ಆರೋಗ್ಯ

ಕುಂದಾಪುರ ಈಗ ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್-ಸೋಂಕಿತರ ಸೇವೆಗೆ ಸಮರ್ಪಣಾ ಆಸ್ಪತ್ರೆ

Pinterest LinkedIn Tumblr

ಕುಂದಾಪುರ: ಕುಂದಾಪುರ ಕೋವಿಡ್ ಆಸ್ಪತ್ರೆ ಈಗ ಇನ್ನಷ್ಟು ಸೌಲಭ್ಯಗಳೊಂದಿಗೆ ಪೂರ್ಣಪ್ರಮಾಣದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದ್ದು ಡೆಡಿಕೇಟೆಡ್ ಕೋವಿಡ್ ಹಾಸ್ಪಿಟಲ್ ಎಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ.

(ಕುಂದಾಪುರ ಕೋವಿಡ್ ಆಸ್ಪತ್ರೆ)

ಉಡುಪಿ ಡಿಸಿ ಜಿ. ಜಗದೀಶ್ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ| ಪ್ರಶಾಂತ್ ಭಟ್ ಸಹಕಾರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ನಾಗಭೂಷಣ್ ಉಡುಪ, ಡಾ. ಪ್ರೇಮಾನಂದ್, ಡಾ. ರಾಬರ್ಟ್ ರೆಬೆಲ್ಲೋ, ಡಾ. ನಾಗೇಶ್ ಸೇರಿದಂತೆ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ರಾತ್ರಿ ಹಗಲೆನ್ನದೇ ಕೊರೋನಾ ವಿರುದ್ಧ ಹೋರಾಟದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಐಸಿಯು, ವೆಂಟಿಲೇಟರ್ ವ್ಯವಸ್ಥೆ ಸೇರಿದಂತೆ ಸಾಕಷ್ಟು ಆಕ್ಸಿಜನ್ ಸೌಲಭ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಎಲ್ಲ ಬಗೆಯ ಚಿಕಿತ್ಸೆ ಲಭ್ಯವಿದೆ. ದಾನಿ ಜಿ.ಶಂಕರ್ ವತಿಯಿಂದ 50 ಬೆಡ್‌ಗಳಿಗೆ ಆಕ್ಸಿಜನ್ ವ್ಯವಸ್ಥೆಯಾಗಿದ್ದರೆ, ಸರಕಾರದಿಂದಲೂ ಅಷ್ಟೇ ವ್ಯವಸ್ಥೆಯಾಗಿದೆ. ಇದರಿಂದ ಎಲ್ಲ ಬೆಡ್‌ನಲ್ಲಿದ್ದವರಿಗೂ ಅಗತ್ಯವಾದರೆ ಆಕ್ಸಿಜನ್ ಒದಗಿಸಬಹುದಾಗಿದೆ. ಅಗತ್ಯವುಳ್ಳ ಔಷಧಿಗಳೂ ಲಭ್ಯವಿದೆ. ಹೀಗಾಗಿ ಈ ಕೋವಿಡ್ ಆಸ್ಪತ್ರೆ ಗುಣಮಟ್ಟದಲ್ಲಿ ಮೇಲ್ದರ್ಜೆಗೇರಿದೆ. ಸೋಂಕಿತರ ಸೇವೆಗೆ ಸಮರ್ಪಣಾ ಆಸ್ಪತ್ರೆಯಾಗಿರುತ್ತದೆ.

ಗೀಸರ್ ರಿಪೇರಿಗೆ ಜನ ಬರುವುದಿಲ್ಲ
ನೂರಾರು ರೋಗಿಗಳು ಬಿಸಿನೀರು ಉಪಯೋಗಿಸುವುದರಿಂದ ಆಗಾಗ ಬಿಸಿನೀರ ವ್ಯವಸ್ಥೆ ಕೆಡುತ್ತದೆ. ಆದರೆ ಗೀಸರನ್ನು ರಿಪೇರಿ ಮಾಡಲು ಯಾರೂ ಬರುವುದಿಲ್ಲ. ಹತ್ತು ಜನರನ್ನು ಸಂಪರ್ಕಿಸಿ ಕೊನೆಗೂ ಯಾರೋ ಒಬ್ರಿಗೆ “ನಿಮಗೇನೂ ಆಗುವುದಿಲ್ಲ” ಎಂದು ಧೈರ್ಯ ನೀಡಿ ಸರಿಮಾಡಬೇಕು. ಇಂತಹ ಕೆಲವು ಸಮಸ್ಯೆಗಳಿರುತ್ತದೆ ಎಂದು ಕೋವಿಡ್ ನೋಡಲ್ ಅಧಿಕಾರಿ ಡಾ.ನಾಗೇಶ್ ಹೇಳುತ್ತಾರೆ.

(ಕೋವಿಡ್ ಆಸ್ಪತ್ರೆ ಆರಂಭದ ವೇಳೆ ಡಿಸಿ ಭೇಟಿ)

