ಆರೋಗ್ಯ

ಮಾಮೂಲು ವಾಕಿಂಗ್‌ ಜೊತೆ ಹಿಮ್ಮುಖ ನಡಿಗೆ ಶರೀರದ ಸರ್ವಾಂಗೀಣ ಆರೋಗ್ಯಕ್ಕೆ ಉತ್ತಮ

Pinterest LinkedIn Tumblr

ಅತ್ಯಂತ ಸುಲಭವಾದ ಮತ್ತು ಅತ್ಯಂತ ಪರಿಣಾಮಕಾರಿ ವ್ಯಾಯಾಮವೇನಾದರೂ ಇದ್ದರೆ ಅದು ಖಂಡಿತವಾಗಿಯೂ ವಾಕಿಂಗ್ ಅಥವಾ ನಡಿಗೆ. ಈ ಸರಳ ಚಟುವಟಿಕೆಯು ನೀಡುವ ಅದ್ಭುತ ಆರೋಗ್ಯಲಾಭಗಳು ನಿಯಮಿತವಾಗಿ ವಾಕಿಂಗ್ ಮಾಡುವವರಿಗೆ ಮಾತ್ರ ಗೊತ್ತು. ಆದರೆ ಈ ಲೇಖನವು ಮಾಮೂಲು ವಾಕಿಂಗ್ ಕುರಿತಲ್ಲ, ಇದು ರಿವರ್ಸ್ ವಾಕಿಂಗ್ ಅಥವಾ ಹಿಮ್ಮುಖ ನಡಿಗೆಯ ಕುರಿತಾಗಿದೆ. ಹಿಮ್ಮುಖ ನಡಿಗೆಯ ಆರೋಗ್ಯಲಾಭಗಳನ್ನು ವಿಜ್ಞಾನವೂ ಬೆಂಬಲಿಸಿದೆ. ಹಿಮ್ಮುಖ ಹೆಜ್ಜೆಗಳನ್ನು ಹಾಕುವುದು ಮನಸ್ಸು ಮತ್ತು ಶರೀರದ ಸರ್ವಾಂಗೀಣ ಆರೋಗ್ಯಕ್ಕೆ ಪೂರಕವಾಗಿದೆ. ಇದರ ಆರೋಗ್ಯಲಾಭಗಳ ಕುರಿತು ಮಾಹಿತಿಗಳಿಲ್ಲಿವೆ….

* ಕಾಲುಗಳ ಬಲವನ್ನು ಹೆಚ್ಚಿಸುತ್ತದೆ
ಕಾಲುಗಳ ಮುಂಭಾಗ ಮತ್ತು ಹಿಂಭಾಗ ಹೀಗೆ ಎರಡೂ ಕಡೆಗಳಲ್ಲಿ ಸ್ನಾಯುಗಳಿವೆ. ಸಾಮಾನ್ಯವಾಗಿ ನಾವು ಮುಂದಕ್ಕೆ ನಡೆಯುವುದರಿಂದ ಮುಂಭಾಗದ ಸ್ನಾಯುಗಳಿಗೆ ವ್ಯಾಯಾಮವು ದೊರೆಯುತ್ತದೆ. ಹಿಮ್ಮುಖ ನಡಿಗೆಯು ಹಿಂಭಾಗದ ಸ್ನಾಯುಗಳಿಗೆ ವ್ಯಾಯಾಮವನ್ನು ನೀಡುತ್ತದೆ ಮತ್ತು ಇದು ಕಾಲುಗಳ ಶಕ್ತಿ ಹೆಚ್ಚಲು ಮತ್ತು ಅವುಗಳನ್ನು ಸದೃಢಗೊಳಿಸಲು ನೆರವಾಗುತ್ತದೆ.

