ಆರೋಗ್ಯ

ಹೃದಯ ಬಡಿತವನ್ನು ಉತ್ತಮಗೊಳಿಸಲು ಯಾವ ವ್ಯಾಯಾಮ ಒಳ್ಳೆಯದು ಗೋತ್ತೆ?

Pinterest LinkedIn Tumblr

ಓಡುವುದು ಮತ್ತು ಮೆಟ್ಟಿಲುಗಳನ್ನೇರುವುದು ಇವೆರಡೂ ಅತ್ಯುತ್ತಮ ಆರೋಗ್ಯ ಲಾಭಗಳನ್ನು ನೀಡುವ ವ್ಯಾಯಾಮಗಳಾಗಿವೆ. ಪ್ರತಿದಿನ ಈ ವ್ಯಾಯಾಮಗಳನ್ನು ಮಾಡಿದರೆ ಶರೀರದ ಕೆಳಗಿನ ಭಾಗವು ಸದೃಢವಾಗುತ್ತದೆ. ಆದರೆ ಇವೆರಡರ ಪೈಕಿ ಯಾವುದು ಗರಿಷ್ಠ ಆರೋಗ್ಯ ಲಾಭಗಳನ್ನು ಎನ್ನುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿವೆ. ಹಲವಾರು ಸಂಶೋಧನೆಗಳ ಬಳಿಕ ಮೆಟ್ಟಿಲುಗಳನ್ನೇರುವುದು ಓಟ ಅಥವಾ ಬಿರುಸಿನ ನಡಿಗೆಯ ಮೂರು ಪಟ್ಟು ಹೆಚ್ಚು ಲಾಭದಾಯಕ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಹೆಚ್ಚಿನ ತೀವ್ರತೆ
ಶರೀರದಲ್ಲಿಯ ಹೆಚ್ಚುವರಿ ಕ್ಯಾಲರಿಗಳನ್ನು ನಿವಾರಿಸುವ ಓಟ ಮತ್ತು ಮೆಟ್ಟಿಲುಗಳನ್ನೇರುವುದು ಎರೋಬಿಕ್ ವ್ಯಾಯಾಮದ ಅತ್ಯುತ್ತಮ ರೂಪಗಳಾಗಿವೆ. ಆದರೆ ಮೆಟ್ಟಿಲುಗಳನ್ನೇರುವದು ಹೆಚ್ಚಿನ ತೀವ್ರತೆಯನ್ನು ಬಯಸುವುದರಿಂದ ಹೆಚ್ಚು ಲಾಭದಾಯಕವಾಗಿದೆ. ಈ ಚಟುವಟಿಕೆಗೆ ಹೆಚ್ಚಿನ ವೇಗ ಮತ್ತು ತಾಲೀಮು ಅಗತ್ಯವಾಗಿರುವುದರಿಂದ ಓಟ ಅಥವಾ ನಡಿಗೆಗೆ ಹೋಲಿಸಿದರೆ ಹೆಚ್ಚು ತೀವ್ರತೆಯಿಂದ ಕೂಡಿದ ವ್ಯಾಯಾಮವಾಗಿದೆ. ಆದರೆ ಆರಾಮವಾಗಿ ಮೆಟ್ಟಿಲುಗಳನ್ನೇರುವುದಲ್ಲ. ಹೆಚ್ಚಿನ ಆರೋಗ್ಯಲಾಭಗಳನ್ನು ಪಡೆಯಲು ತ್ವರಿತವಾಗಿ ಮೆಟ್ಟಿಲುಗಳನ್ನೇರುವುದು ಬಹಳ ಮುಖ್ಯವಾಗಿದೆ.

