ಆರೋಗ್ಯ

ಪೋಷಕರ ಮನದಲ್ಲಿ ಮಕ್ಕಳ ಬಗ್ಗೆ ಕಾಡುವ ಸಮಸ್ಯೆಗೆ ಇಲ್ಲಿದೆ ಪರಿಹಾರ

Pinterest LinkedIn Tumblr

“ಅಯ್ಯೋ ನನ್ನ ಮಗ/ಮಗಳು ಊಟ ತಿಂಡೀನೆ ಮಾಡಲ್ಲ, ಅದನ್ನು ಮಾಡಿಸೋದೇ ಒಂದು ಕಷ್ಟದ ಕೆಲಸ” ಈ ರೀತಿಯ ಅರ್ಥ ಬರುವ ಮಾತುಗಳನ್ನು ಇತ್ತೀಚೆಗೆ ಎಲ್ಲಾ ಅಮ್ಮಂದಿರು ಹೇಳುತ್ತಿರುತ್ತಾರೆ. ಐವತ್ತು ವರ್ಷಗಳ ಹಿಂದೆ ಊಟತಿಂಡಿಗಳಿಗಾಗಿ ಪೋಷಕರನ್ನು ಪೀಡಿಸುತ್ತಿದ್ದ ಮಕ್ಕಳು ಹೀಗೇಕಾಗಿದ್ದಾರೆ? ಮಕ್ಕಳಿಗೆ ಹಸಿವು ನೀರಡಿಕೆಗಳೇ ಕಡಿಮೆಯಾಗಿದೆಯೇ? ಅಥವಾ ನಾವೆಲ್ಲಾ ಎಲ್ಲೋ ತಪ್ಪುತ್ತಿದ್ದೇವೆ ಅನ್ನಿಸುತ್ತಿಲ್ಲವೇ?

ಬದಲಾಗಿರುವುದು ಕಾಲವಲ್ಲ ನಾವು!
ಒಟ್ಟು ಕುಟುಂಬದ ಜವಾಬ್ದಾರಿಗಳ ಜೊತೆಗೆ ನಾಲ್ಕೈದು ಮಕ್ಕಳನ್ನಾದರೂ ಸಾಕಿ ಸಲಹಬೇಕಿದ್ದ ಹಿಂದಿನ ಕಾಲದ ತಾಯಂದಿರಿಗೆ ಎಲ್ಲಾ ಮಕ್ಕಳನ್ನೂ ಕರೆದು ಒತ್ತಾಯದಿಂದ ತಿನ್ನಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಊಟದ ಸಮಯಕ್ಕೆ ಬಂದವರಿಗೆ ಮತ್ತು ತಾವಾಗಿಯೇ ಹಸಿವು ಎಂದು ಕೇಳಿಕೊಂಡು ಬಂದವರಿಗೆ ಮಾತ್ರ ಊಟ ಸಿಗುತ್ತಿತ್ತು. ಒಂದೆರೆಡು ಮಕ್ಕಳನ್ನು ಮಾತ್ರ ಸಾಕಬೇಕಿರುವ ಇವತ್ತಿನ ತಾಯಂದಿರು ಮಕ್ಕಳ ಬಗೆಗೆ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಜೊತೆಗೆ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅವರಿಗೆ ಯಾವ್ಯಾವ್ಯಾಗ ಏನು ಮತ್ತು ಎಷ್ಟು ಆಹಾರ ಕೊಡಬೇಕು ಎಂದು ವೈದ್ಯರು ದೊಡ್ಡ ಪಟ್ಟಿಯನ್ನು ನೀಡಿರುತ್ತಾರೆ. ಇದನ್ನು ಪಾಲಿಸುವ ಧಾವಂತದಲ್ಲಿ ಅಮ್ಮಂದಿರು ಮಕ್ಕಳಿಗೆ ಹಸಿವೆಯಾಗಿದೆಯೋ ಇಲ್ಲವೋ ಎನ್ನುವುದನ್ನು ನೋಡದೆ, ಆಹಾರವನ್ನು ಒತ್ತಾಯದಿಂದ ಗಂಟಲಿನಲ್ಲಿ ತುರುಕುತ್ತಾರೆ. ಇದಕ್ಕಾಗಿ ಟೀವಿಯ ಮುಂದೆ ಕೂರಿಸಿ, ಊರೆಲ್ಲಾ ಸುತ್ತಾಡಿಸಿ ನಾಯಿ ಬೆಕ್ಕುಗಳನ್ನು ತೋರಿಸಿ, ಹೆದರಿಸಿ, ಗದರಿಸಿ, ಪೂಸಿ ಹೊಡೆದು-ಅಂತೂ ಹೇಗಾದರೂ ಮಕ್ಕಳ ಹೊಟ್ಟೆಯನ್ನು ಚೀಲದಂತೆ ತುಂಬಲು ಯತ್ನಿಸುತ್ತಾರೆ. ಬೇಡಿಕೆ ಇಲ್ಲದೆ ಸಿಗುವ ಆಹಾರದ ಬಗೆಗೆ ಮಗು ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಇದರಿಂದ ಅಮ್ಮಂದಿರ ಹತಾಶೆ ಹೆಚ್ಚಾಗಿ ಇನ್ನೂ ಜಾಸ್ತಿ ಒತ್ತಡ ಹಾಕುತ್ತಾರೆ. ವೈದ್ಯರ ಹತ್ತಿರ ಹೋಗಿ ಟಾನಿಕ್‍ಗಳನ್ನೂ ಬರೆಸಿಕೊಂಡು ಬರುತ್ತಾರೆ. ಇಷ್ಟೆಲ್ಲಾ ಆದಮೇಲೂ ಊಟ ಮಾಡಿಸುವ ನಿತ್ಯದ ಹೋರಾಟ ಮಾತ್ರ ನಡೆದೇ ಇರುತ್ತದೆ. ಇದರ ಅತಿರೇಕವೆಂದರೆ ಬೆಳೆದ ಮಕ್ಕಳ ಮೇಲೆಯೂ ಇದೇ ರೀತಿಯ ಒತ್ತಾಯ ಒತ್ತಡಗಳನ್ನು ಹಾಕಿ ಅವರಿಂದ ಪ್ರತಿಭಟಿಸಿ ಎದುರಿಸಿ ದೊಡ್ಡ ರಂಪಾಟವೇ ನಡೆದ ಮೇಲೂ ಯಾವುದೇ ಪಾಠ ಕಲಿತಿರುವುದಿಲ್ಲ.