* ಮಂಡಿ ನೋವನ್ನು ಶಮನಿಸುತ್ತದೆ
ಮಂಡಿಗೆ ಪೆಟ್ಟು ಬಿದ್ದಾಗ ಅಥವಾ ಮಂಡಿ ನೋವು ವ್ಯಕ್ತಿಗೆ ನಡೆದಾಡುವುದನ್ನು ಕಷ್ಟವಾಗಿಸುತ್ತದೆ. ಮಂಡಿಯ ಕೀಲುಗಳ ಮೇಲಿನ ಒತ್ತಡವನ್ನು ತಗ್ಗಿಸುವುದು ಹಿಮ್ಮುಖ ನಡಿಗೆ ವ್ಯಾಯಾಮದ ಲಾಭಗಳಲ್ಲೊಂದಾಗಿದೆ. ಹಿಮ್ಮುಖ ನಡಿಗೆಯು ಮಂಡಿ ಪುನಃಶ್ಚೇತನವನ್ನು ಉತ್ತೇಜಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಮಂಡಿ ಸಮಸ್ಯೆಗಳಿರುವ ಜನರು ಮಂಡಿಗಳ ಮೇಲೆ ಯಾವುದೇ ಒತ್ತಡವನ್ನು ಹೇರದೆ ಅವುಗಳನ್ನು ಬಲಗೊಳಿಸುವ ಈ ವ್ಯಾಯಾಮವನ್ನು ಮಾಡಬಹುದು.

*ಶರೀರದ ಸಮನ್ವಯತೆಯನ್ನು ಹೆಚ್ಚಿಸುತ್ತದೆ
ಹಿಮ್ಮುಖ ನಡಿಗೆಯು ದೈಹಿಕ ಆರೋಗ್ಯ ಮತ್ತು ಶರೀರದ ಉತ್ತಮ ಸಮನ್ವಯಕ್ಕೆ ಪೂರಕವಾಗಿದೆ. ಹಿಮ್ಮುಖವಾಗಿ ನಡೆಯುವ ಮೂಲಕ ನಾವು ಚಲನೆಗೆ ವಿರುದ್ಧವಾಗಿ ಸಾಗುವುದರಿಂದ ಅದು ಶರೀರವು ತನ್ನ ಸಮನ್ವಯ ಅಥವಾ ಸಮತೋಲನವನ್ನು ಕಾಯ್ದುಕೊಳ್ಳುವಂತೆ ಸವಾಲೊಡ್ಡುತ್ತದೆ. ನಮ್ಮ ಮನಸ್ಸು ಕ್ರಿಯಾಶೀಲಗೊಂಡು ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಲು ನಮಗೆ ಮಾರ್ಗದರ್ಶನ ನೀಡುತ್ತಿರುತ್ತದೆ,ಇದು ಹಿಮ್ಮುಖ ನಡಿಗೆಯ ಮಾನಸಿಕ ಆರೋಗ್ಯ ಲಾಭವನ್ನು ಸೂಚಿಸುತ್ತದೆ.

*ಚಿಕಿತ್ಸಕ ಲಾಭಗಳು
ಹಿಮ್ಮುಖ ನಡಿಗೆಯು ಒತ್ತಡವನ್ನು ನಿವಾರಿಸುವ ಸಂತೋಷದ ಹಾರ್ಮೋನ್‌ಗಳನ್ನು ಮಿದುಳಿನಲ್ಲಿ ಬಿಡುಗಡೆಗೊಳಿಸುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಅವು ಒತ್ತಡದ ಮೇಲೆ ಹತೋಟಿ ಸಾಧಿಸಲು ಸಾಧ್ಯವಾಗುವಂತೆ ನಮ್ಮ ಇಂದ್ರಿಯಗಳನ್ನು ಶಾಂತಗೊಳಿಸುತ್ತದೆ.

