ಆರೋಗ್ಯ

ಹಲ್ಲುಗಳ ಅನಾರೋಗ್ಯವು ಮರೆಗುಳಿತನ,ಉಸಿರಾಟದ ಸಮಸ್ಯೆಗಳಿಗೆ ಪರೋಕ್ಷವಾದ ಕಾರಣವೇ ತಿಳಿಯಿರಿ?

Pinterest LinkedIn Tumblr

ಹಲ್ಲುಗಳ ಬಗ್ಗೆ ಸೂಕ್ತ ಕಾಳಜಿ ಇಲ್ಲದಿದ್ದರೆ ಶರೀರದ ಆರೋಗ್ಯದ ಮೇಲಿನ ನಿಗಾ ಅಪೂರ್ಣವಾಗುತ್ತದೆ. ನಿಮ್ಮ ಬಾಯಿ ಸ್ವಚ್ಛ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿರಲು ಹಲ್ಲುಗಳ ಸೂಕ್ತ ಕಾಳಜಿಯು ಮುಖ್ಯವಾಗಿದೆ. ಇದರಿಂದ ಸೋಂಕುಗಳು,ದಂತಕ್ಷಯ ಮತ್ತು ದಂತಕುಳಿ ಉಂಟಾಗುವುದನ್ನು ತಡೆಯಬಹುದು. ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ, ಹಲ್ಲುಗಳ ಅನಾರೋಗ್ಯವು ಹೃದ್ರೋಗ,ಬುದ್ಧಿಮಾಂದ್ಯತೆ ಮತ್ತು ಮರೆಗುಳಿತನ,ಉಸಿರಾಟದ ಸಮಸ್ಯೆಯಂತಹ ಹಲವಾರು ಕಾಯಿಲೆಗಳೊಂದಿಗೆ ಪರೋಕ್ಷ ಸಂಬಂಧವನ್ನು ಹೊಂದಿದೆ.

ಹಲ್ಲುಗಳನ್ನು ಸ್ವಚ್ಛವಾಗಿರಿಸಲು ನಾವು ಸಾಮಾನ್ಯವಾಗಿ ಟೂಥ್‌ಪೇಸ್ಟ್‌ನ್ನು ಬಳಸುತ್ತೇವೆ. ಆದರೆ ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸಲು ಇತರ ವಿಧಾನಗಳೂ ಇವೆ ಮತ್ತು ಈ ಪೈಕಿ ತೆಂಗಿನೆಣ್ಣೆಯ ಬಳಕೆ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ತೆಂಗಿನೆಣ್ಣೆಯು ಮಧ್ಯಮ ಸರಣಿ ಟ್ರೈಗ್ಲಿಸರೈಡ್‌ಗಳನ್ನು ಒಳಗೊಂಡಿದ್ದು,ಇವು ಭಿನ್ನವಾಗಿ ಚಯಾಪಚಯಗೊಳ್ಳುತ್ತವೆ,ತನ್ಮೂಲಕ ವಿವಿಧ ಆರೋಗ್ಯ ಲಾಭಗಳನ್ನು ನೀಡುತ್ತವೆ.

ತೆಂಗಿನೆಣ್ಣೆಯ ಶೇ.50ರಷ್ಟು ಮಧ್ಯಮ ಸರಣಿಯ ಫ್ಯಾಟಿ ಆಯಸಿಡ್ ಲಾರಿಕ್ ಆಮ್ಲವಾಗಿದ್ದು, ಇದು ಹಾನಿಕಾರಕ ಬ್ಯಾಕ್ಟೀರಿಯಾಗಳು, ಶಿಲೀಂಧ್ರ ಮತ್ತು ವೈರಸ್‌ಗಳಿಂದ ಶರೀರಕ್ಕೆ ರಕ್ಷಣೆ ಒದಗಿಸುವಲ್ಲಿ ನೆರವಾಗುವ ಮೊನೊಲಾರಿನ್ ಎಂಬ ಸಂಯುಕ್ತವಾಗಿ ವಿಭಜಿಸಲ್ಪಟ್ಟಿ ರುತ್ತದೆ.