ಎಲ್ಲಿದೆ ಇದಕ್ಕೆ ಉತ್ತರ?
ಆಹಾರ ತೆಗೆದುಕೊಳ್ಳುವುದು ಮಗುವಿನ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ ಅದು ಮಗು ಇಷ್ಟಪಟ್ಟು ಮಾಡುವ ಕೆಲಸವಾಗಬೇಕು. ಮಗು ಎಷ್ಟು ತಿನ್ನುತ್ತದೆ ಅನ್ನುವಷ್ಟೇ ಅದು ಯಾವ ಮನಸ್ಥಿತಿಯಲ್ಲಿ ತಿನ್ನುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ಆಹಾರದ ಸಮಯ ಮನೆಯವರ ಜೊತೆ ಖುಷಿಯಾಗಿ ಕಳೆಯುವ ಸಮಯವಾಗಬೇಕು.

ಜೊತೆಗೆ ಮಗುವಿಗೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ತರಬೇತಿಯೂ ಸಿಗುತ್ತಾ ಹೋಗಬೇಕು. ಇವೆಲ್ಲವನ್ನೂ ಸಾಧಿಸುವುದು ಹೇಗೆ?

1. ಎಲ್ಲಾ ಮಕ್ಕಳಿಗೂ ಬೇಕಾಗುವ ಆಹಾರದ ಪ್ರಮಾಣ ಒಂದೇ ರೀತಿಯಾಗಿರುವುದಿಲ್ಲ. ಹಾಗಾಗಿ ಮಗುವಿಗೆ ಒತ್ತಾಯದಿಂದ ತಿನ್ನಿಸುವುದನ್ನು ಕಡಿಮೆಮಾಡಬೇಕು. ಮಗು ಆರೋಗ್ಯಕರವಾಗಿ ಬೆಳೆಯುತ್ತಿದೆ ಎಂದಾದರೆ ಅದು ತನಗೆ ಬೇಕಾದಷ್ಟು ಆಹಾರವನ್ನು ತೆಗೆದುಕೊಳ್ಳುತ್ತಿದೆ ಎಂದರ್ಥ.