* ಬೆನ್ನುನೋವನ್ನು ತಡೆಯುತ್ತದೆ
ಕಳಪೆ ನಮ್ಯತೆಯು ಶರೀರದಲ್ಲಿನ ವಿವಿಧ ನೋವುಗಳಿಗೆ,ವಿಶೇಷವಾಗಿ ಬೆನ್ನುನೋವಿನ ಹಿಂದಿನ ನಿಜವಾದ ಕಾರಣವಾಗಿದೆ. ನಮ್ಮ ಮಂಡಿರಜ್ಜುಗಳು ನಮ್ಯತೆಯನ್ನು ಹೊಂದಿರದಿದ್ದರೆ ಕೆಳಬೆನ್ನು ನೋವಿನಿಂದ ನರಳುವ ಸಾಧ್ಯತೆಯು ಅತ್ಯಂತ ಹೆಚ್ಚಾಗಿರುತ್ತದೆ. ಪ್ರತಿದಿನ ಕನಿಷ್ಠ 15-20 ನಿಮಿಷಗಳ ಕಾಲ ಹಿಮ್ಮುಖ ನಡಿಗೆಯು ಮಂಡಿರಜ್ಜುಗಳ ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುನೋವಿನ ಸಮಸ್ಯೆಗಳನ್ನು ತಡೆಯುತ್ತದೆ.

ಗಮನಿಸಬೇಕಾದ ಮುಖ್ಯ ಅಂಶಗಳು
ಹಿಮ್ಮುಖ ನಡಿಗೆಯನ್ನು ಆರಂಭಿಸುವ ಮುನ್ನ ಕೆಲವೊಂದು ಎಚ್ಚರಿಕೆಗಳನ್ನು ವಹಿಸುವುದು ಅಗತ್ಯವಾಗುತ್ತದೆ. ನೀವು ಹೊರಾಂಗಣದಲ್ಲಿ ಈ ವ್ಯಾಯಾಮವನ್ನು ಮಾಡುತ್ತಿದ್ದರೆ ನಿಮ್ಮ ಹಿಂದೆ ಯಾರಾದರೂ ಇದ್ದಾರೆಯೇ ಎನ್ನುವುದನ್ನು ಗಮನಿಸುತ್ತಿರಿ,ಇಲ್ಲದಿದ್ದರೆ ನಿಮ್ಮ ಹಿಂದಿರುವವರಿಗೆ ಢಿಕ್ಕಿ ಹೊಡೆದು ಅಧ್ವಾನವಾಗಬಹುದು. ನಿಮ್ಮ ಹಿಮ್ಮಡಿಗಳಿಗೆ ಸರಿಯಾಗಿ ಹೊಂದಿಕೆಯಾಗುವ ಮತ್ತು ಹಿಡಿತವನ್ನು ಕಾಯ್ದುಕೊಳ್ಳುವ ಶೂಗಳನ್ನೇ ಧರಿಸಿ. ಒಳಾಂಗಣದಲ್ಲಿ ಈ ವ್ಯಾಯಾಮ ಮಾಡುತ್ತಿದ್ದರೆ ಫರ್ನಿಚರ್,ಸಾಕುಪ್ರಾಣಿ ಇತ್ಯಾದಿಗಳಿಲ್ಲದ ಮುಕ್ತ ಸ್ಥಳದಲ್ಲಿ ಮಾಡಿ.ಟ್ರೆಡ್‌ಮಿಲ್‌ನಲ್ಲಿ ಈ ವ್ಯಾಯಾಮ ಮಾಡುವುದಿದ್ದರೆ ವೇಗವನ್ನು ಕಡಿಮೆಯಿಡಿ.

ಉತ್ತಮ ಫಲಿತಾಂಶಗಳಿಗಾಗಿ ನೀವು ಹಿಮ್ಮುಖ ನಡಿಗೆಯ ಜೊತೆಗೆ ಮಾಮೂಲು ವಾಕಿಂಗ್‌ನ್ನೂ ಸೇರಿಸಿಕೊಳ್ಳಬಹುದು.

Comments are closed.