಕರು , ಕೋವಿಡ್ ಜಾಗೃತಿ ಕುರಿತ ಒಂದು ವಿಷಯದ ಕುರಿತು 5 ನಿಮಿಷಗಳ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ ಈ ಯೋಜನೆ ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಡಿಸಿ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷಾ ವಿಧಾನ , ಯಾರನ್ನು ಸಂಪರ್ಕಿಸಬೇಕು, ಆಸ್ಪತ್ರೆಗಳಿಗೆ ದಾಖಲಾಗುವ ವಿಧಾನ, ದೊರೆಯುವ ಚಿಕಿತ್ಸೆ ಮುಂತಾದವುಗಳ ಕುರಿತು ಸಮಗ್ರ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ, ಆಯಾ ಗ್ರಾಮದ ಪಿಡಿಓ ಗಳ ಮೂಲಕ ಪ್ರತೀ ಮನೆ ಮನೆಗೆ ತಲುಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ಹೇಳಿದರು.

ಅರೋಗ್ಯ ಇಲಾಖೆವತಿಯಿಂದ ಹೊರತಂದ ಕೋವಿಡ್ 19 ಮಾಹಿತಿ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಡಾ. ಪ್ರೇಮಾನಂದ್ ಉಪಸ್ಥಿತರಿದ್ದರು.

Comments are closed.