ಮೂಗಿನಲ್ಲಿ 6 ಗಂಟೆ, ಗಂಟಲಲ್ಲಿ 2 ದಿನ
ಕೊರೊನಾ ವೈರಸ್ ದೇಹವನ್ನು ಹೊಕ್ಕು 6 ಗಂಟೆಗಳ ಕಾಲ ಮೂಗಿನಲ್ಲಿರುತ್ತದೆ. ಆನಂತರ 40 ರಿಂದ 80 ಗಂಟೆಗಳ ಕಾಲ ಗಂಟಲಲ್ಲಿರುತ್ತದೆ. ಆದುದರಿಂದ , ಬಿಸಿನೀರಲ್ಲಿ ಉಪ್ಪು ಹಾಕಿ ಗಂಟಲನ್ನು ತೊಳೆದುಕೊಳ್ಳಬೇಕು. ಬಿಸಿಬಿಸಿ ನೀರು ಕುಡಿಯಬೇಕು. ಸಮುದಾಯದ ಕಾರ್ಯಕ್ರಮಗಳಿಗೆ ಹೋಗಿ ಬಂದರೆ ಬಟ್ಟೆ ಬೇರೆ ತೆಗೆದಿಟ್ಟು ಬಿಸಿನೀರಿನಲ್ಲಿ ತೊಳೆಯಬೇಕು. ಸ್ನಾನ ಮಾಡಬೇಕು. ದಿನನಿತ್ಯ ಪರಸ್ಪರ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕೈ ಸ್ವಚ್ಛಗೊಳಿಸಬೇಕು. ಕೆಲವೊಮ್ಮೆ ಮಾಸ್ಕ್ ಎಲ್ಲೆಲ್ಲಿ ಇಟ್ಟುಕೊಂಡು ಬಾಯಿ, ಮೂಗು ಮುಟ್ಟುತ್ತ ಇದ್ದರೆ ನಾವೇ ಸೋಂಕು ತಗಲಿಸಿಕೊಂಡ ಹಾಗಾಗುತ್ತದೆ ಎಂದು ಡಾ.ನಾಗೇಶ್ ಹೇಳಿದರು.
ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಹಲವು ರೋಗಗಳ ಭಾದೆ ಇರುವುದರಿಂದ ಯಾವುದೇ ಇತರ ರೋಗಗಳು ವೈರಸ್‌ಗಳೂ ಸೋಂಕದಂತೆ ಜಾಗೃತೆ ವಹಿಸಬೇಕು ಎಂದರು. ಮನೆಯಲ್ಲಿ ಮಾಡುವ ಕಷಾಯಗಳು ಕೂಡ ನಮ್ಮ ಆರೋಗ್ಯ ಕಾಪಾಡಲು ಸಾಕಾಗುತ್ತವೆ ಎಂದು ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

ಕೋವಿಡ್ -19 ನಿರ್ವಹಣೆಗೆ ರೋಟರಿ ಕೊಡುಗೆ…
ಕೊರೊನಾ ಸೋಂಕು ಸಮುದಾಯಕ್ಕೆ ಹರಡದಂತೆ ತಡೆಗಟ್ಟಲು ಹಾಗೂ ಕೊರೊನಾ ಸೋಂಕು ಪೀಡಿತರಿಗೆ ಉತ್ತಮ ಚಿಕಿತ್ಸೆ ನೀಡಲು ರೋಟರಿ ಸಂಸ್ಥೆ ಹಲವು ಕೊಡುಗೆಗಳನ್ನು ಆರೋಗ್ಯ ಇಲಾಖೆಗೆ ನೀಡಿದೆ. ರೋಟರಿ ಜಿಲ್ಲಾ ಪ್ರಾಕೃತಿಕ ವಿಪತ್ತು ನಿರ್ವಹಣಾ ನಿಧಿಯಿಂದ 2.5 ಲಕ್ಷ ರೂ. ಮೌಲ್ಯದ ಪರಿಕರಗಳನ್ನು ಕುಂದಾಪುರ ಆರೋಗ್ಯಾಧಿಕಾರಿಗಳಿಗೆ ರೋಟರಿ ಜಿಲ್ಲಾ ಗವರ್ನರ್ ಒಪ್ಪಿಸಿದ್ದಾರೆ. ಪಿ.ಪಿ.ಇ. ಕಿಟ್, ಎನ್95 ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್, 25 ಥರ್ಮಲ್ ಸ್ಕ್ಯಾನರ್, 25 ಪಲ್ಸ್ ಆಕ್ಸಿಮೀಟರ್ ನೀಡಲಾಗಿದೆ.

ಮಾಜಿ ಜಿಲ್ಲಾ ಗವರ್ನರ್ ಪಿ.ನಾರಾಯಣ ಹಾಗೂ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ರವಿರಾಜ್ ಶೆಟ್ಟಿ, ಕುಂದಾಪುರ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ರೋಟರಿ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಡಾ.ನಾಗಭೂಷಣ ಅವರಿಗೆ ಹಸ್ತಾಂತರಿಸಿದರು. ಕುಂದಾಪುರದಲ್ಲಿ ರೂಪಿಸಲಾದ ಕೋವಿಡ್ ಹೆಲ್ತ್ ಕೇರ್ ಸೇಂಟರ್‌ಗೆ ಕುಂದಾಪುರ ವಲಯ-1ರ ರೋಟರಿ ಕ್ಲಬ್‌ಗಳು 75 ಬೆಡ್ ಹಾಗೂ ಬೆಡ್‌ಶೀಟ್‌ಗಳನ್ನು ಒದಗಿಸಿವೆ. ಕುಂದಾಪುರ, ಕುಂದಾಪುರ ದಕ್ಷಿಣ, ಕುಂದಾಪುರ ಮಿಡ್‌ಟೌನ್, ಕುಂದಾಪುರ ಸನ್‌ರೈಸ್, ಕುಂದಾಪುರ ರಿವರ್‌ಸೈಡ್ , ರೋಟರಿ ಕ್ಲಬ್ ಬೈಂದೂರು, ಸಿದ್ಧಾಪುರ ಹೊಸಂಗಡಿ ಗಂಗೊಳ್ಳಿ ರೋಟರಿ ಕ್ಲಬ್‌ಗಳು ಕೋವಿಡ್ ಜನಜಾಗೃತಿ ಅಭಿಯಾನದಲ್ಲಿ ಕಾರ್ಯನಿರ್ವಹಿಸುತ್ತಿವೆ.

Comments are closed.