ಆರೋಗ್ಯ

ಮಂಡಿ ಬದಲಾವಣೆಯ ಕುರಿತು ಮಿಥ್ಯೆಗಳ ಜೊತೆ ಅದರ ಹಿಂದಿರುವ ಸತ್ಯಗಳು

Pinterest LinkedIn Tumblr

ಹೆಚ್ಚಿನವರಿಗೆ ವಯಸ್ಸಾಗುತ್ತಿದ್ದಂತೆ ಮಂಡಿ ನೋವು ಬಾಧಿಸತೊಡಗುತ್ತದೆ. ಕೆಲವೊಮ್ಮೆ ಈ ನೋವು ಅಸಹನೀಯವಾಗಿರುತ್ತದೆ. ನಡೆದಾಡಲೂ ಆಗುವುದಿಲ್ಲ. ಮಂಡಿ ಕಾಯಿಲೆ ಯಾವ ಹಂತದಲ್ಲಿದೆ ಎನ್ನುವುದನ್ನು ಅವಲಂಬಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆರಂಭದ ಹಂತದಲ್ಲಿಯೇ ಮಂಡಿ ನೋವಿಗೆ ಕಾರಣ ಪತ್ತೆಯಾದರೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯು ಅಗತ್ಯವಾಗುವುದಿಲ್ಲ. ಆದರೆ ದಿನೇದಿನೇ ಸ್ಥಿತಿ ಬಿಗಡಾಯಿಸುತ್ತಿದ್ದರೆ ರೋಗಿಯು ತೀವ್ರ ನೋವನ್ನು ಅನುಭವಿಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಮಂಡಿಯನ್ನು ಬದಲಿಸುವುದು ಏಕೈಕ ಮಾರ್ಗವಾಗುತ್ತದೆ. ಮಂಡಿ ಬದಲಾವಣೆಯ ಕುರಿತು ಕೆಲವೊಂದು ಮಿಥ್ಯೆಗಳು ಜನರಲ್ಲಿ ಮನೆಮಾಡಿವೆ. ಇಂತಹ ಮಿಥ್ಯೆಗಳು ಮತ್ತು ಅವುಗಳ ಹಿಂದಿನ ಸತ್ಯಗಳ ಕುರಿತು ಮಾಹಿತಿಗಳಿಲ್ಲಿವೆ….

ಆಯಕ್ಯೂಪ್ರೆಷರ್,ಮಸಾಜ್ ಲೇಸರ್ ಥೆರಪಿ,ಮ್ಯಾಗ್ನೆಟಿಕ್ ಥೆರಪಿ ಇತ್ಯಾದಿಗಳಂತಹ ಪರ್ಯಾಯ ಚಿಕಿತ್ಸೆಗಳು ಮಂಡಿ ನೋವನ್ನು ಸಂಪೂರ್ಣವಾಗಿ ಗುಣಪಡಿಸುತ್ತವೆ ಮತ್ತು ಗಂಭೀರ ಪ್ರಕರಣಗಳಲ್ಲಿ ಮಂಡಿ ಬದಲಾವಣೆಯ ಸಾಧ್ಯತೆಗಳನ್ನು ತಗ್ಗಿಸುತ್ತವೆ ಎಂಬ ಭಾವನೆ ಹಲವರಲ್ಲಿದೆ. ಆದರೆ ರೋಗಿಯ ನೋವನ್ನು ಕಡಿಮೆಗೊಳಿಸಲು ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸಲು ಸಮಸ್ಯೆಯ ಮೂಲಕಾರಣವನ್ನು ತಿಳಿದುಕೊಳ್ಳುವುದು ಅಗತ್ಯವಾಗುತ್ತದೆ. ಕೀಲುಗಳ ನಡುವೆ ದ್ರವವಿಲ್ಲದಿದ್ದರೆ ಘರ್ಷಣೆಯಿಂದಾಗಿ ಸಂದುಗಳ ನಡುವಿನ ಸ್ಥಳವು ಕಿರಿದಾಗುತ್ತದೆ ಮತ್ತು ಅತೀವ ನೋವನ್ನುಂಟು ಮಾಡುತ್ತದೆ. ಇಂತಹ ಪ್ರಕರಣಗಳಲ್ಲಿ ಆಯಕ್ಯೂಪ್ರೆಷರ್,ಮಸಾಜ್ ಲೇಸರ್ ಥೆರಪಿ,ಮ್ಯಾಗ್ನೆಟಿಕ್ ಥೆರಪಿ ಇತ್ಯಾದಿಗಳಂತಹ ಚಿಕಿತ್ಸೆಗಳು ಫಲಪ್ರದವಾಗದಿರಬಹುದು. ಸಂಪೂರ್ಣ ಮಂಡಿ ಬದಲಾವಣೆ ಎಂದೂ ಚಿಕಿತ್ಸೆಯ ಮೊದಲ ಹೆಜ್ಜೆಯಲ್ಲ ಮತ್ತು ವೈದ್ಯರು ಯಾವಾಗಲೂ ರೋಗಿಯ ಸ್ಥಿತಿಯನ್ನು ವಿಶ್ಲೇಷಿಸಿ ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡುತ್ತಾರೆ.

