ಕುಂದಾಪುರ: ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಆರೋಗ್ಯ ಹಿತರಕ್ಷಣೆ ಕಾಯಲು ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಕುಂದಾಪುರ ಉಪವಿಭಾಗದ ಎಲ್ಲಾ ಪೊಲೀಸರಿಗೂ ಮಾಸ್ಕ್ ಗಳನ್ನು, ಪೇಸ್ ಶೀಲ್ಡ್ ಮೊದಲಾದವುಗಳನ್ನು ನೀಡಲಾಗಿದೆ. ಪೊಲೀಸರು, ಗೃಹರಕ್ಷಕ, ಡಿ.ಎ.ಆರ್. ಸಿಬ್ಬಂದಿಗಳ ಕೋವಿಡ್ ತಪಾಸಣೆಯನ್ನು ಕೂಡ ಮಾಡಲಾಗಿದೆ. ರಾಒಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳನ್ನು ಪೊಲೀಸರು ಮತ್ತು ಅವರ ಕುಟುಂಬದವರಿಗೆ ನೀಡಿದ್ದೇವೆ. ಬಹುತೇಕ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಹೇಳಿದ್ದಾರೆ.
ಅವರು ಕುಂದಾಪುರದ ತಮ್ಮ ಕಚೇರಿಯಲ್ಲಿ ಮಾದ್ಯಮ ಗಳ ಜೊತೆ ಮಾತನಾಡಿ, ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಂಡ ಪೊಲೀಸರ ಆರೋಗ್ಯ ಕಾಳಜಿ ಕುರಿತು ಪೊಲೀಸ್ ಇಲಾಕೆ ಕೈಗೊಂಡ ಮುಂಜಾಗೃತಾ ಕ್ರಮದ ಕುರಿತು ವಿವರಣೆ ನೀಡಿದರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಪೊಲೀಸರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗಿದೆ. ಕುಂದಾಪುರ ಉಪವಿಭಾಗದಲ್ಲಿ ಜೀವದ ಹಂಗು ತೊರೆದು ಕೊರೋನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ವಾರಿಯರ್ಸ್ ಆಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ 180ಕ್ಕೂ ಅಧಿಕ ಪೊಲೀಸರ ಕೋವಿಡ್ ತಪಾಸಣೆ ನಡೆದಿದ್ದು 48 ಪೊಲೀಸರ ವರದಿ ಬಂದಿದ್ದು ಕೊರೋನಾ ನೆಗೆಟಿವ್ ಇದೆ. ಇನ್ನು ಬಾಕಿಯುಳಿದ ಕೆಲವು ಮಂದಿ ಪೊಲೀಸರ ತಪಾಸಣೆ ಇಂದು ನಾಳೆಯೊಳಗೆ ಮುಗಿಯಲಿದೆ. ಶಿರೂರು ಚೆಕ್ ಪೋಸ್ಟಿನಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯ ಹಿತರಕ್ಷಣೆ ಕಾಪಾಡುವ ನಿಟ್ಟಿನಲ್ಲಿ ಗ್ಲಾಸ್ ಕೌಂಟರ್ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಿದ್ದೇವೆ ಎಂದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.