ಶೃಂಗೀಯ ಚಲನೆಗೆ ಅವಕಾಶ
ನಡಿಗೆ ಮತ್ತು ಓಟ ಸಮತಲ ಸ್ವರೂಪದ ಅಂದರೆ ಭೂಮಿಗೆ ಸಮಾನಾಂತರವಾಗಿರುವ ಚಟುವಟಿಕೆಗಳಾಗಿದ್ದರೆ ಮೆಟ್ಟಲುಗಳನ್ನೇರುವುದು ಶೃಂಗೀಯ ಅಥವಾ ಲಂಬ ಸ್ವರೂಪದ್ದಾಗಿದೆ. ಮೆಟ್ಟಿಲುಗಳನ್ನೇರುವಾಗಿ ಶರೀರವು ಲಂಬವಾಗಿ ಚಲಿಸುತ್ತಿರುತ್ತದೆ ಮತ್ತು ಇದು ಸ್ನಾಯುಗಳ ಮೇಲೆ ಬಲವನ್ನು ಉಂಟುಮಾಡುತ್ತದೆ ಹಾಗೂ ಪ್ರತಿರೋಧವನ್ನು ಹೆಚ್ಚಿಸುತ್ತದೆ. ತನ್ಮೂಲಕ ಶರೀರದ ಕೆಳಭಾಗವನ್ನು ಸದೃಢಗೊಳಿಸುತ್ತದೆ.
ಈ ವ್ಯಾಯಾಮ ಮಾಡುವಾಗ ನಾವು ಗುರುತ್ವಾಕರ್ಷಣ ಶಕ್ತಿಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವುದರಿಂದ ಕಾಲಿನ ಸ್ನಾಯುಗಳಿಗೆ ಒಳ್ಳೆಯ ವ್ಯಾಯಾಮ ದೊರೆಯುತ್ತದೆ.

ಸಮಾನ ಪರಿಣಾಮ
ನಾವು ಓಡುವಾಗ ಕಾಲುಗಳ ಮೇಲೆ ಮಾತ್ರ ಒತ್ತಡವು ಬೀಳುತ್ತದೆ, ಆದರೆ ಮೆಟ್ಟಿಲುಗಳನ್ನೇರುವುದರಿಂದ ಕಾಲುಗಳು, ಮಂಡಿಗಳು ಮತ್ತು ಕಣಕಾಲುಗಳ ಮೇಲೆ ಒತ್ತಡವುಂಟಾಗುತ್ತದೆ ಮತ್ತು ಈ ಎಲ್ಲ ಭಾಗಗಳಿಗೂ ಸಮಾನ ವ್ಯಾಯಾಮ ದೊರೆಯುತ್ತದೆ.

ಸುಲಭದ ವ್ಯಾಯಾಮ
ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಈ ವ್ಯಾಯಾಮವನ್ನು ಮಾಡಬಹುದು ಮತ್ತು ಇದಕ್ಕೆ ಅಗತ್ಯವಾಗಿರುವುದು ಮೆಟ್ಟಿಲುಗಳು ಮಾತ್ರ. ಮನೆ,ಕಟ್ಟಡಗಳು,ಕಚೇರಿ ಹೀಗೆ ಎಲ್ಲಿ ಬೇಕಾದರೂ ಮೆಟ್ಟಿಲುಗಳು ಇರುತ್ತವೆ. ನಿಮಗೆ ವ್ಯಾಯಾಮ ಮಾಡಬೇಕೆನಿಸಿದಾಗೆಲ್ಲ ಜಿಮ್‌ಗೇ ಹೋಗಬೇಕಿಲ್ಲ, ಸಮೀಪದಲ್ಲಿರುವ ಮೆಟ್ಟಿಲುಗಳನ್ನು ಹತ್ತಲು ಆರಂಭಿಸಿದರಾಯಿತು, ಅಷ್ಟೇ.