2. ಯಾವುದೇ ಸಂದರ್ಭದಲ್ಲಿಯೂ ಟಿವಿ ಮುಂದೆ ಕೂರಿಸಿ ಆಹಾರವನ್ನು ಗಂಟಲಿಗೆ ನೂಕುವ ಪ್ರಯತ್ನ ಮಾಡಬಾರದು. ಚಿಕ್ಕವರಿದ್ದಾಗ ಪೋಷಕರೇ ಕಲಿಸಿದ ಇಂತಹ ಅಭ್ಯಾಸದಿಂದ ಮುಂದೆ ಮಕ್ಕಳ ಪೋಷಕರ ಮಧ್ಯೆ ಬಹಳ ಭಿನ್ನಾಭಿಪ್ರಾಯಗಳು ಬರುತ್ತವೆ. ಜೊತೆಗೆ ಮಗುವಿಗೆ ತಿನ್ನುವ ಆಹಾರದ ಬಗೆಗೆ ಗಮನವಿರದೆ ಊಟ ಮೈಮನಸ್ಸುಗಳಿಗೆ ಹಿತವನ್ನು ನೀಡುವುದಿಲ್ಲ. ಟಿವಿಯಲ್ಲಿ ತೋರಿಸುವ ಘಟನೆಗಳು ಮಗುವಿನ ಮನಸ್ಸಿನಲ್ಲಿ ಮೂಡಿಸುವ ಭಾವನೆಗಳು ಪ್ರಭಾವಕಾರಿಯಾಗುತ್ತದೆಯೇ ಹೊರತು ಆಹಾರದ ರುಚಿ ಪೌಷ್ಠಿಕತೆಗಳಲ್ಲ. ತಾವೇ ಟಿವಿಯಲ್ಲಿ ಮೈಮರೆತು ತಿನ್ನಿಸುತ್ತಿರುವ ಆಹಾರ ಮಕ್ಕಳ ಮೂಗಿಗೆ ಹೋಗುತ್ತಿದೆಯೋ ಅಥವಾ ಬಾಯಿಗೋ ಎನ್ನುವುದನ್ನು ಗಮನಿಸಿದ ಅಮ್ಮಂದಿರು ಮಕ್ಕಳಿಂದ ಭವಿಷ್ಯದಲ್ಲಿ ಶಿಸ್ತನ್ನು ಹೇಗೆ ಅಪೇಕ್ಷಿಸಬಹುದು.?

3. ಮಗುವಿಗೆ ಒಂದು ಒಂದೂವರೆ ವರ್ಷವಾದಾಗಿನಿಂದ ಯಾವಾಗಲೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೂರಿಸಿ ಆಹಾರವನ್ನು ಕೊಡಬೇಕು. ಊಟದ ಸಮಯ ಮಗುವಿಗೆ ಆಸಕ್ತಿದಾಯಕವಾಗಿರುವಂತೆ ಮಾಡಲು ಆಕರ್ಷಕವಾಗಿ ಕಥೆಗಳನ್ನು ಹೇಳಬಹುದು, ಹಾಡಬಹುದು, ಚಿತ್ರ ಬಿಡಿಸಬಹುದು. ಇದರಿಂದ ಮಗುವಿನ ಮಿದುಳಿನಲ್ಲಿ ಆಹಾರದ ಜೊತೆಗೆ ಆಹ್ಲಾದಕರ ಅನುಭವವೂ ಸೇರಿ ಅಂತಹ ಸಮಯಕ್ಕಾಗಿ ಅದು ಕಾದು ಕುಳಿತಿರುತ್ತದೆ.

