ಆರೋಗ್ಯ

ವ್ಯಾಯಾಮಕ್ಕೆ ಸೂಕ್ತ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಇದನ್ನು ತಿಳಿದುಕೊಳ್ಳಿ.

Pinterest LinkedIn Tumblr

ಬೆಳಗಿನ ಅಥವಾ ಸಂಜೆಯ ವ್ಯಾಯಾಮವಿರಲಿ,ನಿಮಗೆ ಫಲಿತಾಂಶವಂತೂ ಸಿಗುತ್ತದೆ. ಆದರೆ ಇವೆರಡೂ ಸಮಯದಲ್ಲಿ ವ್ಯಾಯಾಮದ ಒಳಿತು ಮತ್ತು ಕೆಡಕುಗಳೂ ಇವೆ ಮತ್ತು ವ್ಯಾಯಾಮಕ್ಕೆ ಸೂಕ್ತ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಇವುಗಳನ್ನು ಪರಿಗಣಿಸಬಹುದು.

ಬೆಳಗಿನ ವ್ಯಾಯಾಮ
ರಾತ್ರಿಯ ನಿದ್ರೆಯ ಬಳಿಕ ನಿಮ್ಮ ಶರೀರವು ಶಾಂತ ಸ್ಥಿತಿಯಲ್ಲಿರುತ್ತದೆ,ಅಂದರೆ ಶರೀರದ ಚಟುವಟಿಕೆಗಳು ಕನಿಷ್ಠ ಮಟ್ಟದಲ್ಲಿರುತ್ತವೆ. ಬೆಳಗಿನ ವ್ಯಾಯಾಮ ಶಕ್ತಿಯನ್ನು ಕ್ರಿಯಾಶೀಲಗೊಳಿಸುವ ಮೂಲಕ ನಿಮ್ಮ ಶರೀರಕ್ಕೆ ಚಾಲನೆ ನೀಡಬಹುದು.

ನೀವು ನಿಮ್ಮ ದಿನವನ್ನು ವ್ಯಾಯಾಮದೊಂದಿಗೆ ಆರಂಭಿಸುವುದರಿಂದ ನಿರಂತರತೆಯ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಕೆಲವು ದಿನಗಳ ಬಳಿಕ ಇದು ರೂಢಿಯಾಗುತ್ತದೆ ಮತ್ತು ನೀವು ಪ್ರತಿದಿನ ಬೆಳಿಗ್ಗೆ ವ್ಯಾಯಾಮ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ. ಬೆಳಗಿನ ವ್ಯಾಯಾಮವು ನಿಮ್ಮಲ್ಲಿನ ಶಕ್ತಿಯನ್ನು ಗರಿಷ್ಠ ಮಟ್ಟದಲ್ಲಿರಿಸುತ್ತದೆ ಮತ್ತು ದಿನವಿಡೀ ನೀವು ತಾಜಾ ಆಗಿಯೇ ಇರುತ್ತೀರಿ. ಇದು ನಿಮ್ಮ ಕೆಲಸದಲ್ಲಿಯ ಕ್ಷಮತೆಯನ್ನೂ ಹೆಚ್ಚಿಸುತ್ತದೆ.

ಬೆಳಿಗ್ಗೆ,ಅದೂ ಬ್ರೇಕ್‌ಫಾಸ್ಟ್ ಸೇವನೆಗೆ ಮುನ್ನ ವ್ಯಾಯಾಮ ಮಾಡುವುದು ಸಂಜೆಯ ವ್ಯಾಯಾಮಕ್ಕೆ ಹೋಲಿಸಿದರೆ ಬೇಗನೇ ಕೊಬ್ಬನ್ನು ಕರಗಿಸುತ್ತದೆ. ಅಲ್ಲದೆ ಅದು ಹೆಚ್ಚಿನ ಕ್ಯಾಲೊರಿಗಳನ್ನು ದಹಿಸಲು ಶರೀರದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇವು ಬೆಳಿಗ್ಗೆ ವ್ಯಾಯಾಮ ಮಾಡುವುದರಲ್ಲಿಯ ಒಳ್ಳೆಯ ಅಂಶಗಳಾಗಿವೆ. ಆದರೆ ಇದಕ್ಕೆ ಇನ್ನೊಂದು ನಕಾರಾತ್ಮಕ ಮುಖವೂ ಇದೆ. ಮೊದಲನೆಯದೆಂದರೆ ಬೆಳಿಗ್ಗೆ ಏಳುವುದೇ ಕಷ್ಟ. ಎದ್ದರೂ ನಿಶ್ಶಕ್ತಿಯನ್ನು ಅನುಭವಿಸುತ್ತಿರುತ್ತೀರಿ ಮತ್ತು ಶಕ್ತಿಯ ಮಟ್ಟವೂ ಕಡಿಮೆಯಿರುತ್ತದೆ,ಇದು ನಿಮ್ಮ ಕಷ್ಟವನ್ನು ಹೆಚ್ಚಿಸುತ್ತದೆ.

