ಆರೋಗ್ಯ

ಸ್ಫಟಿಕದ ಹುಡಿಯನ್ನು ಜೇನಿನೊಂದಿಗೆ ಬೆರೆಸಿಕೊಂಡು ನೆಕ್ಕಿದರೆ ಕೆಮ್ಮಿನಿಂದ ಮುಕ್ತಿ

Pinterest LinkedIn Tumblr

ಹಿಂದೆ ನಮ್ಮ ಹಿರಿಯರು ಮುಖಕ್ಷೌರವನ್ನು ಮಾಡಿಕೊಳ್ಳಲು ಸ್ಫಟಿಕ ಅಥವಾ ಪಟಿಕವನ್ನು ಬಳಸುತ್ತಿದ್ದರು. ಆಗೆಲ್ಲ ಶೇವಿಂಗ್ ಕ್ರೀಮಗಳು ದುಬಾರಿಯಾಗಿರುತ್ತಿದ್ದವು. ಸ್ಫಟಿಕ ಸುಲಭವಾಗಿ ಮನೆಗಳಲ್ಲಿಯೇ ದೊರೆಯುತ್ತಿತ್ತು. ಈಗಿನ ಪೀಳಿಗೆಯ ಹೆಚ್ಚಿನವರಿಗೆ ಸ್ಫಟಿಕ ಎಂದರೇನು ಎನ್ನುವುದೇ ಗೊತ್ತಿಲ್ಲ. ನೈಸರ್ಗಿಕ ಮತ್ತು ಅಗ್ಗವಾಗಿದ್ದ ಸ್ಫಟಿಕದಿಂದಲೇ ಅಂದಿನ ಹಿರಿಯರು ತಮ್ಮ ಕೆಲಸವನ್ನು ಪೂರೈಸಿಕೊಳ್ಳುತ್ತಿದ್ದರು. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಹಿರಿಯರು ಸ್ಫಟಿಕವನ್ನೇ ನೆಚ್ಚಿಕೊಂಡಿದ್ದಾರೆ. ಸ್ಫಟಿಕ ಬಳಸಿ ಮುಖಕ್ಷೌರ ಮಾಡಿಕೊಂಡ ಬಳಿಕ ಚರ್ಮವು ಆರ್ದ್ರತೆಯಿಂದ ಕೂಡಿರುತ್ತಿತ್ತು ಮತ್ತು ಈಗಿನಂತೆ ಆಫ್ಟರ್ ಶೇವ್ ಲೋಷನ್‌ಗಳು ಅಗತ್ಯವಾಗಿರಲಿಲ್ಲ. ಬ್ಲೇಡ್‌ನಿಂದ ಗಾಯವಾದರೆ ಸ್ಫಟಿಕದ ನಂಜು ನಿರೋಧಕ ಗುಣವು ಸೋಂಕನ್ನು ತಡೆಯುತ್ತದೆ. ಹೊಳೆಯುವ ಈ ಸ್ಫಟಿಕ ಅಥವಾ ಪಟಿಕ ಔಷಧೀಯ ಗುಣಗಳನ್ನು ಹೊಂದಿದ್ದು ಆಯುರ್ವೇದದಲ್ಲಿಯೂ ಇದರ ಉಲ್ಲೇಖವಿದೆ. ಇದು ನೀಡುವ ಹಲವಾರು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ…..

ಹಲ್ಲುಗಳ ಹಳದಿ ಬಣ್ಣವನ್ನು ನಿವಾರಿಸುತ್ತದೆ
ಧೂಮ್ರಪಾನ,ತಂಬಾಕು ಸೇವನೆ ಇತ್ಯಾದಿಗಳಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದು ಸಹಜ. ಆದರೆ ಇಂತಹ ಯಾವುದೇ ದುಶ್ಚಟಗಳಿಲ್ಲದವರಿಗೂ ಈ ಸಮಸ್ಯೆಯು ಕಾಡುತ್ತಿರುತ್ತದೆ. ಸ್ಫಟಿಕ ಈ ಸಮಸ್ಯೆಗೆ ಪರಿಹಾರವನ್ನು ಒದಗಿಸುತ್ತದೆ. ಇದಕ್ಕಾಗಿ ಒಂದು ಗ್ಲಾಸ್ ನೀರಿನಲ್ಲಿ ಸ್ಫಟಿಕವನ್ನು ಹಾಕಿ ಕೆಲ ಹೊತ್ತು ಬಿಡಬೇಕು. ಅದು ನೀರಿನಲ್ಲಿ ಸಂಪೂರ್ಣವಾಗಿ ಕರಗಿದ ಬಳಿಕ ಈ ನೀರಿನಿಂದ ಬಾಯಿಯನ್ನು ಮುಕ್ಕಳಿಸಬೇಕು. ನಿಯಮಿತವಾಗಿ ಹೀಗೆ ಮಾಡಿದರೆ ಹಲ್ಲುಗಳ ಹಳದಿ ಬಣ್ಣ ಮಾಯವಾಗಿ ಸಹಜ ಬಿಳಿಯ ಬಣ್ಣಕ್ಕೆ ತಿರುಗುತ್ತವೆ.