ಅಲ್ಲದೆ ಕಚೇರಿ, ಮಾಲ್ ಇತ್ಯಾದಿ ಕಡೆಗಳಲ್ಲಿ ಲಿಫ್ಟ್ ಬಳಸುವ ಬದಲು ಮೆಟ್ಟಿಲುಗಳನ್ನೇರುವುದು ಲಾಭದಾಯಕ ವಾಗುತ್ತದೆ. ಅಲ್ಲದೆ ಈ ಮೆಟ್ಟಿಲಗಳನ್ನೇರುವ ವ್ಯಾಯಾಮ ಮಾಡಲು ನಿಮಗೆ ವಿಶೇಷ ಉಡುಪಿನ ಅಗತ್ಯವೂ ಇಲ್ಲ, ನೀವು ಧರಿಸಿರುವ ಉಡುಗೆ ಹಿತಕರವಾಗಿದ್ದರೆ ಸಾಕು.

ತ್ವರಿತ ಲಾಭಗಳು
ಮೆಟ್ಟಿಲುಗಳನ್ನೇರುವದು ತಕ್ಷಣದ ಲಾಭಗಳನ್ನು ನೀಡುತ್ತದೆ ಮತ್ತು ಇವು ವ್ಯಾಯಾಮ ಮುಗಿದ ಬೆನ್ನಲ್ಲೇ ಅನುಭವಕ್ಕೆ ಬರುತ್ತವೆ. ಅತಿವೇಗದಲ್ಲಿ ಮೆಟ್ಟಿಲುಗಳನ್ನು ಹತ್ತುವುದು ಓಟಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚು ಒಳ್ಳೆಯದು. ಒಂದು ಗಂಟೆ ಮೆಟ್ಟಿಲುಗಳನ್ನು ಹತ್ತಿಳಿಯುತ್ತಿದ್ದರೆ 1000 ಕ್ಯಾಲರಿಗಳನ್ನು ದಹಿಸಬಹುದಾಗಿದೆ.

ಹವಾಮಾನದ ಹಂಗು ಇಲ್ಲ
ಹೊರಗೆ ಎಷ್ಟೇ ಪ್ರತಿಕೂಲ ಹವಾಮಾನವಿದ್ದರೂ ನೀವು ತಲೆ ಕೆಡಿಸಕೊಳ್ಳಬೇಕಿಲ್ಲ. ಅದು ಮೆಟ್ಟಿಲುಗಳನ್ನು ಹತ್ತುವ ವ್ಯಾಯಾಮಕ್ಕೆ ಅಡ್ಡಿಯಾಗುವುದಿಲ್ಲ. ಹೊರಗಿನ ವಾತಾವರಣ ಓಟಕ್ಕೆ ಪೂರಕವಾಗಿಲ್ಲ ಎಂದಿದ್ದರೆ ನೀವು ಮನೆಯೊಳಗೇ ಮೆಟಿಲುಗಳನ್ನು ಹತ್ತಿಳಿಯಬಹುದು. ಹೀಗೆ ಯಾವುದೇ ವಾತಾವರಣವಿದ್ದರೂ ಮೆಟ್ಟಿಲುಗಳನ್ನು ಹತ್ತುವುದು ಅತ್ಯಂತ ಸುಲಭದ ವ್ಯಾಯಾಮವಾಗಿದೆ.

ಮೆಟ್ಟಿಲುಗಳನ್ನು ಹತ್ತುವುದು ಶರೀರದ ಕೆಳಭಾಗವನ್ನು ಸದೃಢಗೊಳಿಸುವ ಜೊತೆಗೆ ಕೊಬ್ಬು ಮತ್ತು ಕ್ಯಾಲರಿಗಳನ್ನು ನಿವಾರಿಸುತ್ತದೆ. ಹೃದಯ ಬಡಿತ ದರವನ್ನು ಉತ್ತಮಗೊಳಿಸುತ್ತದೆ, ಸ್ನಾಯುಗಳನ್ನು ಸದೃಢಗೊಳಿಸುತ್ತದೆ, ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಶಕ್ತಿ ಹಾಗೂ ಕ್ಷಮತೆಯನ್ನು ಹೆಚ್ಚಿಸುತ್ತದೆ.

Comments are closed.