ಬೊಜ್ಜುದೇಹಿಗಳಿಗೆ ಸಂಪೂರ್ಣ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗೆ ಕೆಲವು ನಿರ್ದಿಷ್ಟ ಇತಿಮಿತಿಗಳಿವೆ ಎಂದು ಹಲವರು ತಿಳಿದುಕೊಂಡಿದ್ದಾರೆ. ಬೊಜ್ಜು ದೀರ್ಘಾವಧಿಯಲ್ಲಿ ಮಂಡಿ ನೋವು ಮತ್ತು ಅದರ ಸವಕಳಿಗೆ ಕಾರಣಗಳಲ್ಲೊಂದಾಗಿದೆ. ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವ 30ಕ್ಕೂ ಅಧಿಕ ಬಿಎಂಐ ಹೊಂದಿರುವ ರೋಗಿಗಳು ತಮ್ಮ ಶರೀರದ ತೂಕವನ್ನು ತಗ್ಗಿಸಿಕೊಳ್ಳುವುದು ಅಗತ್ಯವಾಗುತ್ತದೆ. ರೋಗಿಯು ಆಧುನಿಕ ಮತ್ತು ಕನಿಷ್ಠ ಗಾಯವನ್ನುಂಟು ಮಾಡುವ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾದರೂ ಹೊಸದಾಗಿ ಅಳವಡಿಸಲಾಗಿರುವ ಕೃತಕ ಮಂಡಿಯ ಜೀವಿತಾವಧಿಯನ್ನು ಕಾಯ್ದುಕೊಳ್ಳಲು ಒತ್ತಡದ ಮೇಲೆ ನಿಗಾ ಇರಿಸಬೇಕಾಗುತ್ತದೆ.

ಜೀವನದುದ್ದಕ್ಕೂ ಔಷಧಿಗಳನ್ನು ಸೇವಿಸುವ ಮೂಲಕ ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ತಪ್ಪಿಸಿಕೊಳ್ಳಬಹುದು ಎಂಬ ನಂಬಿಕೆ ಕೆಲವರಲ್ಲಿದೆ. ಸಂದುಗಳಿಗೆ ಯಾವುದೇ ಹಾನಿಯು ಪ್ರಾರಂಭಿಕ ಹಂತಗಳಲ್ಲಿ ಗುರುತಿಸಲ್ಪಟ್ಟರೆ ಇನ್ನಷ್ಟು ಹಾನಿಯನ್ನು ತಪ್ಪಿಸಲು ಫಿಜಿಕಲ್ ಥೆರಪಿ ಮತ್ತು ವ್ಯಾಯಾಮಗಳನ್ನು ಶಿಫಾರಸು ಮಾಡಲಾಗುತ್ತದೆ. ಇದರಿಂದ ನೋವು ಕಡಿಮೆಯಾಗದಿದ್ದರೆ ಮುಂದಿನ ಹಂತದಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಬಹಳಷ್ಟು ಪ್ರಕರಣಗಳಲ್ಲಿ ತೀವ್ರ ನೋವಿನಿಂದ ಮುಕ್ತಿ ನೀಡಲು ವೈದ್ಯರು ಪೂರಕಗಳನ್ನು ಮತ್ತು ನೋವು ನಿವಾರಕಗಳನ್ನು ಸಹ ಶಿಫಾರಸು ಮಾಡಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಮೂರನೇ ಹಂತದ ಮಂಡಿನೋವು ಮತ್ತು ಸಂದುನೋವುಗಳಿಗೆ ಔಷಧಿಗಳ ನೆರವಿನಿಂದ ಚಿಕಿತ್ಸೆ ನೀಡಬಹುದಾಗಿದೆ,ಆದರೆ ಯಾವುದೇ ಔಷಧಿಯನ್ನು ವೈದ್ಯರ ಅನುಮತಿಯಿಲ್ಲದೆ ಸೇವಿಸಕೂಡದು.

ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಅಥವಾ ಹೃದಯದ ಕಾಯಿಲೆಗಳಿದ್ದವರು ಮಂಡಿ ಬದಲಾವಣೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಜನರಲ್ಲಿ ಬೇರೂರಿರುವ ಇನ್ನೊಂದು ಸಾಮಾನ್ಯ ನಂಬಿಕೆಯಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಜೀವನಶೈಲಿ ಕಾಯಿಲೆಗಳನ್ನು ಹೊಂದಿರುವ ರೋಗಿಗಳಲ್ಲಿ ಸಂಪೂರ್ಣ ಮಂಡಿ ಬದಲಾವಣೆ ಚಿಕಿತ್ಸೆಗೆ ಮುನ್ನ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಬೇಕಾಗುತ್ತದೆ ಮತ್ತು ನಿಗಾ ಇರಿಸಬೇಕಾಗುತ್ತದೆ. ಮಧುಮೇಹಿಗಳು ಸೋಂಕಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುವುದರಿಂದ ಯಾವುದೇ ಶಸ್ತ್ರಚಿಕಿತ್ಸೆಗೆ ಮುನ್ನ ವೈದ್ಯರು ಅವರ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರುತ್ತಾರೆ. ಎಲ್ಲ ಕ್ರಮಗಳನ್ನು ಸೂಕ್ತ ಎಚ್ಚರಿಕೆಯೊಂದಿಗೆ ತೆಗೆದುಕೊಂಡರೆ ಬದಲಾವಣೆ ಮಾಡಲಾದ ಮಂಡಿಯು ಸುದೀರ್ಘ ಅವಧಿಗೆ ಬಾಳಿಕೆ ಬರಬಹುದು. ಅದೇನಿದ್ದರೂ ಸಂಬಂಧಿತ ಸರ್ಜನ್‌ರಿಂದ ಮಾರ್ಗದರ್ಶನವನ್ನು ಪಡೆಯುವುದು ಅತ್ಯುತ್ತಮವಾಗುತ್ತದೆ.

Comments are closed.