ಆರೋಗ್ಯ

ಗ್ಯಾಸ್ಟ್ರಿಕ್ ಅಥವಾ ಜಠರಗರುಳಿನ ಕಾಯಿಲೆಗಳ ಕುರಿತು ಮಾಹಿತಿಗಳು

Pinterest LinkedIn Tumblr

ಬಿರುಬೇಸಿಗೆಯ ದಿನಗಳು ಬಂದಿವೆ. ಇದು ಜಠರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕಾಲವಾಗಿದ್ದು,ಇವುಗಳಿಗೆ ಸಕಾಲಿಕ ಚಿಕಿತ್ಸೆ ಅಗತ್ಯವಾಗುತ್ತದೆ. ಗ್ಯಾಸ್ಟ್ರಿಕ್ ಅಥವಾ ಜಠರಗರುಳಿನ ಕಾಯಿಲೆಗಳ ಕುರಿತು ಮಾಹಿತಿಗಳಿಲ್ಲಿವೆ….

ಬೇಸಿಗೆಯಲ್ಲಿ ತಾಪಮಾನ ತೀವ್ರವಾಗಿ ಏರಿಕೆಯಾಗುತ್ತದೆ. ಈ ಸಮಯದಲ್ಲಿ ಶರೀರದಲ್ಲಿ ನಿರ್ಜಲೀಕರಣಕ್ಕೆ ಅವಕಾಶವಾಗದಂತೆ ಮತ್ತು ಚರ್ಮದ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಆದರೆ ಧಗೆ ಮತ್ತು ಆರ್ದ್ರತೆಯೊಂದಿಗೆ ಬರುವ ಹೊಟ್ಟೆಯ ಮತ್ತು ಇತರ ಸಮಸ್ಯೆಗಳನ್ನು ನಾವು ಮರೆಯುವಂತಿಲ್ಲ. ಹೆಚ್ಚುತ್ತಿರುವ ತಾಪಮಾನವು ನಮ್ಮ ಕರುಳಿನ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಇದು ಹೊಟ್ಟೆಯುಬ್ಬರ,ಆಯಸಿಡ್ ರಿಫ್ಲಕ್ಸ್,ಮಲಬದ್ಧತೆ,ಜೀರ್ಣ ಕ್ರಿಯೆಯಲ್ಲಿ ಅಸಮತೋಲನ,ಎದೆಯುರಿ,ಸಿರೋಸಿಸ್ ಇತ್ಯಾದಿ ಜಠರಗರುಳು ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಋತುವಿನಲ್ಲಿ ನಾವು ನಮ್ಮ ಒಟ್ಟಾರೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.

ಬೇಸಿಗೆಯಲ್ಲಿ ತಾಪಮಾನ ಹೆಚ್ಚುತ್ತಿದ್ದಂತೆ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತದೆ. ಹೆಚ್ಚುವ ತಾಪಮಾನವು ನಮ್ಮ ಶರೀರದ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ,ಇದು ಶರೀರದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಹರಡುವಿಕೆಗೆ ಕಾರಣವಾಗುತ್ತದೆ. ತಯಾರಿಸಿದ ಆಹಾರವೂ ಕೂಡ ಧಗೆಯಿಂದಾಗಿ 4-5 ಗಂಟೆಗಳಲ್ಲಿಯೇ ಹಾಳಾಗುತ್ತದೆ. ಹೀಗಾಗಿ ಆಹಾರ ಸೇವಿಸುವಾಗ ಜನರು ಎಚ್ಚರಿಕೆ ವಹಿಸದಿದ್ದರೆ ಹೊಟ್ಟೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಬೇಸಿಗೇಯ ಬೆನ್ನಲ್ಲೇ ಮಳೆಗಾಲ ಆರಂಭಗೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಾಣುಗಳ ಹರಡುವಿಕೆ ಇನ್ನಷ್ಟು ಹೆಚ್ಚಾಗುತ್ತದೆ. ಇದು ಜಠರಗರುಳು ಸೋಂಕುಗಳನ್ನು ಹೆಚ್ಚಿಸುತ್ತದೆ. ಹೀಗಾಗಿ ಇದನ್ನು ಎದುರಿಸಲು ಹೆಚ್ಚುವರಿ ಗಮನ ನೀಡಬೇಕಾಗುತ್ತದೆ.

ಬೇಸಿಗೆಯಲ್ಲಿ ತಾಪಮಾನದಿಂದ ರಕ್ಷಿಸಿಕೊಳ್ಳಲು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ತಡೆಯಲು ಕೆಲವು ಟಿಪ್ಸ್ ಇಲ್ಲಿವೆ…..