ಪಾದಗಳ ದುರ್ವಾಸನೆಯನ್ನು ತೆಗೆಯುತ್ತದೆ
ನೀವು ಸ್ವಚ್ಛವಾದ ಸಾಕ್ಸ್ ಹಾಕಿಕೊಂಡಿದ್ದರೂ ಇಡೀ ದಿನ ಶೂಗಳನ್ನು ಧರಿಸಿದ ಬಳಿಕ ನಿಮ್ಮ ಪಾದಗಳು ದುರ್ವಾಸನೆಯನ್ನು ಬೀರುತ್ತವೆಯೇ? ಹಾಗಿದ್ದರೆ ನಿಮ್ಮ ಪಾದಗಳನ್ನು ಸ್ಫಟಿಕದ ನೀರಿನಿಂದ ತೊಳೆದುಕೊಂಡರೆ ಈ ಸಮಸ್ಯೆ ಮಾಯವಾಗುತ್ತದೆ. ಇದಕ್ಕಾಗಿ ಒಂದು ಸಣ್ಣ ತುಂಡು ಸ್ಫಟಿಕವನ್ನು ಬಕೆಟ್ ನೀರಿಗೆ ಹಾಕಿ. ಅದು ಕರಗಿದ ಮೇಲೆ ಈ ನೀರಿನಲ್ಲಿ ಪಾದಗಳನ್ನು 5-10 ನಿಮಿಷಗಳ ಕಾಲ ಮುಳುಗಿಸಿದರೆ ದುರ್ವಾಸನೆ ಮಾಯವಾಗುತ್ತದೆ.

ಸೋಂಕನ್ನು ತಡೆಯುತ್ತದೆ
ನೀವು ಶೇವಿಂಗ್ ಮಾಡಿಕೊಳ್ಳುವಾಗ ಅಥವಾ ಇತರ ಯಾವುದೇ ಕಾರಣಗಳಿಂದ ಗಾಯಗೊಂಡಾಗ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದರೆ ಮನೆಯಲ್ಲಿ ಸ್ಫಟಿಕವಿದ್ದರೆ ನೀವು ಸೋಂಕು ಉಂಟಾಗುವುದನ್ನು ತಪ್ಪಿಸಬಹುದು. ಪೀಡಿತ ಭಾಗವನ್ನು ಸ್ಫಟಿಕದ ನೀರಿನಿಂದ ತೊಳೆಯಿರಿ. ಗಾಯದಿಂದ ರಕ್ತ ಬರುತ್ತಿದ್ದರೆ ಸ್ಫಟಿಕವನ್ನು ಚೆನ್ನಾಗಿ ಅರೆದು ಆ ಜಾಗದಲ್ಲಿ ಲೇಪಿಸಿ. ಇದರಿಂದ ರಕ್ತಸ್ರಾವ ನಿಲ್ಲುತ್ತದೆ ಮತ್ತು ನೋವು ಸಹ ಕಡಿಮೆಯಾಗುತ್ತದೆ.