ತೆಂಗಿನೆಣ್ಣೆಯ ಬಳಕೆಯಿಂದ ಹಲ್ಲುಗಳಿಗೆ ಆಗುವ ಲಾಭಗಳು

ಪಾಚಿಯನ್ನು ಕಡಿಮೆ ಮಾಡುತ್ತದೆ
ತೆಂಗಿನೆಣ್ಣೆಯು ಹಲ್ಲುಗಳನ್ನು ಪಾಚಿಯಿಂದ ಮುಕ್ತಗೊಳಿಸುವ ಮೂಲಕ ವಸಡು ರೋಗವನ್ನು ತಡೆಯುತ್ತದೆ. ಹಲ್ಲುಗಳು ಪಾಚಿಗಟ್ಟುವುದು ವಸಡು ರೋಗಗಳ ಮುಖ್ಯ ಕಾರಣವಾಗಿದೆ. ತೆಂಗಿನೆಣ್ಣೆಯ ಬಳಕೆಯು ಪಾಚಿ ಸಂಗ್ರಹಗೊಳ್ಳುವುದನ್ನು ಕಡಿಮೆ ಮಾಡುತ್ತದೆ ಮತ್ತು ವಸಡಿನ ಉರಿಯೂತ ರೋಗವಾದ ಸೆಸ್ಸಿವೈಟಿಸ್‌ನ್ನು ತಡೆಯುತ್ತದೆ.

ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ
ತೆಂಗಿನೆಣ್ಣೆಯು ಬಾಯಿಯಲ್ಲಿಯ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲಿಯ ಲಾರಿಕ್ ಆಮ್ಲವು ಉಸಿರಿನ ದುರ್ವಾಸನೆ,ದಂತಕ್ಷಯ ಮತ್ತು ವಸಡು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳ ವಿರುದ್ಧ ಅತ್ಯಂತ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ದಂತಕ್ಷಯವನ್ನು ತಡೆಯುತ್ತದೆ
ತೆಂಗಿನೆಣ್ಣೆಯ ಬಳಕೆಯು ದಂತಕ್ಷಯಕ್ಕೆ ಪ್ರಮುಖ ಕಾರಣವಾಗಿರುವ ಸ್ಟ್ರೆಪ್ಟೊಕಾಕಸ್ ಮತ್ತು ಲ್ಯಾಕ್ಟೊಬಾಸಿಲಸ್ ಬ್ಯಾಕ್ಟೆರಿಯಾಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ತೆಂಗಿನೆಣ್ಣೆಯು ಪರಿಣಾಮಕಾರಿಯಾಗಿದೆ ಎನ್ನುವುದನ್ನು ವಿವಿಧ ಅಧ್ಯಯನಗಳು ತೋರಿಸಿವೆ. ಪ್ರತಿ ದಿನ ಸುಮಾರು 10 ನಿಮಿಷದಂತೆ 20-25 ದಿನಗಳ ಕಾಲ ತೆಂಗಿನೆಣ್ಣೆಯಿಂದ ವಸಡುಗಳನ್ನು ಮಸಾಜ್ ಮಾಡಿದರೆ ಪರಿಣಾಮವನ್ನು ನೀವೇ ನೋಡಬಹುದು.

ಹಲ್ಲುಗಳಿಗೆ ತೆಂಗಿನೆಣ್ಣೆಯನ್ನು ಬಳಸುವುದು ಹೇಗೆ ?
ತೆಂಗಿನೆಣ್ಣೆಯ ಟೂಥ್‌ಪೇಸ್ಟ್: ಅರ್ಧ ಕಪ್ ತೆಂಗಿನೆಣ್ಣೆಯನ್ನು ಅದು ಸಂಪೂರ್ಣವಾಗಿ ದ್ರವದ ರೂಪವನ್ನು ಬಿಸಿ ತಾಳುವವರೆಗೆ ಕಾಯಿಸಿ. ಎರಡು ಟೇಬಲ್‌ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ ಪೇಸ್ಟ್ ರೂಪ ತಳೆಯುವವರೆಗೆ ಚೆನ್ನಾಗಿ ಕಲಕಿ. ಇದಕ್ಕೆ 10-20 ಹನಿ ಪುದೀನಾ ಅಥವಾ ದಾಲ್ಚಿನ್ನಿ ಎಸೆನ್ಶಿಯಲ್ ಆಯಿಲ್ ಅಥವಾ ಸಾರಭೂತ ಎಣ್ಣೆಯನ್ನು ಸೇರಿಸಿದರೆ ತೆಂಗಿನೆಣ್ಣೆಯ ಟೂಥ್‌ಪೇಸ್ಟ್ ಸಿದ್ಧವಾಗುತ್ತದೆ. ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಮಾಮೂಲು ಟೂಥ್‌ಪೇಸ್ಟ್‌ನಂತೆ ಬಳಸಿ.