ನಮ್ಮ ಶರೀರದ ಚಟುವಟಿಕೆಗಳು,ವಿಶೇಷವಾಗಿ ಶ್ವಾಸಕೋಶಗಳು ಬೆಳಗಿನ ಸಮಯದಲ್ಲಿ ಕ್ರಿಯಾಶೀಲಗೊಂಡಿ ರುವುದಿಲ್ಲ. ಶ್ವಾಸಕೋಶಗಳು ರಾತ್ರಿ ನಿದ್ರಿಸಿದಾಗ ಸಂಕುಚಿತಗೊಂಡಿರುತ್ತವೆ. ಹೀಗಾಗಿ ಜನರು ಬೆಳಗಿನ ಹೊತ್ತು ದೀರ್ಘವಾಗಿ ಉಸಿರಾಡುವುದು ಕಷ್ಟವಾಗುತ್ತದೆ.

ಅಲ್ಲದೆ ಬೆಳಿಗ್ಗೆ ಎದ್ದ ಬಳಿಕ ಸಂದುಗಳು ಮತ್ತು ಸ್ನಾಯುಗಳು ಪೆಡಸಾಗಿರುತ್ತವೆ ಮತ್ತು ವ್ಯಾಯಾಮದ ಸಮಯದಲ್ಲಿ ಹಾನಿಗೊಳಗಾಗುವ ಸಾಧ್ಯತೆಯಿರುತ್ತದೆ. ಇದೇ ಕಾರಣಕ್ಕೆ ವ್ಯಾಯಾಮಕ್ಕೆ ಮುನ್ನ,ವಿಶೇಷವಾಗಿ ಬೆಳಗಿನ ಸಮಯದಲ್ಲಿ ಕೊಂಚ ತಾಲೀಮು ಅಗತ್ಯವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವದು ಕೂಡ ಅಪಾಯಕಾರಿಯೇ, ಏಕೆಂದರೆ ಏನನ್ನಾದರೂ ಕರಗಿಸಲು ಏನಾದರೂ ಇರಬೇಕಾಗುತ್ತದೆ.

ಸಂಜೆಯ ವ್ಯಾಯಾಮ
ನೀವು ದಿನವಿಡೀ ಕ್ರಿಯಾಶೀಲರಾಗಿದ್ದರೆ ಸಂಜೆಯ ವ್ಯಾಯಾಮವು ಅದ್ಭುತ ಪರಿಣಾಮಗಳನ್ನು ನೀಡಬಲ್ಲದು. ಬೆಳಗಿನ ಸಮಯಕ್ಕೆ ಹೋಲಿಸಿದರೆ ಶರೀರದ ಚಟುವಟಿಕೆಗಳು ಉತ್ತುಂಗದಲ್ಲಿರುತ್ತವೆ ಮತ್ತು ಇದು ನಿಮಗೆ ಗರಿಷ್ಠ ಶಕ್ತಿ ಮತ್ತು ಉತ್ಸಾಹವನ್ನು ಒದಗಿಸುತ್ತದೆ. ಆದರೆ ಇದಕ್ಕೆ ಇನ್ನೊಂದು ಮುಖವೂ ಇದೆ. ಅದು ದಣಿವು. ಇಡೀ ದಿನದ ಕೆಲಸದ ಬಳಿಕ ನಿಮ್ಮ ಶರೀರವು ಸ್ವಲ್ಪ ವಿಶ್ರಾಂತಿಯನ್ನು ಬಯಸಬಹುದು ಮತ್ತು ಆ ವೇಳೆ ವ್ಯಾಯಾಮ ಕಾರ್ಯಸಾಧ್ಯವೆಂಬಂತೆ ಕಾಣುವುದಿಲ್ಲ.

