ಆರೋಗ್ಯ

ಸೈಕ್ಲಿಕ್ ವೊಮಿಟಿಂಗ್ ಸಿಂಡ್ರೋಮ್ (ಸಿವಿಎಸ್) ಅಥವಾ ಆವರ್ತಕ ವಾಂತಿ ಸಮಸ್ಯೆ ಬರಲು ಮುಖ್ಯ ಕಾರಣ ತಿಳಿಯಿರಿ.

Pinterest LinkedIn Tumblr

ಮಕ್ಕಳು ಅಥವಾ ವಯಸ್ಕರು ವಾಂತಿ ಮಾಡುತ್ತಿದ್ದರೆ ಅದು ಸಾಮಾನ್ಯವೆಂದು ಪರಿಗಣಿಸುವ ನಾವು ಅವರನ್ನು ವೈದ್ಯರ ಬಳಿಗೆ ಕರೆದೊಯ್ಯುವುದಿಲ್ಲ. ಮನೆ ಮದ್ದುಗಳನ್ನು ನೀಡಿ ವಾಂತಿ ಶಮನವಾಗಲು ಕಾಯುತ್ತೇವೆ. ಆದರೆ ವಾಂತಿ ಪದೇ ಪದೇ ಆಗುತ್ತಿದ್ದರೆ ಮಾತ್ರ ಅದಕ್ಕೆ ಸಂಭಾವ್ಯ ಕಾರಣಗಳ ಬಗ್ಗೆ ಯೋಚಿಸತೊಡಗುತ್ತೇವೆ. ಇದಕ್ಕೆ ಸೈಕ್ಲಿಕ್ ವೊಮಿಟಿಂಗ್ ಸಿಂಡ್ರೋಮ್ (ಸಿವಿಎಸ್) ಅಥವಾ ಆವರ್ತಕ ವಾಂತಿ ಸಮಸ್ಯೆ ಎಂದು ಕರೆಯಲಾಗುತ್ತದೆ. ಮಕ್ಕಳಲ್ಲಿ, ಅಷ್ಟೇ ಏಕೆ, ವಯಸ್ಕರಿಗೂ ಆಗಾಗ ವಾಂತಿಯಾಗುತ್ತಿದ್ದರೆ ಅದನ್ನು ಲಘುವಾಗಿ ಪರಿಗಣಿಸುವಂತಿಲ್ಲ, ಏಕೆಂದರೆ ಅದು ಸಿವಿಎಸ್ ಆಗಿರಬಹುದು.

ಈ ಸಮಸ್ಯೆ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ. ನಿರಂತರ ವಾಕರಿಕೆ ಮತ್ತು ವಾಂತಿಯಿಂದಾಗಿ ಏನನ್ನೂ ತಿನ್ನುವುದು ಅವರಿಗೆ ಕಷ್ಟವಾಗುತ್ತದೆ. ಈ ಸಮಸ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲವಾದರೂ ಕೆಲವು ಆಹಾರಗಳು ಈ ಸಮಸ್ಯೆಯನ್ನುಂಟು ಮಾಡಬಹುದು.

4ರಿಂದ 8ವರ್ಷ ವಯಸ್ಸಿನ ಮಕ್ಕಳಲ್ಲಿ ಸಿವಿಎಸ್ ಹೆಚ್ಚು ಸಾಮಾನ್ಯವಾಗಿದೆ. ಆರು ದಿನಗಳ ಹಸುಳೆಯನ್ನೂ ಈ ರೋಗವು ಕಾಡಬಲ್ಲದು. ವೃದ್ಧರನ್ನೂ ಈ ಸಮಸ್ಯೆ ಬಿಡುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಮಕ್ಕಳು ಬೆಳೆಯುತ್ತಿದ್ದಂತೆ ಸಿವಿಎಸ್ ಸಮಸ್ಯೆ ಮಾಯವಾಗುತ್ತದೆ. ಅಲ್ಲದೆ ಹೆಚ್ಚಿನ ಪ್ರಕರಣಗಳಲ್ಲಿ ವಾಂತಿಯು ಸೇವಿಸಿದ ಆಹಾರಕ್ಕೆ ಸಾಮಾನ್ಯ ಪ್ರತಿಕ್ರಿಯೆ ಆಗಿರಬಹುದು. ಆದರೆ ಪ್ರತಿ ಸಲ ಎರಡಕ್ಕಿಂತ ಹೆಚ್ಚು ಬಾರಿ ವಾಂತಿಯಾಗುತ್ತಿದ್ದರೆ ಅದನ್ನು ಖಂಡಿತವಾಗಿಯೂ ಸಂಭಾವ್ಯ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಬಹುದು.