4. ಮೂರು ವರ್ಷವಾಗುವಷ್ಟು ಹೊತ್ತಿಗೆ ಮಗುವಿಗೆ ಸ್ವಂತವಾಗಿ ಊಟಮಾಡುವ ತರಬೇತಿ ಶುರುಮಾಡಬಹುದು. ಆರಂಭದಲ್ಲಿ ಮಗು ಆಹಾರವನ್ನು ಚೆಲ್ಲುತ್ತದೆ, ಮೈಯನ್ನೆಲ್ಲಾ ರಾಡಿ ಮಾಡಿಕೊಳ್ಳುತ್ತದೆ. ನಿಧಾನವಾಗಿ ಸಹನೆ ಕಳೆದುಕೊಳ್ಳದೆ ತರಬೇತಿ ಮುಂದುವರೆಸಿದರೆ ನಾಲ್ಕೈದು ವರ್ಷದ ಹೊತ್ತಿಗೆ ಅದು ಸ್ವಂತಂತ್ರವಾಗುತ್ತದೆ. ಇದರಿಂದ ಪೋಷಕರ ದೊಡ್ಡ ತಲೆಬಿಸಿ ಕಡಿಮೆಯಾಗಿ ಸಮಯ ಉಳಿಯುವುದಲ್ಲದೆ ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಊಟಮಾಡುವಾಗ ಮಗುವಿನ ಜೊತೆ ಕುಳಿತು ಕಥೆ, ಹಾಡುಗಳನ್ನು ಮುಂದುವರೆಸಬಹುದು.

5. ಸಾಧ್ಯವಾದಷ್ಟು ಚಾಕೋಲೇಟ್ ಬಿಸ್ಕಿಟ್‍ಗಳನ್ನು ಮತ್ತು ಅಂಗಡಿಗಳಲ್ಲಿ ದೊರಕುವ ಸಿದ್ಧ ಪಡಿಸಿದ ಜಂಕ್ ಅಹಾರವನ್ನು ಕಡಿಮೆ ಮಾಡಬೇಕು. ಇದು ಮಕ್ಕಳ ಹಸಿವನ್ನು ಹಾಳು ಮಾಡುವುದಲ್ಲದೆ, ಅಂತಹ ಆಹಾರದಲ್ಲಿ ಇರುವ ಸಂರಕ್ಷಕಗಳು (ಪ್ರಿಸರ್ವೇಟಿವ್ಸ್) ಮತ್ತು ಅದರ ಪ್ಲಾಸ್ಟಿಕ್ ಪ್ಯಾಕಿಂಗ್ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು.

6. ಮಗು ಮಾಡುವ ಚಿಕ್ಕ ಪುಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಎಲ್ಲರೆದುರು ಹೊಗಳಿ ಅದರ ಆತ್ಮಗೌರವನವನ್ನು ಹೆಚ್ಚಿಸಬೇಕು. ಇದರಿಂದ ಮುಂದಿನ ಹಂತಕ್ಕೆ ಹೋಗಲು ಅದಕ್ಕೆ ಪ್ರೇರಣೆ ಸಿಗುತ್ತದೆ.

ಇವೆಲ್ಲವನ್ನೂ ಮಾಡಲು ಪೋಷಕರಿಗೆ ಬೇಕಾಗಿರುವುದು ಸ್ವಲ್ಪ ಸಹನೆ ಮತ್ತು ಮಕ್ಕಳ ಬಗೆಗೆ ಸಂಪೂರ್ಣ ಪ್ರಾಮಾಣಿಕ ಕಾಳಜಿ. ಜೊತೆಗೆ ಸ್ವಲ್ಪ ದೂರದ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಹೇಗಾದರೂ ಮಾಡಿ ಇವತ್ತಿನ ಊಟವನ್ನು ಮಗುವಿನ ಹೊಟ್ಟೆಗೆ ತುರುಕದಿದ್ದರೆ ಭಾರೀ ಅನಾಹುತವಾಗಬಹುದು ಎನ್ನುವ ಆತಂಕ ಪೋಷಕರಲ್ಲಿದ್ದರೆ ನಿತ್ಯದ ಊಟದ ಜಂಜಾಟ ತಪ್ಪಿದ್ದಲ್ಲ. ಕೆಲವೇ ದಿನಗಳು ಮಗುವಿನ ಆಹಾದಲ್ಲಿ ವ್ಯತ್ಯಾಸವಾದರೆ ಮಗುವಿನ ಆರೋಗ್ಯ ಹಾಳಾಗುವುದಿಲ್ಲ. ಆದರೆ ಆ ಸಮಯದಲ್ಲಿ ಪೋಷಕರು ಕಲಿಸುವ ಜೀವನ ಪಾಠಗಳು ಬಹಳ ದೂರದ ಪರಿಣಾಮಗಳನ್ನು ನೀಡುತ್ತವೆ.

Comments are closed.