ಸಂಜೆಯ ವೇಳೆಯಲ್ಲಿ ಸಂದುಗಳು ಮತ್ತು ಸ್ನಾಯುಗಳಲ್ಲಿ ಕಡಿಮೆ ಬಿಗಿತವಿರುತ್ತದೆ,ಇದರಿಂದಾಗಿ ಅವುಗಳಿಗೆ ಮೂಗೇಟುಗಳುಂಟಾಗುವ ಸಾಧ್ಯತೆ ಕನಿಷ್ಠವಾಗಿರುತ್ತದೆ. ಬೆಳಗಿನ ಸಮಯಕ್ಕೆ ಹೋಲಿಸಿದರೆ ಸಂಜೆಯ ಹೊತ್ತಿನಲ್ಲಿ ಶರೀರವು ಹೆಚ್ಚು ನಮ್ಯವಾಗಿರುತ್ತದೆ,ಅಂದರೆ ಹೇಗೆ ಬೇಕಾದರೂ ಅದನ್ನು ಬಗ್ಗಿಸಲು ಸಾಧ್ಯ ಮತ್ತು ಇದು ಇಚ್ಛಿತ ಫಲಿತಾಂಶವನ್ನು ನೀಡುತ್ತದೆ.

ದಿನವಿಡೀ ಕೆಲಸದಿಂದ ಖಾಲಿಯಾದಂತೆ ಎನಿಸಿದಾಗ ವ್ಯಾಯಾಮವು ಒತ್ತಡ ನಿವಾರಕವಾಗಿ ಕೆಲಸ ಮಾಡುತ್ತದೆ. ವ್ಯಾಯಾಮದ ಬಳಿಕ ಹಿತಕರ ಅನುಭವವುಂಟಾಗುತ್ತದೆ.

ಸಂಜೆಯ ವ್ಯಾಯಾಮ ಹಸಿವನ್ನು ಹೆಚ್ಚಿಸುತ್ತದೆ. ಚೆನ್ನಾದ ಊಟದ ಬಳಿಕ ಸೊಂಪಾದ ನಿದ್ರೆಯನ್ನೂ ಅದು ನೀಡುತ್ತದೆ.

ಆದರೆ ಸಂಜೆಯ ವ್ಯಾಯಾಮಕ್ಕೂ ಸವಾಲುಗಳಿವೆ. ಸಾಮಾನ್ಯವಾಗಿ ನಿಗದಿತ ಭೇಟಿಗಳು ಅಥವಾ ಕಾರ್ಯಕ್ರಮಗಳು, ಪಾರ್ಟಿಗಳು,ಕುಟುಂಬ ಸಮ್ಮಿಲನ,ಸ್ನೇಹಿತರೊಂದಿಗೆ ಕಾಲ ಕಳೆಯುವಿಕೆ ಇತ್ಯಾದಿಗಳೆಲ್ಲ ಸಂಜೆಯ ಸಮಯದಲ್ಲಿಯೇ ನಡೆಯುತ್ತವೆ. ಹೀಗಾಗಿ ಸಂಜೆಯ ವ್ಯಾಯಾಮವನ್ನು ತಪ್ಪಿಸಲು ಕಾರಣಗಳು ಸುಲಭವಾಗಿ ದೊರೆಯುತ್ತವೆ ಮತ್ತು ಇದರಿಂದ ವ್ಯಾಯಾಮ ಕ್ರಮದಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ.

ಅಂದ ಹಾಗೆ ನಿದ್ರೆಗೆ ಮುನ್ನ ವ್ಯಾಯಾಮ ಮಾಡುವುದರಿಂದ ದೂರವಿರಬೇಕು,ಏಕೆಂದರೆ ಅದು ನಿದ್ರಾ ಸಮಸ್ಯೆಗಳನ್ನುಂಟು ಮಾಡಬಹುದು.

ಬೆಳಗಿನ ಮತ್ತು ಸಂಜೆಯ ವ್ಯಾಯಾಮಗಳೆರಡೂ ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ನಿಮ್ಮ ಶರೀರವು ನಿಮಗಿಂತ ಚೆನ್ನಾಗಿ ಇನ್ನೊಬ್ಬರಿಗೆ ಗೊತ್ತಿರುವುದಿಲ್ಲ,ಹೀಗಾಗಿ ಸಮಯದ ಆಯ್ಕೆ ನಿಮ್ಮದೇ ಆಗಿರುತ್ತದೆ.

Comments are closed.