ನೆರಿಗೆಗಳ ಸಮಸ್ಯೆಯನ್ನು ತಪ್ಪಿಸುತ್ತದೆ
ನಿಮ್ಮ ಮುಖದಲ್ಲಿ ನೆರಿಗೆಗಳು ಕಾಣಿಸಿಕೊಂಡಿದ್ದರೆ ಮತ್ತು ನೀವು ದುಬಾರಿ ಉತ್ಪನ್ನಗಳನ್ನು ಬಳಸಿಯೂ ನೆರಿಗೆಗಳು ಕಡಿಮೆಯಾಗಿಲ್ಲ ಎಂದಿದ್ದರೆ ಸ್ಫಟಿಕದ ನೀರು ನಿಮ್ಮ ನೆರವಿಗೆ ಬರುತ್ತದೆ. ಇದಕ್ಕಾಗಿ ನೀವು ಸ್ಫಟಿಕದ ತುಂಡನ್ನು ನೀರಿನಲ್ಲಿ ಅದ್ದಿ ಅದನ್ನು ಮುಖದಲ್ಲಿ ನೆರಿಗೆಯಿರುವ ಜಾಗದಲ್ಲಿ ಹಚ್ಚಿಕೊಳ್ಳಿ. ಕೆಲ ಸಮಯ ಹೀಗೆ ಮಾಡಿದ ಬಳಿಕ ಮುಖವನ್ನು ಸ್ವಚ್ಛ ನೀರಿನಿಂದ ತೊಳೆದುಕೊಂಡರೆ ಅದ್ಭುತ ಪರಿಣಾಮ ದೊರೆಯುತ್ತದೆ. ಕುತ್ತಿಗೆಯಲ್ಲಿ ನೆರಿಗೆಗಳನ್ನು ನಿವಾರಿಸಲೂ ನೀವು ಈ ಉಪಾಯವನ್ನು ಪ್ರಯತ್ನಿಸಬಹುದು.

ಹೇನುಗಳನ್ನು ಕೊಲ್ಲಲು ನೆರವಾಗುತ್ತದೆ
ಮನೆಯಲ್ಲಿ ಮಕ್ಕಳು ಅಥವಾ ದೊಡ್ಡವರು ಹೇನುಗಳಿಂದಾಗಿ ಕಿರಿಕಿರಿ ಅನುಭವಿಸುತ್ತಿದ್ದರೆ ತಲೆಗೂದಲನ್ನು ಸ್ಫಟಿಕದ ನೀರಿನಿಂದ ತೊಳೆದರೆ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಸ್ಫಟಿಕದಲ್ಲಿರುವ ಬ್ಯಾಕ್ಟೀರಿಯಾ ನಿರೋಧಕ ಗುಣಗಳು ಹೇನುಗಳನ್ನು ಕೊಲ್ಲುತ್ತವೆ ಮತ್ತು ಕೂದಲಿನಲ್ಲಿಯ ಇತರ ಕೊಳೆಗಳನ್ನು ನಿವಾರಿಸುತ್ತದೆ.

ಬೆವರುವಿಕೆಯನ್ನು ನಿಯಂತ್ರಿಸುತ್ತದೆ
ನೀವು ಸ್ವಲ್ಪವೇ ಕೆಲಸ ಮಾಡಿದರೂ ವೆು ಬೆವರುತ್ತಿದ್ದರೆ ಮತ್ತು ಮೈ ವಾಸನೆ ಬೀರತೊಡಗುತ್ತಿದ್ದರೆ ಸ್ಫಟಿಕ ನಿಮಗೆ ನೆಮ್ಮದಿಯನ್ನು ನೀಡಲು ನೆರವಾಗುತ್ತದೆ. ಸ್ಫಟಿಕವನ್ನು ನುಣ್ಣಗೆ ಹುಡಿ ಮಾಡಿ,ಬಕೆಟ್ ನೀರಿನಲ್ಲಿ ಸೇರಿಸಿಕೊಂಡು ಸ್ನಾನ ಮಾಡಿದರೆ ಬೆವರಿನ ವಾಸನೆ ನಿವಾರಣೆಯಾಗುತ್ತದೆ.

ಕೆಮ್ಮಿಗೂ ಇದು ಔಷಧಿ
ನೀವು ಅಸ್ತಮಾ ಅಥವಾ ದೀರ್ಘಕಾಲಿಕ ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಸ್ಫಟಿಕ ನಿಮ್ಮ ನೆರವಿಗೆ ಬರುತ್ತದೆ. ಸ್ಫಟಿಕದ ಹುಡಿಯನ್ನು ಜೇನಿನೊಂದಿಗೆ ಬೆರೆಸಿಕೊಂಡು ನೆಕ್ಕಿದರೆ ಕೆಮ್ಮಿನಿಂದ ಮುಕ್ತಿ ದೊರೆಯುತ್ತದೆ ಮತ್ತು ನಿಮ್ಮ ಆರೋಗ್ಯವೂ ಹದಗೆಡುವುದಿಲ್ಲ.

Comments are closed.