ಸಿವಿಎಸ್‌ನ ಲಕ್ಷಣಗಳು
* ಮಗು ಅಥವಾ ವಯಸ್ಕರಲ್ಲಿ ಕನಿಷ್ಠ ಐದು ಆವರ್ತಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವಾಂತಿಯಾಗುವುದು.
* ಹೆಚ್ಚು ವಾಕರಿಕೆ ಮತ್ತು ದಿನದಲ್ಲಿ 1ರಿಂದ 10 ಗಂಟೆಗಳವರೆಗೆ ವಾಂತಿಯಾಗುತ್ತಿರುವುದು. ವಿವಿಧ ಕಾರಣಗಳಿಂದಾಗಿ ಪ್ರತಿರೋಗಿಯೂ ವಿಭಿನ್ನ ಲಕ್ಷಣಗಳನ್ನು ತೋರಿಸಬಹುದು.
* ಒಂದು ಗಂಟೆಯ ಅವಧಿಯೊಳಗೆ 4-5 ಸಲ ವಾಂತಿಯಾಗುವುದು.
* ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿ ಅಥವಾ ಎದ್ದ ತಕ್ಷಣ ವಾಂತಿ ಬಾಧಿಸುವುದು
* ವಾಂತಿಯೊಂದಿಗೆ ವಾಕರಿಕೆ, ಹೊಟ್ಟೆನೋವು ಮತ್ತು ಆಯಾಸ.

ಕೆಲವು ರೋಗಿಗಳಿಗೆ ಜ್ವರವೂ ಬರಬಹುದು ಮತ್ತು ಪೇಲವವಾಗಿ ಕಾಣಿಸಬಹುದು.

ಹೆಚ್ಚಾಗಿ ಹಲವಾರು ಪರಿಸರಾತ್ಮಕ ಕಾರಣಗಳಿಂದ ಸಿವಿಎಸ್ ಉಂಟಾಗುತ್ತದೆ. ಕೆಲವರಲ್ಲಿ ತಲೆನೋವು ಮತ್ತು ವರ್ಟಿಗೋ ಕೂಡ ಕಾಣಿಸಿಕೊಳ್ಳಬಹುದು.

ಒಟ್ಟಾರೆಯಾಗಿ ತೀವ್ರ ವಾಂತಿ,ಅತಿಯಾಗಿ ಬೆವರುವಿಕೆ, ಅತಿಸಾರ, ಬೆಳಕನ್ನು ನೋಡಲು ಕಷ್ಟ, ತೀವ್ರ ವಾಕರಿಕೆ, ಹೊಟ್ಟೆನೋವು, ಜ್ವರ ಮತ್ತು ತಲೆನೋವು ಇವು ಸಿವಿಎಸ್‌ನ ಸಾಮಾನ್ಯ ಲಕ್ಷಣಗಳಾಗಿವೆ.

ಸಿವಿಎಸ್‌ಗೆ ಕಾರಣಗಳು

ಈಗಾಗಲೇ ತಿಳಿಸಿರುವಂತೆ ಸಿವಿಎಸ್‌ಗೆ ನಿಖರ ಕಾರಣ ಗೊತ್ತಾಗಿಲ್ಲವಾದರೂ ಹಲವಾರು ಅಂಶಗಳು ಈ ಸಮಸ್ಯೆಯನ್ನುಂಟು ಮಾಡಬಹುದು. ಸ್ವರಕ್ಷಿತ ಕಾಯಿಲೆ, ಕುಟುಂಬದಲ್ಲಿ ಮೈಗ್ರೇನ್ ಇತಿಹಾಸ, ಕಾರಣಾಂತರಗಳಿಂದ ಮಕ್ಕಳಲ್ಲಿ ತೀವ್ರ ಒತ್ತಡ ಇವು ಇಂತಹ ಕೆಲವು ಅಂಶಗಳಾಗಿವೆ. ಬಿಸಿನೀರಿನಿಂದ ನಿರಂತರ ಸ್ನಾನವು ಕೂಡ ಸಿವಿಎಸ್‌ಗೆ ಸಂಭಾವ್ಯ ಕಾರಣಗಳಲ್ಲೊಂದಾಗಿದೆ.

Comments are closed.