ಆಯಿಲ್ ಪುಲ್ಲಿಂಗ್: ಒಂದು ಟೇಬಲ್‌ಸ್ಪೂನ್ ತೆಂಗಿನೆಣ್ಣೆಯನ್ನು ಬಾಯಿಯಲ್ಲಿಟ್ಟುಕೊಂಡು ಹಲ್ಲುಗಳ ಮೂಲಕ ಹಾದು ಹೋಗುವಂತೆ ಸುಮಾರು 15-20 ನಿಮಿಷಗಳ ಕಾಲ ಮುಕ್ಕಳಿಸುತ್ತಿರಿ. ಬಳಿಕ ಎಣ್ಣೆಯನ್ನು ಉಗಿದು ಬಾಯಿಯನ್ನು ತೊಳೆದುಕೊಂಡು ಮೃದು ಟೂಥ್‌ಪೇಸ್ಟ್ ಅಥವಾ ತೆಂಗಿನೆಣ್ಣೆಯ ಟೂಥ್‌ಪೇಸ್ಟ್‌ನಿಂದ ಹಲ್ಲುಗಳನ್ನು ಬ್ರಷ್ ಮಾಡಿ. ಈ ಕೆಲಸವನ್ನು ಪ್ರತಿ ದಿನ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ಗೆ ಮೊದಲು ಮಾಡಿ. ಮುಕ್ಕಳಿಸಿದ ಎಣ್ಣೆಯನ್ನು ನುಂಗಬೇಡಿ.

ತೆಂಗಿನೆಣ್ಣೆಯು ಟೂಥ್‌ಪೇಸ್ಟ್‌ಗೆ ಉತ್ತಮ ಪರ್ಯಾಯವಾಗಿದೆ ಎನ್ನುವುದನ್ನು ಹಲವಾರು ಅಧ್ಯಯನಗಳು ಬೆಟ್ಟು ಮಾಡಿವೆ. ಅದು ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಮತ್ತು ವಿಷವಸ್ತುಗಳನ್ನು ಶರೀರದಿಂದ ಹೊರತಳ್ಳಲು ಅಗತ್ಯವಾದ ನೈಸರ್ಗಿಕ ಬ್ಯಾಕ್ಟೀರಿಯಾ ಪ್ರತಿರೋಧಕ ಗುಣವನ್ನು ಹೊಂದಿದೆ.

ಆರೋಗ್ಯದ ಬಗ್ಗೆ ಕಾಳಜಿಯಿರುವವರು ರಾಸಾಯನಿಕಗಳ ಬಳಕೆಗಿಂತ ನೈಸರ್ಗಿಕ ವಿಧಾನಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಸಾಮಾನ್ಯ ಟೂಥ್‌ಪೇಸ್ಟ್‌ಗಳು ಬ್ಯಾಕ್ಟೀರಿಯಾ ಪ್ರತಿರೋಧಕವಾದ ಟ್ರೈಕ್ಲೋಸಾನ್ ಅನ್ನು ಒಳಗೊಂಡಿರುತ್ತವೆ. ಆದರೆ ಅದು ಬ್ಯಾಕ್ಟೀರಿಯಾಗಳಲ್ಲಿಯ ಪ್ರತಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಮತ್ತು ಶರೀರದಲ್ಲಿಯ ಹಾರ್ಮೋನ್‌ಗಳ ಸ್ರಾವದಲ್ಲಿ ವ್ಯತ್ಯಯವನ್ನುಂಟು ಮಾಡುತ್ತದೆ ಎನ್ನುವುದೇ ಸಮಸ್ಯೆ. ಅಲ್ಲದೆ ಟೂಥ್‌ಪೇಸ್ಟ್‌ನಲ್ಲಿರುವ ಫ್ಲೋರೈಡ್ ಕೂಡ ಒಳ್ಳೆಯದಲ್ಲ.

Comments are closed.