ಆಹಾರವನ್ನು ಸಿದ್ಧವಾದ 4-5 ಗಂಟೆಗಳಲ್ಲಿ ಸೇವಿಸಿ

ಆಹಾರ ಮತ್ತು ಕುಡಿಯುವ ನೀರನ್ನು ಸದಾ ಮುಚ್ಚಿಡಿ

ಕತ್ತರಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ರಾತ್ರಿ ಫ್ರಿಡ್ಜ್‌ನಲ್ಲಿಡಬೇಡಿ

ದಿನಕ್ಕೆ ಕನಿಷ್ಠ 3-4 ಲೀ.ನೀರನ್ನು ಸೇವಿಸಬೇಕು. ನೀವು ಹೆಚ್ಚು ಶ್ರಮವನ್ನು ಬೇಡುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರೆ ಅಥವಾ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದರೆ ದಿನಕ್ಕೆ ಕನಿಷ್ಠ ಐದು ಲೀ.ನೀರನ್ನು ಸೇವಿಸಬೇಕಾಗುತ್ತದೆ ಮನೆಯಿಂದ ಹೊರಬೀಳುವಾಗ ತಲೆ ಮುಚ್ಚಿಕೊಳ್ಳಿ. ಕೊಡೆ,ಸ್ಕಾರ್ಫ್ ಅಥವಾ ಕ್ಯಾಪ್ ನಿಮ್ಮ ಬಳಿಯಿರಲಿ

ನೀರು ಮಾತ್ರವಲ್ಲ,ಲಭ್ಯವಿದ್ದಲ್ಲಿ ಕಬ್ಬಿನ ರಸ,ತಾಜಾ ಲಿಂಬು ಪಾನಿ,ಮಜ್ಜಿಗೆ,ತಾಜಾ ಹಣ್ಣಿನ ರಸಗಳು ಇತ್ಯಾದಿ ಚೇತೋಹಾರಿ ಪಾನೀಯಗಳನ್ನೂ ಸೇವಿಸುತ್ತಿರಬೇಕು

ನಿಮ್ಮ ಆಹಾರಕ್ರಮದಲ್ಲಿ ಮೊಸರು ಸೇರಿಸಿಕೊಳ್ಳಲು ಮರೆಯಬೇಡಿ.

ಮಸಾಲೆ ಮತ್ತು ಹೆಚ್ಚು ಎಣ್ಣೆಯ ಅಂಶವಿರುವ ಆಹಾರಗಳಿಂದ ದೂರವಿರಿ. ಸಂಸ್ಕರಿತ ಆಹಾರಗಳ ಸಹವಾಸವೂ ಬೇಡ

ಬೇಸಿಗೆಯಲ್ಲಿ ದೊರೆಯುವ ಹಣ್ಣುಗಳ ಸೇವನೆ ಹೊಟ್ಟೆಯ ಆರೋಗ್ಯವನ್ನು ಕಾಯ್ದುಕೊಳ್ಳಲು ಅತ್ಯುತ್ತಮ ಮಾರ್ಗವಾಗಿದೆ. ಬೇಸಿಗೆ ಋತುವಿನಲ್ಲಿ ವಿವಿಧ ಹಣ್ಣುಗಳು ಲಭ್ಯವಿದ್ದು,ಸಮೃದ್ಧ ನೀರನ್ನು ಒಳಗೊಂಡಿರುವ ಈ ಹಣ್ಣುಗಳು ನಮ್ಮ ಶರೀರವನ್ನು ತಂಪಾಗಿರಿಸುತ್ತವೆ,ಜೊತೆಗೆ ಶರೀರಕ್ಕೆ ಅಗತ್ಯ ಪೋಷಕಾಂಶಗಳನ್ನೂ ಒದಗಿಸುತ್ತವೆ.

ಜಠರಗರುಳು ಕಾಯಿಲೆಗಳ ಯಾವುದೇ ಲಕ್ಷಣಗಳು ಕಂಡು ಬಂದರೆ ಸ್ವಯಂ ವೈದ್ಯರಾಗುವ ಗೋಜಿಗೆ ಹೋಗಬೇಡಿ. ಹಾಗೆ ಮಾಡಿದರೆ ನಿಮ್ಮ ಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎರಡು ದಿನಗಳಿಗಿಂತ ಹೆಚ್ಚು ಕಾಡುತ್ತಿದ್ದರೆ ಸೂಕ್ತ ಚಿಕಿತ್ಸೆಗಾಗಿ ವೈದ್ಯರನ್ನು ಭೇಟಿಯಾಗಬೇಕಾಗುತ್ತದೆ. ಜಠರಗರುಳು ಕಾಯಿಲೆಗಳ ಲಕ್ಷಣಗಳನ್ನು ಎರಡು ದಿನಗಳಿಗೂ ಹೆಚ್ಚು ಸಮಯ ಕಡೆಗಣಿಸುವಂತಿಲ್ಲ. ಬೇಸಿಗೆಯ ದಿನಗಳಲ್ಲಿ ಮಕ್ಕಳ ಬಗ್ಗೆ ವಿಶೇಷ ಗಮನವನ್ನು ವಹಿಸಬೇಕಾಗುತ್ತದೆ.

Comments are closed.